ನಿಖಿಲ್‌ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ; ಸುಳಿವು ನೀಡಿದ ಎಚ್‌ಡಿಕೆ
x

ನಿಖಿಲ್‌ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ; ಸುಳಿವು ನೀಡಿದ ಎಚ್‌ಡಿಕೆ

ನಾನು ಕೇಂದ್ರ ಸಚಿವನಾಗಿದ್ದೇನೆ. ಅಲ್ಲದೆ ಅನಾರೋಗ್ಯ ಇರುವುದರಿಂದ ನಿಖಿಲ್ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಹೊರಬೇಕಾಗುತ್ತದೆ' ಎಂದು ಸೂಚ್ಯವಾಗಿ ಹೇಳುವ ಮೂಲಕ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಇಂಗಿತವನ್ನು ಎಚ್‌.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.


ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲಿನ ಬಳಿಕ ಅವರ ರಾಜಕೀಯ ಅಳಿವು-ಉಳಿವಿನ ಚರ್ಚೆ ನಡೆಯುತ್ತಿದೆ. ಅದರ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುತ್ರನಿಗೆ ರಾಜ್ಯಾಧ್ಯಕ್ಷರ ಪಟ್ಟ ಕಟ್ಟುವ ಮೂಲಕ ಪಕ್ಷದ ಹೊಣೆ ವಹಿಸುವ ಸುಳಿವು ನೀಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಕಾರಣ ನಿಖಿಲ್ ರಾಜಕೀಯ ಭವಿಷ್ಯದ ಕುರಿತಾಗಿ ಪಕ್ಷ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿದ್ದವು. ಆದರೆ, ಶನಿವಾರ ಚನ್ನಪಟ್ಟಣ ತಾಲೂಕಿನ ಕೂಡೂರು ಗ್ರಾಮದಲ್ಲಿ ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ನೇತೃತ್ವದಲ್ಲಿ ಪಕ್ಷ ಬಲಪಡಿಸುವುದಾಗಿ ಘೋಷಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಎಲ್ಲೂ ಹೋಗಲ್ಲ. ರಾಜ್ಯದಲ್ಲಿ ಮುಂದೆ ಪಕ್ಷದ ಜವಾಬ್ದಾರಿ ಹೊರಬೇಕಿದೆ. ಅವರ ನೇತೃತ್ವದಲ್ಲೇ ಜೆಡಿಎಸ್ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಹೇಳುವ ಮೂಲಕ ತಮ್ಮ ಬಳಿ ಇರುವ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಪುತ್ರನಿಗೆ ಬಿಟ್ಟುಕೊಡುವ ಸುಳಿವು ನೀಡಿದ್ದಾರೆ.

'ನಾನು ಕೇಂದ್ರ ಸಚಿವನಾಗಿದ್ದೇನೆ. ಅಲ್ಲದೆ ಅನಾರೋಗ್ಯ ಇರುವುದರಿಂದ ನಿಖಿಲ್ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಹೊರಬೇಕಾಗುತ್ತದೆ' ಎಂದು ಸೂಚ್ಯವಾಗಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸುಮಲತಾ ಅಂಬರೀಷ್ ಎದುರು ಸೋತಿದ್ದರು. ನಂತರ 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಇಕ್ಬಾಲ್ ಹುಸೇನ್ ವಿರುದ್ಧ ಪರಾಜಿತರಾಗಿದ್ದರು. ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರಕ್ಕೆ 2024ರ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸೋಲು ಕಂಡಿದ್ದರು.

ರಾಜ್ಯ ನಾಯಕನನ್ನಾಗಿ ಮಾಡುವ ಸಂಕಲ್ಪ

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದಲ್ಲಿ ಮಾತನಾಡುತ್ತಾ, ನಾನು ಉಸಿರು ಚೆಲ್ಲುವ ಒಳಗೆ ನಿಖಿಲ್ ಕುಮಾರಸ್ವಾಮಿಯನ್ನು ರಾಜ್ಯನಾಯಕನನ್ನಾಗಿ ಮಾಡುತ್ತೇನೆ. ತೋಟದಲ್ಲಿ ಕುಳಿತುಕೊಂಡು ರಾಜಕೀಯ ಪಟ್ಟುಗಳನ್ನು ಕಲಿಸುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಗಳು ಕೂಡ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಮುನ್ಸೂಚನೆ ಇರಬಹುದು ಎಂದು ವಿಶ್ಲೇಷಿಸಲಾಗಿತ್ತು.

ಸೋತಿದ್ದೇನೆ ವಿನಾ ಸತ್ತಿಲ್ಲ: ನಿಖಿಲ್

ಉಪ ಚುನಾವಣೆಯಲ್ಲಿ ನಾವು ಸೋತಿದ್ದೇವೆಯೇ ಹೊರತು ಸತ್ತಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡೋಣ. ಕ್ಷೇತ್ರದ 87 ಸಾವಿರಕ್ಕೂ ಹೆಚ್ಚು ಜನ ಮತ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಹೋರಾಡೋಣ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಉಪ ಚುನಾವಣೆಯ ಸೋಲಿನ ಹೊಣೆ ಹೊತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಜಯಮುತ್ತು ಅವರಿಗೆ ರಾಜೀನಾಮೆ ವಾಪಸ್ ಪಡೆಯುವಂತೆ ನಿಖಿಲ್ ಸಲಹೆ ನೀಡಿದರು. ಉದ್ವೇಗಕ್ಕೆ ಒಳಗಾಗಿ ಜಯಮುತ್ತು ನೈತಿಕ ಹೊಣೆ ಹೊರುತ್ತೇನೆ ಅಂದಿದ್ದಾರೆ. ಆದರೆ ಎಲ್ಲರೂ ಸಾಮೂಹಿಕವಾಗಿ ನೈತಿಕ ಹೊಣೆ ಹೊರಬೇಕಿದೆ ಎಂದು ಹೇಳಿದ್ದಾರೆ.

ನನ್ನ ಮೇಲೆ ಅನುಮಾನ ಬೇಡ

ಅನಿರೀಕ್ಷಿತವಾಗಿ ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದೆ. ನನ್ನ ಸೋತಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ಪಕ್ಷ ಸಂಘಟನೆ ಕುರಿತಂತೆ ಅನುಮಾನ ಬೇಡ. ರಾಜ್ಯವ್ಯಾಪಿ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತೇನೆ. ನನ್ನ ತಂದೆ ಕುಮಾರಸ್ವಾಮಿ ಅವರಿಗೆ ಮೂರು ಬಾರಿ ಆಪರೇಷನ್ ಆದರೂ ಪಕ್ಷ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಅವರ ಏಕಾಂಗಿ ಹೋರಾಟಕ್ಕೆ ಬೆಂಬಲ ನೀಡಿದ್ದು ಇದೇ ಚನ್ನಪಟ್ಟಣ ತಾಲೂಕು. ಅವರ ಹೋರಾಟಕ್ಕೆ ನಾನು, ನೀವು ಬೆಂಬಲ ಕೊಡೋಣ ಎಂದು ಹೇಳಿದ್ದಾರೆ.

Read More
Next Story