
ಹಾಸನಾಂಬೆ ಉತ್ಸವ
ಹಾಸನಾಂಬೆ ಉತ್ಸವ: ಈ ಬಾರಿ ವಿಐಪಿ ಸಂಸ್ಕೃತಿಗೆ ಬ್ರೇಕ್, ಜನಸ್ನೇಹಿ ಆಚರಣೆಗೆ ಒತ್ತು
ಈ ಬಾರಿಯ ಉತ್ಸವದಲ್ಲಿ ಗಣ್ಯ ವ್ಯಕ್ತಿಗಳ ದರ್ಶನಕ್ಕೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ಸೌಲಭ್ಯ ಒದಗಿಸಲಾಗುವುದು.
ನಾಡಿನ ಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಈ ವರ್ಷದಿಂದ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಿ, ಜನಸ್ನೇಹಿ ಉತ್ಸವವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಹಾಸನ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಕಳೆದ ವರ್ಷಗಳಲ್ಲಿ ಗಣ್ಯರ ಓಡಾಟ ಮತ್ತು ಎಸ್ಕಾರ್ಟ್ ವಾಹನಗಳ ದಟ್ಟಣೆಯಿಂದ ಸ್ಥಳೀಯ ಭಕ್ತರಿಗೆ ಆಗುತ್ತಿದ್ದ ತೊಂದರೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಜನಸಾಮಾನ್ಯರಿಗೆ ಆದ್ಯತೆ ನೀಡಿ, ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಗಣ್ಯರಿಗೆ ಕಟ್ಟುನಿಟ್ಟಿನ ನಿಯಮ
ಈ ಬಾರಿಯ ಉತ್ಸವದಲ್ಲಿ ಗಣ್ಯ ವ್ಯಕ್ತಿಗಳ ದರ್ಶನಕ್ಕೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ಸೌಲಭ್ಯ ಒದಗಿಸಲಾಗುವುದು. ಉಳಿದಂತೆ ಸಚಿವರು, ಶಾಸಕರು, ನ್ಯಾಯಾಧೀಶರು, ಕ್ರೀಡಾಪಟುಗಳು ಹಾಗೂ ಸಿನಿಮಾ ತಾರೆಯರು ಸೇರಿದಂತೆ ಇತರೆ ಗಣ್ಯರು ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಇ-ಮೇಲ್ ಅಥವಾ ದೂರವಾಣಿ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅಂತಹ ಗಣ್ಯರಿಗೆ ಜಿಲ್ಲಾಡಳಿತವೇ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ, ದೇಗುಲಕ್ಕೆ ಕರೆತಂದು ದರ್ಶನಕ್ಕೆ ಅನುವು ಮಾಡಿಕೊಡಲಿದೆ. ಗಣ್ಯರೊಂದಿಗೆ ಕುಟುಂಬದ ನಾಲ್ವರು ಸದಸ್ಯರಿಗೆ ಮಾತ್ರ ಅವಕಾಶವಿದ್ದು, ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳಿಗೆ ದೇವಾಲಯದ ಬಳಿ ಪ್ರವೇಶವಿರುವುದಿಲ್ಲ.
ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ
ಸಾರ್ವಜನಿಕರ ಅನುಕೂಲಕ್ಕಾಗಿ 1,000 ಮತ್ತು 300 ರೂಪಾಯಿ ಮುಖಬೆಲೆಯ ವಿಶೇಷ ದರ್ಶನದ ಪಾಸ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಈ ಪಾಸ್ ಪಡೆದವರಿಗೆ ದೇವರ ದರ್ಶನದ ಜೊತೆಗೆ ಪ್ರಸಾದವನ್ನೂ ನೀಡಲಾಗುತ್ತದೆ. ಒಂದು ಪಾಸ್‌ಗೆ ಒಬ್ಬರಿಗೆ ಮಾತ್ರ ಪ್ರವೇಶಾವಕಾಶವಿದೆ. ಎಸ್ಕಾರ್ಟ್ ಸೌಲಭ್ಯವಿರುವ ಗಣ್ಯರಿಗೆ ಬೆಳಗ್ಗೆ 10.30 ರಿಂದ 12.30ರವರೆಗೆ ಮತ್ತು ಪಾಸ್ ಹೊಂದಿರುವ ಭಕ್ತರಿಗೆ ಬೆಳಗ್ಗೆ 7:30 ರಿಂದ 10 ಗಂಟೆಯವರೆಗೆ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ಪ್ರತಿದಿನ ಕೇವಲ 1,000 ಪಾಸ್‌ಗಳನ್ನು ಮಾತ್ರ ವಿತರಿಸಲಾಗುತ್ತಿದ್ದು, ಸಮಯ ಮೀರಿ ಬರುವವರಿಗೆ ಅವಕಾಶವಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ
ಅಕ್ಟೋಬರ್ 9 ರಿಂದಲೇ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಇದಕ್ಕಾಗಿ ಮೂರು ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಒಂದು ವೇದಿಕೆಯಲ್ಲಿ 'ಜಾನಪದ ಜಾತ್ರೆ' ನಡೆಯಲಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ಜಾನಪದ ಕಲಾವಿದರು ತಮ್ಮ ಪ್ರದರ್ಶನ ನೀಡಲಿದ್ದಾರೆ. ಉಳಿದೆರಡು ವೇದಿಕೆಗಳಲ್ಲಿ ಸ್ಥಳೀಯ ಯುವ ಪ್ರತಿಭೆಗಳು ಹಾಗೂ ಕಲಾವಿದರಿಗೆ ಅವಕಾಶ ನೀಡಲಾಗುವುದು. ಇದರೊಂದಿಗೆ ಟೆಲಿ-ಟೂರಿಸಂ, ಫಲಪುಷ್ಪ ಪ್ರದರ್ಶನ ಹಾಗೂ ಸ್ತ್ರೀಶಕ್ತಿ ಸಂಘಗಳ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ 'ಹಾಸನಾಂಬ ಟೂರ್ ಪ್ಯಾಕೇಜ್' ಆರಂಭಿಸುವ ಚಿಂತನೆಯೂ ಇದೆ.
ಭದ್ರತೆ ಮತ್ತು ಜನಸಂದಣಿ ನಿರ್ವಹಣೆ
ವರ್ಷದಿಂದ ವರ್ಷಕ್ಕೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ ವರ್ಷ 20 ಲಕ್ಷ ಜನರು ಭೇಟಿ ನೀಡಿದ್ದು, ಈ ಬಾರಿ 25 ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಣ ಹಾಗೂ ಭದ್ರತೆಗೆ ವಿಶೇಷ ಒತ್ತು ನೀಡಲಾಗಿದೆ. 2,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, 280ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡ್ರೋನ್ ಕ್ಯಾಮೆರಾಗಳ ಮೂಲಕವೂ ನಿಗಾ ವಹಿಸಲಾಗುವುದು. ಕಣ್ಗಾವಲು ವ್ಯವಸ್ಥೆಗೆ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸ್ಥಳದಲ್ಲೇ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.