ಹೆಬ್ಬಾಳ ಮೇಲ್ಸೇತುವೆ ಮೇಲೆ ಬೈಕ್‌ ಓಡಿಸಿದ ಡಿಸಿಎಂ | ಸಿಎಂ ಸಿದ್ದರಾಮಯ್ಯರಿಂದ ವಾಹನ ಸಂಚಾರಕ್ಕೆ ಚಾಲನೆ
x

ಹೆಬ್ಬಾಳ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಹೆಬ್ಬಾಳ ಮೇಲ್ಸೇತುವೆ ಮೇಲೆ ಬೈಕ್‌ ಓಡಿಸಿದ ಡಿಸಿಎಂ | ಸಿಎಂ ಸಿದ್ದರಾಮಯ್ಯರಿಂದ ವಾಹನ ಸಂಚಾರಕ್ಕೆ ಚಾಲನೆ

ಡಿ.ಕೆ. ಶಿವಕುಮಾರ್ ಅವರು ಹೆಬ್ಬಾಳ ಮೇಲ್ಸೇತುವೆಯಲ್ಲಿ ಬುಲೆಟ್ ಓಡಿಸುವ ಮೂಲಕ ಉದ್ಘಾಟಿಸಲು ಸಜ್ಜಾಗುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಅವರು ಧ್ವಜ ತೋರಿಸಿ ಚಾಲನೆ ನೀಡಿದರು.


ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ರಸ್ತೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಉದ್ಘಾಟಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಬ್ಬಾಳ ಮೇಲ್ಸೇತುವೆಯಲ್ಲಿ ಬುಲೆಟ್ ಓಡಿಸುವ ಮೂಲಕ ವಾಹನ ಸಂಚಾರಕ್ಕೆ ಚಾಲನೆ ನೀಡಿದರು. ಡಿಸಿಎಂ ಬುಲೆಟ್‌ ರೈಡಿಂಗ್‌ಗೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿದರು.

ಕಳೆದ ಕೆಲ ದಿನಗಳ ಹಿಂದೆ ಸ್ಕೂಟಿಯಲ್ಲಿ ಸವಾರಿ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ ವಿವಾದಕ್ಕೆ ಡಿಕೆಶಿ ಒಳಗಾಗಿದ್ದರು. ಆದರೆ, ಇಂದು ಫುಲ್‌ ಹೆಲ್ಮೆಟ್‌ ಹಾಗೂ ದಾಖಲೆಗಳು ಸರಿಯಾಗಿರುವ ವಾಹನವನ್ನು ಬಳಸಿದರು. ಫ್ಲೈಓವರ್ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು.

ಉದ್ಘಾಟನೆ ಬಳಿಕ ಮಾತಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಈ ಮೇಲ್ಸೇತುವೆ ಸಹಾಯವಾಗಲಿದೆ. ಈ ಮೇಲ್ಸೇತುವೆ ಪ್ರಸ್ತಾಪಕ್ಕೆ ಬಂದಿತ್ತು. ಆದರೆ, ಕಾರ್ಯರೂಪಕ್ಕೆ ತಂದಿರಲಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ಹಣ ಒದಗಿಸಿ, ಅನುಮತಿ ನೀಡಿದ್ದೇನೆ. ಒಟ್ಟು 300 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರಸ್ತುತ 180 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಇನ್ನೊಂದು ಜಂಕ್ಷನ್ ಸೇರಿಸಲಾಗುವುದು, 6 ಲೇನ್ ಆಗಲಿದೆ. ನವೆಂಬರ್ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಮೂರು ತಿಂಗಳಲ್ಲಿ ಮತ್ತೊಂದು ಲೂಪ್ ಬರಲಿದೆ. ಮತ್ತೊಂದು ಲೂಪ್ ಎಸ್ಟೀಮ್‌ ಮಾಲ್‌ನಿಂದ 1 ಕಿ.ಮೀ ದೂರದ ಟನಲ್ ಆಗಲಿದೆ. ಎಮೆರ್ಜೆನ್ಸಿಗೆ ಇದರ ಬಳಕೆ ಸಾಧ್ಯವಾಗುತ್ತದೆ. ಏರ್ಪೋರ್ಟ್ ನಿಂದ ಬರುವವರಿಗೆ ಇದು ಅನುಕೂಲವಾಗಲಿದೆ. ಟನಲ್ ಯೋಜನೆಗೆ ಸದ್ಯದಲ್ಲಿಯೇ ಹೊಸ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ ಎಂದು ಡಿಕೆಶಿ ತಿಳಿಸಿದರು.

ಹೆಬ್ಬಾಳ ಮೇಲ್ಸೇತುವೆ ವೈಶಿಷ್ಟ್ಯ

ಈ ಮೇಲ್ಸೇತುವೆ 500 ಮೀಟರ್ ಉದ್ದವಿದ್ದು, ಕೆ.ಆರ್. ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೋಗಲು ಈ ಮೇಲ್ಸೇತುವೆ ವಾಹನ ಸವಾರರ ಓಡಾಟಕ್ಕೆ ಸಹಕಾರಿಯಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಈ ಫ್ಲೈ ಓವರ್ ನಿರ್ಮಿಸಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 31 ತಿಂಗಳು ಸಮಯ ತೆಗೆದುಕೊಂಡಿದೆ. ಮೇಲ್ಸೇತುವೆ ನಿರ್ಮಾಣಕ್ಕೆ 94 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

ಹೆಬ್ಬಾಳ ಫ್ಲೈಓವರ್ ಅನ್ನು ಸುಧಾರಿತ ರೀತಿಯಲ್ಲಿ ನಿರ್ಮಿಸಲಾಗಿದೆ. ಇದು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಫ್ಲೈಓವರ್ ನಿರ್ಮಾಣದಿಂದ ಬೆಂಗಳೂರಿನ ಹೆಬ್ಬಾಳ ಪ್ರದೇಶದಲ್ಲಿ ದೈನಂದಿನ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈ ಫ್ಲೈಓವರ್ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಸಂಚಾರ ದಟ್ಟಣೆಯ ಸಮಸ್ಯೆ ಪರಿಹಾರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

Read More
Next Story