ರಾಜ್ಯಾದ್ಯಂತ ಧಾರಾಕಾರ ಮಳೆ: ಹಲವೆಡೆ ಅವಾಂತರ ಸೃಷ್ಟಿ
x

ರಾಜ್ಯಾದ್ಯಂತ ಧಾರಾಕಾರ ಮಳೆ: ಹಲವೆಡೆ ಅವಾಂತರ ಸೃಷ್ಟಿ


ರಾಜ್ಯಾದ್ಯಾಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರಗಳು ಸಂಭವಿಸಿವೆ. ಭಾರಿ ಮಳೆ ಪರಿಣಾಮ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಸ್ತೆಗಳು ಕೂಡ ನದಿಯಂತಾಗಿವೆ. ಪರಿಣಾಮವಾಗಿ ಹಲವು ಪ್ರಮುಖ ಪ್ರದೇಶಗಳ ನಡುವಿನ ರಸ್ತೆ ಸಂಪರ್ಕವೇ ಕಡಿತಗೊಂಡಿದೆ.

ಹಾವೇರಿ: ಮನೆ ಗೋಡೆ ಕುಸಿದು ಮೂವರ ದುರ್ಮರಣ

ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿರುವುದರಿಂದ ಮನೆ ಗೋಡೆ ಕುಸಿದು ಮೂವರು ಮೃತಪಟ್ಟಿರುವ ಘಟನೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಈ ದುರಂತದಲ್ಲಿ ಚೆನ್ನಮ್ಮ (30), ಅಮೂಲ್ಯ (3), ಅನನ್ಯಾ (6) ಮೃತಪಟ್ಟವರು ಎಂದು ತಿಳಿದುಬಂದಿದೆ. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆ ಯಲ್ಲಮ್ಮ, ಪುತ್ರ ಮುತ್ತು, ಸೊಸೆ ಸುನೀತಾ ಗಾಯಾಳುಗಳು. ಆರು ಜನರು ಮನೆಯಲ್ಲಿ ಒಂದೇ ಕಡೆ ಮಲಗಿದ್ದರು. ಇಂದು (ಶುಕ್ರವಾರ) ನಸುಕಿನ ಜಾವ ಸುಮಾರು 3.30ಕ್ಕೆ ಆರು ಜನರ ಮೇಲೆ ಗೋಡೆ ಬಿದ್ದಿದೆ. ಇದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಹುಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಬಿನಿ ಡ್ಯಾಂನಿಂದ ನೀರು ಹೊರಕ್ಕೆ: ಕಪಿಲೆಯಲ್ಲಿ ಪ್ರವಾಹ ಭೀತಿ

ಮೈಸೂರು ಜಿಲ್ಲೆ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇದರಿಂದಾಗಿ ನಂಜನಗೂಡಿನಲ್ಲಿ ಮತ್ತಷ್ಟು ಪ್ರವಾಹ ಭೀತಿ ಎದುರಾಗಿದೆ. ಇಂದು ಬೆಳಗ್ಗೆ ನಂಜನಗೂಡು ಕಪಿಲಾ ನದಿ ಮತ್ತಷ್ಟು ತುಂಬಿ ಹರಿಯುವ ಸಾಧ್ಯತೆಯಿದ್ದು, ಕಪಿಲಾ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.

ಇತ್ತ ಮಲೆನಾಡಿನಲ್ಲೂ ವರುಣನ ಅಬ್ಬರ ಮುಂದುವರೆದಿದ್ದು, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ ಜಲಾಶಯ ಮಳೆಗೆ ಭರ್ತಿಯಾಗಿದೆ. ಕೋಡಿ ಬಿದ್ದಿರುವ ಜಲಾಶಯದಲ್ಲಿ ಸ್ಥಳೀಯರು ಜೀವದ ಹಂಗು ತೊರೆದು ಮೀನು ಹಿಡಿಯಲು ಪೈಪೋಟಿ ನಡೆಸಿದ್ದಾರೆ.

ಮಂಗಳೂರು ಬೆಂಗಳೂರು ನಡುವಣ ಸಂಚಾರ ಸ್ಥಗಿತ

ಮಂಗಳೂರು ಬೆಂಗಳೂರು ನಡುವಣ ಸಂಚಾರ ಭಾಗಶಃ ಬಂದ್ ಆಗಿದೆ. ಪರಿಣಾಮವಾಗಿ ಬೆಂಗಳೂರಿನಿಂದ ಊರುಗಳಿಗೆ ಹೊರಟಿದ್ದ ಪ್ರಯಾಣಿಕರು ಮತ್ತು ತಮ್ಮ ತಮ್ಮ ಊರುಗಳಿಂದ ರಾಜಧಾನಿಗೆ ಹೊರಟಿಟಿದ್ದವರು ಗುರುವಾರ ರಾತ್ರಿ ಅರ್ಧ ದಾರಿಯಲ್ಲಿ ಪರದಾಡುವಂತಾಯಿತು.

ಮುಳುಗಿದ ಹೆಬ್ಬಾಳೆ ಸೇತುವೆ: ಸಂಕಷ್ಟದಲ್ಲಿ ಕಳಸದ ಜನತೆ

ನಿರಂತರವಾಗಿ ಸುರಿಯುತ್ತಿರುವ ಮಳೆ ಚಿಕ್ಕಮಗಳೂರು ಜಿಲ್ಲೆಯನ್ನು ತೊಯ್ದು ತೊಪ್ಪೆಯಾಗಿಸಿದೆ. ನಿರಂತರ ಮಳೆಗೆ ಕಳಸದಿಂದ ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಬದಲಿ ಮಾರ್ಗ ಹಳುವಳ್ಳಿ ಮೂಲಕ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಕಳಸ‌ ಸಂಪೂರ್ಣವಾಗಿ ರಸ್ತೆ ಮಾರ್ಗದ ಸಂಪರ್ಕ ಕಳೆದುಕೊಂಡಂತಾಗಿದೆ.

ಶೃಂಗೇರಿಯಿಂದ ಹೊರನಾಡು ಸಂಪರ್ಕಿಸುವ ರಸ್ತೆ ಬಂದ್

ಕಳಸ ಪಟ್ಟಣಕ್ಕೆ ಸಂಪರ್ಕಿಸುವ ಮತ್ತೊಂದು ರಸ್ತೆಯೂ ಬಂದ್ ಆಗಿದೆ. ಕೊಪ್ಪ ತಾಲೂಕಿನ ಬಿಳಾಲುಕೊಪ್ಪದಿಂದ ಬಸರೀಕಟ್ಟೆಗೆ ಹೋಗುವ ರಸ್ತೆಯ ಜಲಾವೃತಗೊಂಡಿದ್ದು, ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆಯೇ ಬಂದ್ ಆದಂತಾಗಿದೆ.

20 ಅಡಿ ಆಳದ ಕಂದಕ ಸೃಷ್ಟಿ: ಮನೆ ಕುಸಿಯೋ ಭೀತಿ

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ 20 ಅಡಿಯಷ್ಟು ಕಂದಕ ಸೃಷ್ಟಿಯಾಗಿ ಮನೆ ಕುಸಿಯುವ ಭೀತಿ ಎದುರಾಗಿದೆ. ಕಂದಕದ ಒಳಗೆ ನೀರು ಹರಿಯುತ್ತಿದ್ದು, ನೀರಿನ ಸೆಲೆ ಹೆಚ್ಚಾಗಿ ಕಂದಕ ಸೃಷ್ಟಿಯಾಗಿರುವ ಸಾಧ್ಯತೆಯಿದೆ.

ಬೃಹತ್ ಗಾತ್ರದ ಮರ ಬಿದ್ದು ಕಾರು, ಬೈಕ್‌ಗಳು ಜಖಂ

ನಿರಂತರ ಮಳೆಗೆ ಬೆಳಗಾವಿ ತಾಲೂಕಿನ ಮಜಗಾವಿಯಲ್ಲಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಘಟನೆಯಲ್ಲಿ ಎರಡು ಬೈಕ್ ಹಾಗೂ ಒಂದು ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

20 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ

ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ‌ ಹಾಲತ್ರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಮಂತುರ್ಗಾ ಸೇತುವೆ ಜಲಾವೃತಗೊಂಡಿದ್ದು, ಹೆಮ್ಮಡಗಾ ಖಾನಾಪುರ ಸಂಪರ್ಕ ಕಡಿತಗೊಂಡಿದೆ. ಇದು ಖಾನಾಪುರ ತಾಲೂಕಿನ ಇಪ್ಪತ್ತು ಗ್ರಾಮಗಳಿಗೆ ಸಂಪರ್ಕಿಸುವ ಏಕೈಕ ಸೇತುವೆಯಾಗಿದ್ದು, ಸದ್ಯ ಭಾರಿ ಸಂಕಷ್ಟ ಎದುರಾಗಿದೆ.

ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಭಾರೀ ಪ್ರವಾಹ

ಕೊಡಗಿನಲ್ಲಿ ರಣಭೀಕರ ಮಳೆಯಾಗುತ್ತಿದ್ದು, ಮಡಿಕೇರಿ ತಾಲೂಕಿನ ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದೆ. ರಸ್ತೆ ಬದಿಯ ಒಂದು ಅಂಗಡಿ ಮುಳುಗಡೆಯಾಗಿದ್ದು, ಅಂಗಡಿ ವಾಸಿಗಳನ್ನ ಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಕ್ಷಣ ವಿರಾಜಪೇಟೆ ಸಂಪರ್ಕ‌ ಕಡಿತವಾಗುವ ಸಾಧ್ಯತೆಯಿದೆ. ಇನ್ನು ರಸ್ತೆ ಬದಿಯ 10 ಎಕರೆಗೂ ಅಧಿಕ‌ ಕಾಫಿ ತೋಟಕ್ಕೂ ನೀರು ನುಗ್ಗಿದೆ.

ಭಾಗಮಂಡಲ‌ ಭಗಂಡೇಶ್ವರನಿಗೆ ಜಲ‌ದಿಗ್ಬಂಧನ

ಕೊಡಗು ಜಿಲ್ಲೆಯಾದ್ಯಂತ ಎಡೆಬಿಡದೆ ವರ್ಷ ಧಾರೆಯಾಗ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ಭಾಗಮಂಡಲ‌ ಭಗಂಡೇಶ್ವರನಿಗೆ ಜಲ‌ದಿಗ್ಬಂಧನ ಉಂಟಾಗಿದ್ದು, ದೇವಸ್ಥಾನ ಆವರಣಕ್ಕೆ ನುಗ್ಗಿದ ಕಾವೇರಿ ಆತಂಕ ಸೃಷ್ಟಿಸಿದ್ದಾಳೆ.

ರಾಜ್ಯದೆಲ್ಲೆಡೆ ಮುಂದುವರೆದ ವರುಣಾರ್ಭಟ

ಬೆಳಗಾವಿಯಲ್ಲಿ ಭಾರಿ ಮಳೆ ಎಚ್ಚರಿಕೆ

ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಬೆಳಗಾವಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್‌, ಧಾರವಾಡ, ಗದಗ, ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸುತ್ತಮುತ್ತ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಈ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿಗೆ 40-50 ಕಿ.ಮೀ ತಲುಪಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು ಜಿಲ್ಲೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಯಾದಗಿರಿ, ಹಾಸನ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Read More
Next Story