
ಸಾಂದರ್ಭಿಕ ಚಿತ್ರ
ಜೆಮ್ಸ್, ಜೆಲ್ಲಿಸ್‌ನಲ್ಲಿ ಹಾನಿಕಾರಕ ರಾಸಾಯನಿಕ ಶಂಕೆ: ತಪಾಸಣೆಗೆ ಮುಂದಾದ ಆಹಾರ ಇಲಾಖೆ
ರಾಸಾಯನಿಕಯುಕ್ತ ತಿನಿಸುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ದೀರ್ಘಕಾಲೀನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.
ಚಾಕೊಲೇಟ್, ಪೆಪ್ಪರ್ಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್‌ನಲ್ಲಿ ಕೃತಕ ಬಣ್ಣ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಮಾಡುತ್ತಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಕ್ಕಳ ಹೆಚ್ಚಾಗಿ ತಿನ್ನುವ ಈ ತಿನಿಸುಗಳ ಪರೀಕ್ಷೆಗೆ ಒಳಪಡಿಸಲು ಆಹಾರ ಇಲಾಖೆ ಮುಂದಾಗಿದೆ. ಇದಲ್ಲದೆ ಜಿಲೇಬಿ ಮತ್ತು ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುವ ಶರಬತ್‌ಗಳಲ್ಲಿ ಕಲುಷಿತ ನೀರು ಬಳಕೆ ಮಾಡುತ್ತಿರುವುದು ಆಹಾರ ಇಲಾಖೆಯ ಗಮನಕ್ಕೆ ಬಂದಿದೆ.
ಮಕ್ಕಳ ಅಚ್ಚುಮೆಚ್ಚಿನ ಚಾಕೊಲೇಟ್, ಪೆಪ್ಪರ್ಮೆಂಟ್, ಜೇಮ್ಸ್ ಮತ್ತು ಜೆಲ್ಲಿಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಮಾಡಲಾಗುತ್ತಿರುವ ಆರೋಪ ಕೇಳಿಬಂದಿದೆ. ಇವುಗಳ ಸೇವನೆವು ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಅಪಾಯ ತರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್ಎಸ್ಎಸ್ಎಐ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಆಹಾರ ಇಲಾಖೆ 'ಸ್ಯಾಂಪಲ್' ಪಡೆದು ಆಹಾರ ಇಲಾಖೆಯ ಲ್ಯಾಬ್ಗಳಲ್ಲಿ ಟೆಸ್ಟ್ಗೆ ಒಳಪಡಿಸಲು ಮುಂದಾಗಿದೆ.
ಪೆಪ್ಪರ್ಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ ಕೃತಕ ಕಲರ್ ಬಳಕೆ ಮಾಡುತ್ತಿದ್ದು, ತಯಾರಿಕಾ ಘಟಕಗಳಲ್ಲಿ ಸ್ವಚ್ಛತೆ ಇರುವುದಿಲ್ಲ ಎನ್ನಲಾಗುತ್ತಿದೆ. ಚಾಕೊಲೇಟ್ಗಳ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳ ಬಳಕೆ ಬಗ್ಗೆ ಕೂಡ ದೂರುಗಳು ಬಂದಿವೆ. ಹೀಗಾಗಿ ಆಹಾರ ಇಲಾಖೆ ರಾಜ್ಯದಲ್ಲಿ ಮಾದರಿ ಪಡೆಯಲು ಮುಂದಾಗಿದೆ. ಅಷ್ಟೇ ಅಲ್ಲದೆ ವಿದೇಶದಿಂದ ಆಮದು ಆಗುವ ಪದಾರ್ಥಗಳನ್ನು ಟೆಸ್ಟ್ ಮಾಡಲು ಮುಂದಾಗಿದ್ದು, ಅಸುರಕ್ಷಿತ ಪದಾರ್ಥಗಳ ಮೇಲೂ ಕ್ರಮಕ್ಕೆ ಆಹಾರ ಇಲಾಖೆ ಮುಂದಾಗಿದೆ.
ಜಿಲೇಬಿಯಲ್ಲಿ ಕೃತಕ ಬಣ್ಣ
ಬಾಯಲ್ಲಿ ನೀರೂರಿಸುವ ಜಿಲೇಬಿಗಳಲ್ಲಿಯೂ ಕೃತಕ ಬಣ್ಣ ಬಳಸುತ್ತಿರುವುದು ಆಹಾರ ಗುಣಮಟ್ಟ ಇಲಾಖೆಯ ಗಮನಕ್ಕೆ ಬಂದಿದೆ. ಮತ್ತೊಂದೆಡೆ, ಪ್ಯಾಕೆಟ್‌ಗಳಲ್ಲಿ, ಬಾಟಲ್ಗಳಲ್ಲಿ ಮಾರಾಟ ಮಾಡಲಾಗುವ ಶರಬತ್ತುಗಳಲ್ಲಿ ಕಲುಷಿತ ನೀರಿನ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸಕ್ಕರೆ ಮಿಶ್ರಿತ ನೀರನ್ನು ಮುಚ್ಚಿದ ಡಬ್ಬಿಯಲ್ಲಿ ಇಡುವುದರಿಂದ ನೀರು ಕಲುಷಿತವಾಗುತ್ತದೆ. ಹೀಗಾಗಿ ಜಿಲೇಬಿ ಮತ್ತು ಶರಬತ್ ಗುಣಮಟ್ಟ ತಪಾಸಣೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ. ಮುಂದಿನ 3 ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ತಲಾ 5 ಮಾದರಿ ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಈಗಾಗಲೇ ಕೃತಕ ಬಣ್ಣ, ಗುಣಮಟ್ಟ, ಸ್ಪಚ್ಛತೆ ಇಲ್ಲದೆ ಆಹಾರಗಳನ್ನು ಮಾರಾಟ ಮಾಡುವವರ ವಿರುದ್ಧ ಆಹಾರ ಇಲಾಖೆ ಸಮರ ಸಾರಿದೆ. ಇಡ್ಲಿ ಕವರ್, ಹಸಿರು ಬಟಾಣಿ, ಪನೀರ್ ಸೇರಿ ಅನೇಕ ವಸ್ತುಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ, ಆಘಾತಕಾರಿ ವರದಿಗಳು ಹೊರ ಬಂದಿದ್ದವು. ಇದೀಗ, ಜಿಲೇಬಿ ಮತ್ತು ಶರಬತ್ ಸುರಕ್ಷತೆ ಮಟ್ಟ ಪರೀಕ್ಷೆಗೆ ಆಹಾರ ಇಲಾಖೆ ಮುಂದಾಗಿದೆ.