ಹಾಸನ ಪೆನ್‌ಡ್ರೈವ್‌ ಪ್ರಕರಣ | ದೂರು ದಾಖಲು, ಎಸ್‌ ಐಟಿ ತನಿಖೆಗೆ ಸಿಎಂಗೆ ಶಿಫಾರಸು
x

ಹಾಸನ ಪೆನ್‌ಡ್ರೈವ್‌ ಪ್ರಕರಣ | ದೂರು ದಾಖಲು, ಎಸ್‌ ಐಟಿ ತನಿಖೆಗೆ ಸಿಎಂಗೆ ಶಿಫಾರಸು

ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗ, ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.


ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗ, ತನಿಖೆಗೆ ಪ್ರತ್ಯೇಕ ಎಸ್ಐಟಿ (ವಿಶೇಷ ತನಿಖಾ ತಂಡ) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಹಾಸನ ಲೋಕಸಭಾ ಅಭ್ಯರ್ಥಿಯೊಬ್ಬರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್ ಡ್ರೈವ್‌ಗಳಲ್ಲಿ ಹಲವು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡ ದೃಶ್ಯಾವಳಿಗಳು ಇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ದೃಶ್ಯಾವಳಿಗಳ ಕ್ಲಿಪಿಂಗ್ ಮತ್ತು ಫೋಟೋಗಳನ್ನು ಜಾಲತಾಣಗಳಲ್ಲಿ ಮತ್ತು ವಾಟ್ಸಪ್ಗಳಲ್ಲಿ ಹಂಚಲಾಗುತ್ತಿದೆ. ಇದರಿಂದಾಗಿ ಪ್ರಭಾವಿ ವ್ಯಕ್ತಿಗೆ ಬಲಿಪಶುಗಳಾಗಿರುವ ಮಹಿಳೆಯರ ಘನತೆ ಮತ್ತು ಸಾಮಾಜಿಕ ಬದುಕಿಗೆ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಆಯೋಗ ಕೂಡಲೇ ಮಧ್ಯಪ್ರವೇಶಿಸಿ ಕ್ರಮ ಜರುಗಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಆಯೋಗ ಈ ಪತ್ರ ಬರೆದಿದೆ.

ಈ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ಡಾ. ನಾಗಲಕ್ಷ್ಮಿ ಚೌಧರಿ ಅವರು, “ಇದೊಂದು ಆಘಾತಕಾರಿ ಪ್ರಕರಣ. ವ್ಯಕ್ತಿ ಹೆಣ್ಣುಮಕ್ಕಳನ್ನು ಬಳಸಿಕೊಂಡು ಎಸಗಿರುವ ಕೃತ್ಯ ಎಷ್ಟು ಹೇಯ ಅಪರಾಧ ಕೃತ್ಯವೋ, ಅಂತಹ ದೃಶ್ಯಾವಳಿ, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹೆಣ್ಣುಮಕ್ಕಳ ಘನತೆ ಮತ್ತು ಸಾಮಾಜಿಕ ಬದುಕಿಗೆ ಧಕ್ಕೆ ತರುವುದು ಕೂಡ ಅಷ್ಟೇ ಹೇಯ ಅಪರಾಧವಾಗುತ್ತದೆ. ಆ ಹಿನ್ನೆಲೆಯಲ್ಲಿ ಘಟನೆಯ ಕುರಿತು ದೂರು ಬಂದ ಬೆನ್ನಲ್ಲೇ ಈ ಬಗ್ಗೆ ಪ್ರತ್ಯೇಕ ಎಸ್ ಐಟಿ ರಚಿಸಿ ತನಿಖೆ ನಡೆಸುವಂತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಚಿತ್ರಗಳನ್ನು ತಡೆ ಹಿಡಿಯಲು ಕ್ರಮ ಜರುಗಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ” ಎಂದು ಮಾಹಿತಿ ನೀಡಿದರು.


ಅಲ್ಲದೆ, “ಮಹಿಳಾ ಸಂಘಟನೆಗಳು ನೀಡಿದ ದೂರಿನ ಆಧಾರದ ಮೇಲೆ ಕೂಡಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ ಪತ್ರ ಬರೆದು ತುರ್ತು ಕ್ರಮ ಜರುಗಿಸುವಂತೆ ಕೋರಿದ್ದೇನೆ. ಕೃತ್ಯ ಎಸಗಿರುವವರು ಮತ್ತು ಕೃತ್ಯದ ವಿಡಿಯೋ, ಚಿತ್ರಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿರುವವ ವಿರುದ್ಧ ತನಿಖೆಯಾಗಬೇಕು ಮತ್ತು ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಕಠಿಣ ಕಾನೂನುಗಳಡಿ ಅತಿ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಲಾಗಿದೆ” ಎಂದು ಅವರು ವಿವರಿಸಿದರು.

ರಾಜ್ಯ ಮಹಿಳಾ ಆಯೋಗದ ಪತ್ರದಲ್ಲಿ ಏನಿದೆ?

ಆಯೋಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಪ್ರಕರಣದ ಕುರಿತು ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಯೋಗ ನೀಡಿರುವ ದೂರಿನ ಕುರಿತು ಪ್ರಸ್ತಾಪಿಸಿದೆ.

"ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಯೋಗ ದೂರು ಸಲ್ಲಿಸಿದ್ದು, ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್‌ನಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಕುರಿತು ತಿಳಿಸಿರುತ್ತಾರೆ. ಅಲ್ಲದೆ ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ, ಕೆಲವರ ಮೇಲೆ ಅತ್ಯಾಚಾಋ ಸಹ ಮಾಡುತ್ತಿರುವ ತುಣುಕುಗಳಿರುವ ಪೆನ್‌ಡ್ರೈವ್‌ಗಳು ಈಗ ಜನಸಾಮಾನ್ಯರ ಕೈಗೆ ಸಿಕ್ಕಿ ಇಡೀ ಸಮಾಜವೇ ತಲೆ ತಗ್ಗಿಸುವ ಸ್ಥಿತಿ ಏರ್ಪಟ್ಟಿದೆ. ಮಹಿಳೆಯರ ಬದುಕು ಮತ್ತು ಘನತೆಯನ್ನು ನಾಶ ಮಾಡುತ್ತಿರುವುದಾಗಿ, ಈ ಕೃತ್ಯಕ್ಕೆ ಕಾರಣರಾಗಿರುವವರ ವಿರುದ್ಧ ಸೂಕ್ತ ಪೊಲೀಸ್‌ ತನಿಖೆಯನ್ನು ನಡೆಸುವಂತೆ ಆಯೋಗಕ್ಕೆ ಮನವಿ ಮಾಡಿರುತ್ತಾರೆ" ಎಂದು ಆಯೋಗದ ಪತ್ರದಲ್ಲಿ ಹೇಳಲಾಗಿದೆ.

"ಹಾಸನ ಜಿಲ್ಲೆಯಲ್ಲಿ ಪೆನ್‌ ಡ್ರೈವ್‌ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಹಲವು ಮಹಿಳೆಯರನ್ನು ಬಲವಂತದಿಂದ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸುವ ಮೂಲಕ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಅದನ್ನು ಸಾರ್ವಜನಿಕಗೊಳಿಸಿದ ವ್ಯಕ್ತಿಯನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಮಾನಹಾನಿ ಉಂಟು ಮಾಡಿದವರನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಮತ್ತು ಮಹಿಳೆಯರ ಮೇಲೆ ನೀಚ ಕೃತ್ಯವೆಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ" ಎಂದು ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿ ಅವರು ಸಹಿ ಮಾಡಿದ ಪತ್ರದಲ್ಲಿ ಹೇಳಲಾಗಿದೆ.

ಏನಿದು ಪೆನ್‌ ಡ್ರೈವ್‌ ಪ್ರಕರಣ?

ಹಾಸನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಯೊಬ್ಬರು ಭಾಗಿಯಾಗಿದ್ದಾರೆ ಎನ್ನಲಾದ ನೂರಾರು ಲೈಂಗಿಕ ಘಟನೆಗಳನ್ನು ಒಳಗೊಂಡ ಪೆನ್ ಡ್ರೈವ್ ಗಳು ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ರಾತ್ರೋರಾತ್ರಿ ಈ ಪೆನ್ ಡ್ರೈವ್ ಗಳನ್ನು ಕ್ಷೇತ್ರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಎಸೆದುಹೋಗಲಾಗಿತ್ತು ಎನ್ನಲಾಗಿದೆ.

ಆದರೆ, ಈ ಪೆನ್ ಡ್ರೈವ್ ನಲ್ಲಿವೆ ಎಂದು ಹೇಳಲಾದ ದೃಶ್ಯ ಮತ್ತು ಚಿತ್ರಗಳು ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗಿವೆ. ಇದರಿಂದಾಗಿ ಹಲವು ಮಹಿಳೆಯರ ಘನತೆಗೆ ಮತ್ತು ಅವರ ಕೌಟುಂಬಿಕ ಬದುಕಿಗೆ ಧಕ್ಕೆ ಬಂದಿದೆ. ಕೆಲವು ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ ಮಹಿಳೆಯರ ಗುರುತು ಮರೆಮಾಚದೆ ನೇರವಾಗಿ ಈ ದೃಶ್ಯ ಮತ್ತು ಚಿತ್ರಗಳನ್ನು ಹಂಚುತ್ತಿರುವುದರಿಂದ ಇದು ಮಹಿಳೆಯರ ಬದುಕಿಗೆ ಅಪಾಯ ತಂದಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಹಾಸನ ಲೋಕಸಭಾ ಚುನಾವಣಾ ಕಣದಲ್ಲಿಯೂ ಈ ಪೆನ್ ಡ್ರೈವ್ ಭಾರೀ ಸಂಚಲನ ಮೂಡಿಸಿವೆ.

ಮಹಿಳೆಯರ ಬದುಕು ಮತ್ತು ಘನತೆಯನ್ನು ಪರಿಗಣಿಸದೆ ಹೀನ ಕೃತ್ಯದ ವಿಡಿಯೋ ಮತ್ತು ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚುತ್ತಿರುವುದು ಆತಂಕಕಾರಿ ಸಂಗತಿ. ಮಹಿಳೆಯರ ಘನತೆಗೆ ಮತ್ತು ಅವರ ಬದುಕಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಮಹಿಳಾ ಆಯೋಗ ಕೂಡಲೇ ಮಧ್ಯಪ್ರವೇಶ ಮಾಡಿ ಕ್ರಮ ಜರುಗಿಸಬೇಕು ಎಂದು ಮಹಿಳಾ ಸಂಘಟನೆಗಳು ಆಯೋಗದ ಮೊರೆ ಹೋಗಿದ್ದವು.

ಈ ನಡುವೆ, ಪೆನ್‌ ಡ್ರೈವ್‌ ಪ್ರಕರಣ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ ಅಭ್ಯರ್ಥಿಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಮೂರು ದಿನಗಳ ಹಿಂದೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಜಿಲ್ಲಾ ಮುಖಂಡರೊಬ್ಬರು, ತಾವು ಈ ಸಂಬಂಧ ಪಕ್ಷದ ಮುಖಂಡರಿಗೆ ಪತ್ರ ಬರೆದು, ಪಕ್ಷಕ್ಕೆ ಮುಜುಗರ ಎದುರಾಗಬಹುದು ಎಂದು ಎಚ್ಚರಿಸಿದ್ದೆ ಎಂದಿದ್ದರು. ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಅವರ ತಾಯಿ ಅನುಪಮಾ ಮಹೇಶ್‌ ಅವರು ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು. ಬುಧವಾರ ಹಾಸನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಪೆನ್‌ ಡ್ರೈವ್‌ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಲಿ ಎಂದು ಹೇಳಿದ್ದರು.

Read More
Next Story