
ಕನ್ನಡ ಚಿತ್ರಗಳ ಸಬ್ಸಿಡಿಗೆ ಹಾಕಲಿದೆಯೇ ಸರ್ಕಾರ ಕತ್ತರಿ?
ಕೆಲವು ಚಿತ್ರಗಳನ್ನು ದೇಶ ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡಿ, ರಾಜ್ಯ ಸರ್ಕಾರ ನೀಡುವ ಸಬ್ಸಿಡಿ ಹಣಕ್ಕಾಗಿ ಸರ್ಕಾರದ ಸಬ್ಸಿಡಿಗಾಗಿ ಕಾಯುವವರೇ ಹೆಚ್ಚಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಕನ್ನಡ ಚಿತ್ರ ರಂಗ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಹೇಳಿಕೊಳ್ಳುವಷ್ಟು ಸ್ಟಾರ್ ನಟರ ಚಿತ್ರಗಳು ಇಲ್ಲದಿರುವುದಕ್ಕೆ ಜನರು ಚಿತ್ರಮಂದಿರಗಳ ಕಡೆಗೆ ಬರದೇ ಇರುವುದರಿಂದ ಚಿತ್ರರಂಗ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ ಎಂಬ ವಾದ ಒಂದು ಕಡೆಯಾದರೆ, ಅನ್ಯ ಭಾಷಾ ಸ್ಟಾರ್ ನಟರುಗಳು ಚಿತ್ರಗಳು ಬಿಡುಗಡೆಯಾದಾಗ ಸಣ್ಣ ಬಜೆಟ್‌ನ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಂತಾಗಿ ಒಳ್ಳೆಯ ಚಿತ್ರಗಳು ಜನರಿಗೆ ತಲುಪದಂತಾಗುತ್ತಿವೆ ಎನ್ನುವ ವಾದ ಇನ್ನೊಂದು ಕಡೆ.
ಇದರ ಮಧ್ಯ ಪ್ರತಿ ವರ್ಷ ತಯಾರಾಗುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ವಾರ ಕನಿಷ್ಠ ಐದರಿಂದ ಆರು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಬಹುತೇಕ ಚಿತ್ರಗಳು ಥೇಟರ್ ನಲ್ಲಿ ಒಂದು ವಾರ ಉಳಿಯುವುದೂ ಅನುಮಾನ. ಪ್ರಮುಖವಾಗಿ ಎರಡು ರೀತಿಯ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಲಾಭದ ಉದ್ದೇಶದಿಂದ ತಯಾರಾಗುವ ಕಮರ್ಷಿಯಲ್ ಚಿತ್ರಗಳು ಇನ್ನೊಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಹಾಗೂ ಪ್ರಶಸ್ತಿ ಉದ್ದೇಶ ಇಟ್ಟುಕೊಂಡು ತಯಾರಾಗುವ ಕಲಾತ್ಮಕ ಚಿತ್ರಗಳು.
ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು ಮುನ್ನೂರಿಂದ ಮುನ್ನೂರ ಐವತ್ತು ಚಿತ್ರಗಳು ತಯಾರಾಗುತ್ತವೆ. ಚಿತ್ರೀಕರಣಗೊಳ್ಳುವ ಎಲ್ಲ ಚಿತ್ರಗಳು ಬಿಡುಗಡೆ ಆಗುವುದಿಲ್ಲ. ಕೆಲವು ಚಿತ್ರಗಳನ್ನು ದೇಶ ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡಿ, ರಾಜ್ಯ ಸರ್ಕಾರ ನೀಡುವ ಸಬ್ಸಿಡಿ ಹಣಕ್ಕಾಗಿ ಸರ್ಕಾರದ ಸಬ್ಸಿಡಿಗಾಗಿ ಕಾಯುವವರೇ ಹೆಚ್ಚಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸಬ್ಸಿಡಿಗಾಗಿ ಚಿತ್ರ ನಿರ್ಮಾಣ
ರಾಜ್ಯ ಸರ್ಕಾರ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡಲು ಪ್ರತಿ ವರ್ಷ 125 ಚಿತ್ರಗಳಿಗೆ ಸಬ್ಸಿಡಿ ನೀಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 200 ಚಿತ್ರಗಳಿಗೆ ಸಬ್ಸಿಡಿ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ, ಆ ಆದೇಶ ಜಾರಿ ಮಾಡದೇ 125 ಚಿತ್ರಗಳಿಗೆ ಮಾತ್ರ ಪ್ರತಿ ಚಿತ್ರಕ್ಕೆ ತಲಾ 10 ಲಕ್ಷದಂತೆ ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಆದರೆ, ಸಬ್ಸಿಡಿಗಾಗಿ ಬರುವ ಬಹುತೇಕ ಚಿತ್ರಗಳು ನಿರ್ದಿಷ್ಟ ಗುಣಮಟ್ಟ ಹೊಂದಿರದೇ ಸಬ್ಸಿಡಿಯಿಂದ ಬರುವ ಹಣಕ್ಕಿಂತಲೂ ಕಡಿಮೆ ಖರ್ಚು ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ತಂತ್ರಜ್ಞಾನ ಹೆಚ್ಚಾದಂತೆ ಸಿನೆಮಾ ಶೂಟಿಂಗ್ ವೆಚ್ಚ ಕಡಿಮೆಯಾಗುತ್ತಿದ್ದು, ಕೆಲವು ನಿರ್ದೇಶಕರು ಹೈಕ್ವಾಲಿಟಿ ಮೊಬೈಲ್ ಮೂಲಕವೂ ಚಿತ್ರೀಕರಣ ಮಾಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಕಡಿಮೆ ವೆಚ್ಚದಲ್ಲಿ ಚಿತ್ರ ನಿರ್ಮಿಸಿ ಸಬ್ಸಿಡಿ ಪಡೆಯುತ್ತಿದ್ದಾರೆ ಎಂಬ ಮಾತುಗಳು ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿವೆ.
ಸಬ್ಸಿಡಿಗೆ ಕತ್ತರಿ?
ರಾಜ್ಯ ಸರ್ಕಾರ ಪ್ರತಿ ವರ್ಷ ಸಬ್ಸಿಡಿ ನೀಡುತ್ತಿರುವುದರಿಂದ ಕಳಪೆ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣವನ್ನು ಸ್ಥಗಿತಗೊಳಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಬ್ಸಿಡಿಗೆ ನೀಡುತ್ತಿರುವ ಹಣವನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯುವ ಉತ್ತಮ ಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಬೇಕೆನ್ನುವ ಆಲೋಚನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ಮೊದಲಲ್ಲಾ
ಕನ್ನಡ ಚಿತ್ರಗಳಿಗೆ ಸಬ್ಸಿಡಿ ಕಡಿತ ಮಾಡಬೇಕೆಂಬ ಆಲೋಚನೆ ಈ ಹಿಂದೆಯೂ ಹಲವಾರು ಬಾರಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದ್ದು, ಸರ್ಕಾರದ ಈ ಆಲೋಚನೆಗೆ ಚಿತ್ರರಂಗದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸಬ್ಸಿಡಿ ನೀಡುವುದನ್ನು ಮುಂದುವರೆಸುತ್ತ ಬಂದಿದೆ. ಈಗ 2021 ರ ನಂತರದ ಚಿತ್ರಗಳಿಗೆ ಸಬ್ಸಿಡಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಬ್ಸಿಡಿ ಸಮಿತಿ ರಚನೆ ಮಾಡುವ ಸಂದರ್ಭದಲ್ಲಿ ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಈ ಚರ್ಚೆ ನಡೆದಿದೆ ಎನ್ನಲಾಗಿದ್ದು, ಈ ಬಾರಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕು.
ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ ಬಣಕಾರ ಈ ಕುರಿತು 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿ, ರಾಜ್ಯ ಸರ್ಕಾರ ಚಲನಚಿತ್ರಗಳಿಗೆ ನೀಡುತ್ತಿರುವ ಸಬ್ಸಿಡಿ ನಿಲ್ಲಿಸುವ ಕುರಿತು ಆಲೋಚನೆ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆ ಸೂಟಿಂಗ್ ನಿಂದ ಹಿಡಿದು ಚಿತ್ರ ತೆರೆ ಕಾಣುವವರೆಗೂ, ಸೆಟಲೈಟ್ ರೈಟ್ಸ್, ಒಟಿಟಿ ಮಾರಾಟವಾದಾಗ ಎಲ್ಲ ಸಂದರ್ಭದಲ್ಲಿಯೂ ಅತಿ ಹೆಚ್ಚು ತೆರಿಗೆ ಚಿತ್ರರಂಗದಿಂದ ತೆರಿಗೆ ಕಟ್ಟಲಾಗುತ್ತಿದೆ. ಗುಣಮಟ್ಟದ ಚಿತ್ರಗಳನ್ನು ಆಯ್ಕೆ ಸಮಿತಿ ನೋಡಿ ಆಯ್ಕೆ ಮಾಡಬೇಕು. ಸಬ್ಸಿಡಿಗೆ ಚಿತ್ರಗಳ ಆಯ್ಕೆ ಹಂತದಲ್ಲಿ ನಡೆಯುವ ಭ್ರಷ್ಟಾಚಾರ ನಿಯಂತ್ರಣ ಮಾಡಿದರೆ ಗುಣಮಟ್ಟದ ಚಿತ್ರಗಳಿಗೆ ನ್ಯಾಯ ಸಿಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಲಿ, ಹಾಗೂ ಸಬ್ಸಿಡಿ ಬಯಸುವ ಚಿತ್ರಗಳು ಕಡ್ಡಾಯವಾಗಿ ಬಿಡುಗಡೆಯಾಗಬೇಕೆಂಬ ನಿಯಮ ರೂಪಿಸಲಿ, ಇದರಿಂದ ಕೇವಲ ಸಬ್ಸಿಡಿಗಾಗಿ ಚಿತ್ರ ನಿರ್ಮಿಸುವವರ ಸಂಖ್ಯೆ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.