ಹಾಸನ ಚಲೋ|  ಪಾಳೆಗಾರಿಕೆ ವಿರುದ್ಧ ಹೋರಾಟಗಾರರ ಆಕ್ರೋಶ
x

ಹಾಸನ ಚಲೋ| ಪಾಳೆಗಾರಿಕೆ ವಿರುದ್ಧ ಹೋರಾಟಗಾರರ ಆಕ್ರೋಶ


ಲೈಂಗಿಕ ಹಗರಣ ಪ್ರಕರಣದ ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣನನ್ನ ಕೂಡಲೇ ಬಂಧಿಸಬೇಕು ಹಾಗೂ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ‘ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ’ದ ವತಿಯಿಂದ ಇಂದು (ಮೇ 30) ‘ಹಾಸನದ ಕಡೆಗೆ ನಮ್ಮ ನಡಿಗೆ’ ಘೋಷವಾಕ್ಯದಡಿ ‘ಹಾಸನ ಚಲೋ’ ಬೃಹತ್ ಹೋರಾಟ ನಡೆಸಲಾಯಿತು. ಈ ಹೋರಾಟದಲ್ಲಿ ನಾಡಿನ ಎಲ್ಲ ಜನಪರ ಸಂಘಟನೆಗಳು ಭಾಗಿಯಾಗಿ ಹಾಸನ ಜಿಲ್ಲೆಯಲ್ಲಿನ ರೇವಣ್ಣ ಕುಟುಂಬದ ಪಾಳೆಗಾರಿಕೆ ಸಂಸ್ಕೃತಿ ವಿರುದ್ಧ ವಾಗ್ಧಾಳಿ ನಡೆಸಿದರು.

ಪ್ರಜ್ವಲ್‌ ಲೈಂಗಿಕ ಪ್ರಕರಣ ಖಂಡಿಸಿ ನಡೆದ ಹಾಸನ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರಸಿದ್ದನಗೌಡ ಪಾಟೀಲ್ ಅವರು, ʻʻದೇವೇಗೌಡರೇ, ಇನ್ನಾದ್ರೂ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿʼʼ ಎಂದು ಆಗ್ರಹಿಸಿದರು.

ʻʻನಾವಿಲ್ಲಿ ಸೇರಿರುವುದು ಹೆಮ್ಮೆಯ ಸಂಗತಿಯಲ್ಲವಾದರೂ ಇಂತಹ ಪರಿಸ್ಥಿತಿಯನ್ನು ಈ ಜಿಲ್ಲೆಯ ರಾಜಕೀಯ ಪರಿಸ್ಥಿತಿ ತಂದುಕೊಟ್ಟಿದೆ. ಜಾತಿಯ ಬಲದಿದಂದ, ಹಣದ ಬಲದಿಂದ ತಾನು ಇರುವ ಪ್ರದೇಶದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಪರಿಸ್ಥಿತಿ ಇಂದು-ನಿನ್ನೆಯದಲ್ಲ. ಹಾಸನದಲ್ಲಿ ನಡೆದಿರುವ ಈ ದೌರ್ಜನ್ಯವನ್ನು ಸರ್ಕಾರದ ಹೆಗಲಿಗೆ ಬಿಡದೆ ಈ ರಾಜ್ಯದ ಜನಪರ ಚಳುವಳಿಗಳು ಜವಾಬ್ದಾರಿ ವಹಿಸಿ ಮಾಡುತ್ತಿರುವ ಹೋರಾಟ ಈ ರಾಜ್ಯದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿ ದೌರ್ಜನ್ಯ ಎಸಗಿದರೆ ನಾವು ಸುಮ್ಮನಿರುವುದಿಲ್ಲʼʼ ಎಂದು ಎಚ್ಚರಿಕೆ ನೀಡಿದರು.

ʻʻಇಲ್ಲಿ ಕ್ರಿಮಿನಲ್‌ಗಳು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಈ ದೇಶದಲ್ಲಿ ರಾಜಕಾರಣಿಗಳು ಆಗ್ತಾ ಇರುವ ಸಂದರ್ಭದಲ್ಲಿ ಜನಪರ ಸಂಘಟನೆಗಳು ವಾಚ್‌ಡಾಗ್ ರೀತಿ ಕೆಲಸ ಮಾಡಬೇಕಿದೆ.‌ ಹಾಸನದಲ್ಲಿ ಹಲವು ದಶಕಗಳ ಹಿಂದೆ ನಡೆದ ನುಗ್ಗೆಹಳ್ಳಿ ನೀರಿನ ಹೋರಾಟದ ಸಂದರ್ಭದಲ್ಲಿ ಅಲ್ಲಿನ ಹಳ್ಳಿಯ ಮಹಿಳೆಯರ ಮೇಲೂ ಪೊಲೀಸ್ ದೌರ್ಜನ್ಯ ಎಸಗಿಸುವಂತಹ, ಜೈಲಿಗಟ್ಟುವ ಕೆಲಸ ಮಾಡಿದ್ದ ದೇವೇಗೌಡರಿಗೆ ಇಲ್ಲಿನ ಜನ ಅಂದೇ ಸರಿಯಾದ ಪಾಠ ಕಲಿಸಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲʼʼ ಎಂದರು.

ʻʻದೇವೇಗೌಡರೇ ನೀವು ನಿಮ್ಮ ಮೊಮ್ಮಗನಿಗೆ ಒಂದು ಎಚ್ಚರಿಕೆ ಪತ್ರ ಬರೆದಿದ್ರಿ.., ಎಲ್ಲಿದ್ದರೂ ಬಂದು ಶರಣಾಗು ಅಂತ. ಆದರೆ, ನಾನು ನಿಮಗೆ ನೇರವಾಗಿ ಒಂದು ಮಾತನ್ನು ಹೇಳುತ್ತೇನೆ, ನಿಮಗೆ ನೈತಿಕತೆ ಇದ್ದರೆ ಈ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ, ಈ ನಾಡಿದ ಹೆಮ್ಮೆಯ ಪ್ರಧಾನಿ ಅನ್ನೋ ಹೆಸರನ್ನು ಪಡೆದಿದ್ದಿರಲ್ಲ ಅದನ್ನ ಉಳಿಸಿಕೊಳ್ಳಿ. 4ರಂದು ಫಲಿತಾಂಶ ಬಂದ ನಂತರ ದೇವೇಗೌಡರ ಕುಟುಂಬದ ದನಿಗಳು ಎನಾಗುತ್ತವೋ ಗೊತ್ತಿಲ್ಲ ಆದರೆ, ನಾವಂತೂ ನಿಮ್ಮ ಕೃತ್ಯವನ್ನು ಖಂಡಸದೆ, ತಕ್ಕ ಪಾಠವನ್ನು ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ಕೊಟ್ಟು ಹೋಗುತ್ತಿದ್ದೇವೆ. ಪ್ರಜ್ವಲನಂತಹ ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಒಗ್ಗಟ್ಟಿನ ಹೋರಾಟ ಮಾಡುತ್ತೇವೆʼʼ ಎಂದು ಗುಡುಗಿದರು.

ಹಿರಿಯ ನ್ಯಾಯವಾದಿ ಬಾಲನ್ ಮಾತನಾಡಿ, ʻʻರೇವಣ್ಣನಿಗೆ ಜಾಮೀನು ಕೊಡಲಾಗಿದೆ. ರಾಜ್ಯ ಸರ್ಕಾರ ಅದನ್ನು ಹೈಕೋರ್ಟ್ ನಲ್ಲಿ ಚಾಲೆಂಜ್ ಮಾಡಬೇಕಿತ್ತು. ಇನ್ನೂ ಯಾಕೆ ಮಾಡಿಲ್ಲ? ಪ್ರಜ್ವಲ್ ರೇವಣ್ಣನಿಗೂ ಹೀಗೆಯೇ ಜಾಮೀನು ಕೊಡುವ ಸಂಶಯ ಇದೆ. ರಾಜ್ಯ, ಕೇಂದ್ರ ಸರ್ಕಾರಗಳು ಪ್ರಜ್ವಲ್ ನನ್ನು ರಕ್ಷಿಸುತ್ತಿರುವ ಅನುಮಾನವಿದೆʼʼ ಎಂದರು.

ʻʻಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೊಂದ ಸಹೋದರಿಯರಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕು. ಐಪಿಸಿ ಕಾಯಿದೆ ಸೆಕ್ಷನ್ 357 ಅಡಿಯಲ್ಲಿ ಕೊಡಲು ಅವಕಾಶ ಇದೆʼʼ ಎಂದು ತಿಳಿಸಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಎಸ್ ಮಾತನಾಡಿ, ʻʻದೇವೇಗೌಡ್ರೆ.., ಮಹಿಳಾ ಮೀಸಲಾತಿ ಘೋಷಿಸಿದಾಗ ಇದ್ದ ಮಹಿಳಾ ಕಾಳಜಿ ಈಗ್ಯಾಕ್ಕಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ʻʻಈ ಸಮಾಜದ ಸ್ವಾಸ್ಥ್ಯವನ್ನು ಕೆಡೆಸಿ ಹೆಣ್ಣಿನ ಘನತೆಯನ್ನು ಕುಗ್ಗಿಸಿರುವ ವ್ಯಕ್ತಿಗೆ ನೀಡುವ ಶಿಕ್ಷೆ ಇಂತಹ ಕೆಲಸ ಮಾಡುವ ಯಾರಿಗೇ ಆದರೂ ಎಚ್ಚರಿಕೆಯ ಗಂಟೆ ಆಗಬೇಕು. ಯಾವ ಮಹಿಳೆಯ ಮೇಲೆ, ಯಾವ ಪುರುಷ ಬಲಾತ್ಕಾರ ಮಾಡಿ ಆಕೆ ಇರೋದೆ ನಮ್ಮ ಅನುಭೋಗಕ್ಕೆ ಎಂಬ ಮನಸ್ಥಿತಿಯ ಪ್ರಜ್ವಲನಂತಹ ವ್ಯಕ್ತಿಗೆ ತಕ್ಕ ಪಾಠ ಕಲಿಸಲು ಈ ಹೋರಾಟ ನಡಿತಿದೆ. ಹುಬ್ಬಳ್ಳಿಯ ನೇಹಾ ಹತ್ಯೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಅವರ ಚಮಚ ಸಂಘಟನೆಗಳು, ಬಿಜೆಪಿ ನಾಯಕರು ಸಾಲು ಸಾಲು ಪ್ರತಿಭಟನೆ ಮಾಡಿ ಆ ಕುಟುಂಬವನ್ನು ಭೇಟಿ ಮಾಡಿದವು. ಆದರೆ, ಇಂದು ಹಾಸನದ ಯಾವ ಹೆಣ್ಣುಮಕ್ಕಳನ್ನು ಸಾಂತ್ವಾನ ಮಾಡಲು ಯಾಕೆ ಬಂದಿಲ್ಲ. ಈ ರಾಜಕೀಯ ದೊಂದರಾಟವನ್ನು ನೋಡಿಕೊಂಡು ಯಾಕೆ ಸುಮ್ಮನಿದ್ದಾರೆ?ʼʼ ಎಂದು ಪ್ರಶ್ನೆ ಮಾಡಿದರು.

ʻʻಮಹಿಳಾ ಮೀಸಲಾತಿ ಪರಿಚಯಿಸಿದಾಗ ಮಹಿಳೆಯರ ಬಗ್ಗೆ ನಮಗೆ ಕಾಳಜಿ ಇದೆ ಅಂತ ದೇವೇಗೌಡರು ಹೇಳಿದರು. ಆದರೆ, ಮಾಜಿ ಪ್ರಧಾನಿ ಹಾಗೂ ಹಾಲಿ ಪ್ರಧಾನಿಯಲ್ಲಿ ಯಾಕೆ ಹಾಸನದ ಹೆಣ್ಣುಮಕ್ಕಳ ಬಗ್ಗೆ ಆ ಕಾಳಜಿ ಕಾಣುತ್ತಿಲ್ಲ? ಹಾಸನದ ಅಕ್ಕತಂಗಿಯರೇ ನಮ್ಮ ಹಕ್ಕುಗಳು ಯಾರ ಬಿಕ್ಷೆಯೂ ಅಲ್ಲ, ಹೋರಾಟದ ಫಲವಾಗಿ ನಮಗೆ ಸಿಕ್ಕಂತವು. ಈ ಸಂದರ್ಭದಲ್ಲಿ ಕೇರಳದ ವೀರ ಮಹಿಳೆ ನಂಗೇಲಿಯನ್ನು ನೆನೆಯಬೇಕು. ಸ್ತನ ತೆರಿಗೆ ವಿರುದ್ಧ ಒಬ್ಬಂಟಿಯಾಗಿ ಹೋರಾಡಿ ಸ್ತನವನ್ನೇ ಕತ್ತರಿಸಿ ಕೊಟ್ಟ ನಂಗೇಲಿ, ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಶತ್ರುಗಳ ರುಂಢ ಚಂಡಾಡಿದ ಜಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ನಮಗೆ ನೆನಪಾಗಲಿಬೇಕು. ಈ ದೌರ್ಜನ್ಯದ ಸಂಧರ್ಭದಲ್ಲೂ ನಾವೆಲ್ಲರೂ ಗಟ್ಟಿಯಾದ ಹೋರಾಟ ಮಾಡಬೇಕುʼʼ ಎಂದು ಕರೆಕೊಟ್ಟರು.

ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಮಾತನಾಡಿ, ʻʻಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಹಾಗೂ ಬಿಜೆಪಿಯವರು ಏನೂ ಗೊತ್ತಿರದವರಂತೆ ನುಣಚಿಕೊಂಡರು. ಈ ನುಣುಚುಕೋರರಿಗೆ ಈ ಹೋರಾಟ ಒಂದು ಪಾಠ ಕಲಿಸಲಿದೆʼʼ ಎಂದು ಎಚ್ಚರಿಸಿದರು.

ʻʻಅಪರಾಧಗಳ ಹೊಣೆ ಪ್ರತಿಬಾರಿಯೂ ಹೆಣ್ಣುಮಕ್ಕಳು ಹೊತ್ತುಕೊಳ್ಳುವುದು ಬೇಡ.. ಈ ನುಣುಚುಕೋರರನ್ನು ರಾಜಕೀಯದಿಂದ ನಿವೃತ್ತಿಗೊಳಿಸುವ ಹೋರಾಟ ಇದಾಗಿದೆ. ಹಿರಿಯ , ಮುತ್ಸದ್ದಿ ಎಂದು ಕರೆಯಿಸಿಕೊಳ್ಳುವ ದೇವೆಗೌಡರು, ಪ್ರಜ್ವಲ್ಲ ರೇವಣ್ಣನ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕು. ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದು ಬಂದು ದೌರ್ಜನ್ಯಕ್ಕೊಳಗಾದವರ ನ್ಯಾಯ ಕೇಳಬೇಕುʼʼ ಎಂದು ಕಿಡಿಕಾರಿದರು.

ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, ʻʻಹಾಸನ ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಎಲ್ಲರೂ ತಲೆತಗ್ಗಿಸುವಂಥದ್ದು, ಏಕೆಂದರೆ ಇದು ಹೋರಾಟದ ಕಣವಾಗಿದ್ದಂತಹ ಜಿಲ್ಲೆ, ರೈತ ಹೋರಾಟ, ದಲಿತ ಹೋರಾಟ, ಮಹಿಳಾ ಹೋರಾಟ ಮತ್ತು ಎಲ್ ಬಗೆಯ ಜನಪರ ಹೋರಾಟಗಳ ತಾಣವಾಗಿದ್ದ ಜಿಲ್ಲೆಯಲ್ಲಿ ಇಂಥ ಘೋರ ಪ್ರಕರಣ ನಡೆದಿರುವುದು ನಾಚಿಕೆಗೇಡುʼʼ ಎಂದು ಬೇಸರ ವ್ಯಕ್ತಪಡಿಸಿದರು.

ʻʻಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೊದಲಿಗೆ ಆರೋಪಿಗೂ ನಮ್ಮ ಕುಟುಂಬಕ್ಕೂ ಸಂಭಂಧವಿಲ್ಲ ಎಂದವರು ಈಗ ಪ್ರತಿ ದಿನ ಯಾಕೆ ಮೈಕ್‌ ಮುಂದೆ ಭಾಷಣ ಮಾಡುತ್ತಿದ್ದಾರೆ, ಕುಟುಂಬ ಪ್ರೇಮ ಯಾಕೆ ಉಕ್ಕಿ ಹರಿಯುತ್ತಿದೆ?ʼʼ ಎಂದು ತರಾಟೆಗೆ ತೆಗೆದುಕೊಂಡರು.

ʻʻಈ ವೇದಿಕೆಯಿಂದ ಪ್ರಧಾನ ಮಂತ್ರಿಗಳನ್ನು ನಾನು ಕೇಳುತ್ತಿದ್ಗದೇನೆ, ʻನಾನೇ ದೇವರು ಅಂತ ಹೇಳಿಕೊಳ್ಳುತ್ತಿರುವ ಪ್ರಧಾನ ಮಂತ್ರಿಗಳೇ ನೀವು ಹಾಸನಕ್ಕೆ ಬಂದು ನೊಂದವರ ಅಳಲು ಕೇಳಿ ಎಂದರು. ಆರೋಪಿ ಹೇಗೆ ದೇಶ ಬಿಟ್ಟು ಹಾರಿಹೋಗುತ್ತಾನೆ? ಯಾರ ಬೆಂಬಲ ಇತ್ತು? ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ರಾಜ್ಯ ಸರ್ಕಾರವೂ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ರಕ್ಷಣೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲೇಬೇಕು ಎಂದು ಈ ಹೋರಾಟದ ಮೂಲಕ ನಾವು ಆಗ್ರಹಿಸುತ್ತಿದ್ದೇವೆ. ಅಲ್ಲಿಯತನಕ ನಮ್ಮ ಹೋರಾಟ ಮುಂದುವರೆಯುತ್ತದೆ.ʼʼ ಎಂದು ಎಚ್ಚರಿಸಿದರು.

ರೈತ ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಮಾತನಾಡಿ, ʻʻಇಡೀ ನಾಗರೀಕ ಸಮಾಜವೇ ತಲೆತಗ್ಗಿಸಬೇಕಾದ ಪ್ರಕರಣ ಇದು. ಈ ದೇಶದಲ್ಲಿ ಕಾನೂನಿದೆ.ತಪ್ಪಿತಸ್ಥರು ಕಾನೂನಿಗೆ ಒಳಪಟ್ಟು ಶಿಕ್ಷೆಗೆ ಗುರಿಯಾಗಲೇಬೇಕು. ಅದನ್ನು ನೋಡಿಕೊಳ್ಳಲು ವ್ಯವಸ್ಥೆಯಿದೆ. ವ್ಯವಸ್ಥೆಯೇ ದಾರಿ ತಪ್ಪುದ್ರೆ ಅದನ್ನು ದಾರಿಗೆ ತರಲು ನಾವಿದ್ದೇವೆ. ಆ ಸಂದೇಶವನ್ನು ಈ ಹೋರಾಟ ಕೊಡುತ್ತಿದೆʼʼ ಎಂದರು.

ʻʻವಿಕೃತ ಲೈಂಗಿಕ ಹಗರಕ್ಕೆ ಸಮನಾಗಿ, ಅದರ ಜತೆಗೆ ಪೆನ್ಡ್ರೈವ್ ಹಂಚಿಕೆ ಇದೆಲ್ಲವೂ ಅಧಿಕಾರ, ಸಂಪತ್ತಿನ ಅಹಂಕಾರದಿಂದ ಮದದಿಂದ ನಡೆದಿದೆ. ಅದು ನಡೆಯಲ್ಲ ಅನ್ನೋ ಸಂದೇಶ ಕೊಡಲು ನಾವಿಂದು ಸೇರಿದ್ದೇವೆ. ಇದು ಹಾಸನಕ್ಕೆ ಮಾತ್ರ ಸೀಮಿತವಲ್ಲ. ಬಸವಣ್ಣ, ಕುವೆಂಪು ಹುಟ್ಟಿರುವ ನಾಡಿನಲ್ಲಿ, ಘನತೆ ಗೌರವಕ್ಕೆ ಚ್ಯುತಿ ತಂದಿರುವ ಈ ರೀತಿಯ ಪ್ರಕರಣಗಳು ಇನ್ನು ಮುಂದೆ ಎಲ್ಲಿಯೇ ನಡೆದರೂ ನಾವು ಬಿಡುವುದಿಲ್ಲ. ಮುಖ್ಯವಾಗಿಜೂನ್ 4ರಂದು ಪ್ರಜ್ವಲ್ ಗೆದ್ದರೂ ಆತನನ್ನು ರಾಜಿನಾಮೆ ಕೊಡಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟ ರೂಪುಗೊಳ್ಳಬೇಕುʼʼ ಎಂದು ಹೇಳಿದರು.

ಹೋರಾಟಗಾರ್ತಿ ರೂಪ ಹಾಸನ ಮಾತನಾಡಿ, ʻʻಇಲ್ಲಿ ನಡೆದಿರುವುದು ಕೇವಲ ಒಂದು ಲೈಂಗಿಕ ಹಗರಣವಲ್ಲ... ಇದು ವಿಕೃತ ಲೈಂಗಿಕ ಹತ್ಯಾಕಾಂಡ. ಹೆಣ್ಣುಮಕ್ಕಳ ಮಾನಪ್ರಾಣ ಕುಟುಂಬವನ್ನು ಪಣಕಿಟ್ಟು ಸಂಸದನೊಬ್ಬ ನಡೆಸಿರುವ ಕಾಮಕೃತ್ಯ. ಅದನ್ನ ವಿಡಿಯೋ ಮಾಡಿದ್ದು, ತನ್ನ ನಿರ್ಲಕ್ಷ್ಯದಿಂದ ಮತ್ತೊಬ್ಬರಿಗೆ ಸಿಗುವಂತೆ ಮಾಡಿದ್ದು, ಹಾಗೂ ಚುನಾವಣಾ ದಾಳವಾಗಿ ಬಳಸಿಕೊಂಡು ಹಂಚಿದವರು, ಆ ವಿಡಿಯೋಗಳನ್ನು ಇಟ್ಟುಕೊಂಡು ಬೇಖಾದಂತೆ ಬಳಸಿಕೊಂಡವರು.. ಹೀಗೆ ಎಲ್ಲ ಹಂತಗಳನ್ನು ಖಂಡಿಸಬೇಕಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻʻಎಷ್ಟೆಲ್ಲ ಹಂತಗಳಲ್ಲಿ ವಿಡಿಯೋ ಹರಿಬಿಡಲಾಗ್ತಿದೆ ಅನ್ನೋದು ಇಲ್ಲಿನ ಹೋರಾಟಗಾರರು, ಜನತೆಗೆ ಗೊತ್ತಿದೆ. ಇಲ್ಲಿನ ಹೆಣ್ಣುಮಕ್ಕಳ ಸಮಾದಿ ಕಟ್ಟಲಾಗುತ್ತಿದ್ದು, ಹೆಣ್ಣುಮಕ್ಕಳ ಜರ್ಜರಿತರಾಗಿ ಸ್ಥಿತಿಯನ್ನು ನೋಡಿ ನೊಂದಿದ್ದೇವೆ. ಅತ್ಯಂತ ತಳಸಮುದಾಯದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಪ್ರಜ್ವಲ್ ತನ್ನ ಕಾಮಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಹಾಗಾಗಿ, ನಿಮ್ಮೊಂದಿಗೆ ನಾವಿದ್ದೇವೆ, ನೊಂದ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಬಂದು ಎಸ್ಐಟಿ ಮುಂದೆ ನಿಮ್ಮ ದೂರು ದಾಖಲಿಸಿʼʼ ಎಂದು ಕರೆ ಕೊಟ್ಟರು.

ʻʻಸರ್ಕಾರಗಳೇ ಜವಾಬ್ದಾರಿಯಿಂದ ವರ್ತಿಸಿ ಇನ್ನೂ ಪ್ರಜ್ವಲ್ ರೇವಣ್ಣನನ್ನು ರಕ್ಷಿಸುತ್ತಿರುವ ರಾಜ್ಯ ಕೇಂದ್ರ ಸರ್ಕಾರಗಳು, ಪರಸ್ಪರ ಕೆಸರೆರಚಾಟ ನಡೆಸುತ್ತಿರು ರಾಜಕೀಯ ನಾಯಕರು ಅದನ್ನು ನಿಲ್ಲಿಸಿ ಇನ್ನಾದರೂ ಅದನ್ನೆಲ್ಲ ನಿಲ್ಲಿಸಿ. ತಕ್ಷಣ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ. ಅಲ್ಲದೆ, ಇಂದಿಗೂ ಈ ಕ್ಷಣಕ್ಕೂ ವಿಡಿಯೋ ಹರಿಬಿಡುತ್ತಿರುವವರನ್ನು ಎಡೆಮುರಿಕಟ್ಟಿ, ಪ್ರಕರಣಕ್ಕೆ ಅಂತ್ಯ ಹಾಡಿ. ಇಲ್ಲದಿದ್ದರೆ ಸರ್ಕಾರಗಳ ಮೇಲೆ ನಂಬಿಕೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ನಿಮ್ಮ ರಾಜಕೀಯ ನಿಲ್ಲಿಸಿ. ಹೆಣ್ಣುಮಕ್ಕಳ ಸಮಾಧಿಯ ಮೇಲೆ ಭವ್ಯ ಬಂಗಲೆ ಕಟ್ಟುತ್ತಿರುವುದನ್ನು ನಿಲ್ಲಿಸಿ. ಸರ್ಕಾರಗಳು ಇನ್ನಾದರೂ ಜವಾಬ್ದಾರಿಯಿಂದ ವರ್ತಿಸದಿದ್ದರೆ ಅಂತಹ ಸರ್ಕಾರಗಳ ವಿರುದ್ಧ ಮತ್ತೊಂದು ರೀತಿಯ ಗಟ್ಟಿತನದ ಹೋರಾಟವನ್ನು ಕಟ್ಟಬೇಕಾಗುತ್ತದೆʼʼ ಎಂದು ಎಚ್ಚರಿಕೆ ನೀಡಿದರು.

Read More
Next Story