ಮಂಡ್ಯ ಟಿಕೆಟ್‌ ಪೈಪೋಟಿ | ಆಯ್ಕೆ ಇವೆ ಎಂದ ಸುಮಲತಾ, ನಮ್ಮಲ್ಲಿ ಜಾಗವಿಲ್ಲ ಎಂದ ಕಾಂಗ್ರೆಸ್!
x

ಮಂಡ್ಯ ಟಿಕೆಟ್‌ ಪೈಪೋಟಿ | ಆಯ್ಕೆ ಇವೆ ಎಂದ ಸುಮಲತಾ, ನಮ್ಮಲ್ಲಿ ಜಾಗವಿಲ್ಲ ಎಂದ ಕಾಂಗ್ರೆಸ್!


ರಾಜ್ಯದ ಮಟ್ಟಿಗೆ ಹೇಳುವುದಾದರೆ ಲೋಕಸಭಾ ಚುನಾವಣೆಯ ಕಾವು ಇನ್ನೂ ಏರಿಲ್ಲ. ಈಗಲೂ ಬಹುತೇಕ ಕ್ಷೇತ್ರಗಳಲ್ಲಿ ಟಿಕೆಟ್ ಪೈಪೋಟಿಯೇ ಬೂದಿ ಮುಚ್ಚಿದ ಕೆಂಡದಂತಿದೆ. ಆದರೆ, ಚುನಾವಣಾ ರಾಜಕಾರಣದ ಕುದಿನೆಲ ಮಂಡ್ಯದಲ್ಲಿ ಮಾತ್ರ ಲೋಕಸಭಾ ಚುನಾವಣಾ ಅಖಾಡ ಭಾರೀ ಸದ್ದು ಮಾಡತೊಡಗಿದೆ.

ಹಾಲಿ ಸಂಸದೆ ಸುಮಲತಾ ಅವರು ಈ ಬಾರಿ ಕ್ಷೇತ್ರದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಬಿಜೆಪಿ ಟಿಕೆಟ್ ನಿಂದಲೇ ಕಣಕ್ಕೆ ಇಳಿಯಲೇಬೇಕು ಎಂದು ಕಳೆದ ಒಂದು ವರ್ಷದಿಂದಲೇ ಭರ್ಜರಿ ಪ್ರಯತ್ನ ನಡೆಸಿದ್ದಾರೆ. “ಮಂಡ್ಯದಿಂದ ಬಿಜೆಪಿಯ ಪ್ರಥಮ ಸಂಸದೆ ನಾನಾಗಬೇಕು ಎಂಬುದು ನನ್ನ ದೊಡ್ಡ ಬಯಕೆ” ಎಂದು ಹೇಳುವ ಮೂಲಕ ಈ ಹಿಂದೆಯೇ ಅವರು ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ. ಹಾಗೆ ಹೇಳಿಕೆ ನೀಡುವ ಮೂಲಕ ಮಂಡ್ಯ ಟಿಕೆಟ್ ಗಾಗಿ ಪ್ರಯತ್ನಿಸುತ್ತಿರುವ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್ನ ನಾಯಕರಿಗೆ ಖಚಿತ ಸಂದೇಶವನ್ನೂ ಅವರು ರವಾನಿಸಿದ್ದರು. ಅದರ ಬೆನ್ನಿಗೇ ದೆಹಲಿಗೆ ಹೋಗಿದ್ದ ಅವರು, ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದರು.

ಇದೀಗ ಎನ್ ಡಿಎ ಮೈತ್ರಿಕೂಟದ ಅಂಗವಾಗಿರುವ ಜೆಡಿಎಸ್ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿಯ ಬೆನ್ನಲ್ಲೇ ಮಂಡ್ಯ ಸೇರಿದಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಮತ್ತು ಉಳಿದ ಎರಡು ಕಡೆ ಪರಸ್ಪರ ಅಭ್ಯರ್ಥಿಗಳನ್ನು ಬದಲಾಯಿಸಿಕೊಳ್ಳಲು ಬಿಜೆಪಿ ವರಿಷ್ಠರು ಒಪ್ಪಿಗೆ ನೀಡಿದ್ದಾರೆ ಎಂಬ ವರದಿಗಳು ಸದ್ದು ಮಾಡುತ್ತಿವೆ. ಮಂಡ್ಯ, ಹಾಸನ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳು ಜೆಡಿಎಸ್ಗೆ ಮತ್ತು ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಯುವುದು, ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಯವುದು ಎಂಬ ಸೂತ್ರವನ್ನು ಅಮಿತ್ ಶಾ ಅಂತಿಮಗೊಳಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಸೀಟು ಹಂಚಿಕೆಯ ಕುರಿತು ನಿರ್ದಿಷ್ಟವಾಗಿ ಎಚ್ ಡಿ ಕುಮಾರಸ್ವಾಮಿ ಅವರು ಏನನ್ನೂ ಹೇಳದೇ ಇದ್ದರೂ, “ಕ್ಷೇತ್ರ ಹಂಚಿಕೆ ಕುರಿತು ಉಭಯ ಪಕ್ಷಗಳ ಮುಖಂಡರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮಂಡ್ಯ, ಹಾಸನದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಮುಖ್ಯವಲ್ಲ; ಯಾರು ಎಲ್ಲೇ ನಿಂತರೂ ಎಲ್ಲಾ 28 ಕ್ಷೇತ್ರಗಳಲ್ಲೂ ಮೈತ್ರಿಕೂಟ ಗೆಲುವು ಪಡೆಯಬೇಕು ಎಂಬುದಷ್ಟೇ ನಮ್ಮ ಗುರಿ” ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಕುಮಾರಸ್ವಾಮಿ ಮತ್ತು ಅಮಿತ್ ಶಾ ಭೇಟಿ ಮತ್ತು ಕ್ಷೇತ್ರ ಹಂಚಿಕೆಯ ಕುರಿತ ಮುಗುಮ್ಮಾದ ಹೇಳಿಕೆ ಸಹಜವಾಗೇ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನನ್ನ ಮುಂದೆ ಆಯ್ಕೆಗಳಿವೆ ಎಂದ ಸಂಸದೆ

ಅದರಲ್ಲೂ “ಮಂಡ್ಯ ಕ್ಷೇತ್ರದಿಂದಲೇ ತಾವು ಕಣಕ್ಕಿಳಿಯುವುದು. ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸುವುದಿಲ್ಲ. ಬಿಜೆಪಿ ಟಿಕೆಟ್ ಸಿಗದೇ ಹೋದರೆ ನನ್ನ ಮುಂದೆ ಆಯ್ಕೆಗಳು ಸಾಕಷ್ಟಿವೆ..” ಎಂದು ಹೇಳುತ್ತಲೇ ಬಂದಿರುವ ಸಂಸದೆ ಸುಮಲತಾ ಅವರಂತೂ ಎಚ್ ಡಿಕೆಯ ದೆಹಲಿ ಭೇಟಿಯಿಂದ ವಿಚಲಿತಗೊಂಡಿದ್ದಾರೆ. ದಳಕ್ಕೆ ಮಂಡ್ಯ ಸೇರಿ ಮೂರು ಕ್ಷೇತ್ರ ಫೈನಲ್ ಎಂಬ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿರುವ ಅವರು, “ನಾನು ಮಂಡ್ಯದಿಂದಲೇ ಕಣಕ್ಕಿಳಿಯುವೆ. ಕುಮಾರಸ್ವಾಮಿ ಅವರು ಏನೇ ಹೇಳಲಿ, ಬಿಜೆಪಿ ಟಿಕೆಟ್ ನನಗೇ ಸಿಗಲಿದೆ ಎಂಬ ವಿಶ್ವಾಸವಿದೆ. ನನ್ನ ಮುಂದೆ ಹಲವು ಅವಕಾಶಗಳಿವೆ. ಆದರೆ, ನಾನು ಮಂಡ್ಯ ಬಿಟ್ಟು ಬೇರೆಡೆ ಹೋಗುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.

ಈ ನಡುವೆ, ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಜೆಡಿಎಸ್ ನಾಯಕರು ಮತ್ತು ತಮ್ಮ ನಡುವೆ ನಡೆಯುತ್ತಿರುವ ತೀವ್ರ ಪೈಪೋಟಿಯ ಕುರಿತ ಪ್ರಶ್ನೆಗಳು ಎದುರಾದಾಗೆಲ್ಲ ಸುಮಲತಾ, ʼತಮ್ಮ ಮುಂದೆ ಹಲವು ಆಯ್ಕೆಗಳಿವೆʼ ಎಂಬ ಮಾತನ್ನು ಪುನರುಚ್ಛರಿಸುತ್ತಲೇ ಇದ್ದಾರೆ. ಈ ನಡುವೆ ಅವರು ಕಾಂಗ್ರೆಸ್ ಪಕ್ಷದ ಪ್ರಮುಖರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಟಿಕೆಟ್ ಸಿಗದೇ ಹೋದರೆ ಕಾಂಗ್ರೆಸ್ ಟಿಕೆಟ್ ಗಾಗಿ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಆ ಧೈರ್ಯದ ಮೇಲೆಯೇ ಅವರು ತಮ್ಮ ಮುಂದಿನ ʼಆಯ್ಕೆʼಗಳು ಮತ್ತು ಮಂಡ್ಯ ಹೊರತುಪಡಿಸಿ ಬೇರೆ ಕಡೆ ಹೋಗುವುದಿಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮಂಡ್ಯದ ಮೇಲೆ ಎಚ್ ಡಿಕೆ ಕಣ್ಣು

ಸುಮಲತಾ ಅವರು ಮಂಡ್ಯ ಟಿಕೆಟ್ ವಿಷಯದಲ್ಲಿ ಬಿಗಿಪಟ್ಟು ಹಿಡಿದಿರುವುದು ಮತ್ತು ನಿರಂತರ ಹೇಳಿಕೆಗಳನ್ನು ನೀಡುತ್ತಿರುವುದರಿಂದ ವಿಚಲಿತರಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಆ ಕ್ಷೇತ್ರದ ಕುರಿತ ಮಾತುಕತೆಗಾಗಿಯೇ ದೆಹಲಿಗೆ ಹೋಗಿದ್ದರು. ಸ್ವತಃ ತಾವೇ ಮಂಡ್ಯದಿಂದ ಕಣಕ್ಕಿಳಿಯವುದು ಕುಮಾರಸ್ವಾಮಿ ಅವರ ಲೆಕ್ಕಾಚಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಮಂಡ್ಯದಿಂದ ಕಣಕ್ಕಿಳಿಯಲು ತಯಾರಾಗಿದ್ದರು. ಆದರೆ, ಆ ಬಾರಿ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದವು. ಹಾಗಾಗಿ ಈ ಬಾರಿ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿಯುವುದು ಸುರಕ್ಷಿತ ಎಂಬುದು ಎಚ್ಡಿಕೆ ಲೆಕ್ಕಾಚಾರ. ಅದಕ್ಕಾಗಿಯೇ ಅವರು ಸುಮಲತಾ ಅವರ ಪಟ್ಟು ತಮಗೆ ಅಡ್ಡಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಬಿಜೆಪಿ ವರಿಷ್ಠರನ್ನು ಕಂಡು ಅಂತಿಮಗೊಳಿಸಿಕೊಂಡಿದ್ದಾರೆ ಎಂಬುದು ಜೆಡಿಎಸ್ ವಲಯದಲ್ಲೇ ಕೇಳಿಬರುತ್ತಿರುವ ಅಭಿಪ್ರಾಯ.

ನಮ್ಮಲ್ಲಿ ಜಾಗ ಖಾಲಿ ಇಲ್ಲ: ಕಾಂಗ್ರೆಸ್

ಹಾಗಾಗಿ, ಮಂಡ್ಯ ಸೀಟು ಜೆಡಿಎಸ್ ಪಾಲಾಗಿದೆ ಎಂಬ ವರದಿಗಳು ಬರುತ್ತಲೇ ಸಂಸದೆ ಸುಮಲತಾ, ವಿಚಲಿತರಾಗಿದ್ದು, ಕಾಂಗ್ರೆಸ್ ಕಡೆ ಮುಖ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವವಾಗಿದೆ. ಆದರೆ, ʼದ ಫೆಡರಲ್- ಕರ್ನಾಟಕʼದೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್, “ನಮಗೆ ಸುಮಲತಾ ಅವರನ್ನು ಹೊರಗಿನಿಂದ ಕರೆತಂದು ಕಣಕ್ಕಿಳಿಸುವ ಅನಿವಾರ್ಯತೆ ಇಲ್ಲ. ನಮ್ಮ ಪಕ್ಷ ಈಗಾಗಲೇ ಮಂಡ್ಯ ಸೇರಿದಂತೆ ಹದಿನೈದು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಮಂಡ್ಯದ ನಮ್ಮ ಅಭ್ಯರ್ಥಿ ಯಾರೆಂದು ಈಗಾಗಲೇ ನಿರ್ಧಾರವಾಗಿರುವಾಗ ಅವರಿಗೆ ನಾವು ಯಾಕೆ ಮಣೆ ಹಾಕೋಣ?” ಎಂದು ಸುಮಲತಾ ಅವರಿಗೆ ಕಾಂಗ್ರೆಸ್ನಲ್ಲಿ ರತ್ನಗಂಬಳಿಯ ಸ್ವಾಗತ ಸಿಗಲಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

“ಸುಮಲತಾ ಅವರು ಬಿಜೆಪಿಯಲ್ಲಿದ್ದಾರೆ. ಅವರು ಆ ಪಕ್ಷದ ಸಂಸದೆಯಾಗಿ ನಮ್ಮ ಪಕ್ಷದ ವಿರುದ್ಧ ಟೀಕೆ ಮಾಡಿಕೊಂಡು, ನಮ್ಮ ನಾಯಕರನ್ನು ಬೈದುಕೊಂಡು ಓಡಾಡುತ್ತಿದ್ದಾರೆ. ಅವರನ್ನು ಕರೆದು ಟಿಕೆಟ್ ಕೊಟ್ಟು ಗೆಲ್ಲಿಸುವಂತಹ ದುರ್ಗತಿ ನಮಗೆ ಬಂದಿಲ್ಲ. ನಮ್ಮ ಅಭ್ಯರ್ಥಿ ಯಾರೆಂಬುದು ಈಗಾಗಲೇ ನಿರ್ಧಾರವಾಗಿದೆ. ಹಾಗಿರುವಾಗ ಹೊರಗಿನವರನ್ನು, ಅದರಲ್ಲೂ ನಮ್ಮ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದವರನ್ನು ಕರೆದು ಟಿಕೆಟ್ ಕೊಟ್ಟು ಕಣಕ್ಕಿಳಿಸುವ ಅನಿವಾರ್ಯತೆ ಕಾಂಗ್ರೆಸ್ಸಿಗೆ ಇಲ್ಲ” ಎಂದು ಲಕ್ಷ್ಮಣ್ ಖಡಾಖಂಡಿತವಾಗಿ ಹೇಳಿದರು.

ಈ ನಡುವೆ, ಬಿಜೆಪಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಶುಕ್ರವಾರ ಹೇಳಿಕೆ ನೀಡಿ, “ಸುಮಲತಾ ಅವರು ಬಿಜೆಪಿಯಲ್ಲೇ ಇರುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ನೀಡಿರುವ ಆ ಹೇಳಿಕೆ ಕೂಡ ಸುಮಲತಾ ಅವರು ಈಗಾಗಲೇ ಒಂದು ಹೆಜ್ಜೆ ಹೊರಗಿಟ್ಟಿರುವ ಸೂಚನೆ ನೀಡಿದೆ.

ಹಾಗಾಗಿ ಸದ್ಯ ರಾಜ್ಯ ರಾಜಕಾರಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಂಸದೆ ಸುಮಲತಾ ಅವರ ಮುಂದಿನ ನಡೆ ಮತ್ತು ಜೆಡಿಎಸ್ ನಾಯಕರ ತಂತ್ರಗಾರಿಕೆಗಳು ಅಂತಿಮವಾಗಿ ಬಿಜೆಪಿ- ಜೆಡಿಎಸ್ ಮೈತ್ರಿಯ ಮೇಲೆ ಬೀರುವ ಪರಿಣಾಮ ಕುತೂಹಲ ಮೂಡಿಸಿದೆ.

Read More
Next Story