ಹಲಸೂರು ಮಾರುಕಟ್ಟೆಯಲ್ಲಿ ಅಗ್ನಿ ದುರಂತ: 15ಕ್ಕೂ ಹೆಚ್ಚು ಬೈಕ್‌ಗಳು, ಅಂಗಡಿಗಳು ಭಸ್ಮ
x

ಸಾಂದರ್ಭಿಕ ಚಿತ್ರ 

ಹಲಸೂರು ಮಾರುಕಟ್ಟೆಯಲ್ಲಿ ಅಗ್ನಿ ದುರಂತ: 15ಕ್ಕೂ ಹೆಚ್ಚು ಬೈಕ್‌ಗಳು, ಅಂಗಡಿಗಳು ಭಸ್ಮ

15 ಬೈಕ್​ಗಳು ಹೊತ್ತಿ ಉರಿಯುವ ವೇಳೆ ಒಂದು ತರಕಾರಿ ಅಂಗಡಿಗೂ ಬೆಂಕಿ ತಗುಲಿದ್ದು, ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ.


ಬೆಂಗಳೂರಿನ ಐತಿಹಾಸಿಕ ಹಲಸೂರು ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15ಕ್ಕೂ ಹೆಚ್ಚು ಹೊಸ ಬೈಕ್‌ಗಳು, ಒಂದು ತರಕಾರಿ ಅಂಗಡಿ ಹಾಗೂ ಪುರಾತನ ದೇಗುಲದ ಆವರಣ ಸುಟ್ಟು ಕರಕಲಾಗಿದೆ.

ಇದು ಆಕಸ್ಮಿಕ ದುರಂತವಲ್ಲ, ಬದಲಿಗೆ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಕೃತ್ಯ ಎಂದು ಸ್ಥಳೀಯರು ಆರೋಪಿಸಿದ್ದು, ಅನುಮಾನಕ್ಕೆ ಪುಷ್ಟಿ ನೀಡುವ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ.

ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಮಾರುಕಟ್ಟೆಯಲ್ಲಿದ್ದ ಬೈಕ್ ಶೋರೂಂ ಒಂದರ ಮುಂದೆ ನಿಲ್ಲಿಸಲಾಗಿದ್ದ 15ಕ್ಕೂ ಹೆಚ್ಚು ಹೊಸ ದ್ವಿಚಕ್ರ ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ನಾಶವಾಗಿವೆ. ಬೆಂಕಿಯ ತೀವ್ರತೆಗೆ ಪಕ್ಕದಲ್ಲಿದ್ದ ತರಕಾರಿ ಅಂಗಡಿಯೂ ಕರಕಲಾಗಿದೆ.

600 ವರ್ಷ ಹಳೆಯ ದೇಗುಲಕ್ಕೂ ಹಾನಿ

ಬೆಂಕಿಯ ಜ್ವಾಲೆಯು ಸಮೀಪದಲ್ಲಿದ್ದ, 600 ವರ್ಷಗಳ ಇತಿಹಾಸವಿರುವ ಕಾಳಿಯಮ್ಮನ್ ದೇವಸ್ಥಾನಕ್ಕೂ ವ್ಯಾಪಿಸಿದೆ. ಇದರಿಂದಾಗಿ ದೇವಸ್ಥಾನದ ಗೋಡೆ ಮತ್ತು ಆವರಣದಲ್ಲಿದ್ದ ಪುರಾತನ ಅರಳಿ ಮರಕ್ಕೆ ಹಾನಿಯಾಗಿದೆ. ದೇಗುಲಕ್ಕೆ ಹಾನಿಯಾಗಿರುವುದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದೆ.

ಕಿಡಿಗೇಡಿಗಳ ಕೃತ್ಯದ ಶಂಕೆ

ಇದು ಕೇವಲ ಆಕಸ್ಮಿಕ ಬೆಂಕಿ ಅವಘಡವಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೂ ಮುನ್ನ ಮೂವರು ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೆಳಗಿನ ಜಾವ 3 ಗಂಟೆಗೆ ಈ ಮೂವರು ಬಂದು ಬೆಂಕಿ ಹಚ್ಚಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ. ಈ ದೃಶ್ಯಾವಳಿಗಳನ್ನು ಆಧರಿಸಿ ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read More
Next Story