Heavy Rain|ಕರಾವಳಿಯಲ್ಲಿ ಮಳೆ ಆರ್ಭಟ; ಶಾಲೆಗಳಿಗೆ ರಜೆ ಘೋಷಣೆ, ಕಾನಕರೆಯಲ್ಲಿ ಗುಡ್ಡ ಕುಸಿದು ಬಾಲಕಿ ಸಾವು
x

ಭಾರೀ ಮಳೆಗೆ ಮನೆಯ ಕಾಂಪೌಂಡ್ ಕುಸಿದಿದೆ. 

Heavy Rain|ಕರಾವಳಿಯಲ್ಲಿ ಮಳೆ ಆರ್ಭಟ; ಶಾಲೆಗಳಿಗೆ ರಜೆ ಘೋಷಣೆ, ಕಾನಕರೆಯಲ್ಲಿ ಗುಡ್ಡ ಕುಸಿದು ಬಾಲಕಿ ಸಾವು

ಉಲ್ಲಾಳದ ಕಾನಕರೆಯಲ್ಲಿ ಗುಡ್ಡ ಹಾಗೂ ಕಾಂಪೌಂಡ್‌ ಗೋಡೆ ಕುಸಿದು ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಮೊಂಟೆಪದವುನಲ್ಲಿ ಗುಡ್ಡ ಕುಸಿದು, ಮಣ್ಣಿನಡಿ ಮೂವರು ಸಿಲುಕಿರುವ ಮಾಹಿತಿ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.


ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಂಗಳೂರಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹಲವೆಡೆ ಗುಡ್ಡ ಕುಸಿದಿದ್ದು, ಬಡಾವಣೆ, ರಸ್ತೆಗಳು ಜಲಾವೃತವಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ಜಿಲ್ಲೆಗಳಲ್ಲಿ ಶುಕ್ರವಾರ (ಮೇ 30) ಅಂಗನವಾಡಿಗಳು ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಎರಡೂ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಪಡೆಯನ್ನು ಸನ್ನದ್ಧವಾಗಿ ಇರಿಸಲಾಗಿದೆ. ಗುಡ್ಡ ಕುಸಿತದ ಸ್ಥಳಗಳಲ್ಲಿ ಮಣ್ಣು ತೆರವು ಕಾರ್ಯದಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಗೋಡೆ ಕುಸಿದು ಬಾಲಕಿ ಸಾವು

ಉಲ್ಲಾಳದ ತಾಲ್ಲೂಕಿನ ಬೆಳ್ಳಗ್ರಾಮದ ಕಾನಕರೆ ಎಂಬಲ್ಲಿ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದು ಬಾಲಕಿ ಮೃತಪಟ್ಟಿದೆ.

ಮೃತ ಮಗುವನ್ನು ನೌಶಾದ್‌ ಎಂಬುವರ ಪುತ್ರಿ ನಯೀಮ ಎಂದು ಗುರುತಿಸಲಾಗಿದೆ. ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡ ಹಾಗೂ ತಡೆಗೋಡೆ ಕುಸಿದು ಬಿದ್ದಿದೆ. ಅದರ ರಭಸಕ್ಕೆ ಮನೆಯ ಕಿಟಕಿ ಮಗುವಿನ ಕಳಚಿ ಬಾಲಕಿ ಮೇಲೆ ಬಿದ್ದು ಈ ಅವಗಢ ಸಂಭವಿಸಿದೆ.

ಇನ್ನು ದೇರಳಕಟ್ಟೆ ಸಮೀಪದ ಮೊಂಟೆಪದವು ಕೋಡಿ ಎಂಬಲ್ಲಿ ಗುಡ್ಡ ಕುಸಿದಿದ್ದು, ಐವರು ಮಣ್ಣಿನಡಿ ಸಿಲುಕಿರುವ ಮಾಹಿತಿ ಸಿಕ್ಕಿದೆ. ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ಭಾರೀ ಮಳೆಯಿಂದ ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾ‌ರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತಗೊಂಡಿದೆ.

6 ಜಿಲ್ಲೆಗಳಿಗೆ ರೆಡ್​ ಅಲರ್ಟ್ ಘೋಷಣೆ

ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್​ ನೀಡಿದೆ.

ಕೊಡಗು, ಹಾಸನ, ವಿಜಯಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಮೈಸೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಜಲಪಾತಗಳ ಬಳಿ ಪ್ರವೇಶ ನಿರ್ಬಂಧ

ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರು ಕಡಲತೀರಗಳು, ನದಿಗಳು ಮತ್ತು ಜಲಪಾತಗಳ ಬಳಿಗೆ ಹೋಗುವುದನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂಥ ಪ್ರದೇಶಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.

Read More
Next Story