ಹನುಮಾನ್‌ ಚಾಲೀಸಾ ವಿವಾದ: ರೋಹಿತ್‌, ತರುಣ್‌ ಸೇರಿ ಐವರು ಆರೋಪಿಗಳ ಬಂಧನ
x

ಹನುಮಾನ್‌ ಚಾಲೀಸಾ ವಿವಾದ: ರೋಹಿತ್‌, ತರುಣ್‌ ಸೇರಿ ಐವರು ಆರೋಪಿಗಳ ಬಂಧನ


ಬೆಂಗಳೂರಿನ ನಗರತ್ ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಲೌಡ್‌ ಸ್ಪೀಕರ್‌ ಬಳಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್‌ ಆಗಿದ್ದು, ಆ ವಿಡಿಯೋ ಪ್ರಕಾರ, ʼʼಮೊಬೈಲ್ ಶಾಪ್ನಲ್ಲಿ ಯುವಕ ಹುನುಮಾನ್ ಚಾಲೀಸಾ ಹಾಕಿ, ಜೋರು ಸೌಂಡ್ ಇಟ್ಟಿದ್ದರು. ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ ಎಂದಿದ್ದರು. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್ ಅವರ ಕೊರಳ ಪಟ್ಟಿ ಹಿಡಿದು, ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆʼʼ ಎಂದು ಹೇಳಲಾಗಿತ್ತು.

ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಗಾಯಗೊಂಡ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಬೆನ್ನಲ್ಲೇ ಸೋಮವಾರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಮತ್ತಿಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್, ತರುಣ್ ಎಂದು ಗುರುತಿಸಲಾಗಿದೆ.

ಬಿಜೆಪಿ ಖಂಡನೆ

ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ʼʼವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಿದ ಪ್ರಕರಣದ ನಂತರ ಇದೀಗ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವೇ ಕಾರಣʼʼ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ʼʼಕಾಂಗ್ರೆಸ್ ಆಡಳಿತದ ತುಷ್ಟೀಕರಣ ನೀತಿಗಳು ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಂಪೂರ್ಣ ಹದಗೆಡುವ ಮೂಲಕ ಆಮೂಲಾಗ್ರ ಸ್ಥಿತಿಗೆ ತಳ್ಳುತ್ತಿದೆʼʼ ಎಂದು ಆರೋಪಿಸಿದ್ದಾರೆ.

ʼʼಹಿಂದೂಗಳು ಮತ್ತು ಹಿಂದೂ ಸಂಸ್ಥೆಗಳ ಮೇಲಿನ ಈ ದಾಳಿಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ. ಅವರ ತುಷ್ಟೀಕರಣ ರಾಜಕಾರಣವು ಅನಾಗರಿಕರು ರಾಜ್ಯದಲ್ಲಿ ಅಟ್ಟಹಾಸ ನಡೆಸಲು ಪ್ರೋತ್ಸಾಹಿಸಿದೆʼʼ ಎಂದು ಆರೋಪಿಸಿದ್ದಾರೆ.

ʼʼಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿಯದೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಮತ್ತು ಸಮಾಜ ವಿರೋಧಿ ಅಂಶಗಳನ್ನು ಕೂಡಲೇ ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಒತ್ತಾಯಿಸುತ್ತೇನೆʼʼ ಎಂದು ತಿಳಿಸಿದ್ದಾರೆ.

ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಿ ಹಲ್ಲೆ ನಡೆದಿಲ್ಲ: ಪೊಲೀಸರ ಹೇಳಿಕೆ

ಮತ್ತೊಂದೆಡೆ ಘಟನೆ ಸಂಬಂಧ ಹೇಳಿಕೆ ನೀಡಿರುವ ಪೊಲೀಸರು, "ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂಬುದಕ್ಕಾಗಲೀ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ" ಎಂದು ಹೇಳಿದ್ದಾರೆ.

"ಆರೋಪಿಗಳ ಮೇಲೆ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೇಳಿಕೆ ನೀಡಿದಂತೆಯೇ ದೂರಿನಲ್ಲಿ ಆರೋಪಗಳನ್ನು ಉಲ್ಲೇಖ ಮಾಡಿಲ್ಲ" ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್ ಅವರು, ʼʼಪ್ರಚೋದನೆಗೆ ಒಳಗಾಗದೆ ವಿವೇಚನೆಯಿಂದ ಯೋಚಿಸಿ. ಲಭ್ಯವಾದ ಎಫ್ಐಆರ್ ಪ್ರತಿ ಮತ್ತು ಮುಖೇಶ್ ಅವರು ಕೊಟ್ಟಿರುವ ಕೈ ಬರಹದ ದೂರಿನಲ್ಲಿ ಎಲ್ಲಿಯೂ ನಮಾಝ್ ಅಥವಾ ಆಝಾನ್ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿಲ್ಲʼʼ ಎಂದು ದಾಖಲೆಯೊಂದಿಗೆ ತಿಳಿಸಿದ್ದಾರೆ.

ʼʼಅಲ್ಲದೆ, ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ ಪ್ರಕರಣದ ಆರೋಪಿಗಳಲ್ಲಿ ಮುಸ್ಲಿಮರು ಮಾತ್ರ ಇರುವುದಲ್ಲ. ಆರು ಆರೋಪಿಗಳಲ್ಲಿ ಮೂವರು ಮುಸ್ಲಿಮರು ಮತ್ತು ಇಬ್ಬರು ಹಿಂದೂ ಆರೋಪಿಗಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಸ್ಪಷ್ಟೀಕರಣವನ್ನು ತನಿಖೆಯ ಬಳಿಕ ಪೊಲೀಸರು ತಿಳಿಸಬೇಕಾಗಿದೆʼʼ ಎಂದು ಹೇಳಿದ್ದಾರೆ.

Read More
Next Story