ವಿಪ್ ಉಲ್ಲಂಘನೆ: ಹಾಸನ ಮೇಯರ್ ಚಂದ್ರೇಗೌಡ ಸದಸ್ಯತ್ವ ಅನರ್ಹ, ಹೇಮಲತಾ ನೂತನ ಮೇಯರ್
x

ವಿಪ್ ಉಲ್ಲಂಘನೆ: ಹಾಸನ ಮೇಯರ್ ಚಂದ್ರೇಗೌಡ ಸದಸ್ಯತ್ವ ಅನರ್ಹ, ಹೇಮಲತಾ ನೂತನ ಮೇಯರ್

ಮೇಯರ್ ಚಂದ್ರೇಗೌಡ ಅವರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು.


ಹಾಸನ ಮಹಾನಗರ ಪಾಲಿಕೆ ಮೇಯರ್ ಚಂದ್ರೇಗೌಡ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಪಕ್ಷದ ವಿಪ್ ಉಲ್ಲಂಘನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದರ ಪರಿಣಾಮವಾಗಿ ಅವರು ತಮ್ಮ ಮೇಯರ್ ಹುದ್ದೆಯನ್ನು ಕಳೆದುಕೊಂಡಿದ್ದಾರೆ.

ತೆರವಾದ ಮೇಯರ್ ಸ್ಥಾನಕ್ಕೆ, ಈವರೆಗೆ ಉಪಮೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಹೇಮಲತಾ ಕಮಲ್ ಕುಮಾರ್ ಅವರು ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ

ಮೇಯರ್ ಚಂದ್ರೇಗೌಡ ಅವರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಮೈಸೂರಿನ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ, ವಿಪ್ ಉಲ್ಲಂಘನೆ ಮಾಡಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿ, ಚಂದ್ರೇಗೌಡರ ಪಾಲಿಕೆ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶಿಸಿದೆ. ಸದಸ್ಯತ್ವ ಅನರ್ಹಗೊಂಡಿದ್ದರಿಂದ ಅವರು ಮೇಯರ್ ಹುದ್ದೆಯಿಂದಲೂ ಪದಚ್ಯುತಗೊಂಡಿದ್ದಾರೆ.

ಹೇಮಲತಾ ಅಧಿಕಾರ ಸ್ವೀಕಾರ

ಮೇಯರ್ ಹುದ್ದೆ ತೆರವಾದ ಹಿನ್ನೆಲೆಯಲ್ಲಿ, ಉಪಮೇಯರ್ ಆಗಿದ್ದ ಹೇಮಲತಾ ಕಮಲ್ ಕುಮಾರ್ ಅವರು ಪಾಲಿಕೆಯ ಮೇಯರ್ ಕಚೇರಿಯಲ್ಲಿ ನೂತನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಜೆಡಿಎಸ್ನ ಪಾಲಿಕೆ ಸದಸ್ಯರು ಹಾಜರಿದ್ದು, ನೂತನ ಮೇಯರ್ಗೆ ಶುಭಾಶಯ ಕೋರಿದರು.

Read More
Next Story