ಎಫ್ಐಆರ್ ದಾಖಲಿಸಿದ ಐಪಿಎಸ್ ಅಧಿಕಾರಿ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ
x
ಹೆಚ್‌ ಡಿ ಕುಮಾರಸ್ವಾಮಿ

ಎಫ್ಐಆರ್ ದಾಖಲಿಸಿದ ಐಪಿಎಸ್ ಅಧಿಕಾರಿ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ

ಉಪ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಭಾರೀ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದು ಎಚ್‌ಡಿಕೆ ಪ್ರತಿಕ್ರಿಯಿಸಿದ್ದಾರೆ


Click the Play button to hear this message in audio format

ಐಪಿಎಸ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಅವರು, ಉಪ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಭಾರೀ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದರು.

ಎಫ್ ಐಆರ್ ಪ್ರತಿಯನ್ನು ಓದಿದೆ. ಅದರಲ್ಲಿರುವ ದೂರಿನ ಸಾರಾಂಶವನ್ನೂ ಓದಿದೆ. ಅದು ಸಂಪೂರ್ಣ ಹಾಸ್ಯಾಸ್ಪದ ಹಾಗೂ ದುರದ್ದೇಶಪೂರಿತ ಎನ್ನುವುದು ನನಗೆ ಅರ್ಥವಾಯಿತು. ಅಲ್ಲಿ ದೂರುದಾರರೇ ಹೇಳಿಕೊಂಡಿದ್ದಾರೆ, ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ಮಾಡಿ ನನ್ನ ವಿರುದ್ಧ ಆರೋಪ ಮಾಡಿದರು. ಅದಕ್ಕೆ ಕ್ರಮ ಕೈಗೊಳ್ಳಿ ಎಂದು ಕೇಳಿದ್ದಾರೆ. ನಾನು ಅವರ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ? ಬೇಕಾದರೆ ನನ್ನ ಮಾಧ್ಯಮಗೋಷ್ಠಿಯ ವಿಡಿಯೋ ನೋಡಿಕೊಳ್ಳಲಿ ಎಂದು ಅವರು ತಿಳಿಸಿದರು.

ನಾನು ಪ್ರೆಸ್ ಮೀಟ್ ಮಾಡಿದೆ ಎಂದು ಎಫ್ಐಆರ್ ಮಾಡಿಸಿದ್ದಾರೆ. ಹೇಳಿಕೆ ನೀಡಿದರು ಎಂದು ಚನ್ನಪಟ್ಟಣದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಹಾಗಾದರೆ, ಯಾರೂ ಯಾರ ವಿರುದ್ಧವೂ ಮಾತನಾಡಬಾರದು, ದೂರು ನೀಡಬಾರದು ಎಂದು ಕಾನೂನಿನಲ್ಲಿ ಇದೆಯೇ? ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.

ಇದೊಂದು ಷಡ್ಯಂತ್ರ ಹಾಗೂ ಕುತಂತ್ರದ ಭಾಗ. ಯಾವಾಗ ಚನ್ನಪಟ್ಟಣದಲ್ಲಿ ಇವರ ಮೋಸ ಕುತಂತ್ರ ನಡೆಯಲ್ಲ ಎಂದು ಗೊತ್ತಾಯಿತೋ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ. ನಮಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಕಾನೂನಿನ ಮೇಲೆ ಗೌರವ ಇದೆ. ನನ್ನ ಚನ್ನಪಟ್ಟಣದ ಜನರ ಮೇಲೆ ವಿಶ್ವಾಸ ಇದೆ. ಹೀಗಿರುವಾಗ ಇಂತಹ ನೂರು ಎಫ್ ಐಆರ್ ಗಳು ದಾಖಲಾದರೂ ನಾವು ಧೃತಿಗೆಡಲ್ಲ ಎಂದು ಅವರು ತಿಳಿಸಿದರು.

Read More
Next Story