ಕರಾವಳಿಯಲ್ಲಿ ಮಳೆ ಅವಾಂತರ | ಆಟೋಸಹಿತ ಕಾಲುವೆಯಲ್ಲಿ ಕೊಚ್ಚಿಹೋಗಿ ಚಾಲಕ ಸಾವು
x

ಕರಾವಳಿಯಲ್ಲಿ ಮಳೆ ಅವಾಂತರ | ಆಟೋಸಹಿತ ಕಾಲುವೆಯಲ್ಲಿ ಕೊಚ್ಚಿಹೋಗಿ ಚಾಲಕ ಸಾವು


ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಯಲ್ಲಿ ರಿಕ್ಷಾವೊಂದು ಕೊಚ್ಚಿಕೊಂಡು ಹೋಗಿದ್ದು, ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳೂರಿನ ಕೋಡಿಕಲ್ ವಾರ್ಡ್ ಸಂಖ್ಯೆ 16ರಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕೊಟ್ಟಾರ ಚೌಕಿ ನಿವಾಸಿ ದೀಪಕ್ ಆಚಾರ್ಯ ಮೃತ ದುರ್ದೈವಿ. ರಾತ್ರಿ ಮಳೆ ಬಂದ ಕಾರಣ ತೋಡಿನಲ್ಲಿ ನೀರು ಹರಿಯುತ್ತಿತ್ತು. ಈ ವೇಳೆ ರಿಕ್ಷಾ ತೋಡಿಗೆ ಬಿದ್ದಿದೆ. ನೀರೊಳಗೆ ರಿಕ್ಷಾ ಹೆಡ್ ಲೈಟ್ ಉರಿಯುತ್ತಿದ್ದುದನ್ನು ಕಂಡು ದಾರಿಹೋಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತೋಡಿನ ಆಳದಲ್ಲಿ ರಿಕ್ಷಾದೊಂದಿಗೆ ಚಾಲಕನ ಶವ ಪತ್ತೆಯಾಗಿದೆ.

ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೊಟ್ಟಾರ ಚೌಕಿಯಲ್ಲಿ ಸುಮಾರು 10 ಮನೆಗಳು ಹಾಗೂ ಸಾಗರ್ ಕೋರ್ಟ್ ಪ್ರದೇಶದಲ್ಲಿ ಸುಮಾರು 10 ಮನೆಗಳು ಜಲಾವೃತಗೊಂಡಿವೆ. ಸಾಗರ ಕೋರ್ಟ್‌ ಪ್ರದೇಶದಲ್ಲಿ ಜಲಾವೃತವಾಗಿದ್ದ ಮನೆಯೊಂದರಲ್ಲಿ ಲಕ್ಷ್ಮೀ ಎಂಬ 85 ವರ್ಷದ ವೃದ್ಧೆಯೊಬ್ಬರು ಸಿಲುಕಿಕೊಂಡಿದ್ದರು. ಅವರ ಕುಟುಂಬ ಈಚೆಗಷ್ಟೇ ಬೆಂಗಳೂರಿನಿಂದ ಬಂದು ಇಲ್ಲಿ ನೆಲೆಸಿದ್ದರಿಂದ ಅವರು ಒಬ್ಬಂಟಿಯಾಗಿದ್ದರು. ಆ ಬಳಿಕ ಪಕ್ಕದ ಮನೆಯ ಯತೀಶ್ ಎಂಬುವರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯೇ ಸ್ಥಳಕ್ಕೆ ಧಾವಿಸಿ ವೃದ್ಧೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ

ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಉಡುಪಿ ನಗರದ ಓಲ್ಡ್ ಬಸ್ ಸ್ಟ್ಯಾಂಡ್ ಸಮೀಪದ ಕೃಷ್ಣಾ ಕ್ಯಾಂಪ್ಲೆಕ್ಸ್‌ ಶ್ರೀ ನಾಗ ದೇವರ ಸನ್ನಿಧಿಯ ಪಕ್ಕದ ಆವರಣದ ಗೋಡೆ ಕುಸಿದು 3 ವಾಹನ ಸಂಪೂರ್ಣ ಜಖಂ ಗೊಂಡಿದೆ. ಬೋರ್ಡ್‌ ಹೈಸ್ಕೂಲ್‌ ನ ಆವರಣದ ಗೋಡೆ ಕೂಡ ಕುಸಿತಗೊಂಡಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.


ನಗರದಲ್ಲಿ ಶನಿವಾರ ಬೆಳಿಗ್ಗೆಯೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ಶನಿವಾರ ಬೆಳಗಿನ ಜಾವ ದಟ್ಟ ಮೋಡದೊಂದಿಗೆ ಮಳೆಯಾಗುತ್ತಿದ್ದು, ಕೆಲ ದಿನ ಇದೇ ರೀತಿ ಮಳೆ ಸುರಿಯುವ ಲಕ್ಷಣಗಳಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಿಡಿಲು ಬಡಿದು ವಿದ್ಯಾರ್ಥಿ ಸಾವು

ಸಿಡಿಲು ಬಡಿದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ನಡೆದಿದೆ. ಶಿರ್ವ ಮಾಣೆಬೆಟ್ಟು ನಿವಾಸಿ ರಕ್ಷಿತ್ ಪೂಜಾರಿ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ರಕ್ಷಿತ್ ಪೂಜಾರಿ ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದನು.

ಗುರುವಾರ ಸಂಜೆ ಮೃತ ರಕ್ಷಿತ್ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿರುವಾಗ ಏಕಾಏಕಿ ಸಿಡಿಲು ಬಡಿದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಮನೆಯವರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ರಕ್ಷಿತ್ ಪೂಜಾರಿ ಸಾವನ್ನಪ್ಪಿದ್ದಾನೆ. ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More
Next Story