
ಮತ್ತೆ ಹೆಚ್ಚಿದ ಮಳೆ ಅಬ್ಬರ | ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ, ಆರೆಂಜ್ ಅಲರ್ಟ್
ರಾಜ್ಯದ ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಯಾದಗಿರಿ, ವಿಜಯಪುರ, ಕಲಬುರಗಿ, ಬೀದರ್ಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ.
ಕ್ಯಾಸಲ್ರಾಕ್, ಸಿದ್ದಾಪುರ, ಕಮ್ಮರಡಿ, ಕೊಟ್ಟಿಗೆಹಾರ, ಆಗುಂಬೆ, ಸೋಮವಾರಪೇಟೆ, ಭಾಗಮಂಡಲ, ಕಳಸ, ಕೊಲ್ಲೂರು, ಯಲ್ಲಾಪುರ, ಗೇರುಸೊಪ್ಪ, ಧರ್ಮಸ್ಥಳ, ಲೋಂಡಾ, ಮಂಗಳೂರು ವಿಮಾನ ನಿಲ್ದಾಣ, ಲಿಂಗನಮಕ್ಕಿ, ಎನ್ಆರ್ಪುರ, ನಾಪೊಕ್ಲು, ಹುಂಚದಕಟ್ಟೆ, ಶೃಂಗೇರಿಯಲ್ಲಿ ಮಳೆಯಾಗಿದೆ.
ಕೊಡಗಿನಲ್ಲಿ ನಿಲ್ಲದ ಮಳೆ
ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರ ಪೇಟೆಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ಶುಕ್ರವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದ ಅನೇಕ ಮರಗಳು ಧರೆಗುರುಳುತ್ತಿವೆ. ಗುರುವಾರ ಸೋಮವಾರಪೇಟೆ ತಾಲೂಕಿನಲ್ಲಿ ರಸ್ತೆಗೆ ಗುಡ್ಡ ಕುಸಿದಿತ್ತ. ಗುಡ್ಡದ ಮಣ್ಣನ್ನು ತೆರವುಗೊಳಿಸಲಾಗಿತ್ತು. ಆದರೆ ಶುಕ್ರವಾರ ಮತ್ತೆ ಮಣ್ಣು ಕುಸಿಯುತ್ತಿದೆ. ಜೆಸಿಬಿ ಮೂಲಕ ಎಷ್ಟೇ ಮಣ್ಣು ತೆಗೆದರೂ ಕೆಸರು ಮಿಶ್ರಿತ ಮಣ್ಣು ರಸ್ತೆಗೆ ಜಾರುತ್ತಲೇ ಇದೆ.
ಶಿವಮೊಗ್ಗದಲ್ಲೂ ಭಾರಿ ಮಳೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಸನಗರ ಕೊಲ್ಲೂರು ಮಾರ್ಗದಲ್ಲಿ ಭಾರೀ ಗಾತ್ರದ ಮರ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಸಂಚಾರ ವ್ಯತ್ಯಯವಾಗಿದೆ. ಅಲ್ಲದೆ, ಸಾಗರ ಭಾಗದಲ್ಲೂ ಭಾರೀ ಬಿರುಗಾಳಿ ಮಳೆ ಮುಂದುವರಿದಿದ್ದು ಅಲ್ಲಲ್ಲಿ ಮರ ಉರುಳಿ ವಿದ್ಯುತ್ ಮಾರ್ಗಗಳು ತುಂಡಾಗಿವೆ. ಹೆದ್ದಾರಿ ಸಂಪರ್ಕ ವ್ಯತ್ಯಯಗೊಂಡಿದೆ.
ಜಿಲ್ಲೆಯ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕಿನ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.
ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಮುಧೋಳ ರಜೆ ಘೋಷಣೆ
ಘಟಪ್ರಭಾ, ಕೃಷ್ಣಾ ನದಿಗೆ ಅಪಾರ ನೀರು ಹರಿದುಬರುತ್ತಿರುವ ಕಾರಣ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಮುಧೋಳ ಸೇರಿದಂತೆ ಮೂರು ತಾಲೂಕುಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.