
Bangalore stampede: ಕಾಲ್ತುಳಿತ ದುರಂತ: ಗುಪ್ತಚರ ವೈಫಲ್ಯ; ಇಲಾಖೆ ಮುಖ್ಯಸ್ಥ ನಿಂಬಾಳ್ಕರ್ ಎತ್ತಂಗಡಿ
ಕಾಲ್ತುಳಿತ ದುರಂತದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಇದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ದೂರು ನೀಡಿದ್ದರು. ಇದರ ಬೆಲ್ಲೇ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ.
ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಬಳಿಕ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತುಗೊಳಿಸಿದ ಬೆನ್ನಲ್ಲೇ ಇತರೆ ಅಧಿಕಾರಿಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಗುಪ್ತಚರ ಇಲಾಖೆಯ ಮುಖ್ಯಸ್ಥ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ಎತ್ತಂಗಡಿ ಮಾಡಿದೆ. ಕಾಲ್ತುಳಿತ ದುರಂತಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಎನ್ನುವ ಆರೋಪಗಳು ಬಲವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ ವಿಜಯೋತ್ಸವಕ್ಕೆ ಲಕ್ಷಾಂತರ ಜನರು ಬರುವ ಬಗ್ಗೆ ಮಾಹಿತಿ ನೀಡುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿತ್ತು. ಕ್ರೀಡಾಂಗಣ ಸುತ್ತಮುತ್ತ ಜಮಾಯಿಸುತ್ತಿದ್ದ ಜನಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ನೀಡುವಲ್ಲಿ ಗುಪ್ತಚರ ವೈಫಲ್ಯಗೊಂಡಿದೆ. ಇಲಾಖೆಯ ಹೊಣೆ ಹೊತ್ತ ಹೇಮಂತ್ ನಿಂಬಾಳ್ಕರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಣ್ಣ ಸುಳಿವನ್ನು ಸಹ ನೀಡಲಿಲ್ಲ. ಗುಪ್ತಚರ ವೈಫಲ್ಯ ಆರೋಪದ ಮೇರೆಗೆ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾಯಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರು
ಕಾಲ್ತುಳಿತ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಕಂಡಿದೆ ಎಂಬ ಚರ್ಚೆಗಳು ಕೇಳಿಬಂದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಆರ್ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸುಳಿವು ಇದ್ದರೂ ಭದ್ರತೆ ಒದಗಿಸುವ ಸಂಬಂಧ ಮಾಹಿತಿ ನೀಡದ ಕಾರಣಕ್ಕಾಗಿ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಬದಲಾವಣೆ ಮಾಡುವಂತೆ ಪತ್ರದಲ್ಲಿ ಆಗ್ರಹಿಸಿದ್ದರು.
ಕಾಲ್ತುಳಿತ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಇರುವ ಕಾರಣ ಹೇಮಂತ್ ನಿಂಬಾಳ್ಕರ್ ಗುಪ್ತಚರ ಇಲಾಖೆ ಎಡಿಜಿಪಿಯಾಗಿ ಕರ್ತವ್ಯ ಲೋಪವೆಸಗಿದ್ದಾರೆ. ಕಾಲ್ತುಳಿತ ದುರಂತದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಇದೆ ಎಂದು ನಗರ ಪೊಲೀಸ್ ಆಯುಕ್ತರು ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ನಿಂಬಾಳ್ಕರ್ ಅವರನ್ನು ಉಳಿಸಿಕೊಂಡಿರುವುದು ಯಾಕೆ? ಅವರು ಮಾಜಿ ಶಾಸಕಿಯೊಬ್ಬರ ಪತಿ ಎಂಬ ಕಾರಣದಿಂದ ಅಮಾನತು ಮಾಡಿಲ್ಲವೇ? ಎಂದು ಟಿ.ಜೆ.ಅಬ್ರಹಾಂ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಪತ್ರ ಬರೆದ ಬೆನ್ನಲೇ ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಅವರನ್ನು ಗುಪ್ತಚರ ಇಲಾಖೆಯ ಮುಖ್ಯಸ್ಥರ ಹುದ್ದೆಯಿಂದ ವರ್ಗಾವಣೆ ಮಾಡಿದೆ.
ಸರ್ಕಾರದ ಈ ಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸ್ವಾಗತಿಸಿದ್ದಾರೆ. ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜೊತೆಗೆ ಮಾತನಾಡಿದ ಅವರು, ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಆದರೆ, ಅವರನ್ನು ಅಮಾನತು ಮಾಡಬೇಕಾಗಿತ್ತು. ಕೇವಲ ವರ್ಗಾವಣೆ ಮಾಡಿದರೆ ಸಾಲದು. ಈ ಬಗ್ಗೆ ದೂರು ನೀಡುತ್ತೇನೆ. ಅಲ್ಲದೇ, ಅವರನ್ನು ಅಮಾನತು ಮಾಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.
ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ರಾಜ್ಯವು ಕಂಡರಿಯದ ದೊಡ್ಡ ದುರಂತ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರಿಂದ ಪೊಲೀಸರು ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ. ೩೫ ಸಾವಿರ ಸಂಖ್ಯೆಯಷ್ಟು ಮಾತ್ರ ಭರ್ತಿಯಾಗುವ ಕ್ರೀಡಾಂಗಣಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಇದು ನೂಕುನುಗ್ಗಲು ಸಂಭವಿಸಲು ಕಾರಣವಾಯಿತು.
ಕ್ರೀಡಾಂಗಣದ ಬಳಿ ಅಭಿಮಾನಿಗಳ ಹರ್ಷೋಲ್ಲಾಸ ಮೇರೆಮೀರಿತ್ತು. ಆರ್ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದರ ಅರಿವು ಇದ್ದರೂ ಗುಪ್ತಚರ ಇಲಾಖೆ ಮಾಹಿತಿ ಕಲೆಹಾಕುವಲ್ಲಿ ವಿಫಲವಾಯಿತು. ಇಂಟಲಿಜೆನ್ಸಿ ವೈಫಲ್ಯವನ್ನು ಒಪ್ಪಿಕೊಂಡಿದ್ದರು. ಹೇಮಂತ್ ನಿಂಬಾಳ್ಕರ್ ನೇತೃತ್ವದ ತಂಡವು ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಇಂತಹದೊಂದು ದುರಂತ ಸಂಭವಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.
ಹೇಮಂತ್ ನಿಂಬಾಳ್ಕರ್ ಅವರು ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಹುದ್ದೆಯ ಪ್ರಭಾರಿ ಜಬ್ದಾರಿಯನ್ನು ಸಹ ಹೊಂದಿದ್ದಾರೆ.