ಬಿಜೆಪಿ ಬಣ ರಾಜಕಾರಣ | ಹೈಕಮಾಂಡ್ ಬ್ರೇಕ್: ಬಳ್ಳಾರಿ ಪಾದಯಾತ್ರೆ ಸಿದ್ಧತಾ ಸಭೆ ಮುಂದಕ್ಕೆ
ಮುಡಾ ಹಗರಣ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಮೈಸೂರು ಪಾದಯಾತ್ರೆ ನಡೆಸಲಾಯಿತು. ಇದಕ್ಕೆ ಪರ್ಯಾಯವಾಗಿ ಶಾಸಕ ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ ನೇತೃತ್ವದ ಮತ್ತೊಂದು ಬಣ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ಸಿದ್ದತೆ ನಡೆಸಿತ್ತು. ಆದರೆ ಇದೀಗ ಹೈಕಮಾಂಡ್ ಮಧ್ಯಪ್ರವೇಶದಿಂದಾಗಿ ಪಾದಯಾತ್ರೆಗೆ ಬ್ರೇಕ್ ಬಿದ್ದಿದೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ನಂತರದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಮತ್ತೊಂದು ಪಾದಯಾತ್ರೆ ಬೇಡ ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ. ಹೀಗಾಗಿ ಪಾದಯಾತ್ರೆಯ ಜೊತೆಗೆ ಪಾದಯಾತ್ರೆ ಸಿದ್ದತಾ ಸಭೆಯನ್ನೂ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ನೇತೃತ್ವದ ಬಣ ಬುಧವಾರ ಬೆಂಗಳೂರಿನಲ್ಲಿ ಕರೆದಿದ್ದ ಸಭೆಗೆ ಹೈಕಮಾಂಡ್ ತಡೆಯೊಡ್ಡಿದೆ. ಈ ಹಂತದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದೆನ್ನುವ ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಮುಡಾ ಹಗರಣ ವಿರೋಧಿಸಿ ಬಿಜೆಪಿ ನಾಯಕರು ಜೆಡಿಎಸ್ ಜೊತೆಗೂಡಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಪಾದಯಾತ್ರೆ ಪೂರ್ಣಗೊಂಡ ಬಳಿಕ ಮತ್ತೊಂದು ಬಣದ ನಾಯಕರು ಆಗಸ್ಟ್ 11ರಂದು ಬೆಳಗಾವಿಯ ರೆಸಾರ್ಟ್‌ನಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಪ್ರತಾಪ್ ಸಿಂಹ, ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಸೇರಿ ಹಲವು ಮುಖಂಡರು ಪಾಲ್ಗೊಂಡಿದ್ದರು.
ಬೆಂಗಳೂರು ಮೈಸೂರು ಪಾದಯಾತ್ರೆಗೆ ಪರ್ಯಾಯವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಖಂಡಿಸಿ ಕೂಡಲ ಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಪಾದಯಾತ್ರೆ ಸಿದ್ದತೆಗೆ ಬುಧವಾರ(ಆ.20) ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಭಿನ್ನಮತೀಯರ ಸಭೆ ಕರೆಯಲು ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದತೆ ನಡೆಸಿದ್ದರು. ಆದರೆ ವರಿಷ್ಠರ ಮಧ್ಯಪ್ರವೇಶದಿಂದ ಸಭೆ ಮುಂದೂಡಿಕೆಯಾಗಿದೆ.
ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಂಘದ ಮಧ್ಯಸ್ಥಿಕೆಯಲ್ಲಿ ರಾಜ್ಯ ನಾಯಕತ್ವ ಹಾಗೂ ಇನ್ನೊಂದು ಬಣದ ಮುಖಂಡರ ಜೊತೆ ಸಮಾಲೋಚನೆ ನಡೆಸಿ, ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವೂ ನಡೆದಿತ್ತು. ನಂತರ ಪಕ್ಷ ನಿಷ್ಠರು ಎಂದು ಹೇಳಿಕೊಳ್ಳುತ್ತಿರುವ ಜಾರಕಿಹೊಳಿ, ಯತ್ನಾಳ್ ಬಣವನ್ನು ದೆಹಲಿಗೆ ಬರುವಂತೆ ಸಂತೋಷ್ ಸೂಚಿಸಿದ್ದರು.
ಆದರೆ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವ ಅಥವಾ ಬಳ್ಳಾರಿ ಪಾದಯಾತ್ರೆಯಂತಹ ವಿಷಯಗಳ ಚರ್ಚೆ ಮಾಡುವ ವಿಚಾರವನ್ನು ವರಿಷ್ಠರು ಮುಂದೂಡಿದ್ದಾರೆ. ಸದ್ಯಕ್ಕೆ ಯಾವುದೇ ಸಭೆ, ಪಾದಯಾತ್ರೆ ಬೇಡ, ಪಕ್ಷದಲ್ಲಿ ನಮ್ಮ ಅನುಮತಿ ಪಡೆಯದೇ ಯಾವುದೇ ಚಟುವಟಿಕೆ ನಡೆಸಬೇಡಿ ಎಂದು ಸಂದೇಶ ರವಾನಿಸಿದ್ದಾರೆ. ಹೀಗಾಗಿ ಬುಧವಾರ ನಿಗದಿಯಾಗಿದ್ದ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.