NICE controversy | They have also made me a party in the Supreme Court, former Prime Minister HDD Kidi
x

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ

ನೈಸ್‌ ವಿವಾದ| ಸುಪ್ರೀಂನಲ್ಲಿ ನನ್ನನ್ನೂ ಪ್ರತಿವಾದಿ ಮಾಡಿದ್ದಾರೆ: ಮಾಜಿ ಪ್ರಧಾನಿ ಹೆಚ್‌ಡಿಡಿ ಕಿಡಿ

ನೈಸ್ ಯೋಜನೆಯು ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದು, ಐದು ಟೌನ್‌ಶಿಪ್‌ಗಳು, ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು.


Click the Play button to hear this message in audio format

ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್‌ ಯೋಜನೆಗೆ (ನೈಸ್) ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ನನ್ನನ್ನೂ ಪ್ರತಿವಾದಿಯನ್ನಾಗಿ ಮಾಡಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರು ಬೇಸರ ವ್ಯಕ್ತಪಡಿಸಿದರು.

ಬುಧವಾರ (ಡಿ.24) ಬೆಂಗಳೂರಿನ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಜಿಯಲ್ಲಿ ರಾಜ್ಯ ಸರ್ಕಾರ, ಕೆಲವು ರೈತರು ಹಾಗೂ ನನ್ನನ್ನೂ ಪ್ರತಿವಾದಿಯನ್ನಾಗಿ ಮಾಡಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿ ಇತ್ತು. ಆಗ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಎಲ್ಲಾ ಮಾಹಿತಿ ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಹೇಳಿದರು.

ಈ ಯೋಜನೆಯು ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಐದು ಟೌನ್‌ಶಿಪ್‌ಗಳು, ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್‌‍ ಕಂಪನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್‌, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್‌‍ ಕಂಪನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಖಾಲಿ ಹುದ್ದೆಗಳ ಭರ್ತಿ ಮಾಡಿ

ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಹುದ್ದೆಗಳು ಭರ್ತಿಯಾಗದೇ ಹಾಗೆಯೇ ಖಾಲಿ ಉಳಿದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರೆ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಈಗಿನ ಮುಖ್ಯಮಂತ್ರಿಗಳಿಗೆ ಬಡವರ ಬಗ್ಗೆ ಎಲ್ಲಿಲ್ಲದ ಅನುಕಂಪ ಇದೆ. ಮುಖ್ಯಮಂತ್ರಿ ಕಚೇರಿಯಲ್ಲೇ ಏಳೆಂಟು ಮಂದಿ ಕ್ಯಾಬಿನೆಟ್‌ ದರ್ಜೆ ಪಡೆದುಕೊಂಡು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದು ಇವರ ಆಡಳಿತದ ವೈಖರಿ ಎಂದು ಲೇವಡಿ ಮಾಡಿದರು.

ಕೇಂದ್ರವನ್ನು ದೂರಿದರೆ ಪ್ರಯೋಜನವಿಲ್ಲ

ರಾಜ್ಯ ಸರ್ಕಾರ ಪ್ರತೀ ವಿಷಯಕ್ಕೂ ಕೇಂದ್ರ ಸರ್ಕಾರವನ್ನು ದೂರುತ್ತಾ ಕೂತರೆ ಪ್ರಯೋಜನವಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗ ಕೇಂದ್ರ ಸರ್ಕಾರದಲ್ಲಿ ಡಾ. ಮನಮೋಹನ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದರು. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಲು ಪತ್ರ ಬರೆದಾಗ ಕೇಂದ್ರ ಮನಮೋಹನ್‌ ಸಿಂಗ್‌, ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್‌, ನಬಾರ್ಡ್‌ ಯಾರೂ ಕೂಡ ಒಪ್ಪಿಗೆ ಕೊಡಲಿಲ್ಲ ಎಂದು ಸ್ಮರಿಸಿಕೊಂಡರು.

ಕೇಂದ್ರದ ಸಭೆಗಳಿಗೆ ಸಿಎಂ ಹೋಗಲಿ

ರಾಜ್ಯ ಸರ್ಕಾರ ಪ್ರತೀ ಬಾರಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ. ಹೀಗೆ ಟೀಕೆ ಮಾಡುತ್ತಾ ಹೋದರೆ ಆಗುವ ಪ್ರಯೋಜನ ಏನು? ಮುಖ್ಯಮಂತ್ರಿ ಆದವರು ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ಹೋಗಿ ರಾಜ್ಯಕ್ಕೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಬೇಕು. ಸಂಸದರಾಗಿ ನಾವು ನಮ್ಮ ಕರ್ತವ್ಯ ನಿಭಾಯಿಸುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮಾವೇಶಗಳ ಆಯೋಜನೆ

ಜನವರಿ 30ರಂದು ಸಂಸತ್‌ನ ಜಂಟಿ ಅಧಿವೇಶನ ಶುರುವಾಗುತ್ತಿದ್ದು, ಅದಕ್ಕೂ ಮೊದಲೇ ಜನವರಿ 23ರಿಂದ 25ರ ನಡುವೆ ಹಾಸನ ಹಾಗೂ ಬಾಗಲಕೋಟೆ ಭಾಗದಲ್ಲಿ ಪಕ್ಷದ ವತಿಯಿಂದ ತಲಾ ಒಂದು ಸಮಾವೇಶ ನಡೆಸಲಾಗುವುದು. ಈ ಬಗ್ಗೆ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇನೆ. ರಾಜ್ಯ ಸರ್ಕಾರದ ವೈಫಲ್ಯಗಳು, ಹೆಚ್‌ಡಿಕೆ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸದಿರುವುದರ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಗಾಂಧೀಜಿ ಮೇಲೆ ಕಾಂಗ್ರೆಸ್ ಅಕ್ಕರೆ ಗೊತ್ತಿದೆ!!

ನರೇಗಾ ಯೋಜನೆ ಹೆಸರನ್ನು ಬದಲಾವಣೆ ಮಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನವರು ಆಡಳಿತ ನಡೆಸುತ್ತಿದ್ದಾಗ ಮಹಾತ್ಮ ಗಾಂಧೀಜಿ ಅವರಿಗೆ ಎಷ್ಟು ಗೌರವ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಗಾಂಧೀಜಿಯವರ ಬಗ್ಗೆ ಇಷ್ಟೊಂದು ಕಾಳಜಿ, ಕಳಕಳಿ ಇರುವವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಆಳ್ವಿಕೆ ಮಾಡಿದ ಸಂದರ್ಭದಲ್ಲಿ ಎಲ್ಲಿಯಾದರೂ ಗಾಂಧೀಜಿ ಅವರ ಒಂದು ಪೋಸ್ಟರ್ ಹಾಕಿದ್ದರೆ? ಎಲ್ಲಿಯಾದರೂ ಮಹಾತ್ಮಾ ಗಾಂಧಿ ಅವರ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸಿದ್ದಾರಾ? ಎಂದು ಕಿಡಿಕಾರಿದರು.

ಕರ್ನಾಟಕದ ಗ್ಯಾರಂಟಿ ಬಿಹಾರದವರೆಗೂ ಹೋಯಿತು. ಆದರೆ ಅಲ್ಲಿನ ಚುನಾವಣೆಯಲ್ಲಿ ಆಗಲಿಲ್ಲ. ಪ್ರಧಾನಿ ಮೋದಿ ಅವರಿಗೆ ದೇಶ ನಡೆಸಲು ಗೊತ್ತು. ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂದು ಕೂಡ ಗೊತ್ತು. ನಾನೇನು ಮೋದಿ ಅವರನ್ನು ಹೊಗಳಲು ಬಂದಿಲ್ಲ. ನರೇಗಾಗೆ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಕೆಲಸದ ದಿನಗಳನ್ನು ಹೆಚ್ಚು ಮಾಡಿದ್ದಾರೆ ಎಂದರು.

ವರದಿ ಹೇಳಿದ್ದೇನು ?

ಈ ಯೋಜನೆಯ ಅಕ್ರಮಗಳ ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರವು ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಸದನ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಯೋಜನೆಯಲ್ಲಿ ಸುಮಾರು ಶೇ. 90 ರಷ್ಟು ಅಕ್ರಮಗಳು ನಡೆದಿವೆ ಎಂದು ವರದಿ ನೀಡಿತ್ತು ಮತ್ತು ಕಂಪನಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಶಿಫಾರಸು ಮಾಡಿತ್ತು.

ಏನಿದು ನೈಸ್‌ ವಿವಾದ ?

ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಭೂಮಿಯನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಆ ಹೆಚ್ಚುವರಿ ಭೂಮಿಯನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕಂಪನಿಯ ಮೇಲಿದೆ. ಸರ್ಕಾರ ಮತ್ತು ನೈಸ್ ಕಂಪನಿ ನಡುವೆ ನಡೆದ ಮೂಲ ಒಪ್ಪಂದದ ಪ್ರಕಾರ ಕಾಮಗಾರಿ ನಡೆದಿಲ್ಲ ಎಂಬುದು ಸರ್ಕಾರದ ವಾದ. ಕಂಪನಿಯು ಕೇವಲ ಲಾಭದಾಯಕವಾಗಿರುವ ರಸ್ತೆಗಳನ್ನು (ಲಿಂಕ್ ರೋಡ್, ಪೆರಿಫೆರಲ್ ರೋಡ್) ಮಾತ್ರ ನಿರ್ಮಿಸಿದೆ, ಆದರೆ ಒಪ್ಪಂದದ ಪ್ರಕಾರ ಐದು ಹೊಸ ಉಪನಗರಗಳನ್ನು ನಿರ್ಮಿಸಿಲ್ಲ ಎಂಬ ಆರೋಪವಿದೆ.

Read More
Next Story