ಜಿಎಸ್ಟಿ ದರ ಸರಳೀಕರಣದಿಂದ ರಾಜ್ಯಕ್ಕೆ ವಾರ್ಷಿಕ 15 ಸಾವಿರ ಕೋಟಿ ರೂ.ಖೋತಾ
x

ಸಂಗ್ರಹ ಚಿತ್ರ.

ಜಿಎಸ್ಟಿ ದರ ಸರಳೀಕರಣದಿಂದ ರಾಜ್ಯಕ್ಕೆ ವಾರ್ಷಿಕ 15 ಸಾವಿರ ಕೋಟಿ ರೂ.ಖೋತಾ

ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದ ಆದಾಯದಲ್ಲಿ ವಾರ್ಷಿಕ ಸರಾಸರಿ 70 ಸಾವಿರ ಕೋಟಿ ರೂ. ಖೋತಾ ಆಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.


ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದ ಆದಾಯದಲ್ಲಿ ವಾರ್ಷಿಕ ಸರಾಸರಿ 70 ಸಾವಿರ ಕೋಟಿ ರೂ. ಖೋತಾ ಆಗುತ್ತಿದ್ದು, ಇದೀಗ ಕೇಂದ್ರ ಸರ್ಕಾರದ ದರ ಸರಳೀಕರಣ ಪ್ರಸ್ತಾವನೆಯಿಂದ ಹೆಚ್ಚುವರಿ 15 ಸಾವಿರ ಕೋಟಿ ರೂ. ಖೋತಾ ಆಗಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾಗುವ ಮೊದಲು ರಾಜ್ಯದ ಆದಾಯದ ಪ್ರಗತಿ ವರ್ಷಕ್ಕೆ ಶೇ.13 (ಐದು ವರ್ಷಗಳ ಸರಾಸರಿ). ಆದರೆ, ಈ ಪ್ರಮಾಣ ಇದೀಗ ಶೇ.11ಕ್ಕೆ ಇಳಿದಿದೆ. ರಾಜ್ಯದ ಆದಾಯ ಹಿಂದಿನ ವೇಗದಲ್ಲೇ ಮುಂದುವರೆದಿದ್ದರೆ 2024-25 ರಲ್ಲಿ ರಾಜ್ಯದ ಆದಾಯ 1,07,846 ಕೋಟಿ ರೂ. ಆಗಬೇಕಿತ್ತು. ಆದರೆ, ವಾಸ್ತವ ಆದಾಯ 77,169 ಕೋಟಿ ರೂ. ಮಾತ್ರ ಇದೆ. ಒಂದೇ ವರ್ಷದಲ್ಲಿ ರಾಜ್ಯದ ಆದಾಯ 30,677 ಕೋಟಿ ಆದಾಯ ಖೋತಾ ಆಗಿದೆ. ಇದೇ ರೀತಿ 2023-24 ರಲ್ಲಿ 24,170 ಕೋಟಿ ರೂ. ಮತ್ತು 2022-23 ರಲ್ಲಿ 22,654 ಕೋಟಿ ಖೋತಾ ಆಗಿತ್ತು ಎಂದು ಮಾಹಿತಿ ನೀಡಿದರು.

ಇದಲ್ಲದೆ, ಜಿಎಸ್‌ಟಿ ಜಾರಿಯಾದ ನಂತರ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು 2016-17 ರಿಂದ 2024-25ಕ್ಕೆ ಹೋಲಿಸಿದರೆ ವಾರ್ಷಿಕ 21,977 ಕೋಟಿ ರೂ. ಕಡಿತವಾಗಿದೆ. ಇನ್ನೂ ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ರಾಜ್ಯಕ್ಕೆ ಬರುವ ಅನುದಾನ ವಾರ್ಷಿಕ18,870 ಕೋಟಿ ರೂ. ಕಡಿತಗೊಂಡಿದೆ. ಇವೆಲ್ಲವನ್ನೂ ಒಟ್ಟು ಗೂಡಿಸಿದರೆ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ಆಗುತ್ತಿರುವ ಖೋತಾ 70 ಸಾವಿರ ಕೋಟಿ ರೂ. ಆಗಿದ್ದು, ಇದೀಗ ಜಿಎಸ್‌ಟಿ ದರ ಸರಳೀಕರಣ ಪ್ರಸ್ತಾವನೆಯಿಂದ ಹೆಚ್ಚುವರಿ 15 ಸಾವಿರ ಕೋಟಿ ರೂ. ಆದಾಯ ರಾಜ್ಯಕ್ಕೆ ಖೋತಾ ಆಗಲಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ನಮ್ಮ ಮುಂದಿಟ್ಟಿರುವ ಜಿಎಸ್‌ಟಿ ದರ ಸರಳೀಕರಣ ವ್ಯವಸ್ಥೆಯನ್ನು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು ಹಾಗೂ ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿರಬೇಕೆ ಹೊರತು ಕೆಲವು ಕಂಪೆನಿಗಳಿಗೆ ಮಾತ್ರ ಲಾಭ ಆಗುವಂತಿರಬಾರದು. ಪ್ರಸ್ತಾವಿತ ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ರಾಜ್ಯಗಳಿಗೆ ಭಾಗಶಃ 85 ಸಾವಿರ ಕೋಟಿ ರೂ.ನಿಂದ 2.5 ಲಕ್ಷ ಕೋಟಿ ರೂ.ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ. ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟ ಉಂಟಾದರೆ ಕೇಂದ್ರ ಸರ್ಕಾರಕ್ಕೂ ನಷ್ಟವಾಗಲಿದೆ. ಹೀಗಾಗಿ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಕೇಂದ್ರ ಸರ್ಕಾರ ತಮ್ಮ ಖಜಾನೆಯಿಂದ ಒಂದು ರೂಪಾಯಿಯನ್ನೂ ನೀಡುವ ಅಗತ್ಯವಿಲ್ಲ. ಬದಲಿಗೆ ಜಿಎಸ್ಟಿ ಕೌನ್ಸಿಲ್ ಪರಿಧಿಯಲ್ಲೇ ಪ್ರತಿಯೊಂದು ರಾಜ್ಯಗಳಿಗೂ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಕೇಂದ್ರದ ಆದಾಯದಲ್ಲಿ ಜಿಎಸ್‌ಟಿ ಪಾಲು ಕೇವಲ ಶೇ. 28ರಷ್ಟು ಮಾತ್ರ. ಉಳಿದ ಶೇ.72ರಷ್ಟು ಆದಾಯವನ್ನು ಕೇಂದ್ರ ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ , ಆದಾಯ ತೆರಿಗೆ, ಕಸ್ಟಮ್ಸ್, ಡೆವಿಡೆಂಟ್ ಹಾಗೂ ವಿವಿಧ ಸೆಸ್ ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ.17 ರಿಂದ ಶೇ.20 ರಷ್ಟು ಆದಾಯ ಗಳಿಸುತ್ತದೆ. ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಸಹ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್ಟಿ ಪಾಲು ಶೇ.50 ರಷ್ಟು. ಹೀಗಾಗಿ ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದ ಶೇ.20ರಷ್ಟು ಆದಾಯ ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಪ್ರಶ್ನಾರ್ಥಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.


ಜಿಎಸ್ಟಿಯನ್ನು ಪರಿಚಯಿಸುವಾಗ ಈ ನೂತನ ತೆರಿಗೆ ವ್ಯವಸ್ಥೆ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎನ್ನಲಾಗಿತ್ತು. ಇದು ನಿಜವಾಗಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದಾಯ ದುಪ್ಪಟ್ಟಾಗಬೇಕಿತ್ತು. ಆದರೆ, ಕಳೆದ 7-8 ವರ್ಷಗಳ ಅನುಭವದಲ್ಲಿ ಈ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಪ್ರತಿ ವರ್ಷವೂ ಎಲ್ಲಾ ರಾಜ್ಯಗಳ ನಿವ್ವಳ ಆದಾಯ ಗಣನೀಯವಾಗಿ ಇಳಿಯುತ್ತಲೇ ಇದೆ. ಜಿಎಸ್ಟಿಗೆ ಮುನ್ನ ವ್ಯಾಟ್ ಅಡಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದ ಕಾಲದಲ್ಲಿ ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇ 6.1 ರಷ್ಟು ಇತ್ತು. ಆದರೆ, ಈಗ ಜಿಎಸ್ಟಿ ಜಾರಿಯಾದ ಬಳಿಕ ಈ ಪ್ರಮಾಣ ಈವರೆಗೆ ಶೇ. 6.1ಕ್ಕೆ ತಲುಪಲಾಗಿಲ್ಲ. ಪ್ರಸ್ತುತ ಜಿಡಿಪಿಗೆ ಜಿಎಸ್ಟಿ ಕೊಡುಗೆ ಕೇವಲ ಶೇ. 5.8 ರಷ್ಟು ಮಾತ್ರ. ಒಟ್ಟರೆ ಜಿಎಸ್ಟಿಯಿಂದಾಗಿ ರಾಜ್ಯ ಹಾಗೂ ಕೇಂದ್ರಕ್ಕೆ ಆದಾಯ ನಷ್ಟವಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಜಿಎಸ್ಟಿ ತೆರಿಗೆ ವ್ಯವಸ್ಥೆಯನ್ನು 2017ರಲ್ಲಿ ಪರಿಚಯಿಸುವಾಗ ಕೇಂದ್ರ ಸರ್ಕಾರ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ರಾಜ್ಯಗಳಿಗೆ ತೆರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಹೇಳಿತ್ತು. ಆದರೆ, ಪರಿಹಾರ ವ್ಯವಸ್ಥೆಯನ್ನು 2022ಕ್ಕೆ ತೆಗೆದುಹಾಕಲಾಗಿತ್ತು. ಪರಿಣಾಮ ಬಹುಪಾಲು ರಾಜ್ಯಗಳು ಶೇ.25 ರಷ್ಟು ಆದಾಯ ನಷ್ಟ ಎದುರಿಸಿದ್ದವು. ರಾಜ್ಯಗಳ ಆದಾಯ ಶೇ.25 ರಷ್ಟು ಕುಸಿಯುತ್ತಿದ್ದ ಸಂದರ್ಭದಲ್ಲಿ ಜಿಎಸ್ಟಿ ಸ್ಥಿರಗೊಂಡಿದೆ ಎಂದು ಹೇಗೆ ಹೇಳಲಾಗುತ್ತದೆ. ಜಿಎಸ್ಟಿ ಸರಳೀಕರಣ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ನಾವು ತೆರಿಗೆ ಸರಳೀಕರಣದ ಪರ ಇದ್ದೇವೆ. ಆದರೆ, ರಾಜ್ಯದ ಆದಾಯವನ್ನೂ ಕಾಪಾಡಬೇಕು. ಸಂವಿಧಾನ 2/3 ಜನರ ಯೋಗಕ್ಷೇಮ ಹಾಗೂ ಅಭಿವೃದ್ಧಿ ಕರ್ತವ್ಯವನ್ನು ರಾಜ್ಯಕ್ಕೆ ನೀಡಿದೆ. ಆದರೆ, 2/3 ರಷ್ಟು ಆದಾಯವನ್ನು ಕೇಂದ್ರಕ್ಕೆ ನೀಡಿದೆ. ಈ ನಿಯಮ ರಾಜ್ಯಗಳ ಸುಸ್ಥಿರ ಅಭಿವೃದ್ಧಿಗೆ ಮಾರಕ. ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕೆಲಸಗಳನ್ನು ರಾಜ್ಯಗಳೇ ಮಾಡಬೇಕು. ಆದರೆ, ಆದಾಯ ಮಾತ್ರ ಕೇಂದ್ರದ ಪಾಲಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರೂ ಸಹ ಅವರ ಯೋಗಕ್ಷೇಮದ ಬೇಡಿಕೆ ಹಾಗೂ ಅಭಿವೃದ್ಧಿ ಅಗತ್ಯತೆಗಳಿಗೆ ರಾಜ್ಯ ಸರ್ಕಾರಗಳನ್ನೇ ಅವಲಂಬಿಸಿದ್ದಾರೆ. ಕೇಂದ್ರಗಳ ಕೊಡುಗೆಯೂ ಇದೆ. ಆದರೆ, ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳೇ ಅಧಿಕವಾಗಿದೆ ಎಂದರು.


Read More
Next Story