
ಸಾಂದರ್ಭಿಕ ಚಿತ್ರ
ಕರಾವಳಿ, ಮಲೆನಾಡು ಭಾಗದಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಸಾಧ್ಯತೆ
ಭಾರೀ ಮಳೆಯಿಂದಾಗಿ ಶೃಂಗೇರಿ-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡ ಕುಸಿಯಲಾರಂಭಿಸಿದೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 10ರವರೆಗೂ ಭಾರಿ ಮಳೆಯಾಗಲಿದೆ. ಬೆಳಗಾವಿ,ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಧಾರವಾಡಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ
ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೆಡೆ ಭೂಕುಸಿತಗಳು ಸಂಭವಿಸಿವೆ. ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಳಿನಿ, ನಂದಿನಿ, ತುಂಗಾ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಶೃಂಗೇರಿ ಮಠದ ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನ ಮಂಟಪ, ಗಾಂಧಿ ಮೈದಾನಗಳು ಜಲಾವೃತಗೊಂಡಿವೆ. ಈ ಮಧ್ಯೆ, ಶಂಕರಗಿರಿ ಬೆಟ್ಟ, ಸಿರಿಮನೆ ಜಲಪಾತ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ಬಂಟ್ವಾಳ ತಾಲೂಕಿನ ಶಾಲೆ-ಕಾಲೇಜಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಬಂಟ್ವಾಳ ತಾಲೂಕಿನ ಎಲ್ಲಾ ಶಾಲಾ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂಟ್ವಾಳ ತಹಶೀಲ್ದಾರ್ ಮಳೆಯ ಹಿನ್ನೆಲೆ ರಜೆ ಘೋಷಣೆ ಮಾಡಿದ್ದಾರೆ.
ಶಿವಮೊಗ್ಗ ಶಾಲಾ, ಕಾಲೇಜಿಗೆ ರಜೆ
ಸಾಗರ ಮತ್ತು ಹೊಸನಗರದಲ್ಲಿ ನಿರಂತರ ಮಳೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ಇಂದು ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ಎಲ್ಲಾ ಶಾಲಾ, ಕಾಲೇಜು ಮತ್ತು ಅಂಗನವಾಡಿಗಳಿಗೆ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗು ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಆದೇಶ ಹೊರಡಿಸಿದ್ದಾರೆ.
ಮುಂದುವರಿದ ಗುಡ್ಡಕುಸಿತ
ಈ ಮಧ್ಯೆ, ಭಾರೀ ಮಳೆಯಿಂದಾಗಿ ಶೃಂಗೇರಿ-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡ ಕುಸಿಯಲಾರಂಭಿಸಿದೆ. ಕಾರವಾರ ತಾಲೂಕಿನ ಕದ್ರಾದಿಂದ ಕೊಡಸಳ್ಳಿ ಡ್ಯಾಂಗೆ ಹೋಗುವ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದು, 30 ಅಡಿ ಉದ್ದಕ್ಕೂ ಕಲ್ಲು-ಮಣ್ಣಿನ ರಾಶಿನ ಹರಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಕೊಡಗಿನಲ್ಲೂ ಭಾರೀ ಮಳೆ
ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಇಂದು ಮತ್ತು ನಾಳೆ ಭಾರಿ ಮಳೆ ನಿರೀಕ್ಷಿಸಲಾಗಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರಿನಲ್ಲೂ ಭಾರೀ ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.