
GST Notice| ಯುಪಿಐ ವಹಿವಾಟು ನಿಲ್ಲಿಸಿದರೆ ಸಮಸ್ಯೆ ಬಗೆಹರಿಯಲ್ಲ, ಸೂಚನೆ ಪಾಲಿಸಿ; ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಸಲಹೆ
Stopping UPI transactions not solve the problem of GST Notice ;advises Joint Commissioner of Commercial Tax Department
ವಾಣಿಜ್ಯ ತೆರಿಗೆ ಇಲಾಖೆ ನೀಡುತ್ತಿರುವ ನೋಟಿಸ್‌ಗೆ ಸಣ್ಣ ವರ್ತಕರು, ಬೇಕರಿ ಹಾಗೂ ಕಾಂಡಿಮೆಂಟ್ಸ್ ವ್ಯಾಪಾರಿಗಳು ಆತಂಕಗೊಂಡು ಯುಪಿಐ (ಪೋನ್ ಪೇ, ಗೂಗಲ್ ಪೇ) ವಹಿವಾಟು ಬದಲು ನಗದು ವಹಿವಾಟಿನತ್ತ ವಾಲಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡುತ್ತಿರುವುದು ಚಿಂತೆ ಉಂಟು ಮಾಡಿದೆ. ಆದರೆ, ನೋಟಿಸ್ ನೀಡುತ್ತಿರುವ ಕ್ರಮ ಸಮರ್ಥಿಸಿಕೊಂಡಿರುವ ಇಲಾಖೆ ಅಧಿಕಾರಿಗಳು, ಇದು ಸಾಮಾನ್ಯ ಪ್ರಕ್ರಿಯೆ. ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದರೂ ಜಿಎಸ್‌ಟಿ ವ್ಯಾಪ್ತಿಯ ಹೊರಗಿರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ನೋಟಿಸ್‌ಗೆ ಯಾರೂ ಕೂಡ ವಿಚಲಿತರಾಗಬಾರದು. ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಪ್ರತಿಯೊಬ್ಬ ವ್ಯಾಪಾರಿಯೂ ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಜಿಎಸ್‌ಟಿ ನೋಟಿಸ್ ಹಾಗೂ ಯುಪಿಐ ಗೊಂದಲಗಳ ಕುರಿತು ʼದ ಫೆಡರಲ್ ಕರ್ನಾಟಕʼಕ್ಕೆ ವಿಶೇಷ ಸಂದರ್ಶನ ನೀಡಿದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾದ ಮೀರಾ ಪಂಡಿತ್ ಅವರು ಸಣ್ಣ ವರ್ತಕರಿಗೆ ಹಲವಾರು ಸಲಹೆ ಹಾಗೂ ಮಾರ್ಗೋಪಾಯಗಳನ್ನು ಸೂಚಿಸಿದ್ದಾರೆ.
ವರ್ತಕರ ಮುಂದಿರುವ ಆಯ್ಕೆಗಳೇನು?
ಸಣ್ಣ ವ್ಯಾಪಾರಿಗಳು ಡಿಜಿಟಲ್ ಪಾವತಿಯಿಂದ ಹಿಂದೆ ಸರಿದರೆ ಪ್ರಯೋಜನವಿಲ್ಲ. ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರ ಬದಲು ಇಲಾಖೆ ನೀಡಿರುವ ನೋಟಿಸ್‌ಗೆ ಸೂಕ್ತ ವಿವರಣೆ ನೀಡಬೇಕು. ಒಂದು ವೇಳೆ ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದ್ದರೆ ಅಥವಾ ನಡೆಸದೇ ಇದ್ದರೆ ಅದರ ಬಗ್ಗೆ ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಮೀರಾ ಪಂಡಿತ್ ಅವರು ಸಲಹೆ ನೀಡಿದ್ದಾರೆ.
ಜಿಎಸ್‌ಟಿ ನೋಟಿಸ್‌ಗೆ ಆತಂಕಪಡುವ ಅಗತ್ಯವಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ಒಳಪಡದ ಉತ್ಪನ್ನಗಳ ವಹಿವಾಟು ನಡೆಸಿದ್ದರೆ ಸೂಕ್ತ ವಿವರಣೆ ನೀಡುವುದರಿಂದ ದಂಡ ವಿನಾಯಿತಿ ಪಡೆಯಬಹುದು ಎಂದು ಹೇಳಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಪರಿಶೀಲನೆ ವೇಳೆ ತೆರಿಗೆ ವ್ಯಾಪ್ತಿಗೆ ಒಳಪಟ್ಟರಷ್ಟೇ ಶುಲ್ಕ ಪಾವತಿಸಬೇಕು. ಹೆಚ್ಚು ತೆರಿಗೆ ಹೊಂದಿರುವವರು ಕಾಂಪೋಸಿಷನ್ ಯೋಜನೆಯಡಿ ಮೂರು ತಿಂಗಳಿಗೊಮ್ಮೆ ಹಾಗೂ ಒಂದೂವರೆ ಕೋಟಿ ರೂ. ಗೂ ಹೆಚ್ಚು ವಹಿವಾಟು ಹೊಂದಿರುವವರು ರೆಗ್ಯುಲರ್ ಯೋಜನೆಯಡಿ ವರ್ಷಕ್ಕೆ ಒಂದು ಬಾರಿ ತೆರಿಗೆ ಕಟ್ಟುವ ಅವಕಾಶ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಜಿಎಸ್‌ಟಿ ವ್ಯಾಪ್ತಿಯ ನಿಯಮವೇನು?
ಸೇವೆ ಒದಗಿಸುವ ವ್ಯಾಪಾರದಲ್ಲಿ ತೊಡಗಿಸಿಕೊಂಡವರು ವಾರ್ಷಿಕ 20 ಲಕ್ಷ ರೂ. ಹಾಗೂ ಸರಕು ಪೂರೈಸುವ ವ್ಯಾಪಾರ ನಡೆಸುವವರು ವಾರ್ಷಿಕ 40 ಲಕ್ಷ ರೂ. ವಹಿವಾಟು ನಡೆಸಲು ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ನಿಗದಿತ ಮೊತ್ತಕ್ಕಿಂತ ಹೆಚ್ಚು ವಹಿವಾಟು ನಡೆಸಿದರೆ ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಬೇಕು. ಅಂತಹವರು ಸರ್ಕಾರಕ್ಕೆ ಇಂತಿಷ್ಟು ಶೇಕಡಾವಾರು ಜಿಎಸ್‌ಟಿ ಪಾವತಿಸಬೇಕಾಗಿದೆ.
ಬೆಂಗಳೂರಿನಲ್ಲಿ ಕೆಲ ಸಣ್ಣ ವರ್ತಕರು 60 ಲಕ್ಷ ರೂ.ಗಳಿಂದ ಹಿಡಿದು ಒಂದು ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸಿರುವುದು ಯುಪಿಐ ವಹಿವಾಟಿನಿಂದ ತಿಳಿದು ಬಂದಿದೆ. ಅದರ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ. 40 ಲಕ್ಷ ರೂ. ಗಿಂತ ಅಧಿಕ ವಹಿವಾಟು ನಡೆಸುವವರನ್ನು ಜಿಎಸ್‌ಟಿ ನೋಂದಣಿ ವ್ಯಾಪ್ತಿಗೆ ತರುವುದು ಇಲಾಖೆ ಉದ್ದೇಶ. ಜಿಎಸ್‌ಟಿ ನೋಂದಣಿ ಮಾಡಿಸಿಕೊಂಡವರು ಶೇ. 1 ರಷ್ಟು ತೆರಿಗೆ ಪಾವತಿಸಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಲಾಖೆಯಿಂದ ನಿರಂತರ ಜಾಗೃತಿ ಅಭಿಯಾನ
ಜಿಎಸ್‌ಟಿ ಜಾರಿಯಾದ ನಂತರದಿಂದ ವಾಣಿಜ್ಯ ತೆರಿಗೆ ಇಲಾಖೆಯು ಜಾಗೃತಿ ಆಂದೋಲನ ಮಾಡಿ ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಹಲವು ವ್ಯಾಪಾರಿಗಳು ವರ್ಷವೊಂದರಲ್ಲಿ 40 ಲಕ್ಷ ರೂ. ವಹಿವಾಟು ನಡೆಸುವುದಿಲ್ಲ ಎಂದು ತಿಳಿಸಿದ್ದರು. ಇದೀಗ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವಹಿವಾಟು ನಡೆಸಿರುವ ಮಾಹಿತಿಯನ್ನು ಯುಪಿಐನಿಂದ ಪಡೆಯಲಾಗಿದ್ದು, ಮಿತಿ ದಾಟಿದವರಿಗೆ ನೋಟಿಸ್ ನೀಡಲಾಗುತ್ತಿದೆ. ಈ ವ್ಯಾಪಾರಿಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವ ಸರಕುಗಳನ್ನು ಮಾರಾಟ ಮಾಡಿದ್ದರೆ ಶೇ.18 ತೆರಿಗೆ ಪಾವತಿಸಬೇಕು ಎಂದು ತಿಳಿಸಿದರು.
ನೋಟಿಸ್ ಪಡೆದಿರುವ ವರ್ತಕರು ಭಯ ಹಾಗೂ ಗೊಂದಲಕ್ಕೆ ಒಳಗಾಗಬಾರದು. ವಿವೇಚನೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಸರಕುಗಳ ಮಾರಾಟದಿಂದ ಪಡೆದ ಹಣಕ್ಕೆ ಬಡ್ಡಿ ಹಾಗೂ ದಂಡ ಎರಡನ್ನೂ ಕಟ್ಟಬೇಕು. ವಿವರಣೆ ವೇಳೆ ಜಿಎಸ್‌ಟಿ ವ್ಯಾಪ್ತಿಗೆ ಬಾರದ ಸರಕುಗಳನ್ನು ಮಾರಾಟ ಮಾಡಿದ್ದರೆ ಅದಕ್ಕೆ ತೆರಿಗೆ ಕಟ್ಟುವ ಅಗತ್ಯವಿಲ್ಲ. ನೋಟಿಸ್ ಕುರಿತು ಯಾವುದೇ ಪ್ರಶ್ನೆಗಳಿದ್ದರೂ ವಾಣಿಜ್ಯ ತೆರಿಗೆ ಇಲಾಖೆಗೆ ಆಗಮಿಸಿ ಸಂದೇಹ ಪರಿಹರಿಸಿಕೊಳ್ಳಬಹುದು ಎಂದು ಮೀರಾ ಪಂಡಿತ್ ಹೇಳಿದ್ದಾರೆ.
ಹಾಲು, ಹಣ್ಣು, ತರಕಾರಿಗೆ ವಿನಾಯ್ತಿ
ಹಣ್ಣು, ತರಕಾರಿ, ಹಾಲು ಮುಂತಾದ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ಇದೆ. ಆದರೆ, ಹಾಲಿನ ಉತ್ಪನ್ನಗಳಾದ ಮೊಸರು, ಪೇಡಾ, ಬಿಸ್ಕತ್ ಇತರೆ ಪದಾರ್ಥಗಳಿಗೆ ವಿನಾಯ್ತಿ ಇರುವುದಿಲ್ಲ. ಹಾಗಾಗಿ ವದಂತಿಗಳಿಗೆ ಕಿವಿಗೊಡಬಾರದು. ಇಲಾಖೆಯ ಅಧಿಕೃತ ಮಾಹಿತಿಯನ್ನಷ್ಟೇ ಪರಿಗಣಿಸಬೇಕು. ಅದಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ.
ಇನ್ನು ಗುಟ್ಕಾ ಮತ್ತು ಸಿಗರೇಟು ಉತ್ಪನ್ನಗಳಿಗೆ ಶೇ.28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ವರ್ತಕರು ತಮ್ಮದು ಯಾವ ವ್ಯಾಪಾರ ಎಂದು ತಿಳಿಸಿದರೆ ತೆರಿಗೆ ಕಡಿಮೆಯಾಗಲಿದೆ. ವರ್ತಕರಿಗೆ ನೋಟಿಸ್‌ಗೆ ಉತ್ತರಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಇ-ಮೇಲ್ ಅಥವಾ ನೇರವಾಗಿ ಕಚೇರಿಗೆ ಬಂದು ಮನವಿ ಸಲ್ಲಿಸಿದರೆ ಹೆಚ್ಚುವರಿ ಕಾಲಾವಕಾಶ ನೀಡಲಾಗುವುದು. ಕೂಡಲೇ ಉತ್ತರಿಸಬೇಕು ಎನ್ನುವ ಆತಂಕ ಬೇಡ, ಆದರೆ ನೋಟಿಸ್ ಗೆ ಉತ್ತರ ಕೊಡಲೇಬೇಕು ಎಂದು ಮೀರಾ ಪಂಡಿತ್ ತಿಳಿಸಿದರು.
ಇತ್ತೀಚೆಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ವರ್ತಕರ ಆತಂಕಗಳನ್ನು ನಿವಾರಿಸಲಾಗಿದೆ ಎಂದರು.
ಇಲಾಖೆ ಸ್ಪಷ್ಟನೆಗೆ ವರ್ತಕರಿಂದ ಸಂತೃಪ್ತಿ ಭಾವ
ಜಿಎಸ್ ಟಿ ನೋಟಿಸ್ ಕುರಿತಂತೆ ಸಾಕಷ್ಟು ವರ್ತಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇಲಾಖೆ ಸ್ಪಷ್ಟೀಕರಣದ ಬಳಿಕ ಹಲವರಿಗೆ ಸಮಾಧಾನವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಇತ್ತೀಚೆಗೆ ನಡೆದ ಸಂವಾದದಲ್ಲಿ ವರ್ತಕರೊಬ್ಬರು ಆತಂಕ ಬಗೆಹರಿಸಿಕೊಂಡಿದ್ದನ್ನು ಮೀರಾ ಅವರು ವಿವರಿಸಿದರು.
" ನೋಟಿಸ್ ಪಡೆದ ನಂತರ ನೆಮ್ಮದಿಯಾಗಿ ನಿದ್ದೆ ಮಾಡಿರಲಿಲ್ಲ. ಆದರೆ, ಸಂವಾದ ನಡೆಸಿದ ನಂತರ ಎಲ್ಲಾ ಅರ್ಥವಾಗಿದ್ದು ನೆಮ್ಮದಿಯಾಗಿ ನಿದ್ದೆ ಮಾಡುತ್ತೇನೆ" ಎಂದು ತಿಳಿಸಿದ್ದರು ಎಂದರು.
ಯಾವುದೇ ವರ್ತಕರು ಗೊಂದಲ ಇದ್ದರೆ ವಾಣಿಜ್ಯ ತೆರಿಗೆ ಇಲಾಖೆಗೆ ಬಂದು ಚರ್ಚೆಮಾಡಿ. ಸಹಾಯವಾಣಿ ಇದೆ ಸಲಹೆ ನೀಡಿದರು.
ಯುಪಿಐನಿಂದ ಮಾಹಿತಿ ಸಂಗ್ರಹ
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವಾ ವಿಶ್ಲೇಷಣಾ ವಿಭಾಗ( ಸರ್ವೀಸ್ ಅನಾಲಿಸಿಸ್ ವಿಂಗ್)ಇದೆ. ಇದು ಯುಪಿಐನಿಂದ ವರ್ತಕರ ಡಿಜಿಟಲ್ ವಹಿವಾಟಿಮ ಮಾಹಿತಿ ಪಡೆದಿದೆ. ಇದರಲ್ಲಿ ಕೆಲ ಸಣ್ಣ ಪುಟ್ಟ ವ್ಯಾಪಾರಿಗಳ ವಾರ್ಷಿಕ ವಹಿವಾಟು 40 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಇರುವುದು ತಿಳಿದುಬಂದಿದೆ. ಕಾಯ್ದೆಯ ನಿಯಮದಂತೆ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಸದ್ಯ 2021-22 ರಿಂದ 2024-25 ವರೆಗಿನ ಅವಧಿಗೆ ನೋಟಿಸ್ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಏನಿದು ಅಗ್ರಿಗೇಟ್ ಟರ್ನ್ ಓವರ್?
ತೆರಿಗೆ ವ್ಯಾಪ್ತಿಯ ಒಳಪಡುವ ಸರಕು ಸೇವೆ, ವಿನಾಯ್ತಿ ಹೊಂದಿರುವ, ನಿಲ್ ರೇಟೆಡ್, ಝಿರೋ ರೇಟೆಡ್ ಎಲ್ಲವನ್ನೂ ಒಳಗೊಂಡಿರುವುದಕ್ಕೆ ಅಗ್ರಿಗೇಟ್ ಟರ್ನ್ ಓವರ್ ಎಂದು ಕರೆಯಲಾಗುತ್ತದೆ.
ಕೆಲ ಸರಕು ಸೇವೆಗಳಿಗೆ ವಿನಾಯ್ತಿ ಇದ್ದರೂ ಟರ್ನ್ ಓವರ್ ನಲ್ಲಿ ಮಿತಿ ದಾಟಿದರೆ ಅವರೂ ಕೂಡ ಜಿಎಸ್ ಟಿ ನೋಂದಣಿ ಮಾಡಿಸಿಕೊಳ್ಳಬೇಕು. ಆಗ ವರ್ತಕರು ಹಾಲು, ಮೊಸರು ಇತರೆ ಉತ್ಪನ್ನಗಳನ್ನು ವರ್ಗೀಕರಿಸಿ ದಾಖಲೆ ಸಲ್ಲಿಸಬೇಕಿ. ವಿನಾಯ್ತಿ ಹೊಂದಿರುವ ಉತ್ಪನ್ನಗಳಿಗೆ ತೆರಿಗೆಕಟ್ಟಬೇಕಾಗಿಲ್ಲ ಎಂದು ವಿವರಿಸಿದರು.
ಇಂದು ಬೇಕರಿ, ಕಾಂಡಿಮೆಂಟ್ಸ್ ಉತ್ಪನ್ನ ಮಾರಾಟ ಬಂದ್
ವಾಣಿಜ್ಯ ತೆರಿಗೆ ಇಲಾಖೆಯು ನಾಲ್ಕು ವರ್ಷಗಳ ವಹಿವಾಟಿಗೆ ತೆರಿಗೆ ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚಿಸಿರುವುದು ಬಹುತೇಕರ ಆತಂಕಕ್ಕೆ ಕಾರಣವಾಗಿದೆ. ಹೀಗಿರುವಾಗ ಹಲವು ಮಂದಿ ಗೊಂದಲಗಳಿಗೆ ಒಳಗಾಗಿ ಯುಪಿಐ ವಹಿವಾಟನ್ನೇ ಸ್ಥಗಿತಗೊಳಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಕ್ರಮ ಖಂಡಿಸಿ ಜು.23 ಹಾಗೂ 24 ರಂದು ಬೇಕರಿ, ಕಾಂಡಿಮೆಂಟ್ಸ್ ಉತ್ಪನ್ನಗಳ ಮಾರಾಟ ಸ್ಥಗಿತಕ್ಕೂ ವ್ಯಾಪಾರಿಗಳು ಮುಂದಾಗಿದ್ದಾರೆ. ಅಲ್ಲದೇ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕೂಡ ನಡೆಸಲಿದ್ದಾರೆ.