GST Discrimination | ಕೇಂದ್ರದ ವಿರುದ್ಧ ನಮ್ಮ ತೆರಿಗೆ, ನಮ್ಮ ಹಕ್ಕು ಪ್ರತಿಭಟನೆ: ಡಿಕೆ ಶಿವಕುಮಾರ್​
x
ಡಿ.ಕೆ ಶಿವಕುಮಾರ್‌

GST Discrimination | ಕೇಂದ್ರದ ವಿರುದ್ಧ 'ನಮ್ಮ ತೆರಿಗೆ, ನಮ್ಮ ಹಕ್ಕು' ಪ್ರತಿಭಟನೆ: ಡಿಕೆ ಶಿವಕುಮಾರ್​

ದಕ್ಷಿಣಭಾರತದ ಎಲ್ಲಾ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂಪಾಯಿ ತೆರಿಗೆ ಪಾಲು ಕೊಡಲಾಗಿದೆ. ಆದರೆ ಉತ್ತರಪ್ರದೇಶ ರಾಜ್ಯವೊಂದಕ್ಕೇ 31,962 ಕೋಟಿ ರೂಪಾಯಿ ನೀಡಲಾಗಿದೆ.


Click the Play button to hear this message in audio format

ಜಿಎಸ್‌ಟಿ ತೆರಿಗೆ ಪಾಲು ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ನಿರಂತರ ತಾರತಮ್ಯವಾಗುತ್ತಿದೆ. ನಮ್ಮ ತೆರಿಗೆ ಹಣ ಉತ್ತರಪ್ರದೇಶ, ದೆಹಲಿ, ಬಿಹಾರಕ್ಕೆ ಕೊಡುತ್ತಿದ್ದಾರೆ. ಆಂಧ್ರಕ್ಕಿಂತ‌ಲೂ ಕಡಿಮೆ ಹಣ ನಮಗೆ ನೀಡಿದ್ದಾರೆ. ಅವರಿಗಿಂತ ಕೀಳಾಗಿದ್ದೇವಾ? ಈ ತಾರತಮ್ಯ ಖಂಡಿಸಿ, “ನಮ್ಮ ತೆರಿಗೆ ನಮ್ಮ ಹಕ್ಕು” ಎಂದು ಘೋಷಣೆಯಡಿ ಪ್ರತಿಭಟನೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತಿಹೆಚ್ಚು ತೆರಿಗೆ ಪಾವತಿಸುವ ನಮಗೆ ತಾರತಮ್ಯವಾಗುತ್ತಿದೆ. ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸರ್ಕಾರದಲ್ಲಿ ಐವರು ಸಚಿವರು ನಮ್ಮವರೇ ಇದ್ದಾರೆ. ನಮ್ಮಲ್ಲೇ ಇದ್ದುಕೊಂಡು ಈಗ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯಗಳಿಗೆ ಜಿಎಸ್‌ಟಿ ತೆರಿಗೆ ಪಾಲು ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ವರದಿ ಬಿಡುಗಡೆ ಮಾಡಿದೆ. ಈ ತೆರಿಗೆ ಹಂಚಿಕೆಯಲ್ಲಿ ದೇಶದಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂಪಾಯಿ ಕೊಡಲಾಗಿದೆ. ದಕ್ಷಿಣ ಭಾರತ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂಪಾಯಿ ತೆರಿಗೆ ಪಾಲು ಕೊಡಲಾಗಿದೆ. ಆದರೆ ಉತ್ತರಪ್ರದೇಶ ರಾಜ್ಯವೊಂದಕ್ಕೆ 31,962 ಕೋಟಿ ರೂಪಾಯಿ ನೀಡಲಾಗಿದೆ. ಈ ತಾರತಮ್ಯ ದಕ್ಷಿಣ ರಾಜ್ಯಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಆ ಹಿನ್ನೆಲೆಯಲ್ಲಿ ಇದೀಗ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ʼನಮ್ಮ ತೆರಿಗೆ ನಮ್ಮ ಹಕ್ಕುʼ ಘೋಷಣೆಯಡಿ ಹೋರಾಟಕ್ಕೆ ಕರೆ ನೀಡಿದ್ದಾರೆ.

ವಿಜಯದಶಮಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶುಕ್ರವಾರ ನೀಡಿದ್ದ ದುಷ್ಟ ಸಂಹಾರ, ಶಿಷ್ಟ ರಕ್ಷಣೆ ಎಂಬ ಶೀರ್ಷಿಕೆಯ ಜಾಹೀರಾತಿಗೆ ವಿಪಕ್ಷಗಳು ಆಕ್ಷೇಪ ಎತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಮಗಿರುವ ಮಾಹಿತಿಯನ್ನು ಜಾಹೀರಾತು ರೂಪದಲ್ಲಿ ನೀಡಿದ್ದೇವೆ. ನಾವು ಮುನ್ನಡೆಯುತ್ತಿರುವ ದಾರಿಯ ಆಧಾರದ ಮೇಲೆ ಮತ್ತು ನಮ್ಮ ಭಾವನೆಗಳ ಮೇಲೆ ಜಾಹೀರಾತು ನೀಡಿದ್ದೇವೆ. ನಮ್ಮ ಸರ್ಕಾರದ ಸಾಧನೆ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡುತ್ತೇವೆ ಎಂದರು.

Read More
Next Story