ಹಾಸನದಲ್ಲಿ ಮತ್ತೊಂದು ಅವಾಂತರ | ಮೂಳೆ ಚಿಕಿತ್ಸೆಗೆ ಬಂದ ವೃದ್ಧಗೆ ಮೆಹಂದಿ ಕೋನ್‌ ʼಔಷಧಿʼ ಕೊಟ್ಟ ನರ್ಸ್‌!
x

ಹಾಸನದಲ್ಲಿ ಮತ್ತೊಂದು ಅವಾಂತರ | ಮೂಳೆ ಚಿಕಿತ್ಸೆಗೆ ಬಂದ ವೃದ್ಧಗೆ ಮೆಹಂದಿ ಕೋನ್‌ ʼಔಷಧಿʼ ಕೊಟ್ಟ ನರ್ಸ್‌!


ಕಾಲು ಮುರಿದುಕೊಂಡು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ವಯೋವೃದ್ಧರಿಗೆ ದಾದಿಯೊಬ್ಬರು ಮೆಹಂದಿ ಕೋನ್‌ ʼಔಷಧಿʼ ಬರೆದುಕೊಟ್ಟ ಘಟನೆ ಹಾಸನದಲ್ಲಿ ನಡೆದಿದೆ.

ಕಾಲು ಮುರಿದುಕೊಂಡಿದ್ದ ಹಳ್ಳಿಯ ವಯೋವೃದ್ಧರೊಬ್ಬರು ಬ್ಯಾಂಡೇಜು ಹಾಕಿಸಿಕೊಂಡು ಹೋಗಲು ಹಾಸನದ ಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಬಂದಿದ್ದರು. ಅವರನ್ನು ಪರಿಶೀಲಿಸಿದ ಆಸ್ಪತ್ರೆಯ ದಾದಿಯೊಬ್ಬರು, ಆರು ಇಂಚಿನ ಕ್ರೇಪ್‌ ಬ್ಯಾಂಡೇಜ್‌ ಎರಡು ಮತ್ತು ಒಂದು ಮೆಹಂದಿ ಕೋನ್‌ ತೆಗೆದುಕೊಳ್ಳಲು ಚೀಟಿ ಬರೆದು ಕೊಟ್ಟಿದ್ದಾರೆ. ಆಸ್ಪತ್ರೆಯ ಅಧಿಕೃತ ಹೊರರೋಗಿಗಳ ಪ್ರಿಸ್ಕ್ರಿಪ್ಷನ್‌ ಚೀಟಿಯಲ್ಲಿ ಈ ಎರಡನ್ನು ನಮೂದಿಸಿ ಸಹಿ ಮಾಡಿ ಕೊಟ್ಟಿರುವ ದಾದಿ, ಆ ಎರಡೂ ʼಔಷಧಿಗಳುʼ ಆಸ್ಪತ್ರೆಯಲ್ಲಿ ಸಿಗುವುದಿಲ್ಲ, ಹೊರಗಡೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.

ಅಂದಾಜು 65 ವರ್ಷ ವಯಸ್ಸಿನ ಆ ಹಿರಿಯರು, ಬ್ಯಾಂಡೇಜು ಹಾಕಿದ ಕಾಲನ್ನೇ ಎಳೆದುಕೊಂಡು ಆಸ್ಪತ್ರೆಯ ಸುತ್ತಮುತ್ತಲಿನ ಮೆಡಿಕಲ್‌ ಶಾಪ್‌ಗಳಲ್ಲಿ ಚೀಟಿ ತೋರಿಸಿ ಔಷಧಿ ಕೇಳಿದ್ದಾರೆ. ಆದರೆ, ಬ್ಯಾಂಡೇಜ್‌ ಕ್ರೇಪ್‌ ಕೊಟ್ಟ ಅಂಗಡಿಯವರು, ಚೀಟಿಯಲ್ಲಿರುವ ಮೊದಲನೆಯದು ಔಷಧವಲ್ಲ; ಅದು ಮೆಹಂದಿ ಕೋನ್..‌ ,ಮೆಹಂದಿ ಹಾಕಿಕೊಳ್ಳುವುದು, ಅದನ್ನು ಯಾಕೆ ನಿಮಗೆ ಬರೆದುಕೊಟ್ಟಿದ್ದಾರೆ ? ಎಂದು ಅಜ್ಜನನ್ನು ಪ್ರಶ್ನಿಸಿದ್ದಾರೆ. ದಿಕ್ಕು ತೋಚದ ಅಜ್ಜ ಮತ್ತೆ ಮೆಡಿಕಲ್‌ ಶಾಪ್‌ಗಳಿಗೆ ಎಡತಾಕಿದ್ದಾರೆ. ಕೊನೆಗೆ ಯಾವುದೋ ಮೆಡಿಕಲ್‌ ಶಾಪ್‌ನವರು ಹೇಳಿದರೆಂದು ಬ್ಯಾಂಗಲ್ಸ್‌ ಸ್ಟೋರ್‌ನಲ್ಲೂ ಹೋಗಿ ಕೇಳಿದ್ದಾರೆ. ಬ್ಯಾಂಗಲ್ಸ್‌ ಸ್ಟೋರ್‌ನವರು ಅದು ಮೆಡಿಸಿನ್‌ ಚೀಟಿ, ನಮ್ಮಲ್ಲಿರುವ ಮೆಹಂದಿ ಕೋನ್‌ ಕೊಡುವುದಿಲ್ಲ ಎಂದು ಹೇಳಿ ವಾಪಸ್‌ ಕಳಿಸಿದ್ದಾರೆ.

ಕಾಲಿನ ಮೂಳೆ ಮುರಿದುಕೊಂಡು ಚಿಕಿತ್ಸೆಗೆ ಹೋಗಿದ್ದ ವಯೋವೃದ್ಧರೊಬ್ಬರಿಗೆ ಹಾಸನದ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಔಷಧಿ ಚೀಟಿಯಲ್ಲಿ ಮೆಹಂದಿ ಕೋನ್‌ ಬರೆದುಕೊಟ್ಟಿರುವುದು

ಅಷ್ಟರಲ್ಲಿ ಆ ಅಜ್ಜ, ಹಾಸನದ ಸಾಮಾಜಿಕ ಹೋರಾಟಗಾರ್ತಿ ಹಾಗೂ ಲೇಖಕಿ ಸುನೀತಾ ಹೆಬ್ಬಾರ್‌ ಅವರಿಗೆ ಅಚಾನಕ್ಕಾಗಿ ಸಿಕ್ಕಿದ್ದಾರೆ. ಅವರ ಬಳಿಕ ಅಜ್ಜ ಚೀಟಿ ತೋರಿಸಿ "ಇದೇನು ಎಂದು ಓದಿ ಹೇಳವ್ವ, ಇದನ್ನು ಕೇಳಿಕೊಂಡು ಅಲೆದು ಸಾಕಾಯ್ತು, ಎಷ್ಟು ಹೊತ್ತಿಂದ ಹುಡುಕುತ್ತಿದ್ದೇನೆ.. ವಸಿ ನೋಡಿ ಹೇಳವ್ವ ಅದೇನು ಅಂತ.." ಎಂದು ಕೇಳಿದ್ದಾರೆ. ಆಗ ಅವರು ಇದು ಮೆಹಂದಿ, ಅದನ್ನು ನಿಮಗೆ ಚಿಕಿತ್ಸೆಗೆ ಯಾಕೆ ಬಳಸುತ್ತಾರೆ? ಸುಮ್ಮನೆ ನಿಮಗೆ ಅಂಗಡಿ ಅಂಗಡಿ ಅಲೆಸಿದಾರೆ.. ಪಾಪ.. ಹೋಗಿ ಆ ನರ್ಸ್‌ ಅವರಿಗೇ ಕೇಳಿ.." ಎಂದು ಆಸ್ಪತ್ರೆಗೆ ಕಳಿಸಿದ್ದಾರೆ. ಈ ವಿಷಯವನ್ನು ಸ್ವತಃ ಸುನೀತಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಗ್ರಾಮೀಣ ಜನರನ್ನು ಅಲ್ಲಿನ ಸಿಬ್ಬಂದಿಗಳು ಹೇಗೆ ನಡೆಸಿಕೊಳ್ಳುತ್ತಾರೆ? ವಯೋವೃದ್ಧರು, ಓದು ಬರಹ ಗೊತ್ತಿಲ್ಲದವರು ಬಂದರೆ ಹೇಗೆ ಸತಾಯಿಸುತ್ತಾರೆ? ಎಂಥ ನಿರ್ಲಕ್ಷ್ಯ ಮತ್ತು ಉದಾಸೀನ ಧೋರಣೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಂಡವವಾಡುತ್ತಿದೆ ಎಂಬುದಕ್ಕೆ ಇದು ನಿದರ್ಶನ. ಹಾಸನ ಎಂದರೆ ಈಗೀಗ ಭಯಪಡುವಂತಾಗಿದೆ.. ಏನೇನೋ ಕಾರಣಕ್ಕೆ ನಿತ್ಯ ಹಾಸನ ಸುದ್ದಿಯಾಗ್ತಿದೆ. .ಏನು ಹೇಳೋಣ ಇದಕ್ಕೆಲ್ಲಾ.. ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಈ ಬಗ್ಗೆ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಸುನೀತಾ ಹೆಬ್ಬಾರ್‌, "ಕಾಲು ಮುರಿದುಕೊಂಡು ಬ್ಯಾಂಡೇಜ್‌ ಹಾಕಿಸಿಕೊಂಡು ನಡೆಯಲಾಗದೆ ನಡೆಯುತ್ತಿದ್ದ ಹಳ್ಳಿಯ ಆ ಅಜ್ಜ, ಪಾಪ ಅಂಗಡಿ ಅಂಗಡಿ ಅಲೆದು ಕೊನೆಗೆ ನನ್ನ ಹತ್ತಿರ ಬಂದರು. ಆ ಚೀಟಿಯಲ್ಲಿರುವುದನ್ನು ನೋಡಿ ನನಗೆ ಅಚ್ಚರಿಯಾಯ್ತು. ಮೂಳೆ ಸಮಸ್ಯೆಗೂ ಮೆಹಂದಿಗೂ ಏನು ಸಂಬಂಧ. ನಮ್ಮ ಆಸ್ಪತ್ರೆಯ ಸಿಬ್ಬಂದಿ ಎಷ್ಟು ಗಮನ ಕೊಟ್ಟು ರೋಗಿಗಳ ಆರೈಕೆ ಮಾಡುತ್ತಾರೆ? ಎಷ್ಟು ಕಾಳಜಿಯಿಂದ ಔಷಧ ಬರೆದುಕೊಡುತ್ತಾರೆ? ಎಂಬುದಕ್ಕೆ ಇದೊಂದು ಉದಾಹರಣೆ. ಆದರೆ, ಪಾಪ ಆ ಅಜ್ಜನನ್ನು ನೋಡಿ ತುಂಬಾ ಬೇಸರವಾಯ್ತು.. " ಎಂದು ಪ್ರತಿಕ್ರಿಯಿಸಿದರು.

ಮಂಗಳವಾರ ಮಧ್ಯಾಹ್ನ ವಯೋವೃದ್ಧರು ತಮ್ಮನ್ನು ಭೇಟಿ ಮಾಡಿದ್ದಾಗಿ ಅವರು ಖಚಿತಪಡಿಸಿದರು.

Read More
Next Story