
ಎಚ್‌ಡಿಕೆ v/s ಡಿಕೆಶಿ | ಆಸ್ತಿ ಚರ್ಚೆಗೆ ಕುಮಾರಸ್ವಾಮಿಯೇ ಮಹೂರ್ತ ನಿಗದಿ ಮಾಡಲಿ: ಡಿ.ಕೆ.ಶಿವಕುಮಾರ್
“ಆಸ್ತಿ ವಿಚಾರವಾಗಿ ಚರ್ಚೆ ನಡೆಸಲು ಕುಮಾರಸ್ವಾಮಿ ಶುಭ ಘಳಿಗೆ ಹುಡುಕಿ ತಡ ಮಾಡದೆ ಶುಭ ಮುಹೂರ್ತ ನಿಗದಿ ಮಾಡಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಮದ್ದೂರಿನಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ``ಕಳೆದ 20 ವರ್ಷಗಳಿಂದ ನನ್ನ ಮೇಲೆ ಕುತಂತ್ರ ಮಾಡುತ್ತಲೇ ಇದ್ದಾರೆ. ಇಡಿ, ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳು ನನ್ನನ್ನು ಜಾಲಾಡುತ್ತಿವೆ. ಇವರೂ ಅದನ್ನೇ ತೆಗೆದುಕೊಂಡು ಮಾತನಾಡುತ್ತಿದ್ದಾರೆ, ಮಾತನಾಡಲಿ. ನಾನು ತೆರೆದ ಪುಸ್ತಕʼʼ ಎಂದರು.
ʻʻಕುಮಾರಸ್ವಾಮಿ ಅವರ ಸವಾಲನ್ನು ಸ್ವೀಕರಿಸಿ ವಿಧಾನಸಭೆ ಅಥವಾ ಚಾಮುಂಡಿ ಬೆಟ್ಟ ಎಲ್ಲಿಗೆ ಬರುತ್ತೀರಿ ಎನ್ನುವುದನ್ನು ತಿಳಿಸಿ. ವಿಧಾಸಭೆಗೆ ಬರಲಿ. ಆದರೆ ಅವರು ಅಲ್ಲಿಗೆ ಬರಲು ಆಗುವುದಿಲ್ಲ. ಅವರ ಬದಲು ಅಣ್ಣನನ್ನು ಕಳುಹಿಸಲಿ. ಎಲ್ಲಾ ಮಾಧ್ಯಮಗಳು ಬರಲಿʼʼ ಎಂದು ಮರು ಸವಾಲು ಹಾಕಿದರು.
ಮೈಸೂರು ಚಲೋ ಪಾದಯಾತ್ರೆ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಎನ್ನುವಂತೆ ಆಗಿದೆ ಎಂದು ಕೇಳಿದಾಗ ʻʻನನಗೆ ಈ ಪಾದಯಾತ್ರೆಯ ಮೂಲಕ ಅವರುಗಳು ವರ ಕೊಟ್ಟಿದ್ದಾರೆ. ಅವರ ಪಾದಯಾತ್ರೆಯಿಂದಾಗಿ ಅವರ ಅಸೂಯೆ, ಅಕ್ರಮಗಳನ್ನು ಜನರ ಮುಂದಿಡಲು ಅವಕಾಶ ಮಾಡಿಕೊಟ್ಟಿದ್ದಾರೆʼʼ ಎಂದರು.
ದಲಿತ ಕುಟುಂಬವನ್ನು ಹಾಳು ಮಾಡಿದ್ದೀರಿ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ʻʻಅದು ಯಾವ ದಲಿತ ಕುಟುಂಬವನ್ನು ಹಾಳು ಮಾಡಿದ್ದೇನೆಯೋ ಅವರನ್ನು ಕರೆತಂದು ಎದುರಿಗೆ ನಿಲ್ಲಿಸಲಿ. ಇವನು ಕೂಡ ಮಂತ್ರಿ, ಸಿಎಂ ಆಗಿದ್ದನಲ್ಲ ಆಗ ತನಿಖೆ ಮಾಡಿಸಬೇಕಿತ್ತುʼʼ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ಗೆ ಡಿ.ಕೆ.ಶಿವಕುಮಾರ್ ಅವರು ಮಾತ್ರ ಗುರಿಯಾಗುತ್ತಿದ್ದಾರೆ ಎಂದಾಗ ʻʻಅವರಿಗೂ ಅದೇ ಬೇಕು. ಅದಕ್ಕೆ ನಾನು ಸಹ ಸುಮ್ಮನಿದ್ದೇನೆ. ಇದು ನಿಮಗೆ (ಮಾಧ್ಯಮದವರಿಗೆ) ಅರ್ಥವಾಗಬೇಕಲ್ಲವೇ? ಇದರಿಂದ ಮುಡಾ ಹಗರಣ ಎಂಬುದು ಸುಳ್ಳು ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ?ʼʼ ಎಂದು ಕೇಳಿದರು.
ಪಾದಯಾತ್ರೆ ವೇಳೆ ಮಾಧ್ಯಮದವರ ಮೇಲಿನ ಹಲ್ಲೆ ವಿಚಾರವಾಗಿ ಕೇಳಿದಾಗ ʻʻಪ್ರಜಾಪ್ರಭುತ್ವದಲ್ಲಿ ಮಾಧ್ಯಮ ನಾಲ್ಕನೇ ಅಂಗ. ಮಾಧ್ಯಮದವರಿಗೆ ಗೌರವ ನೀಡಬೇಕು. ನಮ್ಮ ಆಚಾರ, ವಿಚಾರಗಳನ್ನು ನೀವು ತಿಳಿಸದೇ ಹೋದರೆ ನಾವುಗಳು ರಾಜಕಾರಣಿಗಳೇ ಆಗುವುದಿಲ್ಲ" ಎಂದರು. ಹಲ್ಲೆ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಿರಾ? ಎಂದು ಮರು ಪ್ರಶ್ನಿಸಿದಾಗ ʻʻಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲದಕ್ಕಿಂತ ಮುಖ್ಯವಾಗಿ ನೀವು ಆ ಪಕ್ಷವನ್ನು ನಿಷೇಧ ಮಾಡಬೇಕುʼʼ ಎಂದರು.
ಸರ್ಕಾರ ಬೀಳಲಿದೆಯಾ? ಮುಖ್ಯಮಂತ್ರಿಗಳು ರಾಜೀನಾಮೆ ನೀಡುತ್ತಾರಾ? ಎಂದು ಕೇಳಿದಾಗ ʻʻಬಿಜೆಪಿಯವರಿಗೆ ಅಸೂಯೆ. ಅಸೂಹೆಗೆ ಮದ್ದಿಲ್ಲ. ಜೊತೆಗೆ ಹಿಂದುಳಿದ ವರ್ಗದ ವ್ಯಕ್ತಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎನ್ನುವ ಹೊಟ್ಟೆಕಿಚ್ಚು. ಅಲ್ಲದೇ ನಾವು ನೀಡಿರುವ ಐದು ಗ್ಯಾರಂಟಿಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳು ಅನುಕರಿಸುತ್ತಿವೆ. ಇದರಿಂದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ತಲೆಬಿಸಿಯಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ವಾತಾವರಣ ಸೃಷ್ಟಿಸುತ್ತಿದೆ. ಜನರಲ್ಲಿ ಗೊಂದಲ ಉಂಟುಮಾಡುತ್ತಿದೆʼʼ ಎಂದರು.
ಕುಮಾರಸ್ವಾಮಿ ಬ್ಲಾಕ್ ಮೇಲ್ ರಾಜಕಾರಣಿ
ಡಿ.ಕೆ.ಶಿವಕುಮಾರ್ ಹೆದರಿಸಿ ಬೆದರಿಸಿ ಆಸ್ತಿ ಗಳಿಕೆ ಮಾಡಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ʻʻಕುಮಾರಸ್ವಾಮಿ ಬ್ಲಾಕ್ ಮೇಲ್ ರಾಜಕಾರಣಿ. ಪಾದಯಾತ್ರೆಗೆ ಜೆಡಿಎಸ್ ಬರುವುದಿಲ್ಲ ಎಂದು ಬಿಜೆಪಿಗೆ ಬೆದರಿಸಿದರು. ನಂತರ ಜೊತೆಯಲ್ಲಿ ಹೋದರು. ನನ್ನ ಮೇಲೆ ಆರೋಪ ಮಾಡುತ್ತಿರುವ ಅವರಿಗೆ ಧನ್ಯವಾದಗಳುʼʼ ಎಂದು ವ್ಯಂಗ್ಯವಾಡಿದರು.
ವಾಲ್ಮೀಕಿ ನಿಗಮದ ಹಗರಣದ ಹಣವನ್ನು ಹೈಕಮಾಂಡಿಗೆ ಕಳುಹಿಸಲಾಗಿದೆ ಎನ್ನುವ ಬಿ ವೈ ವಿಜಯೇಂದ್ರ ಅವರ ಆರೋಪದ ಬಗ್ಗೆ ಕೇಳಿದಾಗ ʻʻಅವರ ತಂದೆ ರಾಜೀನಾಮೆಗೆ ಕಾರಣನಾದ ವ್ಯಕ್ತಿ ಆತ. ಮೊದಲ ಬಾರಿಗೆ ಶಾಸಕರಾಗಿ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಅದನ್ನು ಖುಷಿಯಾಗಿ ಅನುಭವಿಸಲಿʼʼ ಎಂದರು.
ಜನಾಂದೋಲನ ಯಾತ್ರೆಯನ್ನು ಬಿಜೆಪಿ ಪಶ್ಚಾತ್ತಾಪ ಯಾತ್ರೆ ಎಂದು ಹೇಳಿದ ಬಗ್ಗೆ ಕೇಳಿದಾಗ ʻʻಅವರದ್ದು ನಿಜವಾದ ಪಶ್ಚಾತ್ತಾಪ ಯಾತ್ರೆಯೇ. ಕರ್ನಾಟಕದ ಹೆಸರು ಹಾಳು ಮಾಡಿದರು. ಭ್ರಷ್ಟ ರಾಜ್ಯವೆಂದು ಕೆಟ್ಟ ಹೆಸರು ತಂದರು. ನಾವೀಗ ಅದನ್ನು ಶುದ್ದೀಕರಣ ಮಾಡುತ್ತಿದ್ದೇವೆʼʼ ಎಂದು ಹೇಳಿದರು.
ರಾಜ್ಯಪಾಲರ ತೀರ್ಮಾನ ಹಾಗೂ ಅವರ ಮುಂದಿನ ನಡೆ ಬಗ್ಗೆ ಕೇಳಿದಾಗ ʻʻನೆಲದ ಕಾನೂನಿಗೆ ರಾಜ್ಯಪಾಲರು ಗೌರವ ನೀಡುತ್ತಾರೆ ಎಂದು ಭಾವಿಸಿರುವೆ. ಸಿಎಂ ಅವರಿಗೆ ನೋಟಿಸ್ ನೀಡುವ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಭಾವಿಸಿರುವೆ. ರಾಜ್ಯಪಾಲರು ನಮ್ಮ ಸಲಹೆ ಕೇಳುತ್ತಾರೆ ಎಂದು ಭಾವಿಸಿದ್ದೇವೆ. ಇದಾಗದಿದ್ದರೆ ನಾವು ಬೇರೆ ಪ್ರಯತ್ನ ಮಾಡುತ್ತೇವೆʼʼ ಎಂದರು.
ಪಾದಯಾತ್ರೆ ಬಗ್ಗೆ ನಿಮ್ಮ ಸಂದೇಶವೇನು ಎಂದಾಗ ʻʻಶುಭವಾಗಲಿ. ಪಾದಯಾತ್ರೆಯ ಖುಷಿಯನ್ನು ಅನುಭವಿಸಲಿ. ಪಾದಯಾತ್ರೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲʼʼ ಎಂದು ಹೇಳಿದರು.