ಜಮ್ಮುಕಾಶ್ಮೀರದಲ್ಲಿ ವರುಣಾರ್ಭಟ; 30 ಮಂದಿ ಸಾವು, 3,500ಕ್ಕೂ ಹೆಚ್ಚು ಜನರ ಸ್ಥಳಾಂತರ
x

ಜಮ್ಮು ಕಾಶ್ಮೀರದಲ್ಲಿ ಪ್ರವಾಹದ ಅಬ್ಬರ

ಜಮ್ಮುಕಾಶ್ಮೀರದಲ್ಲಿ ವರುಣಾರ್ಭಟ; 30 ಮಂದಿ ಸಾವು, 3,500ಕ್ಕೂ ಹೆಚ್ಚು ಜನರ ಸ್ಥಳಾಂತರ

ಠಾವಿ, ಚೆನಾಬ್, ಉಜ್, ರಾವಿ ಹಾಗೂ ಬಸಂತರ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಹಾನಿಯಾಗಿದೆ. ಮಳೆಯ ತೀವ್ರತೆಯಿಂದ ಬಂಡೆಗಳು ಜಾರಿ, ಮರಗಳು ಕುಸಿದು ಬಿದ್ದಿದ್ದರಿಂದ 30 ಜನರು ಮೃತಪಟ್ಟಿದ್ದಾರೆ.


ಜಮ್ಮು ಕಾಶ್ಮೀರದಲ್ಲಿ ನಾಲ್ಕನೇ ದಿನವಾದ ಬುಧವಾರ (ಆಗಸ್ಟ್ 27) ಕೂಡ ವರುಣನ ಆರ್ಭಟ ಜೋರಾಗಿದೆ. ನಿರಂತರ ಪ್ರವಾಹ ಮತ್ತು ಭೂಕುಸಿತಗಳಿಂದ 30 ಮಂದಿ ಪ್ರಾಣ ಕಳೆದುಕೊಂಡಿದ್ದು, 3,500ಕ್ಕೂ ಹೆಚ್ಚು ಜನರನ್ನು ಗಿರಿ ಶಿಖರಗಳಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಠಾವಿ, ಚೆನಾಬ್, ಉಜ್, ರಾವಿ ಹಾಗೂ ಬಸಂತರ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಹಾನಿಯಾಗಿದೆ. ಮಳೆಯ ತೀವ್ರತೆಯಿಂದ ಬಂಡೆಗಳು ಜಾರಿ, ಮರಗಳು ಕುಸಿದು ಬಿದ್ದಿದ್ದರಿಂದ 30 ಜನರು ಮೃತಪಟ್ಟಿದ್ದಾರೆ. ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ವೈಷ್ಣೋ ದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಂವಹನ ವ್ಯವಸ್ಥೆಗೆ ಹಾನಿ

"ಜಮ್ಮುಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ಭಾಗಶಃ ಹಾಣಿಗೊಳಗಾಗಿದೆ. ವೈಫೈ, ಬ್ರೌಸಿಂಗ್ ಎಲ್ಲವೂ ‌ಸ್ಥಗಿತಗೊಂಡಿದೆ. ಮಳೆ ಆರ್ಭಟದಿಂದ ಆಗಿರುವ ಹಾನಿಯು 2014 ಮತ್ತು 2019 ರ ದುಃಸ್ವಪ್ನದಂತೆ ಕಾಣುತ್ತಿದೆ" ಎಂದು ಜಮ್ಮುಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.


ಜಮ್ಮು ಕಾಶ್ಮೀರದಲ್ಲಿ ಸಂಚರಿಸುವ 22 ರೈಲುಗಳನ್ನು ರದ್ದಾಗಿವೆ. 27 ರೈಲುಗಳು ಅರ್ಧ ದಾರಿಯಲ್ಲೇ ನಿಂತಿವೆ. ಕಟ್ರಾ, ಜಮ್ಮು ಹಾಗೂ ಉದಂಪುರ ಮಾರ್ಗಗಳು ಹೆಚ್ಚು ಹಾನಿಗೊಳಗಾಗಿವೆ. ಜಮ್ಮು- ಶ್ರೀನಗರ ಮತ್ತು ಕಿಶ್ತವಾರ್-ಡೋಡಾ ಹೆದ್ದಾರಿಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಜಮ್ಮು ಕಾಶ್ಮೀರದಲ್ಲಿ ಸೇತುವೆಗಳು ಕುಸಿದಿರುವುದು

ರಕ್ಷಣಾ ಕಾರ್ಯಾಚರಣೆ ಚುರುಕು

ಮಳೆಪೀಡಿತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಜಿಲ್ಲಾಡಳಿತ, ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಜಮ್ಮುವಿನಲ್ಲಿ ನಿರಾಶ್ರಿತರಿಗಾಗಿ ತಾತ್ಕಾಲಿಕ ಶಿಬಿರಗಳನ್ನು ತೆರೆಯಲಾಗಿದೆ. ಅವರಿಗೆ ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವು ನೀಡಲಾಗುತ್ತಿದೆ.

ಪ್ರವಾಹ ಹಾಗೂ ಭೂಕುಸಿತ ಪ್ರದೇಶಗಳಿಂದ ಈವರೆಗೆ 3,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ದೋಣಿಗಳ ಸಹಾಯದಿಂದ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಜಮ್ಮು ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ತಿಳಿಸಿದ್ದಾರೆ.

ಮಳೆ ಹಾನಿ ಪ್ರದೇಶಗಳಲ್ಲಿ ತ್ವರಿತ ಉಪ ಕ್ರಮಗಳನ್ನು ಕೈಗೊಳ್ಳಲು ಸಿಎಂ ಓಮರ್‌ ಅಬ್ದುಲ್ಲಾ ಅವರು ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ. ನಿರಾಶ್ರಿತ ಕುಟುಂಬಗಳಿಗೆ ಆಹಾರ, ನೀರು, ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ಆದೇಶಿಸಿದ್ದಾರೆ.

ಕಣಿವೆ ರಾಜ್ಯದ ಮೂಲಸೌಕರ್ಯ ಹಾನಿ

ಜಮ್ಮು ಕಾಶ್ಮೀರದಲ್ಲಿ ಸೇತುವೆಗಳು, ಮೊಬೈಲ್ ಟವರ್‌ಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಫೈಬರ್ ಆಪ್ಟಿಕ್ ಲೈನ್‌ಗಳು ಹಾನಿಗೊಂಡ ಪರಿಣಾಮ ಇಂಟರ್‌ನೆಟ್‌ ವ್ಯತ್ಯಯವಾಗಿದೆ. ಮಳೆ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಮೂಲಸೌಕರ್ಯ ಹಾನಿಯಾಗಿದೆ.



Read More
Next Story