ವಾಲ್ಮೀಕಿ ನಿಗಮ ಹಗರಣ| ಚಂದ್ರಶೇಖರ್‌ ಡೆತ್ ನೋಟ್ ಇಲ್ಲದಿದ್ದರೆ  ಪ್ರಕರಣ ಮುಚ್ಚಿಹಾಕುತ್ತಿದ್ದರು; ಸಿದ್ದರಾಮಯ್ಯ ಮೇಲೆ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ
x

ವಾಲ್ಮೀಕಿ ನಿಗಮ ಹಗರಣ| ಚಂದ್ರಶೇಖರ್‌ ಡೆತ್ ನೋಟ್ ಇಲ್ಲದಿದ್ದರೆ ಪ್ರಕರಣ ಮುಚ್ಚಿಹಾಕುತ್ತಿದ್ದರು; ಸಿದ್ದರಾಮಯ್ಯ ಮೇಲೆ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ


ಆಡಳಿತದಲ್ಲಿ ಬಿಗಿ ಇದ್ದಿದ್ದರೆ ವಾಲ್ಮಿಕಿ ನಿಗಮದ ಹಗರಣ ನಡೆಯುತ್ತಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲೇ ನಿಗಮದಿಂದ ಅಕ್ರಮವಾಗಿ 94 ಕೋಟಿ ರೂ. ವರ್ಗಾವಣೆಯಾಗಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಡೆತ್ ನೋಟ್ ಇಲ್ಲದಿದ್ದರೆ ಸಿದ್ಧರಾಮಯ್ಯ ಅವರೇ ಈ ಪ್ರಕರಣ ಮುಚ್ಚಿಹಾಕುತ್ತಿದ್ದರು ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಪಾದಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಈ ಸರ್ಕಾರವೇ ಮಾಡಿದ ಕೊಲೆ ಎಂದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ವಾಲ್ಮೀಕಿ ನಿಗಮದ ಹಣ 10 -20 ಬ್ಯಾಂಕ್ ಖಾತೆಗಳಿಗೆ ಐದು, ಮೂರು ಕೋಟಿ ಹಣ ಹೋಗಿದೆ. ಅವೆಲ್ಲಾ ಬೇನಾಮಿ ಅಕೌಂಟ್‌ಗಳು. ಲೋಕಸಭಾ ಚುನಾವಣೆ ನೀತಿ ಜಾರಿಯಾದ ಸಂದರ್ಭದಲ್ಲಿ ಹೋಗಿದೆ. ಯಾವ ಯಾವ ಅಕೌಂಟ್ ಗೆ ಹಾಕಿಕೊಂಡಿದ್ದಾರೆ. ನಿಗಮದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟ್ ಬರೆದು ಹೋದರು.‌ ಡೆತ್ ನೋಟ್ ಇಲ್ಲದಿದ್ದರೆ ಏನು ಮಾಡುತಿದ್ದಿರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದರು.

ಹಿಂದುಳಿದ ವರ್ಗಗಳ ರಕ್ಷಣೆ ಪಡೆಯೋಕೆ ಹೋಗಿದ್ದೀರಾ ನೀವು? ಆ ಸಮಾಜದ ಅಭಿವೃದ್ಧಿಗೆ ಇಟ್ಟ ಹಣವನ್ನು ದರೋಡೆ ಮಾಡಿದ್ದೀರಾ? ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಲ್ಲವೇ? ನಾನು ಒಂದು ಪ್ರಕರಣ ಬಗ್ಗೆ ಲಿಂಕ್ ಮಾಡ್ತೀನಿ. ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಒಂದು ತಿಂಗಳಿಂದ ತೋರಿಸ್ತಾ ಇದ್ದೀರಾ? ಆದರೆ ಚಂದ್ರಶೇಖರ್ ಆತ್ಮಹತ್ಯೆ ಅಂತ ಹೇಳ್ತೀರಾ. ಈ ಪ್ರಕರಣವನ್ನು ಆತ್ಮಹತ್ಯೆ ಅಂತ ಹೇಳ್ತೀರಾ? ಅಥವಾ ಸರ್ಕಾರದಿಂದ ಕೊಲೆ ಅಂತ ಹೇಳ್ತೀರಾ?

ನೀವೆ ಹಿಂದಿನ ಸರ್ಕಾರದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ರಕ್ಷಣೆ ಕೊಟ್ಟಿದ್ದೀರಾ ಮುಖ್ಯಮಂತ್ರಿಗಳೇ? ಇವತ್ತು ಹಿಂದುಳಿದ ವರ್ಗಗಳ ರಕ್ಷಣೆ ಪಡೆದುಕೊಂಡಿದ್ದೀರಾ? ನಾನು ಆ ಕುರುಬ ಸಮುದಾಯ ಯುವಕನ ಪರ ಧ್ವನಿ ಎತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಅಂತ ಹೇಳಲ್ಲ. ಸರ್ಕಾರದ ನಡೆದ ಹಗರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ಇಲ್ಲಿ ನಿಮ್ಮ ಎಸ್ಐಟಿ ಯಾವ ರೀತಿ ನಡೆದುಕೊಂಡಿದೆ. ಡೆತ್ ನೋಟ್ ನಲ್ಲಿ ಮಂತ್ರಿ ಸೂಚನೆ ಮೇರೆಗೆ ಅಂತ ಬರೆದಿದ್ದಾರೆ ಎಂದರು.

ನ್ಯಾ.ನಾಗಮೋಹನ್ ದಾಸ್ ಅವರಿಂದ 40% ತನಿಖೆ ಮಾಡಿಸುತ್ತಿದ್ದೀರಿ. ದಾಖಲೆ ಇಲ್ಲದೆ ಡಂಗೂರ ಹೊಡೆದಿರಿ ಅಲ್ಲವೇ? ಸಾಕ್ಷಿ ಇಲ್ಲದೆ ಈಗ ಹುಡುಕುತ್ತಾ ಇದ್ದೀರಾ? ಕೆಂಪಣ್ಣ ಆಯೋಗದ ವರದಿಯನ್ನು ಏನು ಮಾಡಿದೀರಿ? ನಿಮಗೆ ನನ್ನನ್ನು ಪ್ರಶ್ನೆ ಮಾಡಲು ಆಗಲ್ಲ. ನನ್ನನ್ನು ಕ್ಲರ್ಕ್ ಆಗಿ ಇಟ್ಟುಕೊಂಡಿದ್ದಿರಿ. ಅದಕ್ಕೆ ಕೇಳೋಕೆ ಆಗಲ್ಲ ಎಂದರು ಅವರು.

ಹಾಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ನೈಸ್ ಹಗರಣ ವರದಿ ಕೊಟ್ಟಿದ್ದ ವೇಳೆ, ನಿಮ್ಮ (ಕಾಂಗ್ರೆಸ್‌) ಪಕ್ಷದವರು ಕೊಲೆ ಬೆದರಿಕೆ ಹಾಕಿದರು. ರಾಜ್ಯ ಸರ್ಕಾರದ ಹಗರಣಗಳು ದೇಶಾದ್ಯಂತ ಚರ್ಚೆ ಆಗುತ್ತಿವೆ. ನಾನು ಆಂಧ್ರ ಪ್ರದೇಶಕ್ಕೆ ಅಧಿಕೃತ ಪ್ರವಾಸಕ್ಕೆ ಹೋಗಿದ್ದೆ, ಅಲ್ಲೂ ಕೂಡ ಇವರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

ನಿಖಿಲ್ ಮೇಲೆ ಕೇಸ್ ?

ಮೊನ್ನೆ ರಾಮನಗರದಲ್ಲಿ ನಡೆದ ಪ್ರತಿಭಟನೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಡಿಜಿಪಿ ಕಚೇರಿಯಲ್ಲಿ ರಾತ್ರಿ 11 ಗಂಟೆವರೆಗೂ ಚರ್ಚೆ ಮಾಡಿದ್ದಾರೆ. ಹೆಚ್.ಡಿ. ದೇವೆಗೌಡರ ಕುಟುಂಬದಲ್ಲಿ ಎಲ್ಲರನ್ನು ಮುಗಿಸಿದ್ದಿವಿ.‌ ನಿಖಿಲ್ ಒಬ್ಬ ಉಳಿದಿದ್ದಾನೆ. ಅವನನ್ನೂ ಎ1 ಆರೋಪಿ ಮಾಡುಲು ಹೊರಟ್ಟಿದಿರಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಹೇಳಿದ್ರು ಅಂತ ಡಿಜಿಪಿ ಏನು ಮಾಡಲು ಹೊರಟಿದ್ದೀರಿ? ನಮ್ಮ ರಾಜ್ಯದ ಡಿಜಿಪಿ ಒಬ್ಬ ಕಾನ್ಸ್ ಟೇಬಲ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

Read More
Next Story