Naxal Free Karnataka | ನಕ್ಸಲರನ್ನು ಕಾಡಿನಿಂದ ನಾಡಿಗೆ ತಂದ ಮಾಜಿ ಮಾವೋವಾದಿ ಹಾಗೂ ಆದಿವಾಸಿ ಮಹಿಳೆ
ನಕ್ಸಲ್ ಶರಣಾಗತಿಯ ಹಿಂದೆ ಯಾರೆಲ್ಲರ ಶ್ರಮವಿದೆ ಗೊತ್ತೇ ? ಹೌದು. ಮಾಜಿ ನಕ್ಸಲ ಮತ್ತು ಇತ್ತೀಚೆಗೆ ಶರಣಾಗತರಾದ ನಕ್ಸಲರಲ್ಲಿ ಒಬ್ಬಳ ಸಂಬಂಧಿ ʼಕರ್ನಾಟಕವನ್ನು ʼನಕ್ಸಲ್ ಮುಕ್ತʼ ಮಾಡುವ ಯೋಜನೆಗೆ ಸರ್ಕಾರ ಮತ್ತು ನಕ್ಸಲರ ನಡುವೆ ಕೊಂಡಿಯಾಗಿದ್ದರು.
ನಕ್ಸಲ್ ಶರಣಾಗತಿಯ ಹಿಂದೆ ಯಾರೆಲ್ಲರ ಶ್ರಮವಿದೆ ಗೊತ್ತೇ ? ಹೌದು. ಮಾಜಿ ನಕ್ಸಲ ಹಾಗಲಗಂಚಿ ವೆಂಕಟೇಶ್ ಮತ್ತು ಇತ್ತೀಚೆಗೆ ಶರಣಾಗತರಾದ ನಕ್ಸಲರಲ್ಲಿ ಒಬ್ಬಳ ಸಂಬಂಧಿ , ಆದಿವಾಸಿ ಕುಟುಂಬದ ಗೌರಮ್ಮ ಎಂಬ ಮಹಿಳೆ ʼಕರ್ನಾಟಕವನ್ನು ನಕ್ಸಲ್ ಮುಕ್ತʼ ಮಾಡುವ ಯೋಜನೆಗೆ ಸಹಕಾರಿಯಾಗಿ ಸರ್ಕಾರ ಮತ್ತು ನಕ್ಸಲರ ನಡುವೆ ಕೊಂಡಿಯಂತೆ ಕೆಲಸ ಮಾಡಿದ್ದರು!
ಕೊಪ್ಪ ತಾಲೂಕು ಹಾಗಲಗಂಚಿ ಗ್ರಾಮದ ವೆಂಕಟೇಶ್ 2010 ಸೆಪ್ಟಂಬರ್ 28ರಂದು ಶರಣಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಮ್ಮ ಜತೆಗಿದ್ದ ನಕ್ಸಲರೂ ಮುಖ್ಯವಾಹಿನಿಗೆ ಬರಬೇಕೆಂಬ ತುಡಿತ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಜತೆಗೆ ಶಸ್ತ್ರ ಹೋರಾಟಕ್ಕಿಂತ ಪ್ರಜಾಪ್ರಭುತ್ವವಾದಿ ಹೋರಾಟವೇ ಹೆಚ್ಚು ಉತ್ತಮ ಮಾರ್ಗ ಎಂದು ಕಂಡುಕೊಂಡಿದ್ದರು ಎಂದು ಹೇಳಲಾಗಿದೆ. ಹಾಗಾಗಿ ವೆಂಕಟೇಶ್ ಹಾಗೂ ನಕ್ಸಲ ಮಹಿಳೆಯೊಬ್ಬರ ಸಂಬಂಧಿ ಗೌರಮ್ಮ ಎಂಬವರ ಶ್ರಮ ಸಾರ್ಥಕವಾಗಿದೆ.
ಹಾಗಾಗಿ ರಾಜ್ಯವನ್ನು ನಕ್ಸಲ್ ಮುಕ್ತಮಾಡುವ ಪ್ರಕ್ರಿಯೆ ನಡೆದದ್ದೇ ಒಂದು ರೋಚಕ ಸಿನೆಮಾ ಕತೆಯಂತೆ ಕಾಣುತ್ತದೆ ಎನ್ನುತ್ತಾರೆ ಈ ಪ್ರಕ್ರಿಯೆಯಲ್ಲಿದ್ದ ಮುಖಂಡರೊಬ್ಬರು.
ಬೆರಳೆಣಿಕೆಯಷ್ಟಿದ್ದ ನಕ್ಸಲರು ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪದ ಪೀತ್ ಬೈಲ್‌ನಲ್ಲಿ ನಕ್ಸಲ್ ನಾಯಕ ವಿಕ್ರಂಗೌಡನ ಎನ್‌ಕೌಂಟರ್‌ಗೂ ಮೊದಲೇ ಶರಣಾಗಲು ಮನಸು ಮಾಡಿದ್ದರು. ಕೇರಳದ ಜೈಲಿನಲ್ಲಿರುವ ಪ್ರಮುಖ ನಕ್ಸಲ್ ನಾಯಕರೊಬ್ಬರು ಶರಣಾಗತಿಯ ಬಗ್ಗೆ ಒಲವು ಹೊಂದಿದ್ದು, ಈ ದಿಸೆಯಲ್ಲಿ ಚಿಂತನೆ ಮಾಡುವಂತೆ ಈ ಹಿಂದೆಯೇ ಶರಣಾಗಿ ಮುಖ್ಯವಾಹಿನಿಯಲ್ಲಿರುವವರಿಗೆ ಸಂದೇಶ ಕಳಿಸಿದ್ದರೆಂಬ ಮಾಹಿತಿ ಇತ್ತು. ಆದರೆ ಪ್ರಕ್ರಿಯೆ ಆರಂಭಿಸುವ ಮುನ್ನವೇ ವಿಕ್ರಂಗೌಡನ ಎನ್‌ಕೌಂಟರ್ ನಡೆದಿತ್ತು.
ಶರಣಾಗತಿಯ ಕೊಂಡಿ ಯಾರು ?
ವಿಕ್ರಂ ಸಾವಿನ ಬಳಿಕ ಶರಣಾಗುವ ಇಚ್ಚೆ ಹೊಂದಿದ್ದ ನಕ್ಸಲರಿಗೆ ಯಾರನ್ನೂ ಅಷ್ಟು ಸುಲಭವಾಗಿ ನಂಬುವ ಮನಸ್ಥಿತಿ ಇರಲಿಲ್ಲ. ಆದರೆ ಈ ಹಿಂದೆಯೇ ಶರಣಾಗಿ ಮುಖ್ಯವಾಹಿನಿಯಲ್ಲಿ ಜೀವನ ಸಾಗಿಸುತ್ತಿರುವ ಜನಶಕ್ತಿ ಸಂಘಟನೆಯ ಹಾಗಲಕಂಚಿ ವೆಂಕಟೇಶ್ ಅವರನ್ನು ಸಂಪರ್ಕಿಸಿದ ನಕ್ಸಲರಿಗೆ ಕೊಂಚ ನಂಬಿಕೆ ಬರುತ್ತದೆ.
ವೆಂಕಟೇಶ್ ಅವರು ಶಾಂತಿಗಾಗಿ ನಾಗರೀಕ ವೇದಿಕೆಯ ಕೆ.ಎಲ್.ಅಶೋಕ್ ಅವರನ್ನು ಸಂಪರ್ಕಿಸುತ್ತಾರೆ. ನಕ್ಸಲರು ಶರಣಾಗುತ್ತಾರೆ ಎಂಬುದು ರಾಜ್ಯದ ಮಟ್ಟಗೆ ಒಳ್ಳೆಯ ಬೆಳವಣಿಗೆ ಎಂದುಕೊಂಡ ಶಾಂತಿಗಾಗಿ ನಾಗರೀಕ ವೇದಿಕೆಯ ನೂರ್‌ಶ್ರೀಧರ್, ವಿ.ಆರ್.ಶ್ರೀಧರ್, ನಗರಗೆರೆ ಮತ್ತಿತರರು ಈ ಬಗ್ಗೆ ಆಸಕ್ತಿ ವಹಿಸುತ್ತಾರೆ.
ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರ ಮೊಗಸಾಲೆಯಲ್ಲಿ ಪ್ರಸ್ತಾಪವಾದ ವಿಚಾರ ಮುಂದೆ ಕಾರ್ಯಗತವಾಗುತ್ತದೆ.
ವೆಂಕಟೇಶ್ ಸಂಪರ್ಕಿಸಿದ ಗೌರಮ್ಮ
ಶರಣಾಗತರಾಗಿರುವ ನಕ್ಸಲ್ ಕಾರ್ಯಕರ್ತೆಯೊಬ್ಬರ ಸಂಬಂಧಿಯೂ ಆಗಿದ್ದ ಗೌರಮ್ಮ ಅವರು, ವೆಂಕಟೇಶ್ ಮೂಲಕ ನಕ್ಸಲರನ್ನು ಸಂಪರ್ಕಿಸುತ್ತಾರೆ. ತಮ್ಮ ಬೇಡಿಕೆ ಮತ್ತು ಸುರಕ್ಷತೆ ಬಗ್ಗೆ ತಂಡದಲ್ಲಿಯೇ ಭಿನ್ನಾಭಿಪ್ರಾಯ ಇದ್ದರೂ ಒಂದು ಸಹಮತಕ್ಕೆ ಬಂದ ನಕ್ಸಲರು ಡಿಸೆಂಬರ್ 15 ರಂದು ಶಾಂತಿಗಾಗಿ ನಾಗರೀಕ ವೇದಿಕೆಯ ಮುಖಂಡರಿಗೆ ಮಾಹಿತಿ ನೀಡುತ್ತಾರೆ.
ಮರುದಿನದಿಂದಲೇ ಕಾರ್ಯೋನ್ಮುಖರಾದ ವೇದಿಕೆ ಪ್ರಮುಖರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸುತ್ತಾರೆ. ಅದಾದ ಬಳಿಕ ನಕ್ಸಲರಿಗೆ ಶರಣಾಗತಿಯಾಗುವಂತೆ ಬಹಿರಂಗ ಹೇಳಿಕೆ ನೀಡುತ್ತಾರೆ. ಈ ಹೇಳಿಕೆ ಬಿಡುಗಡೆಯಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರೂ ಹೇಳಿಕೆಯೊಂದನ್ನು ನೀಡಿ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡುತ್ತಾರೆ.
ಕಾಡೊಳಗೆ ಸಭೆ:
ಸಿಎಂ ಕಡೆಯಿಂದ ಹೇಳಿಕೆ ಬರುತ್ತಿದ್ದಂತೆ ನಕ್ಸಲರಲ್ಲೂ ವಿಶ್ವಾಸ ಮೂಡುತ್ತದೆ. ಅವರೂ ತಮ್ಮ ಬೇಡಿಕೆಯುಳ್ಳ ಪತ್ರವೊಂದನ್ನು ಗೌರಮ್ಮ ಮೂಲಕ ವೆಂಕಟೇಶ್ ಅವರಿಗೆ ತಲುಪಿಸುತ್ತಾರೆ. ಬೇಡಿಕೆಗಳ ಕುರಿತು ಒಪ್ಪಿಗೆ ಸೂಚಿಸಿದ್ದ ಸರ್ಕಾರ ಶರಣಾಗತಿ ಕುರಿತಾದ ಪ್ರಕ್ರಿಯೆ ಕೈಗೊಳ್ಳಲು ಆದೇಶವೊಂದನ್ನು ಹೊರಡಿಸುತ್ತದೆ.
ಈ ಆದೇಶದ ಬಳಿಕ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಪ್ರವೇಶವಾಗುತ್ತದೆ. ಈ ಸಮಿತಿಯ ಬಂಜಗೆರೆ ಜಯಪ್ರಕಾಶ್, ಕೆ.ಪಿ.ಶ್ರೀಪಾಲ್ ಮತ್ತು ಪಾರ್ವತೀಶ ಅವರು ಶರಣಾಗತಿ ಪ್ರಕ್ರಿಯೆಯಲ್ಲಿ ಸಕ್ರಿಯರಾಗುತ್ತಾರೆ. ಇದರ ಭಾಗವಾಗಿ ನಾಲ್ಕು ಅನೌಪಚಾರಿಕ ಸಭೆಗಳ ಬಳಿಕ ಜನವರಿ 4 ರಂದು ನಕ್ಸಲರು, ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸಭೆ ಶೃಂಗೇರಿ ಸಮೀಪದ ಅರಣ್ಯದಲ್ಲಿ ನಡೆಯುತ್ತದೆ. ಈ ಸಭೆಯ ನಡಾವಳಿಯನ್ನು ರಾಜ್ಯ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮಾರ್ಗದರ್ಶನದಂತೆ ರೂಪಿಸಲಾಗುತ್ತದೆ.
ದೊಡ್ಡ ಸುದ್ದಿ
ನಕ್ಸಲರ ಸಂಘಟನೆಯ ಶರಣಾಗತಿ ವಿಚಾರ ಬಹಿರಂಗವಾಗುತ್ತಿದ್ದಂತೆ ದೇಶವ್ಯಾಪಿ ಸುದ್ದಿಯಾಗುತ್ತದೆ. ಚಿಕ್ಕಮಗಳೂರು ನಿರೀಕ್ಷಣಾಲಯ (ಐಬಿ)ದಲ್ಲಿ ನಿಗದಿಯಾಗಿದ್ದ ಸಭೆ ದಿಢೀರ್ ಎಂದು ಬೆಂಗಳೂರಿಗೆ ಸ್ಥಳಾಂತರವಾಗುತ್ತದೆ. ಕಳೆದ ಎರಡೂವರೆ ದಶಕಗಳಿಂದ ರಾಜ್ಯವನ್ನು ಕಾಡಿದ್ದ ನಕ್ಸಲ್ ಚಟುವಟಿಕೆಯಲ್ಲಿ ಹಲವು ಜೀವಹಾನಿಯಾಗಿದೆ. ಆದರೆ ಅಂತಿಮವಾಗಿ ಸಶಸ್ತ್ರ ಹೋರಾಟ ಬದಿಗಿಟ್ಟು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆ ಯಶ ಕಾಣುತ್ತದೆ.
ಅಧಿಕಾರಿಗಳ ಶ್ರಮ
ನಕ್ಸಲರ ಶರಣಾಗತಿ ವಿಚಾರದಲ್ಲಿ ನಾಡಿನ ಅನೇಕ ಪ್ರಗತಿಪರರ ಒತ್ತಾಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಇಚ್ಚಾಶಕ್ತಿ ಕೆಲಸ ಮಾಡಿದೆ. ಗೃಹ ಇಲಾಖೆಯ ಅದರಲ್ಲೂ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಹರಿರಾಮ್ ಅವರು ತುಂಬಾ ಕಾಳಜಿಯಿಂದ ಈ ಪ್ರಕ್ರಿಯೆಯನ್ನು ನಿಭಾಯಿಸಿದರು ಎನ್ನುತ್ತಾರೆ ಶಾಂತಿಗಾಗಿ ನಾಗರೀಕ ವೇದಿಕೆಯ ಕೆ.ಎಲ್. ಅಶೋಕ್ ಅವರು.
ನಕ್ಸಲರು ಶರಣಾಗತಿಯಾದ ಬಳಿಕ ಎಲ್ಲ ಮುಗಿದಿಲ್ಲ. ಡಿಸೆಂಬರ್ 15 ರಿಂದ ಈ ತನಕ ನಮ್ಮ ವೇದಿಕೆಯ ಪ್ರಮುಖರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೌರವಯುತವಾದ ಜೀವನ ಬೇಕಾಗಿದೆ. ಅವರ ಮೇಲಿರುವ ಅನೇಕ ಪ್ರಕರಣಗಳು ಇತ್ಯರ್ಥವಾಗಬೇಕಿದೆ. ವೇದಿಕೆ ಕಾರ್ಯಕರ್ತರು ಕೈಯಿಂದ ಹಣ ಖರ್ಚು ಮಾಡಿಕೊಂಡು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ನಮಗೆ ಮೇಲು. ಹಿಂಸೆಯಿಂದ ಏನನ್ನೂ ಸಾಧಿಸಲಾಗದು ಎಂಬ ಸಂದೇಶವನ್ನು ನಕ್ಸಲರ ಶರಣಾಗತಿ ಪ್ರಕರಣದಿಂದ ಸರ್ಕಾರ ರಾಜ್ಯ ಹಾಗೂ ದೇಶದ ಜನರಿಗೆ ನೀಡಿದೆ. ಆ ಪ್ರಕ್ರಿಯೆಯ ಭಾಗವಾಗಿರುವ ಆದಿವಾಸಿ ಜನರು ಮತ್ತು ಸಂಘಟನೆಗಳ ಪ್ರಮುಖರು, ಸರಕಾರದ ಪ್ರತಿನಿಧಿಗಳು, ಕಾನೂನು ಪಂಡಿತರ ಶ್ರಮ ಅನನ್ಯವಾದುದು ಎನ್ನುತ್ತಾರೆ ಕೆ.ಎಲ್.ಅಶೋಕ್.
ಮುಖ್ಯವಾಹಿನಿಯಲ್ಲಿರುವ ನಮಗೆ ಕಾಡಲ್ಲಿರುವ ಯುವಜನರು ಅನ್ಯಾಯವಾಗಿ ಅವರ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವತ್ತೂ ಜೀವ ಕಳೆದುಕೊಳ್ಳುತ್ತಾರೊ ಎಂಬ ಭಯ ಮತ್ತು ಅಳಕಿತ್ತು. ಅವರೂ ಮುಖ್ಯವಾಹಿನಿಗೆ ಬರಬೇಕೆಂಬ ಇಚ್ಚೆ ಹೊಂದಿದ್ದ ಹಾಗಲಕಂಚಿ ವೆಂಕಟೇಶ್ ಮತ್ತು ಆದಿವಾಸಿ ಜನರ ಪ್ರಯತ್ನದಿಂದಾಗಿ ಕರ್ನಾಟಕ ನಕ್ಸಲ್ ಮುಕ್ತವಾಗಲು ಸಾಧ್ಯವಾಯಿತು.
ಶರಣಾಗಲು ಸಿದ್ಧರಿದ್ದ ನಕ್ಸಲರು
ರಾಜ್ಯದ ಸರಕಾರದ ಮುಂದೆ ಶರಣಾದ ನಕ್ಸಲರ ತಂಡ, ಶರಣಾಗತಿಗಾಗಿಯೇ ರಾಜ್ಯಕ್ಕೆ ಬಂದಿತ್ತೇ ಎಂಬ ಅನುಮಾನ ಈಗ ಮೂಡತೊಡಗಿದೆ. ರಾಜ್ಯದ ಪಶ್ಚಿಮಘಟ್ಟದಲ್ಲಿ ನೆಲೆ ಕಳೆದುಕೊಂಡ ನಕ್ಸಲರು ಕೇರಳಕ್ಕೆ ಹೋಗಿದ್ದರು. ಅಲ್ಲಿಯೂ ಥಂಡರ್ ಬೋಲ್ಟ್ ಕಾರ್ಯಾಚರಣೆ ತೀವ್ರವಾಗಿತ್ತು.
ತಮಿಳುನಾಡು ಮತ್ತು ಆಂಧ್ರದಲ್ಲಿ ನಕ್ಸಲರು ತಮ್ಮ ಅಸ್ತಿತ್ವ ಕಳೆದುಕೊಂಡಿದ್ದರು. ಪಕ್ಷ ಸಂಘಟನೆ ಕ್ಲಿಷ್ಟಕರವಾಗಿರುವಾಗಲೇ ಬದ್ಧ ಸಿದ್ಧಾಂತಿ ಹಾಗೂ ನಕ್ಸಲ್ ಸಂಘಟನೆಯಲ್ಲಿ ಪ್ರಖರ ಬುದ್ದಿಜೀವಿ ಎನಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ ಬಂಧನವಾಗುತ್ತದೆ. ಆ ಬಳಿಕ ಏರಿಯಾ ಕಮಾಂಡರ್ ಆಗಿದ್ದ ಹೊಸಗದ್ದೆ ಪ್ರಭಾ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ದೇಹದ ಒಂದಿಡೀ ಭಾಗಕ್ಕೆ ಸ್ಟ್ರೋಕ್ ಆಗಿದ್ದರಿಂದ ಸ್ಥಿಮಿತ ಕಳೆದುಕೊಂಡ ಆಕೆ ತಮಿಳುನಾಡಿನಲ್ಲಿ ಪೊಲೀಸರಿಗೆ ಶರಣಾಗಿ ಮಹಿಳಾ ಶುಶ್ರೂಷಾ ಕೇಂದ್ರಕ್ಕೆ ಸೇರುತ್ತಾರೆ. ಈ ನಡುವೆ ಮಾವೋವಾದಿ ಸಂಘಟನೆಯ ಕೇಂದ್ರ ಸಮಿತಿಯ ಸಂಪರ್ಕವೇ ಇಲ್ಲದಂತಾಗುತ್ತದೆ.
ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಅವಕಾಶ ಇಲ್ಲ ಎಂದು ಇಲ್ಲಿಂದ ಕಾಲುಕಿತ್ತಿದ್ದ ಮಾವೋವಾದಿ ನಕ್ಸಲರು ಮತ್ತೆ ಇಲ್ಲಿಗೆ ಬಂದಿದ್ದು ಶೆಲ್ಟರ್ ಮತ್ತು ಶರಣಾಗತಿಯ ಉದ್ದೇಶದಿಂದಲೇ ಆಗಿತ್ತು ಎಂಬುದು ಬಲ್ಲಮೂಲಗಳ ಮಾಹಿತಿ. ಕಾಡಂಚಿನ ಗ್ರಾಮಗಳ ಮನೆಗೆ ಆಗಾಗ ಭೇಟಿ ನೀಡುತಿದ್ದ ಅವರು ಆಹಾರ ಮತ್ತು ಔಷಧಿ ಹೊರತಾಗಿ ಏನೂ ಕೇಳುತ್ತಿರಲಿಲ್ಲ. ಅಪಾಯದ ಅರಿವಿದ್ದೂ ಕಿಗ್ಗಾ ಸಮೀಪದ ಕಿತ್ತಲೆ ಮನೆ, ಕೊಪ್ಪ ಕಡೆಗುಂದಿ ಮತ್ತು ಹೆಬ್ರಿಯ ಪೀತ್ ಬೈಲ್‌ನ ಕೆಲ ಮನೆಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿದ್ದರಿಂದ ವಿಕ್ರಂಗೌಡನ ಎನ್‌ಕೌಂಟರ್ ಕೂಡಾ ನಡೆದು ಹೋಯಿತು.