Caste Census |ಎಚ್‌. ಕಾಂತರಾಜು ವರದಿಗೆ 150 ಕೋಟಿ ರೂ. ಖರ್ಚು; ತನಿಖೆಗೆ ಜೆಡಿಎಸ್‌ ಆಗ್ರಹ
x

Caste Census |ಎಚ್‌. ಕಾಂತರಾಜು ವರದಿಗೆ 150 ಕೋಟಿ ರೂ. ಖರ್ಚು; ತನಿಖೆಗೆ ಜೆಡಿಎಸ್‌ ಆಗ್ರಹ

ನನಗೆ ಗಣತಿ ನಡೆದಿರುವ ಬಗ್ಗೆಯೇ ಅನುಮಾನವಿದೆ. ಗಣತಿ ವೈಜ್ಞಾನಿಕವಾಗಿ, ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ಮಾಡಬೇಕಿತ್ತು. ಆದರೆ, ಆ ರೀತಿ ಆಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.


ಜಾತಿ ಗಣತಿ ವರದಿಯು ಸಿದ್ದರಾಮಯ್ಯ ಅವರಿಂದ ಸಿದ್ದರಾಮಯ್ಯ ಅವರಿಗಾಗಿ ಸಿದ್ದರಾಮಯ್ಯನವರೇ ಮಾಡಿಕೊಂಡ ವರದಿ. ಎಚ್‌. ಕಾಂತರಾಜು ನೇತೃತ್ವದಲ್ಲಿ ನಡೆಸಲಾದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಗೆ ಖರ್ಚಾಗಿರುವ 150 ಕೋಟಿ ರೂ. ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಸೋರಿಕೆ ಆಗಿರುವ ಈ ವರದಿಯಲ್ಲಿರುವ ಅಂಕಿ ಅಂಶಗಳನ್ನು ಒಮ್ಮೆ ನೋಡಿದರೆ ಈ ವರದಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಕ್ಷೇಮಕ್ಕಾಗಿ ತಯಾರು ಮಾಡಿಸಿಕೊಂಡಿರುವ ವರದಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ರಾಜ್ಯದಲ್ಲಿ ಏಳು ಕೋಟಿ ಕನ್ನಡಿಗರು ಇದ್ದಾರೆ. ಸಮೀಕ್ಷೆ ನಡೆಸಿದವರು ಎಷ್ಟು ಮನೆಗಳಿಗೆ ಹೋಗಿದ್ದಾರೆ ಎಂಬ ದಾಖಲೆಗಳು ಇರಬೇಕು. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿರುವ ನಮ್ಮ ತಂದೆಯ ಮನೆಗೆ ಯಾರೂ ಬಂದು ಸಮೀಕ್ಷೆ ಮಾಡಿಲ್ಲ. ಅದೇ ರೀತಿ ನಮ್ಮ ಅಜ್ಜ, ಈ ದೇಶದ ಮಾಜಿ ಪ್ರಧಾನಿ. ಅವರ ಮನೆಗೂ ಯಾರೂ ಭೇಟಿ ಕೊಟ್ಟು ಸಮೀಕ್ಷೆ ಮಾಡಿಲ್ಲ. ಇಂಥ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಲ್ಲೆ. ನನಗೆ ಗಣತಿ ನಡೆದಿರುವ ಬಗ್ಗೆಯೇ ಅನುಮಾನವಿದೆ. ಗಣತಿ ವೈಜ್ಞಾನಿಕವಾಗಿ, ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ಮಾಡಬೇಕಿತ್ತು. ಆದರೆ, ಆ ರೀತಿ ಆಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಜಾತಿ ಗಣತಿ ನೆಪದಲ್ಲಿ ಸಿದ್ದರಾಮಯ್ಯ ಟೆಸ್ಟ್ ರನ್ ಮಾಡ್ತಿದ್ದಾರೆ!

ಜಾತಿ ಗಣತಿ ವರದಿಯ ಕೆಲ ಅಂಕಿ-ಅಂಶ ಸೋರಿಕೆಯಾಗಿದೆ. ಎಲ್ಲಾ ಪತ್ರಿಕೆ, ಸುದ್ದಿವಾಹಿನಿಗಳು ಆ ಅಂಕಿ ಅಂಶಗಳು ಬಿತ್ತರವಾಗುತ್ತಿವೆ. ಈ ಅಂಕಿ ಅಂಶಗಳನ್ನು ಹೊರ ಹಾಕಿರುವವರು ಅಥವಾ ಸೋರಿಕೆ ಮಾಡಿದವರು ಯಾರು?, ವರದಿ ಅಧಿಕೃತವಾಗಿ ಇನ್ನೂ ಬಹಿರಂಗ ಆಗಿಲ್ಲ. ಅಂಕಿ ಅಂಶಗಳು ಎಲ್ಲಾ ಕಡೆ ತೇಲಾಡುತ್ತಿವೆ. ಆದರೆ, ಇದು ಅನಧಿಕೃತ ಮಾಹಿತಿ. ಊಹಾಪೋಹದ ಅಂಕಿ ಅಂಶಗಳು. ಇದು ಸರ್ಕಾರದ ಕಡೆಯಿಂದಲೇ ಸೋರಿಕೆ ಆಗಿರುವ ಅನಧಿಕೃತ ಅಂಕಿ ಅಂಶಗಳು ಎನ್ನುವುದು ನನ್ನ ಅಭಿಪ್ರಾಯ. ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಚರ್ಚೆ ಬರಬಹುದೆಂದು ನೋಡೋಣ ಎಂದು ಸಿದ್ದರಾಮಯ್ಯ ಅವರು ಟೆಸ್ಟ್ ರನ್ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಗಣತಿಗೆ 150 ಕೋಟಿ ರೂ.ಖರ್ಚಿನ ತನಿಖೆ ನಡೆಸಿ

ಕಾಂತರಾಜು ಆಯೋಗದ ವರದಿಗೆ 150 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಆಯೋಗ ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಸೃಷ್ಟಿಯಾದ ವರದಿ ಇದು. ಹಾಗಾದರೆ, ಇಷ್ಟು ಮೊತ್ತವನ್ನು ಎಲ್ಲಿ ಖರ್ಚು ಮಾಡಿದ್ದಾರೆ. ಯಾರ ಮನೆಗೆ ಹೋಗಿದ್ದಾರೆ? ಯಾಕೆ ಇಷ್ಟು ಹಣ ಖರ್ಚು ಮಾಡಿದ್ದಾರೆ? ಲೆಕ್ಕ ಬೇಕಲ್ಲವೇ? ಇದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಜನರ ಕಲ್ಯಾಣಕ್ಕಾಗಿ ಜಾತಿ ಗಣತಿ ನಡೆಯಬೇಕು

ಜಾತಿಗಣತಿ ಆಗಬೇಕಿರೋದು ಆರ್ಥಿಕ, ಶೈಕ್ಷಣಿಕ, ಸಮಾನತೆಗಾಗಿ. ಅದರೆ ಜಾತಿಗಣತಿ ಒಂದು ದಶಕದ ಹಿಂದೆಯೇ ಕಾಂತರಾಜು ಸಮಿತಿ ರಚನೆ ಮಾಡಿ ಅವರ ಮೂಲಕ ಸರ್ವೇ ಮಾಡಲು ತೆಗೆದುಕೊಂಡು ತೀರ್ಮಾನ ಇದು ಎಂದು ನಿಖಿಲ್ ಹೇಳಿದ್ದಾರೆ.

ಜಾತಿ ಗಣತಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಕೆಲ ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ. ಹಾಗಾಗಿ ಎಲ್ಲಿಯವರೆಗೆ ವರದಿ ಹೊರಗೆ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಚರ್ಚೆ ಮಾಡಲು ಆಗಲ್ಲ. ಒಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ರಾಜಕೀಯ ಅಸ್ತಿತ್ವಕ್ಕಾಗಿ ಜಾತಿಗಣತಿ ಮಂಡಿಸುವುದಕ್ಕೆ ಮುಂದಾಗಿದ್ದಾರಾ ಎಂಬ ಅನುಮಾನಗಳು ಚರ್ಚೆ ನಡೆಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಒಂದು ಸಮುದಾಯ ಮೆಚ್ಚಿಸುವುದಕ್ಕೆ ಗಣತಿ

ಒಂದು ಸಮುದಾಯ ಮೆಚ್ಚಿಸುವುದಕ್ಕೆ ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಜಾತಿ ಗಣತಿ ಮಂಡಿಸುತ್ತಿದ್ದಾರೆ. ಒಂದು ಸಲ ಅಂಕಿ ಅಂಶಗಳ ಹೊರ ಹಾಕಲಿ. ಜಾತಿ ಗಣತಿ ಮಾಡಿರುವುದರಲ್ಲಿ ಸ್ಪಷ್ಟತೆ, ಪಾರದರ್ಶಕ ಇಲ್ಲದಿದ್ದರೆ. ನಾವು ಮರುಪರಿಶೀಲನೆಗೆ ಒತ್ತಡ ಹಾಕ್ತೀವಿ. ಪಾರದರ್ಶಕ ಇದೆ, ವೈಜ್ಞಾನಿಕವಾಗಿ ಇದೆ ಸಾರ್ವಜನಿಕ ವಲಯದಲ್ಲಿ ಇಡಲಿ ಎಂದು ಆಗ್ರಹಿಸಿದರು.

ಎನ್ ಕೌಂಟರ್ ಮಾಡಿದ್ದು ಸರಿ ಎಂದ ನಿಖಿಲ್

ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪಾತಕಿಯನ್ನು ಎನ್ ಕೌಂಟರ್ ಮಾಡಿದ್ದು ಸರಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಈ ಘಟನೆ ಅತ್ಯಂತ ಹೇಯ. ಮನುಕುಲವೇ ತಲೆ ತಗ್ಗಿಸುವ ಇಂಥ ಘಟನೆಗಳು ಪದೇ ಪದೇ ನಡೆಯುತ್ತಿವೆ. ಹುಬ್ಬಳ್ಳಿ ಪ್ರಕರಣದಲ್ಲಿ ಶೂಟ್ ಔಟ್ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಎರಡು ವರ್ಷಗಳಿಂದ ಅನೇಕ ಘಟನೆಗಳು ನಡೆಯುತ್ತಿವೆ. ಇಂತಹ ಪ್ರಕರಣಗಳು ನಡೆಯದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕಳೆದ ಎರಡು ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ ಅರಾಜಕತೆ ಮಿತಿಮೀರಿದೆ. ಮಹಿಳೆಯರು, ಮಕ್ಕಳು, ಜನಸಾಮಾನ್ಯರ ರಕ್ಷಣೆ, ಸುರಕ್ಷತೆ ಬಗ್ಗೆ ಕಾಳಜಿ ಇಲ್ಲವಾಗಿದೆ. ರಾಜ್ಯದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆ, ದರೋಡೆ, ಹಲ್ಲೆಯಂತಹ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಿಗೆ ಅಸುರಕ್ಷತೆಯ ಭಯ ಕಾಡುತ್ತಿದೆ ಎಂದು ಕಿಡಿಕಾರಿದರು.

Read More
Next Story