ಸಚಿವೆ ಹೆಬ್ಬಾಳ್ಕರ್ ನಿಂದನೆ ಪ್ರಕರಣ | ಅದು ಮುಗಿದ ಅಧ್ಯಾಯ ಎಂದು ಸಭಾಪತಿಗಳು ಹೇಳಿದ್ದು ಯಾಕೆ?
ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಪ್ರಯೋಗಿಸಿ ನಿಂದಿಸಿದ ಆರೋಪ ಮತ್ತು ಆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ಸಿ ಸಿ ಟಿ ರವಿ ಬಂಧನ ಪ್ರಕರಣದಲ್ಲಿ ಇದೀಗ ವಿಧಾನ ಪರಿಷತ್ ಸಭಾಪತಿಗಳು ಮಹತ್ವದ ಹೇಳಿಕೆ ನೀಡಿದ್ದಾರೆ.
ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ ಸದನದ ಒಳಗೇ ಈ ನಿಂದನೆ ಆರೋಪದ ಘಟನೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸದನದ ಸಭಾಪತಿಗಳ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ದಿನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಜೆಪಿ ಶಾಸಕ ಸಿ ಟಿ ರವಿ ತಮ್ಮ ವಿರುದ್ಧ ಪ್ರಯೋಗಿಸಿದ ಅಶ್ಲೀಲ ನಿಂದನೆಯ ಕುರಿತು ಸಭಾಪತಿಗಳಿಗೆ ದೂರು ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಅಲ್ಲದೆ ಅವರು ಅದೇ ದಿನ ಬೆಳಗಾವಿ ಪೊಲೀಸರಿಗೂ ದೂರು ನೀಡಿದ್ದ್ದರು. ಅಲ್ಲದೆ ಶಾಸಕ ಸಿ ಟಿ ರವಿ ಕೂಡ ತಾವೂ ಸಭಾಪತಿಗಳಿಗೆ ದೂರು ನೀಡಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದರು.
ಆದರೆ, ಇದೀಗ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರಕರಣದ ಕುರಿತು ನಮಗೆ ಈವರೆಗೆ ಎರಡೂ ಕಡೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, “ಅದು ಮುಗಿದುಹೋದ ಅಧ್ಯಾಯ” ಎನ್ನುವ ಮೂಲಕ ಇಡೀ ಪ್ರಕರಣ ಇತ್ಯರ್ಥವಾಗಿದೆ ಎಂಬ ಸೂಚನೆಯನ್ನೂ ನೀಡಿದ್ದಾರೆ. ಹಾಗೆಯೇ, ಸದನದಲ್ಲಿ ನಡೆದಿದೆ ಎನ್ನಲಾಗಿರುವ ಘಟನೆಯ ಕುರಿತು ಕೂಲಂಕಷವಾಗಿ ಚರ್ಚೆ ನಡೆದಿದೆ. ಸದನವನ್ನು ಮುಂದೂಡಿದ ಬಳಿಕ ಸಿ ಟಿ ರವಿ ಬಂಧನವಾಗಿದೆ. ಪೊಲೀಸರು ಸದನದ ಒಳಗೆ ಬಂದಿಲ್ಲ. ಅಲ್ಲದೆ ಈ ಬಗ್ಗೆ ಈವರೆಗೆ ಯಾವುದೇ ದೂರು ಬಂದಿಲ್ಲ. ಎರಡೂ ಕಡೆಯಿಂದಲೂ ದೂರು ಬಂದಿಲ್ಲ. ದೂರು ಬಂದರೆ ಹಕ್ಕುಚ್ಯುತಿ ಕುರಿತು ಕ್ರಮಕೈಗೊಳ್ಳುತ್ತೇವೆ ಎಂದೂ ಸಭಾಪತಿ ಹೊರಟ್ಟಿ ಅವರು ಹೇಳಿದ್ದಾರೆ.
ಜೊತೆಗೆ, ಪೊಲೀಸ್ ಕ್ರಮದ ಕುರಿತ ಪ್ರತಿಕ್ರಿಯಿಸಿರುವ ಅವರು, ಸದನದ ಒಳಗೆ ನಡೆದ ಘಟನೆ ಅದು, ಹಾಗಾಗಿ ಆ ಘಟನೆಯ ವಿಷಯದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅದು ಅವರ ಅಧಿಕಾರವ್ಯಾಪ್ತಿಗೂ ಬರುವುದಿಲ್ಲ, ಹಕ್ಕೂ ಅಲ್ಲ. ಎಫ್ಐಆರ್ ಆಗಿರುವುದರಿಂದ ನಮ್ಮದೇ ವಿಧಾನದಲ್ಲಿ ಪ್ರಕರಣದ ಕುರಿತು ಚರ್ಚೆ ಮಾಡುತ್ತೇವೆ. ನಮ್ಮಲ್ಲಿ ವಿಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣಿಸುತ್ತೇವೆ. ಬೇರೆಯವರು ಘಟನೆಯ ವಿಡಿಯೋ- ಆಡಿಯೋ ದಾಖಲೆ ನೀಡಿದರೆ ಅದನ್ನು ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳಿಸಿ ವರದಿ ಪಡೆದು ಮುಂದೇನು ಮಾಡಬೇಕು ಎಂದು ನಿರ್ಧರಿಸುತ್ತೇವೆ. ಆದರೆ, ಸದನ ಮುಂಡೂಡಿದ ಹಿನ್ನೆಲೆಯಲ್ಲಿ ಅಲ್ಲಿ ಯಾವುದೇ ಚಿತ್ರೀಕರಣ ಆಗಿಲ್ಲ ಎಂದರು.
10 ಮಂದಿ ವಿರುದ್ಧ ಎಫ್ಐಆರ್
ಈ ನಡುವೆ ಬೆಳಗಾವಿ ಸುವರ್ಣ ಸೌಧದಲ್ಲಿ ನಿಂದನೆಯ ಆರೋಪದ ಘಟನೆಯ ಬಳಿಕ ಶಾಸಕ ಸಿ ಟಿ ರವಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು 10 ಮಂದಿ ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಎಸ್ ವಿ ಸಂಕನೂರು, ಬಿ ಆರ್ ಕಿಶೋರ್ ಬೆಂಗಳೂರಿನ ವಿಧಾನಮಂಡಲ ಕಾರ್ಯದರ್ಶಿಗಳಿಗೆ ನೀಡಿದ ದೂರಿನ ಪ್ರತಿಯನ್ನು ಬೆಳಗಾವಿ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಆ ದೂರಿನ ಹಿನ್ನೆಲೆಯಲ್ಲಿ ಘಟನೆಯಲ್ಲಿ ಭಾಗಿಯಾಗಿದ್ಧಾರೆ ಎನ್ನಲಾದ 10 ಮಂದಿ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ.