ಪೆನ್‌ಡ್ರೈವ್‌ ಹಗರಣ | ಎಸ್‌ಐಟಿ ರಚನೆ: ಬಿ ಕೆ ಸಿಂಗ್‌ ನೇತೃತ್ವದ ತಂಡಕ್ಕೆ ತನಿಖೆ ಹೊಣೆ
x

ಪೆನ್‌ಡ್ರೈವ್‌ ಹಗರಣ | ಎಸ್‌ಐಟಿ ರಚನೆ: ಬಿ ಕೆ ಸಿಂಗ್‌ ನೇತೃತ್ವದ ತಂಡಕ್ಕೆ ತನಿಖೆ ಹೊಣೆ

ಹಾಸನ ಲೈಂಗಿಕ ಹಗರಣದ ವಿಡಿಯೋಗಳನ್ನು ಎಫ್‌ಎಸ್‌ಎಲ್‌ ಗೆ ವಿಡಿಯೋ ರವಾನಿಸಲು ವಿಶೇಷ ತನಿಖಾ ತಂಡ ಮುಂದಾಗಿದೆ


ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ವಿಡಿಯೋಗಳನ್ನು ವಿಶೇಷ ತನಿಖಾ ತಂಡವು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಗೆ ರವಾನಿಸಿ ತನಿಖೆ ಆರಂಭಿಸಲು ಸಿದ್ದವಾಗಿದೆ‌.

ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬರುತ್ತಿರುವ ಲೈಂಗಿಕ ಹಗರಣದ ಸಂಬಂಧ ರಾಜ್ಯ ಸರ್ಕಾರ ಇಂದು ಭಾನುವಾರ ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

ತನಿಖಾ ತಂಡ ರಚಿಸುವ ಬಗ್ಗೆ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದ್ದು, "ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಖಾಸಗೀ ವಿಡಿಯೋಗಳು ಮಾಧ್ಯಮದಲ್ಲಿ ಪ್ರಚಾರವಾಗಿದ್ದು, ಅಲ್ಲದೆ, ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸುತ್ತಿರುವ, ಹಾಗೂ ಅದರ ಚಿತ್ರೀಕರಣ ಮಾಡಿ, ಮಹಿಳೆಯರ ಘನತೆಗೆ ಹಾನಿಯುಂಟು ಮಾಡುವವರನ್ನು ಶೀಘ್ರವಾಗಿ ಪತ್ತೆ ಮಾಡಲು ಮಹಿಳಾ ಆಯೋಗದ ಅಧ್ಯಕ್ಷರು ಕೋರಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ" ಎಂದು ತಿಳಿಸಿದೆ.

ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ ಎಸ್ಐಟಿಯಲ್ಲಿ ಐಪಿಎಸ್‌ ಸುಮನ್‌ ಡಿ ಪೆನ್ನೇಕರ್‌, ಇನ್ನೋರ್ವ ಐಪಿಎಸ್‌ ಅಧಿಕಾರಿ ಸೀಮಾ ಲಾಠ್ಕರ್‌ ಅವರು ಸದಸ್ಯರಾಗಿರಲಿದ್ದಾರೆ. ಬಿ ಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಹಾಸನಕ್ಕೆ ತೆರಳಿ ತನಿಖೆ ಆರಂಭಿಸಲಿದೆ.



ಪ್ರಕರಣದ ಸಂಬಂಧ ಹಾಸನದ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ಐಪಿಸಿ 354A, 354D, 506 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನು ಎಸ್‌ಐಟಿ ತಂಡ ಸಮಗ್ರವಾಗಿ ತನಿಖೆ ನಡೆಸಲಿದೆ ಎಂದು ಸರ್ಕಾರ ತಿಳಿಸಿದೆ.

ಎಡಿಜಿಪಿ ಬಿ.ಕೆ ಸಿಂಗ್ ಅವರು ಈ ಹಿಂದೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಮುಖ್ಯಸ್ಥರಾಗಿದ್ದರು.

ಹಾಸನ ಲೈಂಗಿಕ ಹಗರಣ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಅಲ್ಲದೆ ಈ ಬಗ್ಗೆ ಸರ್ಕಾರಕ್ಕೆ ಆಯೋಗದ ಅಧ್ಯಕ್ಷರು ಪತ್ರ ಕೂಡಾ ಬರೆದಿದ್ದರು. ಎಸ್‌ಐಟಿ ರಚಿಸಲು ಸರ್ಕಾರ ಮುಂದಾಗುತ್ತಿದ್ದಂತೆ ಆರೋಪಿ ಪ್ರಜ್ವಲ್‌ ರೇವಣ್ಣ ದೇಶ ತೊರೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

Read More
Next Story