ಚನ್ನಪಟ್ಟಣ ಸೋಲು | ಮೌನಕ್ಕೆ ಜಾರಿದ ಎಚ್‌ಡಿಕೆ; ಭಾವನಾತ್ಮಕ ಪೋಸ್ಟ್‌ ಹಾಕಿದ ಅನಿತಾ ಕುಮಾರಸ್ವಾಮಿ
x

ಚನ್ನಪಟ್ಟಣ ಸೋಲು | ಮೌನಕ್ಕೆ ಜಾರಿದ ಎಚ್‌ಡಿಕೆ; ಭಾವನಾತ್ಮಕ ಪೋಸ್ಟ್‌ ಹಾಕಿದ ಅನಿತಾ ಕುಮಾರಸ್ವಾಮಿ

ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಿನಿಂದ ಹಿಡಿದು ಚುನಾವಣೆ ಪ್ರಚಾರದ ಕೊನೆ ಕ್ಷಣದವರೆಗೆ ಎದುರಾಳಿಗಳ ವಿರುದ್ಧ ಅಬ್ಬರಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಫಲಿತಾಂಶದ ನಂತರ ಸೋಲಿನ ಕುರಿತು ಒಂದೇ ಒಂದು ಸೊಲ್ಲೆತ್ತದೇ ಮೌನಕ್ಕೆ ಜಾರಿರುವುದು ಟೀಕೆಗೆ ಗುರಿಯಾಗಿದೆ.


ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಿನಿಂದ ಹಿಡಿದು ಚುನಾವಣೆ ಪ್ರಚಾರದ ಕೊನೆ ಕ್ಷಣದವರೆಗೆ ಎದುರಾಳಿಗಳ ವಿರುದ್ಧ ಅಬ್ಬರಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಫಲಿತಾಂಶದ ನಂತರ ಸೋಲಿನ ಕುರಿತು ಒಂದೇ ಒಂದು ಸೊಲ್ಲೆತ್ತದೇ ಮೌನಕ್ಕೆ ಜಾರಿರುವುದು ಟೀಕೆಗೆ ಗುರಿಯಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ಇಲ್ಲಿ ಸೋಲು-ಗೆಲುವು ಸಹಜ. ಯಾರೇ ಸೋತರೂ, ಗೆದ್ದರೂ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದು ಈ ಹಿಂದಿನಿಂದಲೂ ಎಲ್ಲ ರಾಜಕೀಯ ಪಕ್ಷಗಳಲ್ಲಿ ನಡೆದುಬಂದಿದೆ. ಆದರೆ, ಈಚೆಗೆ ಮುಕ್ತಾಯವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಸೋಲು ಕಂಡ ಬಳಿಕ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾಗಿರುವ ಅನುಭವಿ ರಾಜಕಾರಣಿ ಕುಮಾರಸ್ವಾಮಿ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಿರಲಿ, ಫಲಿತಾಂಶದ ಬಗ್ಗೆ ಅಧಿಕೃತ ಪ್ರತಿಕ್ರಿಯೆಯನ್ನೇ ನೀಡದೇ ಇರುವುದು ಅಚ್ಚರಿ ಮೂಡಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಮತದಾರರಿಗೆ ಮಾಡಿದ ಅವಮಾನ

ಚುನಾವಣೆಯಲ್ಲಿ ಗೆದ್ದರಷ್ಟೇ ಮತದಾರರನ್ನು ಮಾತನಾಡಿಸಬೇಕು, ಸೋತರೆ ಮಾತನಾಡಿಸಕೂಡದೆಂಬ ಮನೋಭಾವ ಜನಪ್ರತಿನಿಧಿಗಳಿಗೆ ತಕ್ಕುದಲ್ಲ. ಈ ರೀತಿಯ ವರ್ತನೆಗಳು ಪ್ರಜಾಪ್ರಭುತ್ವ ಹಾಗೂ ಮತದಾರರಿಗೆ ಮಾಡಿದ ಅವಮಾನ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಲೋಚನೇಶ ಹೂಗಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

"ಚುನಾವಣೆಯಲ್ಲಿ ಸೋಲು-ಗೆಲುವು ಮಾಮೂಲಿ. ಒಬ್ಬರು ಸೋತರೆ ಮತ್ತೊಬ್ಬರು ಗೆಲ್ಲಬೇಕು. ಸೋಲು-ಗೆಲುವಿನಲ್ಲಿ ಸಮಾನತೆ ತರಲು ಆಗುವುದಿಲ್ಲ. ಆದರೆ, ಒಬ್ಬ ಜನಪ್ರತಿನಿಧಿ ಆದವರು ಮತದಾರರನ್ನು ಸೋಲು-ಗೆಲುವಿನ ಆಧಾರದಲ್ಲಿ ನೋಡಬಾರದು. ಸೋಲಿನ ಕಾರಣಗಳನ್ನು ವಿಶ್ಲೇಷಿಸಿ, ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು. ಸೋತ ಮಾತ್ರಕ್ಕೆ ಮತದಾರರನ್ನು ಕಡೆಗಣಿಸುವುದು ಸರಿಯಲ್ಲ. ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ, ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಕೂಡ ಇಲ್ಲಿಯವರೆಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸಿಲ್ಲ. ಅನುಭವಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಬ್ಬರ ಈ ನಡೆ ಸಮರ್ಥನೀಯವಲ್ಲ" ಎಂದು ಟೀಕಿಸಿದ್ದಾರೆ.

ಸೋಲಿನ ಮುಜುಗರ ತಂದ ಅಬ್ಬರದ ಪ್ರಚಾರ

ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ಡಿ.ಕೆ. ಸಹೋದರರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದರು. ಚನ್ನಪಟ್ಟಣದಲ್ಲಿ ಪ್ರತಿ ಚುನಾವಣೆಯೂ ಅಭಿವೃದ್ಧಿ, ಆಶ್ವಾಸನೆಗಳ ಆಧಾರದ ಮೇಲೆ ನಡೆದರೆ, ಈ ಬಾರಿ ವೈಯಕ್ತಿಕ ಜಿದ್ದು, ಹಳೆ ಮೈಸೂರು ಭಾಗದ ಮೇಲೆ ಪ್ರಾಬಲ್ಯ ಸಾಧಿಸುವ ಪ್ರಯತ್ನದ ಸುತ್ತ ಗಿರಕಿ ಹೊಡೆದಿತ್ತು.

ಪ್ರಚಾರದ ಉದ್ದಕ್ಕೂ ಡಿ.ಕೆ. ಸಹೋದರರನ್ನು ಅಪೂರ್ವ ಸಹೋದರರು, ಲಂಡನ್‌ಗೆ ಬಂಡೆ ಮಾರಿದವರು ಎಂದು ಟೀಕಿಸಿದ್ದ ಕುಮಾರಸ್ವಾಮಿ ಅವರು, ಆವೇಷಭರಿತ ಭಾಷಣಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಪುತ್ರನನ್ನು ಗೆಲ್ಲಿಸಿಕೊಂಡು ಬರಲೇ ಬೇಕು ಎಂದು ಹಠಕ್ಕೆ ಬಿದ್ದು, ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಅಲ್ಲ. ಅರ್ಜುನ ಅಂತಲೂ ಹೇಳಿಕೆ ನೀಡಿದ್ದರು. ನಿಖಿಲ್ ಪರ ಪ್ರಚಾರಕ್ಕಾಗಿ ಅಂಬುಲೆನ್ಸ್‌ನಲ್ಲಿ 92 ವರ್ಷ ವಯಸ್ಸಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕರೆತಂದು ಪಂಚಾಯ್ತಿ- ಪಂಚಾಯ್ತಿಗೆ ಕರೆದೊಯ್ದು ಪ್ರಚಾರ ನಡೆಸಿದ್ದರು. ಇಷ್ಟೆಲ್ಲಾ ವೀರಾವೇಶದ ಹೇಳಿಕೆ ನೀಡಿದ್ದ ಕೇಂದ್ರ ಸಚಿವರು, ಚುನಾವಣೆ ಫಲಿತಾಂಶದ ನಂತರ ಮಗುಮ್ಮಾಗಿರುವುದು ಸ್ವತಃ ಅವರದೇ ಪಕ್ಷದ ವಲಯದಲ್ಲೂ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪರಾಜಿತರಾದ ನಂತರ ಬಿಜೆಪಿ ನಾಯಕರು ಹಾಗೂ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರೇ ಸೋಲಿನ ಕುರಿತು ಮಾತನಾಡಿದ್ದರು. ಆದರೆ, ಇಡೀ ಚುನಾವಣೆಯನ್ನು ಮುನ್ನಡೆಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಮಾತ್ರ ಚುನಾವಣೆ ಫಲಿತಾಂಶದ ಕುರಿತು ಅಧಿಕೃತವಾಗಿ ಒಂದೇ ಒಂದು ಮಾತನಾಡಲಿಲ್ಲ. ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವ ಪ್ರಧಾನಿ ಮೋದಿ ಸಂಕಲ್ಪಕ್ಕೆ ನಾನು ಕೂಡ ಶ್ರಮಿಸುತ್ತೇನೆ ಎಂದೆಲ್ಲಾ ಹೇಳಿಕೆ ನೀಡಿದ್ದ ಕುಮಾರಸ್ವಾಮಿಗೆ ಚುನಾವಣೆ ಸೋಲು ತೀವ್ರ ಮುಜುಗರ ತಂದಿಟ್ಟಿದೆ. ಹಾಗಾಗಿ ಎಲ್ಲಿಯೂ ಚುನಾವಣೆ ಫಲಿತಾಂಶ ಕುರಿತು ಪ್ರಸ್ತಾಪಿಸುತ್ತಿಲ್ಲ ಎಂಬ ಮಾತುಗಳು ಜೆಡಿಎಸ್‌ ಕಾರ್ಯಕರ್ತರ ನಡುವೆಯೇ ಕೇಳಿಬರುತ್ತಿವೆ.

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಗೆಲ್ಲುವ ಹೊಣೆಯನ್ನು ಕೇಂದ್ರದ ಬಿಜೆಪಿ ನಾಯಕರು ರಾಜ್ಯ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಹಿಸಿದ್ದರು. ಅದರಂತೆ ಕುಮಾರಸ್ವಾಮಿ ಅವರು ಕೂಡ ಗೆಲುವಿನ ಆತ್ಮವಿಶ್ವಾಸದಲ್ಲಿ ಅಬ್ಬರಿಸಿದ್ದರು. ಆದರೆ ನಿರೀಕ್ಷೆ ಹುಸಿಯಾದ ಕಾರಣ ಅವರು ಫಲಿತಾಂಶದ ಕುರಿತು ಜಾಣ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಅನಿತಾ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್

ಚುನಾವಣಾ ಫಲಿತಾಂಶ ಪ್ರಕಟವಾಗಿ 48 ಗಂಟೆ ಕಳೆದರೂ ಸೋಲಿನ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಲ್ಲೇ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ತಮ್ಮ ಸಾಮಾಜಿಕ ಮಾಧ್ಯಮ ʼಎಕ್ಸ್‌ʼನಲ್ಲಿ ಅಚ್ಚರಿಯ ಪೋಸ್ಟ್ ಹಾಕಿದ್ದಾರೆ.

ತಮ್ಮ ಪುತ್ರನ ಸೋಲಿನ ಕುರಿತು ಭಾವನಾತ್ಮಕ ಬರಹ ಪೋಸ್ಟ್‌ ಮಾಡಿರುವ ಅನಿತಾ ಅವರು, "ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಜಯ ಹೊಂದಿದ್ದಾನೆ, ಒಪ್ಪುತ್ತೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ಆದರೆ, ಸೋಲಿಗೆ ಅನೇಕ ಕಾರಣಗಳಿರುತ್ತವೆ. ಹಾಗೆಂದು ನಿಖಿಲ್ ಸೋಲಿನ ಕಾರಣಗಳ ಬಗ್ಗೆ ಚರ್ಚಿಸುವುದು ನನ್ನ ಉದ್ದೇಶವಲ್ಲ. ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ ಅಥವಾ ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು, ಸೋಲು ಹೊಸದೇನಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ" ಎಂದು ಹೇಳಿದ್ದಾರೆ.

"ನನ್ನ ಮಗನ ಬಗ್ಗೆ ರಾಜ್ಯದ ಜನತೆಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅವನು ಒಳ್ಳೆಯ ಮಗ, ಒಳ್ಳೆಯ ಪತಿ, ಒಳ್ಳೆಯ ತಂದೆ. ರಾಜಕಾರಣಕ್ಕೆ ಬರುವ ಮುನ್ನ ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕಾಗಿ ನಾನೂ, ನನ್ನ ಪತಿ ಹೆಮ್ಮೆಪಡುತ್ತೇವೆ. ತಾಯಿಯಾಗಿ ಅವನ ಯಶಸ್ಸನ್ನು ಸಂಭ್ರಮಿಸುತ್ತೇನೆ. ಅವನಿಗೆ ಕಷ್ಟ ಎದುರಾದಾಗ ಕಣ್ಣೀರಿಟ್ಟಿದ್ದೇನೆ. ನನ್ನ ಕರುಳಬಳ್ಳಿಯ ಮೇಲೆ ನನಗಷ್ಟು ಮಮಕಾರ ಇರುತ್ತದಲ್ಲವೇ? ನನ್ನಂತಹ ಎಲ್ಲಾ ತಾಯಂದಿರಿಗೂ ನನ್ನ ಭಾವನೆಗಳು ಅರ್ಥವಾಗುತ್ತವೆ ಎನ್ನುವ ವಿಶ್ವಾಸ ನನ್ನದು" ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

"ನನ್ನ ಮಗ 3ನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ, ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ಮನಸ್ಸು, ಹೃದಯ ವೈಶಾಲ್ಯತೆ ಏನೆಂದು ತಾಯಿಯಾಗಿ ನನಗೆ ಚೆನ್ನಾಗಿ ಗೊತ್ತು. ನಾನು ಸದಾ ಆ ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಮಗನ ಮೇಲೆ ಆ ದೈವದ ಕರುಣೆ, ಅನುಗ್ರಹವಿದೆ. ಚನ್ನಪಟ್ಟಣ ಜನತೆಯ ಪ್ರೀತಿ ವಿಶ್ವಾಸವೂ ಅವನ ಮೇಲಿರುತ್ತದೆ. ಇಂದಲ್ಲ, ನಾಳೆ ಜನಸೇವೆ ಮಾಡುವ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ಅಚಲ ನಂಬಿಕೆ ನನ್ನದು" ಎಂದು ಅನಿತಾ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

Read More
Next Story