ಕರಾವಳಿ, ಮಲೆನಾಡಿನಲ್ಲಿ ಪುನರ್ವಸು ಅಬ್ಬರ | ಶಾಲಾ ಕಾಲೇಜುಗಳಿಗೆ ರಜೆ
x

ಕರಾವಳಿ, ಮಲೆನಾಡಿನಲ್ಲಿ ಪುನರ್ವಸು ಅಬ್ಬರ | ಶಾಲಾ ಕಾಲೇಜುಗಳಿಗೆ ರಜೆ


ರಾಜ್ಯದ ಮಲೆನಾಡು ಮತ್ತು ಕರಾವಳಿ ಸೇರಿದಂತೆ ವಿವಿಧೆಡೆ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾಸನ, ಕೊಡಗು, ಮೈಸೂರಿನಲ್ಲಿ ಕೂಡ ಮಳೆಯಾಗುತ್ತಿದೆ. ಕೆಲವೆಡೆ ಅತಿಯಾದ ಬಿರುಗಾಳಿ ಮಳೆಯ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಸೋಮವಾರ(ಜು.15) ಜಿಲ್ಲೆಯ ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಪ್ಪ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು ತಿಳಿಸಿದ್ದಾರೆ.

ಉತ್ತರಕ‌ನ್ನಡದಲ್ಲಿಯೂ ಮಳೆ ಅಬ್ಬರ ಮುಂದುವರಿದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ, ಕುಮಟಾ, ಅಂಕೋಲಾ,‌ ಕಾರವಾರ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ ಮತ್ತು ಜೋಯ್ಡಾ ತಾಲೂಕಿನ ಶಾಲಾ ಕಾಲೇಜುಗಳಿಗೆ ಸೋಮವಾರ(ಜು.15) ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಕಳೆದ ಎರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಮೂಡಿಗೆರೆ, ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ಭಾಗದಲ್ಲಿ ಭಾರೀ ಮಳೆಯಾಗಿದ್ದು, ತುಂಗಾ, ಭದ್ರಾ, ಶರಾವತಿ ಮತ್ತು ಅವುಗಳ ಉಪ ನದಿಗಳಿಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದ್ದು ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಸಾಗರ- ಭಟ್ಕಳ, ಹೊಸನಗರ-ಬೈಂದೂರು, ಆಗುಂಬೆ ಘಾಟಿ ಮುಂತಾದ ಮಾರ್ಗಗಳಲ್ಲಿ ಅಲ್ಲಲ್ಲಿ ಗುಡ್ಡು ಕುಸಿತ ಉಂಟಾಗಿದ್ದು ಸಂಚಾರಕ್ಕೆ ವ್ಯತ್ಯಯವಾಗಿದೆ. ಅಲ್ಲದೆ, ಗುಡ್ಡ ಕುಸಿತದಿಂದಾಗಿ ಕೊಂಕಣ ರೈಲ್ವೆ ಸಂಚಾರಕ್ಕೂ ವ್ಯತ್ಯಯವಾಗಿದೆ.


ಉಡುಪಿ- ದಕ್ಷಿಣಕನ್ನಡದಲ್ಲಿ ಮುನ್ನೆಚ್ಚರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಜು.15 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ.

ಆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು(12ನೇ ತರಗತಿವರೆಗೆ)ಗಳಿಗೆ ರಜೆ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಮತ್ತು ವಿದ್ಯುತ್ ಕಂಬ/ತಂತಿ ಸಮೀವ ಹೋಗದಂತೆ ಎಚ್ಚರಿಕೆ ವಹಿಸುವುದು. ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು, ಜಿಲ್ಲಾಡಳಿತದ ಸಲಹೆ/ಸೂಚನೆಗಳನ್ನು ಪಾಲಿಸುವುದು. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ನಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ಸಂಭಾವ್ಯ ಪರಿಣಾಮಗಳನ್ನು ತಗ್ಗಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಾರಂಭಿಸಿವೆ. ನಿವಾಸಿಗಳು ಮನೆಯೊಳಗೆ ಇರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಭಾರೀ ಮಳೆಯಿಂದ ಉಂಟಾಗುವ ಯಾವುದೇ ಘಟನೆಗಳಿಗೆ ಸ್ಪಂದಿಸಲು ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ವೈದ್ಯಕೀಯ ತಂಡಗಳು ಸೇರಿದಂತೆ ತುರ್ತು ಸೇವೆಗಳು ಹೆಚ್ಚಿನ ಸಿದ್ಧತೆ ಮಾಡಿಕೊಂಡಿವೆ.

Read More
Next Story