ಅತ್ಯಾಚಾರ ಪ್ರಕರಣ | ಆರೋಪಿ ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಕೋರಿ ಕೇಂದ್ರಕ್ಕೆ ಎಸ್‌ಐಟಿ ಪತ್ರ
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪಿ ಹಾಗೂ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನ ಪಾಸ್ಪೋರ್ಟ್ ರದ್ದುಪಡಿಸುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಜ್ವಲ್ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳನ್ನು ಒಳಗೊಂಡ ಪೆನ್ಡ್ರೈವ್ಗಳು ಜನಸಾಮಾನ್ಯರ ಕೈಸೇರಿದ್ದವು. ಆ ಹಿನ್ನೆಲೆಯಲ್ಲಿ ಸಂತ್ರಸ್ತೆಯರು ಪೊಲೀಸ್ ದೂರು ದಾಖಲಿಸಿದ್ದರು. ನೂರಾರು ಮಹಿಳೆಯರಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ವೈರಲ್ ಆಗಿವೆ ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್ಐಟಿ(ವಿಶೇಷ ತನಿಖಾ ತಂಡ) ರಚಿಸಿತ್ತು. ಆದರೆ, ಎಸ್ಐಟಿ ರಚನೆಗೂ ಮುನ್ನವೇ ಸಂಸದ ಪ್ರಜ್ವಲ್ ಮತದಾನದ ದಿನ(ಏ.26) ರಾತ್ರಿಯೇ ವಿದೇಶಕ್ಕೆ ಪರಾರಿಯಾಗಿದ್ದ.
ಆ ಹಿನ್ನೆಲೆಯಲ್ಲಿ ಆತನ ಬಳಿ ಇರುವ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಿ ಆತ ವಾಪಸ್ ಬಂದು ತನಿಖೆಗೆ ಸಹಕರಿಸುವಂತೆ ಮಾಡಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೇ 1ರಂದೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ, ಪಾಸ್ಪೋರ್ಟ್ ರದ್ದತಿಗೆ ಕೋರಿ 20 ದಿನಗಳಾದರೂ ಪ್ರಧಾನಿ ಮೋದಿಯವರಾಗಲೀ, ಅವರ ನೇತೃತ್ವದ ಕೇಂದ್ರ ಸರ್ಕಾರವಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೊಳೆನರಸೀಪುರ ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯ ಸಿಐಡಿ ಠಾಣೆಗಳಲ್ಲಿ ಪ್ರತ್ಯೇಕ ಅತ್ಯಾಚಾರ, ಲೌಂಗಿಕ ದೌರ್ಜನ್ಯ, ಬೆದರಿಕೆಯಂತಹ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ಗಂಭೀರತೆ ಹಿನ್ನೆಲೆಯಲ್ಲಿ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಆತ ಕಳೆದ 25 ದಿನಗಳಿಂದ ಜರ್ಮನಿ, ಬ್ರಿಟನ್, ಸೌದಿ ಸೇರಿದಂತೆ ವಿದೇಶಗಳಲ್ಲಿ ರಾಜಾರೋಷವಾಗಿ ಮೋಜು ಮಾಡಿಕೊಂಡು ಇದ್ದಾನೆ. ಆ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ವಾರಂಟ್ ಜಾರಿಯಾಗಿದೆ. ಈಗಾಗಲೇ ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿದೆ.
ಇದೀಗ ಎಸ್ಐಟಿಯು, ಕೇಂದ್ರ ಸರ್ಕಾರ ಆರೋಪಿ ಪ್ರಜ್ವಲ್ಗೆ ನೀಡಿರುವ ರಾಜತಾಂತ್ರಿಕ ಪಾಸ್ಪೋರ್ಟನ್ನು ರದ್ದುಪಡಿಸುವಂತೆ ಕೋರಿ ಎಸ್ಐಟಿಯು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಪತ್ರದೊಂದಿಗೆ ಬ್ಲೂ ಕಾರ್ನರ್ ನೋಟಿಸ್., ನ್ಯಾಯಾಲಯದ ವಾರಂಟ್ ಪ್ರತಿ ಹಾಗೂ ಇತರ ಅಗತ್ಯ ದಾಖಲೆಗಳನ್ನು ಕೂಡ ಲಗತ್ತಿಸಲಾಗಿದೆ ಎಂದು ಎಸ್ ಐಟಿ ಹೇಳಿದೆ.