Karnataka By-election | ಜೆಡಿಎಸ್‌ ಪಟ್ಟು; ಬಿಜೆಪಿಗೆ ಇಕ್ಕಟ್ಟಾದ ಚನ್ನಪಟ್ಟಣ ಬಿಕ್ಕಟ್ಟು
x

Karnataka By-election | ಜೆಡಿಎಸ್‌ ಪಟ್ಟು; ಬಿಜೆಪಿಗೆ ಇಕ್ಕಟ್ಟಾದ ಚನ್ನಪಟ್ಟಣ ಬಿಕ್ಕಟ್ಟು

ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೈತ್ರಿ ಧರ್ಮ ಪಾಲನೆಯ ದಾಳ ಉರುಳಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ಪುತ್ರನ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಗೆಲುವಿನ ಮಾನದಂಡದ ಆಧಾರದ ಮೇಲೆ ಸಿ.ಪಿ.ಯೋಗೇಶ್ವರ್ ಪರ ಒಲವು ತೋರಿಸುತ್ತಿದೆ.


ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳ ಪ್ರಾಬಲ್ಯವಿರುವ ಕ್ಷೇತ್ರ ಚನ್ನಪಟ್ಟಣ. ಮೂರನೇ ಬಾರಿಗೆ ಉಪ ಚುನಾವಣೆ ಹೊಸ್ತಿಲಲ್ಲಿರುವ ʼಚನ್ನಪಟ್ಟಣದ ಗೊಂಬೆʼ ಖ್ಯಾತಿಯ ಗೊಂಬೆ ನಗರಿಯಲ್ಲಿ ಇದೀಗ ಪ್ರತಿಷ್ಠೆಯ ರಾಜಕಾರಣ ಮತ್ತೆ ಚುನಾವಣಾ ಮುನ್ನೆಲೆಗೆ ಬಂದು ನಿಂತಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್, ಸಮಾಜವಾದಿ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಲ್ಕು ಬಾರಿ ಪ್ರತಿನಿಧಿಸಿರುವ ಸಿ.ಪಿ.ಯೋಗೇಶ್ವರ್ ಅವರು ಐದನೇ ಬಾರಿಗೆ ಉಪ ಚುನಾವಣೆ ಸ್ಪರ್ಧಿಸಲು ಪಣ ತೊಟ್ಟು ನಿಂತಿದ್ದಾರೆ. ಇನ್ನೊಂದೆಡೆ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡಿಕೊಳ್ಳಲು ಯೋಜಿಸಿ, ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಡಿ.ಕೆ.ಸಹೋದರರು ಜಿಲ್ಲೆಯಲ್ಲಿ ತಮ್ಮ ಪ್ರಭಾವವನ್ನು ಅಚ್ಚೊತ್ತಲು ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೈತ್ರಿ ಧರ್ಮ ಪಾಲನೆಯ ದಾಳ ಉರುಳಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಎರಡೂ ಬಾರಿ (ಮಂಡ್ಯ ಲೋಕಸಭಾ ಚುನಾವಣೆ ಮತ್ತು ರಾಮನಗರ ವಿಧಾನಸಭೆ ಚುನಾವಣೆಯಲ್ಲಿ) ಸೋಲು ಕಂಡು ರಾಜಕೀಯ ಮುಖ್ಯವಾಹಿನಿಗೆ ಬರಲು ಪರದಾಡುತ್ತಿರುವ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಗೆಲುವಿನ ಮಾನದಂಡದ ಆಧಾರದ ಮೇಲೆ ಸಿ.ಪಿ.ಯೋಗೇಶ್ವರ್ ಪರ ಒಲವು ತೋರಿಸುತ್ತಿದೆ. ಅಭ್ಯರ್ಥಿಯ ಆಯ್ಕೆಯ ಕಗ್ಗಂಟು ಮೈತ್ರಿ ಪಕ್ಷಗಳ ಮಧ್ಯೆ ಕಂದಕ ಸೃಷ್ಟಿಸುವ ಲಕ್ಷಣ ಕಂಡುಬರುತ್ತಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಸಿಪಿವೈ ಬೆಂಬಲಕ್ಕೆ ನಿಂತ ಬಿಜೆಪಿ

ಸಿ.ಪಿ.ಯೋಗೇಶ್ವರ್ ಬೆನ್ನಿಗೆ ಜಿಲ್ಲಾ ಬಿಜೆಪಿ ಘಟಕ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್.ಆಶೋಕ್ ಸೇರಿದಂತೆ ಹಲವು ಹಿರಿಯ ನಾಯಕರು ನಿಂತಿದ್ದಾರೆ. ಹಾಗಾಗಿ ಯೋಗೇಶ್ವರ್ ಕೂಡ ನಾನೇ ಮೈತ್ರಿ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಚನ್ನಪಟ್ಟಣದ ಕ್ಷೇತ್ರದಲ್ಲಿ ಡಿ.ಕೆ.ಸಹೋದರರಿಗೆ ಸೆಡ್ಡು ಹೊಡೆಯುವ ಏಕೈಕ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್. ನಿಖಿಲ್‌ ಕುಮಾರಸ್ವಾಮಿ ಈಗಾಗಲೇ ರಾಮನಗರದಲ್ಲಿ ಸೋತಿದ್ದಾರೆ. ಆದ ಕಾರಣ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್‌ ಅವರಿಗೆ ಟಿಕೆಟ್ ನೀಡಿದರೆ ಎನ್ಡಿಎ ಗೆಲುವು ನಿರಾಯಾಸವಾಗಲಿದೆ ಎಂಬುದು ಬಿಜೆಪಿ ನಾಯಕರ ವಾದವಾಗಿದೆ. ಇನ್ನೊಂದೆಡೆ ಮೈತ್ರಿ ಬಿಕ್ಕಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ವರವಾಗುವ ಆತಂಕವೂ ವರಿಷ್ಠರನ್ನು ಕಾಡುತ್ತಿದೆ. ಹಾಗಾಗಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ನನ್ನದೇ ಅಂತಿಮ ನಿರ್ಧಾರ;ಎಚ್‌ಡಿಕೆ

ಬಿಜೆಪಿ ನಾಯಕರ ವಾದ ಒಪ್ಪದ ಕುಮಾರಸ್ವಾಮಿ ಅವರು, ರಾಮನಗರದಲ್ಲಿ ಮಗನ ಸೋಲಿನ ಸೇಡು ತೀರಿಸಿಕೊಳ್ಳುವ ಜೊತೆಗೆ ಕ್ಷೇತ್ರ ಗೆಲ್ಲಿಸಿಕೊಡುವ ಭರವಸೆಯನ್ನೂ ಬಿಜೆಪಿ ವರಿಷ್ಠರಿಗೆ ನೀಡಿದ್ದಾರೆ.

ಚನ್ನಪಟ್ಟಣ ನಾನು ಗೆದ್ದ ಕ್ಷೇತ್ರವಾಗಿರುವುದರಿಂದ ಅಭ್ಯರ್ಥಿ ಆಯ್ಕೆಯ ಅಂತಿಮ ನಿರ್ಧಾರವನ್ನು ದೆಹಲಿಯ ಬಿಜೆಪಿ ವರಿಷ್ಠರು ನನಗೇ ಬಿಟ್ಟಿದ್ದಾರೆ ಎಂದು ಹೇಳುವ ಮೂಲಕ ಯೋಗೇಶ್ವರ್ ಎದೆಯಲ್ಲಿ ಕುಮಾರಸ್ವಾಮಿ ಅವರು ನಡುಕ ಹುಟ್ಟಿಸಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಕ್ಷೇತ್ರದ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ನನಗೇ ಬಿಟ್ಟಿದ್ದಾರೆ. ವಾಸ್ತವಾಂಶ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಲೆಕ್ಕಾಚಾರ, ಪ್ರತಿಸ್ಪರ್ಧಿಗಳ ತಂತ್ರಗಾರಿಕೆ ನೋಡಿಕೊಂಡು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ. ಶನಿವಾರವೇ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಟಿಕೆಟ್ ಸಾಧ್ಯತೆ ಕ್ಷೀಣಿಸುವ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್‌ ಅವರು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ, ಸ್ಪರ್ಧೆಗೆ ಅವಕಾಶ ಕೋರಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಮೈತ್ರಿ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ತೀವ್ರ ಕುತೂಹಲ ಮೂಡಿಸಿರುವುದಂತೂ ನಿಜವಾಗಿದೆ

ಮುಕ್ತ ಅವಕಾಶ ಹೊಂದಿದ್ದೇನೆ

ಇನ್ನು ಟಿಕೆಟ್ ಸಿಗುವ ವಿಶ್ವಾಸ ಕ್ಷೀಣಿಸುತ್ತಿದ್ದಂತೆ ಸಿ.ಪಿ.ಯೋಗೇಶ್ವರ್ ಪರ್ಯಾಯ ದಾರಿಯ ಹುಡುಕಾಟದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಸ್ಪರ್ಧೆ ಕುರಿತಂತೆ ದ ಫೆಡರಲ್ ಕರ್ನಾಟಕದ ಜೊತೆ ಮಾತನಾಡಿದ ಸಿ.ಪಿ.ಯೋಗೇಶ್ವರ್ ಅವರು ಈ ಪರಿಸ್ಥಿತಿ ನನಗೆ ಹೊಸದಲ್ಲ. ಬಿಜೆಪಿ ಟಿಕೆಟ್ ನಿರಾಕರಿಸಿದರೆ ನನ್ನ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದ್ದೇನೆ. ಅ.24 ರಂದು ನನ್ನ ಅಂತಿಮ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ಹೇಳುವ ಮೂಲಕ ಬಂಡಾಯ ಅಥವಾ ಸ್ಪತಂತ್ರ ಸ್ಪರ್ಧೆಯ ಸುಳಿವು ನೀಡಿದ್ದಾರೆ.

ನಾಳೆ ಜೆಡಿಎಸ್ ನಾಯಕರ ಸಭೆ

ಉಪ ಚುನಾವಣೆ ನಿಮಿತ್ತ ನಾಳೆ (ಶನಿವಾರ) ರಾಜ್ಯ ಜೆಡಿಎಸ್ ನಾಯಕರು ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸಲಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ ಹಾಗೂ ಆಲ್ಕೋಡ್ ಹನುಮಂತಪ್ಪ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.

ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯತಂತ್ರದ ಭಾಗವಾಗಿ ಈ ಸಭೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವ ಅವರ ಸಂಕಲ್ಪಕ್ಕೆ ನಾವೂ ಕೈಜೋಡಿಸಿದ್ದೇವೆ. ಕೇಂದ್ರ ಸಚಿವ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Read More
Next Story