ಹೃದಯಾಘಾತ | ಬಸ್ ಬದಿಗೆ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿ ಪ್ರಾಣಬಿಟ್ಟ ಬಿಎಂಟಿಸಿ ಚಾಲಕ!
x
ಬಿಎಂಟಿಸಿ ಬಸ್(ಪ್ರಾತಿನಿಧಿಕ ಚಿತ್ರ)

ಹೃದಯಾಘಾತ | ಬಸ್ ಬದಿಗೆ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿ ಪ್ರಾಣಬಿಟ್ಟ ಬಿಎಂಟಿಸಿ ಚಾಲಕ!


ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಿಎಂಟಿಸಿ ಬಸ್ಸಿನ ಚಾಲಕನಿಗೆ ಹೃದಯಾಘಾತವಾದರೂ, ಬಸ್ಸನ್ನು ರಸ್ತೆಗೆ ಬದಿಗೆ ಹಾಕಿ ಪ್ರಾಣಬಿಟ್ಟಿರುವ ಘಟನೆ ನೆಲಮಂಗಲ ಸಮೀಪದ ಬಿನ್ನಮಂಗಲದಲ್ಲಿ ಬುಧವಾರ(ನ.6) ನಡೆದಿದೆ.

ಹಾಸನ ಮೂಲದ ಕಿರಣ್ ಕುಮಾರ್ ತನ್ನ ಸಾವನ್ನೂ ಲೆಕ್ಕಿಸದೇ ಪ್ರಯಾಣಿಕರ ಜೀವ ರಕ್ಷಣೆಯ ಕಾಳಜಿ ವಹಿಸಿದ ಚಾಲಕ.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಬಿಎಂಟಿಸಿ ಡಿಪೋದಲ್ಲಿ ಕಳೆದ ಆರು ವರ್ಷದಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್, ಬುಧವಾರ ಎಂದಿನಂತೆ ನಿಗದಿತ ಮಾರ್ಗದಲ್ಲಿ ಬಸ್ ಚಾಲನೆ ಮಾಡುತ್ತಿರುವಾಗ ಬಿನ್ನಮಂಗಲ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಬಸ್ ಚಾಲನೆ ಮಾಡುತ್ತಿರುವಾಗಲೇ ನಡು ರಸ್ತೆಯಲ್ಲೇ ಹೃದಯಾಘಾತ ಸಂಭಿಸಿದರೂ, ತನ್ನ ಪ್ರಾಣದ ಹಂಗು ತೊರೆದು ಚಾಲನ ಕಿರಣ್, ತನ್ನ ಬಸ್ಸಿನಲ್ಲಿರುವ ಪ್ರಯಾಣಿಕರ ಜೀವ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಕೂಡಲೇ ಬಸ್ಸನ್ನು ರಸ್ತೆಯ ಅಂಚಿಗೆ ನಿಲ್ಲಿಸಿ, ಆಗಬಹುದಾಗಿದ್ದ ಭಾರೀ ಅನಾಹುತದಿಂದ ಎಲ್ಲರನ್ನೂ ಪಾರು ಮಾಡಿದ್ದಾರೆ.

ಚಾಲಕನಿಗೆ ಹೃದಯಾಘಾತವಾಗಿರುವುದನ್ನು ಅರಿತ ಬಸ್ಸಿನ ನಿರ್ವಾಹಕ ಓಬಳೇಶ್, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಕಿರಣ್ಕುಮಾರ್ ಕೊನೆಯುಸಿರೆಳೆದಿದ್ದರು.

ಘಟನೆಯ ಕುರಿತು ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಜೀವ ಹೋಗುತ್ತಿದ್ದರೂ ಬಸ್ಸನ್ನು ಹಾಗೆಯೇ ನಡುರಸ್ತೆಯಲ್ಲಿ ಚಾಲನಾ ಸ್ಥಿತಿಯಲ್ಲೇ ಬಿಡದೆ, ರಸ್ತೆ ಬದಿಗೆ ನಿಲ್ಲಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರ ಜೀವ ಕಾಪಾಡಿದ ಚಾಲಕ ಕಿರಣ್ ಕುಮಾರ್ ಅವರ ಕರ್ತವ್ಯ ಪ್ರಜ್ಞೆಯನ್ನು ಪ್ರಯಾಣಿಕರು ಮತ್ತು ಸ್ಥಳೀಯರು ನೆನೆದು ಕಣ್ಣೀರಿಟ್ಟರು.

Read More
Next Story