ಮಠಾಧೀಶರ ವಿರುದ್ಧ ಹೇಳಿಕೆ| ಆದಿಚುಂಚನಗಿರಿ ಶ್ರೀ ಬಳಿ ಬಹಿರಂಗ ಕ್ಷಮೆಯಾಚಿಸಿದ ಎಚ್‌ಡಿಕೆ
x

ಕೃಷಿ ಮೇಳದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಚಿವ ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸಿದ್ದರು.

ಮಠಾಧೀಶರ ವಿರುದ್ಧ ಹೇಳಿಕೆ| ಆದಿಚುಂಚನಗಿರಿ ಶ್ರೀ ಬಳಿ ಬಹಿರಂಗ ಕ್ಷಮೆಯಾಚಿಸಿದ ಎಚ್‌ಡಿಕೆ

ಶಿಕ್ಷಕರ ಕಷ್ಟ ತಿಳಿದು ನಾನು ಬಹಳ ನೊಂದಿದ್ದೆ. 15 ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವುದು ಎಂದರೆ ಸುಲಭವಲ್ಲ. ಆ ಸಂಕಷ್ಟದ ಕಾಲದಲ್ಲಿಯೂ ಅವರು ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.


Click the Play button to hear this message in audio format

ನಾಯಕತ್ವ ಬದಲಾವಣೆ ವಿಚಾರದಲ್ಲಿ ಡಿಕೆಶಿ ಪರ ವಕಾಲತು ವಹಿಸಿದ್ದಕ್ಕಾಗಿ ನಿರ್ಮಲಾನಂದನಾಥ ಸ್ವಾಮೀಜಿ ವಿರುದ್ಧ ಬೇಸರ ಹೊರಹಾಕಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಶನಿವಾರ ತಮ್ಮ ಮಾತುಗಳಿಗೆ ಶ್ರೀಗಳ ಬಳಿ ಬಹಿರಂಗ ಕ್ಷಮೆ ಕೇಳಿದ್ದಾರೆ.

ಮಂಡ್ಯದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು ವೇದಿಕೆಯಲ್ಲೇ ಸ್ವಾಮೀಜಿ ಅವರ ಕ್ಷಮೆ ಕೇಳಿದರು. ಜಾತಿಯ ಹೆಸರಲ್ಲಿ ಧಾರ್ಮಿಕ ಕ್ಷೇತ್ರಗಳ ದುರುಪಯೋಗ ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ ಎಂದು ಹೇಳಿದ್ದೆ. ನನ್ನ ಹೇಳಿಕೆಯಿಂದ ಸ್ವಾಮೀಜಿ ಅವರಿಗೆ ಅಪಚಾರ ಆಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ. ನಿಮ್ಮ ಪರವಾದ ನಮ್ಮ ನಿಷ್ಠೆ ಹೃದಯದಲ್ಲಿದೆ, ಅದನ್ನು ಹೊರಗೆ ತೋರಿಸಿಕೊಳ್ಳಲಾಗದು. ಪೂಜ್ಯರಿಗೆ ಏನಾದರೂ ಅಪಚಾರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಮಠಾಧೀಶರ ನೆರವು ಕೇಳಿರಲಿಲ್ಲ. ಮಠಾಧೀಶರ ಕೆಲಸವೇ ಬೇರೆ. ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕಾರಣದಿಂದ ರಾಜ್ಯಕ್ಕೆ ನಷ್ಟವಾಗುತ್ತದೆ ಹೊರತು ಯಾರಿಗೂ ಲಾಭವಿಲ್ಲ. ಇದು ಸಮಾಜಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಸ್ವಾಮೀಜಿಗಳು ರಾಜಕಾರಣದಲ್ಲಿ ಮಧ್ಯಪ್ರವೇಶಿಸಬಾರದು ಎಂಬ ಅರ್ಥದಲ್ಲಿ ಹೇಳಿದ್ದೆ. ಅಂದರೆ ಅವರಿಗೆ ಅಗೌರವ ಆಗಬಾರದು ಎನ್ನುವ ನಿಟ್ಟಿನಲ್ಲಿ ಹೇಳಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ನೀವು(ಸ್ವಾಮೀಜಿ) ಉನ್ನತ ಶಿಕ್ಷಣ ಪಡೆದಿರುವವರು, ಸಮುದಾಯದ ಧಾರ್ಮಿಕ ಗುರುಗಳಾದ ತಾವು ಬಹಿರಂಗವಾಗಿ ಮಾತನಾಡಿದ್ದರಿಂದ ಎಲ್ಲರೂ ಮಾತನಾಡುವಂತಾಯಿತು. ಆ ಉದ್ದೇಶದಿಂದಷ್ಟೇ ಹೇಳಿಕೆ ನೀಡಿದದ್ದೆ ಹೊರತು ತಪ್ಪು ಅಭಿಪ್ರಾಯದಿಂದ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮೈಶುಗರ್‌ ಶಾಲೆಗೆ 19.94ಲಕ್ಷ ರೂ. ಚೆಕ್‌ ಹಸ್ತಾಂತರ

ಸುಮಾರು ಹದಿನೈದು ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ ತಮ್ಮ ಸಂಸದರ ವೇತನವನ್ನೇ ನೀಡುವ ಮೂಲಕ ಈ ಹಿಂದೆ ತಾವು ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸಿದ್ದಾರೆ.

ಶನಿವಾರ(ಡಿ.6) ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಸಚಿವರು, 19,94,200 ರೂ. ಮೊತ್ತದ ಚೆಕ್‌ನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು. ವೇತನವಿಲ್ಲದೆ ಕೆಲಸ ಮಾಡುವುದು ಕಷ್ಟ. ನಿಮ್ಮ ನೋವು ನನಗೆ ಅರ್ಥವಾಗಿದೆ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಶಾಲೆ ಉಳಿಸುವಂತೆ ಮನವಿ

ಇದು ಐತಿಹಾಸಿಕ ಶಾಲೆ. ಮಂಡ್ಯದ ಇತಿಹಾಸದಲ್ಲಿ ಈ ಶಾಲೆಗೂ ಒಂದು ಸ್ಥಾನವಿದೆ. ಹೀಗಾಗಿ ಶಾಲೆ ಸಂಕಷ್ಟಕ್ಕೆ ಸಿಲುಕುವುದು ನನಗೆ ಇಷ್ಟವಿಲ್ಲ. ಈ ಶಾಲೆಯನ್ನು ಉಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಪಿಯುಸಿವರೆಗೆ ಈ ಶಾಲೆಯಲ್ಲಿ ಶಿಕ್ಷಣ ದೊರೆಯಲಿ. ನಾನು ಕೂಡ ಶಾಲೆಯ ಉಳಿವಿಗೆ ಕೈ ಜೋಡಿಸುತ್ತೇನೆ. ಆದಿಚುಂಚನಗಿರಿ ಶ್ರೀಗಳೊಂದಿಗೂ ಈ ಬಗ್ಗೆ ಮಾತಾಡಿದ್ದೇನೆ. ಹಂತ- ಹಂತವಾಗಿ ಶಾಲೆಯ ಅಭಿವೃದ್ಧಿ ಮಾಡೋಣ. ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ ಎಂದು ಕೇಳುತ್ತೇನೆ. ಮಂಡ್ಯದಲ್ಲಿ ಮೈಶುಗರ್ ಶಾಲೆಯೇ ನಂಬರ್ ಓನ್ ಶಾಲೆ ಆಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.

ಶಾಲಾ ವಿಷಯದಲ್ಲಿ ರಾಜಕೀಯ ಬೇಡ

ಶಿಕ್ಷಕರ ಕಷ್ಟ ತಿಳಿದು ನಾನು ಬಹಳ ನೊಂದಿದ್ದೆ. 15 ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವುದು ಎಂದರೆ ಸುಲಭವಲ್ಲ. ಆ ಸಂಕಷ್ಟದ ಕಾಲದಲ್ಲಿಯೂ ಅವರು ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಹೀಗಾಗಿ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಹೇಳುತ್ತೇನೆ. ಶಾಲೆ ಅಭಿವೃದ್ಧಿ ಎಲ್ಲರ ಕರ್ತವ್ಯ. ನನ್ನ ಕೈಲಾದದ್ದನ್ನು ನಾನು ಮಾಡುತ್ತೇನೆ. ಮಕ್ಕಳ ಅನುಕೂಲಕ್ಕೆ ಎರಡು ಶಾಲಾ ಬಸ್ ಬೇಕು ಎಂದು ಮನವಿ ಮಾಡಿದ್ದಾರೆ. ಶಾಲೆ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಮೈಶುಗರ್ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರತಿಪಾದಿಸಿದರು.

ರಾಜ್ಯ ಸರ್ಕಾರದ ಬಗ್ಗೆ ಚರ್ಚಿಸಲ್ಲ

ನೆರೆ ರಾಜ್ಯದ ರಾಜ್ಯಪಾಲರು ಕಾರ್ಕಳಕ್ಕೆ ಬಂದಿದ್ದರು. ಆಗ ವಕೀಲ ಹೆಣ್ಣು ಮಕ್ಕಳಿಗಾಗಿ ಶೌಚಾಲಯ ಕಟ್ಟಲು ಒಂದು ಕೋಟಿ ರೂ. ಕೇಳಿದ್ದೆ. ರಾಜ್ಯ ಸರ್ಕಾರ ಒಂದು ವರ್ಷದಿಂದ ಹಣವನ್ನು ಕೊಟ್ಟಿಲ್ಲ. ನಿಮ್ಮ ಕಾಲದಲ್ಲಿ ಕೇಳಿದಾಗ ಎಲ್ಲಾ ಕೊಟ್ಟಿದ್ದೀರಾ ಎಂದರು. ಆದರೆ ಹಾಸನದಲ್ಲಿ ದೊಡ್ಡ ಜಾಹಿರಾತು ಕೊಟ್ಟಿದ್ದಾರೆ. ನಮ್ಮ ಕಾಲದಲ್ಲಿ ಬಿಡುಗಡೆಯಾದ ಹಣದ ಕಾಮಗಾರಿಗೆ ಟೇಪ್ ಕಟ್ ಮಾಡಲು ಹೋಗಿದ್ದಾರೆ. ಈ‌ ಸರ್ಕಾರದ ಮೇಲೆ ಟೀಕೆ ಮಾಡಲು ಸರ್ಕಾರ ಜನರ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರ ಸರ್ಕಾರ ಮೇಲೆ ಕೇವಲ ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಮೊದಲು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.

ಎಂಎಸ್‌ಪಿ ಬೆಲೆ ನಿಗದಿ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ರಾಜ್ಯ ಸರ್ಕಾರ ಬಗೆಹರಿಸಿಕೊಳ್ಳಲಿ. ಮೊದಲು ನೀವು ಖರೀದಿ ಕೇಂದ್ರ ತೆರೆಯಿರಿ. ಆ ಬಳಿಕ ಕೇಂದ್ರವನ್ನು ಕೇಳಿ. ಎಂಎಸ್‌ಪಿ ಬೆಲೆಯನ್ನು ಕಾರ್ಯರೂಪಕ್ಕೆ ತರುವುದು ರಾಜ್ಯದ ಕರ್ತವ್ಯ. ಇವರು ಕೇಂದ್ರ ಸರ್ಕಾರ ಅನುದಾನ ಪಡೆಯಲು ಕೋರ್ಟ್‌ಗೆ ಹೋಗಬೇಕು ಅಂತಾರೆ. ನಾನು ಸಿಎಂ ಆಗಿದ್ದಾಗ ಕೋರ್ಟ್‌ಗೆ ಹೋಗಲಿಲ್ಲ. ಸಿದ್ದರಾಮಯ್ಯನವರ ಅವಧಿಯ 4.5 ಸಾವಿರ ಕೋಟಿ ರೂ. ಸಾಲವನ್ನು ನಾನು ತೀರಿಸಿದ್ದೇನೆ. ನನ್ನ ಕಾಲದ ಸಾಲವನ್ನು ಇವರೇನು ತೀರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಾಚ್ ಹೇಗೆ ಖರೀದಿ ಮಾಡಿದ್ದಾರೆ ಎನ್ನೋದೇ ಮುಖ್ಯ

ಸಿಎಂ, ಡಿಸಿಎಂ ಅವರಿಬ್ಬರೂ ಎಷ್ಟು ಲಕ್ಷ ಬೆಲೆ ವಾಚ್ ಕಟ್ಟಿದ್ದಾರೆ ಎನ್ನೋದು ಮುಖ್ಯವಲ್ಲ. ವಾಚ್‌ನ್ನು ಹೇಗೆ ಖರೀದಿ ಮಾಡಿದ್ದಾರೆ ಎನ್ನೋದೇ ಮುಖ್ಯ. ಅವರ ದುಡಿಮೆ ದುಡ್ಡಿನಲ್ಲಿ ಖರೀದಿ ಮಾಡಿದ್ದಾರಾ ಹೇಗೆ ಎನ್ನೋದು ಮುಖ್ಯ ಎಂದರು.

ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.63 ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿರುವ ಉಪ ಲೋಕಾಯುಕ್ತರು ಏನು ಕೆಲಸ ಮಾಡುತ್ತಿದ್ದಾರೆ? ಅವರ ಜವಬ್ದಾರಿ ಏನು? ಮಾಧ್ಯಮ ಮುಂದೆ ಹೇಳಿಕೆ ನೀಡಲಷ್ಟೇ ಅವರಿಗೆ ಅಧಿಕಾರ ನೀಡಲಾಗಿದೆಯಾ? ಇಲ್ಲವೇ ದಾಖಲೆಗಳನ್ನ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳುವುದಕ್ಕೆ ಅಧಿಕಾರ ನೀಡಲಾಗಿದೆಯಾ? ಯಾರ ಕಾಲದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಅನ್ನೋದು ಬೇರೆ ಚರ್ಚೆ. ಭ್ರಷ್ಟಾಚಾರ ಗೊತ್ತಿದ್ದೂ ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತವಾಗಿದ್ದಾರೆ. ಹೀಗಾದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.

Read More
Next Story