
ದ್ವೇಷ ಭಾಷಣ| ಪ್ರಧಾನಿ ಮೋದಿ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು
ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಏಪ್ರಿಲ್ 21, 2024 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ಮೋದಿಯವರು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂದು ಜಿಯಾ ನೊಮಾನಿ ಎನ್ನುವವರು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಯಾ ನೊಮಾನಿ ಅವರು, ʻʻಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 21, 2024 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ಭಾಷಣ ಮಾಡುವ ವೇಳೆ ಮುಸ್ಲಿಮರನ್ನು "ಘುಸ್ಪೈಥಿಯಾ" (ನುಸುಳುಕೋರರು)ʼʼ ಎಂದು ಕರೆದಿದ್ದಾರೆ. ಇದು ಕಾನೂನು ಉಲ್ಲಂಘಟನೆಯಾಗಿದೆʼʼ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ನಾವು ಔಪಚಾರಿಕ ದೂರನ್ನು ಸಲ್ಲಿಸಿದ ನಂತರ, ಸ್ವೀಕೃತಿಯನ್ನು ನೀಡಿದರು ಆದರೆ ಯಾವುದೇ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ನಾವು ಈಗಾಗಲೇ ಈ ವಿಷಯವನ್ನು ಭಾರತದ ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಾವು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ವರದಿಯನ್ನು (ಪಿಸಿಆರ್) ನೋಂದಾಯಿಸಲು ಕೋರಿದ್ದೇವೆ. ನ್ಯಾಯಾಲಯವು ಪಿಸಿಆರ್ ನಂ. 7024/2024 ಮತ್ತು ವಿಚಾರಣೆಯನ್ನು ಮೇ 28, 2024 ಕ್ಕೆ ನಿಗದಿಪಡಿಸಿರುವುದಾಗಿ ಅವರು ಹೇಳಿದ್ದಾರೆ.
ʻʻನ್ಯಾಯಾಲಯವು ನಮ್ಮ ವಿನಂತಿಯನ್ನು ತ್ವರಿತವಾಗಿ ಅಂಗೀಕರಿಸಿದ್ದಕ್ಕಾಗಿ ಮತ್ತು ಅದರ ಬದ್ಧತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಈ ಬೆಳವಣಿಗೆಯು ಭಾರತದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆʼʼ ಎಂದು ತಿಳಿಸಿದ್ದಾರೆ.
ಲೋಕಸಭೆ 2024 ರ ಚುನಾವಣೆಗಳು ಪ್ರಾರಂಭವಾದಾಗಿನಿಂದ, ಕಾನೂನು ಮತ್ತು ನೀತಿ ಸಂಶೋಧನಾ ಸಂಸ್ಥೆಯು (LAPRI) ಜಾಗರೂಕತೆಯಿಂದ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದೆ, ಮಾದರಿ ನೀತಿ ಸಂಹಿತೆ (MCC) ಮತ್ತು ಜನಪ್ರತಿನಿಧಿ ಕಾಯಿದೆ (RPA) ಉಲ್ಲಂಘನೆಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ವರದಿ ಮಾಡಿದೆ. LAPRI ಪರವಾಗಿ ನಾವು ದೂರು ನೀಡಿದ್ದೇವೆ ಎಂದು ಜಿಯಾ ನೊಮಾನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.