
ಪೊಲೀಸರು ಬಂಧಿಸಿರುವ ಆರೋಪಿಗಳು
ಹಾವೇರಿ: ಅಕ್ರಮ ಪಡಿತರ ಅಕ್ಕಿ ಸಾಗಾಟ ಜಾಲ ಪತ್ತೆ; 20.5 ಲಕ್ಷ ಮೌಲ್ಯದ ಸೊತ್ತು ಜಪ್ತಿ, ಆರೋಪಿಗಳು ಪರಾರಿ
ಬಂಕಾಪುರ ಪಟ್ಟಣದ ಹೊರವಲಯದಲ್ಲಿರುವ ಹತ್ತಿ ಜಿನ್ನಿಂಗ್ ಮಿಲ್ ಒಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು.
ಜಿಲ್ಲೆಯ ಬಂಕಾಪುರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಬೃಹತ್ ದಂಧೆಯನ್ನು ಭೇದಿಸುವಲ್ಲಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಡೆಸಿದ ಈ ಭರ್ಜರಿ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ ಹಾಗೂ ಲಾರಿಯನ್ನು ಜಪ್ತಿ ಮಾಡಲಾಗಿದೆ .
ಬಂಕಾಪುರ ಪಟ್ಟಣದ ಹೊರವಲಯದಲ್ಲಿರುವ ಹತ್ತಿ ಜಿನ್ನಿಂಗ್ ಮಿಲ್ ಒಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಮಾಹಿತಿಯನ್ನಾಧರಿಸಿ ಬಂಕಾಪುರ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಜಂಟಿಯಾಗಿ ಹತ್ತಿ ಜಿನ್ ಮೇಲೆ ಹಠಾತ್ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ಸಾಗಾಟಕ್ಕೆ ಸಿದ್ದವಾಗಿದ್ದ ಅಪಾರ ಪ್ರಮಾಣದ ಪಡಿತರ ಅಕ್ಕಿ ಪತ್ತೆಯಾಗಿದೆ .
20.50 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ
ದಾಳಿಯ ವೇಳೆ ಅಧಿಕಾರಿಗಳು ಸುಮಾರು 5.50 ಲಕ್ಷ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಅಕ್ಕಿ ಸಾಗಾಟಕ್ಕೆ ಬಳಸಲಿದ್ದ ಅಂದಾಜು 15 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ಕೂಡ ಸ್ಥಳದಲ್ಲಿಯೇ ಜಪ್ತಿ ಮಾಡಲಾಗಿದೆ. ಒಟ್ಟಾರೆಯಾಗಿ ಈ ಕಾರ್ಯಾಚರಣೆಯಲ್ಲಿ 20.50 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಇಲಾಖೆ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ .
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈನುದ್ದೀನ್ ಖತೀಬ್ (ಎಂ.ಕೆ) ಮತ್ತು ಸಾಬಿರ್ ದೊಡ್ಡಮನಿ ಎಂಬುವವರನ್ನು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಂಕಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಹಾಗೂ ಮುಂದಿನ ತನಿಖೆ ಕೈಗೊಂಡಿದ್ದಾರೆ .

