
ಜುಲೈ 25ರವರೆಗೆ ಭಾರೀ ಮಳೆ ಸಾಧ್ಯತೆ; ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ
ಜು. 23, 24ರಂದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಲಾಗಿದೆ. ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ.
ರಾಜ್ಯದಾದ್ಯಂತ ಈ ವಾರವೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಕರಾವಳಿ, ಮಲೆನಾಡು ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜು. 23, 24ರಂದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಲಾಗಿದೆ. ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಈ ವಾರವಿಡೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ತೀರದಲ್ಲಿ ಭಾರಿ ಅಲೆಗಳ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಸಮುದ್ರ ತೀರದ ಜನರು ಸುರಕ್ಷಿತ ಸ್ಥಳಗಳಲ್ಲಿ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಉಳಿದ ಒಳನಾಡು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮತ್ತು ದಾವಣಗೆರೆಯಲ್ಲಿ ಜುಲೈ 25ರವರೆಗೆ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಈ ಜಿಲ್ಲೆಗಳಲ್ಲಿ ಹಗುರದಿಂದ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಭಾರೀ ಮಳೆಯೂ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಮಳೆ ಸಂಬಂಧಿ ಅವಘಡಗಳಿಂದ ಭಾನುವಾರ ಒಂದೇ ದಿನ ಐವರು ಮೃತಪಟ್ಟಿದ್ದಾರೆ.
ಮಳೆಯ ಅವಾಂತರಕ್ಕೆ ಒಂದೇ ದಿನ ಐವರು ಸಾವು
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪಿಕಳೆ ಆಸ್ಪತ್ರೆ ಬಳಿ ಗಾಳಿ, ಮಳೆಗೆ ಬೃಹತ್ ಮರವೊಂದು ಕಾರಿನ ಮೇಲೆಯೇ ಉರುಳಿಬಿದ್ದಿದೆ. ಗರ್ಭಿಣಿ ಸೊಸೆಯನ್ನು ಆಸ್ಪತ್ರೆಗೆ ಕರೆತಂದಿದ್ದ ಅತ್ತೆ ಮೇಲೆ ಮರ ಬಿದ್ದು ಅಸುನೀಗಿದ್ದಾರೆ. ಅತ್ತೆ ಲಕ್ಷ್ಮೀ ತನ್ನ 8 ತಿಂಗಳ ಗರ್ಭಿಣಿ ಸೊಸೆ ಸುನಿತಾರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆ ಬಳಿ ಚಾಲಕ ಹಾಗೂ ಸೊಸೆ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ, ಬೃಹತ್ ಮರ ಕಾರಿನ ಮೇಲೆಯೇ ಉರುಳಿ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅತ್ತೆ ಲಕ್ಷ್ಮೀ ಕಾರಿನಲ್ಲೇ ಮೃತಪಟ್ಟಿದ್ದರು.
ಮೈಸೂರು ತಾಲೂಕಿನ ಮೀನಾಕ್ಷಿಪುರ ಬಳಿಯ ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಭಾನುವಾರ ಮೋಜು ಮಸ್ತಿಗೆಂದು ಬಂದಿದ್ದ ಮಂಡ್ಯ ನರ್ಸಿಂಗ್ ಕಾಲೇಜಿನ ಪ್ರಶಾಂತ್, ಸಿದ್ದೇಶ್, ಕೃಷ್ಣ ಮೃತಪಟ್ಟ ವಿದ್ಯಾರ್ಥಿಗಳು.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಬ್ಬಿ ಜಲಪಾತದ ಮುಂದೆ ಫೋಟೊಗೆ ಪೋಸ್ ಕೊಡುತ್ತಿದ್ದಂತೆ ಬೆಂಗಳೂರು ಮೂಲದ ಪ್ರವಾಸಿಗ ರಮೇಶ್ ನೀರುಪಾಲಾಗಿದ್ದಾರೆ.
ಪಂಪ್ವೆಲ್ ಬಳಿಯ ಪ್ರದೇಶಗಳು ಜಲಾವೃತ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಬಂಟ್ವಾಳ ತಾಲೂಕಿನ ಮಾಣಿಯ ಪೇರಮೊಗೇರು ಬಳಿ ಗುಡ್ಡ ಕುಸಿದಿದೆ. ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟದ ಮೇಲಿರುವ ಮನೆಗಳು ಕುಸಿಯುವ ಆತಂಕ ಎದುರಾಗಿದೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರ ಪರಿಣಾಮ ನೀರು ಹೊರ ಹೋಗಲು ಜಾಗವಿಲ್ಲದೆ, ಪಂಪ್ವೆಲ್ ಬಳಿಯ ಪ್ರದೇಶಗಳು ಜಲಾವೃತಗೊಂಡಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು 2 ಬೈಕ್, ಕಾರೊಂದು ಜಖಂಗೊಂಡಿದೆ. ಈ ವೇಳೆ ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ.