
Heavy Rain | ಕರಾವಳಿ, ಮಲೆನಾಡಿನಲ್ಲಿ ಅಬ್ಬರಿಸಿದ ಮುಂಗಾರು; ಅವಾಂತರ ಸೃಷ್ಟಿಸಿದ ವರ್ಷಧಾರೆ
ಚಿಕ್ಕಮಗಳೂರು, ಹಾಸನ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ಅಲ್ಲಲ್ಲಿ ಅವಗಢಗಳು ಸಂಭವಿಸಿವೆ. ಚಿಕ್ಕಮಗಳೂರಿನ ಬಣಕಲ್ ರಾಮಣ್ಣನಂಗಡಿ ಬಳಿ ಮೂರು ಕಾರುಗಳು ಪಲ್ಟಿಯಾಗಿವೆ.
ರಾಜ್ಯಾದ್ಯಂತ ಅವಧಿಗೂ ಮುನ್ನವೇ ಪ್ರವೇಶಿಸಿರುವ ಮುಂಗಾರು ಎಲ್ಲೆಡೆ ಅಬ್ಬರಿಸುತ್ತಿದ್ದು, ಭಾನುವಾರ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ.
ಚಿಕ್ಕಮಗಳೂರು, ಹಾಸನ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ಅಲ್ಲಲ್ಲಿ ಅವಗಢಗಳು ಸಂಭವಿಸಿವೆ. ಚಿಕ್ಕಮಗಳೂರಿನ ಬಣಕಲ್ ರಾಮಣ್ಣನಂಗಡಿ ಬಳಿ ಮೂರು ಕಾರುಗಳು ಪಲ್ಟಿಯಾಗಿವೆ.
ಇಲ್ಲಿನ ಚಕಮಕ್ಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಕಾರುಗಳು ಉರುಳುಬಿದ್ದಿದ್ದು, ಹೇಮಾವತಿ ನದಿ ತೀರಕ್ಕೆ ಕಾರು ಉರುಳಿ ಬಿದ್ದಿವೆ. ಕಾರಿನಲ್ಲಿದ್ದ ನಾಲ್ವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಹಗ್ಗದ ಸಹಾಯದಿಂದ ನೀರಿಗೆ ಇಳಿದು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಚಾಲಕನನ್ನು ನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಕಾಮಗಾರಿಯಿಂದ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು, ಕೊಟ್ಟಿಗೆಹಾರ, ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಭಾರೀ ಮಳೆಯಾಗುತ್ತಿದೆ.
ಕೊಡಗು ಜಿಲ್ಲೆಯಲ್ಲೂ ಮಳೆಯ ಆರ್ಭಟ ವಿಪರೀತವಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನದಿ ತೀರದ ನಿವಾಸಿಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಮೀನು ಸಾಗಣೆ ಲಾರಿ ಪಲ್ಟಿ
ಹಾಸನ ಜಿಲ್ಲೆಯಲ್ಲಿ ಮಳೆಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಸಕಲೇಶಪುರ ತಾಲೂಕಿನ ರಾಟೆ ಮನೆ ಬಳಿ ಈ ಅವಘಡ ಸಂಭವಿಸಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೇಲೂರು ತಾಲೂಕಿನ, ಕುಪ್ಪಗೋಡು ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ. 60 ಎಕರೆ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ಭಾರೀ ಮಳೆಗೆ ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಂಗಳೂರಿನ ಅಡ್ಯಾರ್ ಗ್ರಾಮದಲ್ಲಿ ಜನರು ಪರದಾಡುವಂತಾಗಿದೆ. ಮಳೆಯಿಂದ ಚರಂಡಿಯಲ್ಲಿ ಹರಿಯುವ ನೀರು ಬಾವಿ ಸೇರುತ್ತಿದೆ. ಜನರು ಬಳಸುವ ಬಾವಿಯ ನೀರೂ ಕಲುಷಿತವಾಗಿದೆ.
ಪುತ್ತೂರು ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಹಳೆಯ ಕಟ್ಟಡದ ಗೋಡೆಯೊಂದು ಕುಸಿದು ಹೂ ಮಾರಾಟ ಮಾಡುತ್ತಿದ್ದ ಮಹಿಳೆ ಗಾಯಗೊಂಡಿದ್ದಾರೆ.
ಘಟ್ಟ ಪ್ರದೇಶದಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ. ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಬೆಳ್ತಂಗಡಿಯಲ್ಲಿ ಅಡಿಕೆ ತೋಟಕ್ಕೆ ನದಿ ನೀರು ನುಗ್ಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆಗೆ ಜನ ಹೈರಾಣಾಗಿದ್ದಾರೆ. ರೋಣ, ಗಜೇಂದ್ರಗಡ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದೆ. ಮುಂದಿನ ಒಂದು ವಾರದಲ್ಲಿ ಮುಂಗಾರು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.