
ಬೆಂಗಳೂರಿನ ಹೋಟೆಲ್ ಗ್ರಾಹಕರಿಗೆ ಸಿಗುತ್ತಿಲ್ಲ ಜಿಎಸ್‌ಟಿ 'ಬಚತ್ ಉತ್ಸವ'ದ ಲಾಭ
ಸರ್ಕಾರವು ಆಹಾರ ವಸ್ತುಗಳು, ಔಷಧಿ, ಸೋಪ್, ಟೂತ್‌ಪೇಸ್ಟ್, ವಿಮೆಗಳು ಸೇರಿದಂತೆ ಹಲವಾರು ದಿನನಿತ್ಯದ ಅಗತ್ಯ ವಸ್ತುಗಳನ್ನು 5% ಸ್ಲ್ಯಾಬ್‌ಗೆ ವರ್ಗಾಯಿಸಿ ಜನರ ಆರ್ಥಿಕ ಹೊರೆ ಕಡಿಮೆ ಮಾಡಿದೆ.
ಹಬ್ಬದ ಋತುವಿನಲ್ಲಿ ದೇಶದ ಜನತೆಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ, ಇತ್ತೀಚಿನ ಜಿಎಸ್‌ಟಿ 2.0 ಬದಲಾವಣೆಗಳ ಅಡಿಯಲ್ಲಿ 'ಜಿಎಸ್‌ಟಿ ಬಚತ್ ಉತ್ಸವ' ಎಂಬ 100 ದಿನಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನದ ಮೂಲಕ ತೆರಿಗೆ ಕಡಿತದ ಲಾಭವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಆದರೆ, ಐಟಿ ರಾಜಧಾನಿ ಬೆಂಗಳೂರಿನಲ್ಲಿ, ಹೋಟೆಲ್‌ಗಳ ತಿನಿಸು ಅವಲಂಬಿಸಿರುವ ಲಕ್ಷಾಂತರ ಜನರಿಗೆ ಈ 'ಉಳಿತಾಯ ಉತ್ಸವ' ನಿರಾಸೆ ಮೂಡಿಸಿದೆ.
ಹೊಸ ಜಿಎಸ್‌ಟಿ ನೀತಿಯಡಿ, ಸೋಪು, ಟೂತ್‌ಪೇಸ್ಟ್, ಔಷಧಿಗಳು, ಮತ್ತು ಆಹಾರ ಪದಾರ್ಥಗಳಂತಹ 99% ದಿನಬಳಕೆ ವಸ್ತುಗಳನ್ನು 12% ರಿಂದ 5% ತೆರಿಗೆ ಸ್ಲ್ಯಾಬ್‌ಗೆ ಇಳಿಸಲಾಗಿದೆ. ಇದರಿಂದ ರೈತರು, ಮಹಿಳೆಯರು, ಯುವಕರು ಮತ್ತು ಮಧ್ಯಮ ವರ್ಗದವರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಬದಲಾವಣೆಯು ವ್ಯಾಪಾರವನ್ನು ಸುಲಭಗೊಳಿಸಿ, ಆರ್ಥಿಕತೆಗೆ ಚೈತನ್ಯ ನೀಡಲಿದೆ ಎಂದು ಸರ್ಕಾರ ಹೇಳಿದೆ.
ಬೆಂಗಳೂರಿನ ಹೋಟೆಲ್ ಗ್ರಾಹಕರಿಗೆ ಯಾಕಿಲ್ಲ ಲಾಭ?
ಕೇಂದ್ರ ಸರ್ಕಾರದ ಈ ಘೋಷಣೆ ಜನಸಾಮಾನ್ಯರಲ್ಲಿ ಸಂತಸ ಮೂಡಿಸಿದರೂ, ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಹೋಟೆಲ್ ಆಹಾರವನ್ನೇ ಅವಲಂಬಿಸಿರುವವರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ. ಇದಕ್ಕೆ ಕಾರಣ, ಹೋಟೆಲ್ ಮಾಲೀಕರ ನಿರ್ಧಾರ.
ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡುತ್ತಾ, "ನಾವು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮತ್ತು ಬಾಡಿಗೆ ಕಟ್ಟಡಗಳ ಮೇಲಿನ ಜಿಎಸ್‌ಟಿಯನ್ನು 5% ಕ್ಕೆ ಇಳಿಸುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ, ಈ ಬೇಡಿಕೆ ಈಡೇರಿಲ್ಲ. ಅಡುಗೆ ಅನಿಲ ಮತ್ತು ಬಾಡಿಗೆಯ ಮೇಲೆ ಈಗಲೂ 18% ಜಿಎಸ್‌ಟಿ ಪಾವತಿಸುತ್ತಿದ್ದೇವೆ. ಹೀಗಿರುವಾಗ ನಾವು ಆಹಾರದ ಬೆಲೆಯನ್ನು ಹೇಗೆ ಕಡಿಮೆ ಮಾಡಲು ಸಾಧ್ಯ?" ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಹೋಟೆಲ್‌ಗಳಿಗೆ ಬೇಕಾದ ತರಕಾರಿ, ಹಾಲು, ಮಾಂಸದಂತಹ ಕಚ್ಚಾ ವಸ್ತುಗಳಿಗೆ ಮೊದಲಿನಿಂದಲೂ ಜಿಎಸ್‌ಟಿ ಇರಲಿಲ್ಲ. ಆದರೆ, ಪ್ರಮುಖ ನಿರ್ವಹಣಾ ವೆಚ್ಚಗಳಾದ ಅನಿಲ ಮತ್ತು ಬಾಡಿಗೆ ಮೇಲಿನ ತೆರಿಗೆ ಹೊರೆ ಕಡಿಮೆಯಾಗದ ಕಾರಣ, ಜಿಎಸ್‌ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ,
ಯಾವ ವಸ್ತುಗಳ ಮೇಲೆ ತೆರಿಗೆ ಇಳಿದಿದೆ?
ಸರ್ಕಾರದ ಆದೇಶದ ಪ್ರಕಾರ, ರೊಟ್ಟಿ, ಪರೋಟಾಗಳಿಗೆ ಶೂನ್ಯ ಜಿಎಸ್‌ಟಿ, ಪನೀರ್, ಬೆಣ್ಣೆ, ತುಪ್ಪದಂತಹ ಉತ್ಪನ್ನಗಳಿಗೆ 5% ಜಿಎಸ್‌ಟಿ ನಿಗದಿಪಡಿಸಲಾಗಿದೆ. ಆದರೂ, ಈ ಕಡಿತದ ಲಾಭ ರೆಸ್ಟೋರೆಂಟ್‌ಗಳ ಮೆನು ಕಾರ್ಡ್‌ನಲ್ಲಿ ಕಾಣಿಸುತ್ತಿಲ್ಲ. ಇದರಿಂದ ಮಾಡಿದ ವಸ್ತುಗಳ ಬೆಲೆ ಹಿಂದಿನಂತೆಯೇ ಇದೆ. ಹೀಗಾಗಿ ಜಿಎಸ್‌ಟಿ ಕಡಿತದಿಂದ ಆಹಾರ ಉತ್ಪನ್ನಗಳ ಬೆಲೆ ಇಳಿಕೆಯ ಕನಸು ಕಾಣುತ್ತಿದ್ದ ಜನರಿಗೆ ನಿರಾಸೆಯಾಗಿದೆ.
ಇನ್‌ಪುಟ್ ಟ್ಯಾಕ್ಸ್ ಸೌಲಭ್ಯ ಇಲ್ಲ
ಸರ್ಕಾರವು ಹೋಟೆಲ್‌ಗಳ ಮೇಲಿನ ಜಿಎಸ್‌ಟಿಯನ್ನು 18% ರಿಂದ 5% ಕ್ಕೆ ಇಳಿಸಿದರೂ, ಹೋಟೆಲ್ ಊಟದ ಬೆಲೆ ಕಡಿಮೆಯಾಗದಿರಲು ಮುಖ್ಯ ಕಾರಣ 'ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್' (ITC) ಸೌಲಭ್ಯವನ್ನು ಹಿಂಪಡೆದಿರುವುದು. ಹಿಂದೆ 18% ಜಿಎಸ್‌ಟಿ ಇದ್ದಾಗ, ಹೋಟೆಲ್‌ಗಳು ತಾವು ಖರೀದಿಸುವ ಕಚ್ಚಾ ಸಾಮಗ್ರಿಗಳು, ಗ್ಯಾಸ್, ಮತ್ತು ಇತರ ಸೇವೆಗಳ ಮೇಲೆ ಪಾವತಿಸಿದ ಜಿಎಸ್‌ಟಿಯನ್ನು 'ಇನ್‌ಪುಟ್ ಕ್ರೆಡಿಟ್' ಆಗಿ ಮರಳಿ ಪಡೆಯುತ್ತಿದ್ದವು. ಇದರಿಂದ ಅವರ ಒಟ್ಟಾರೆ ವೆಚ್ಚ ಕಡಿಮೆಯಾಗುತ್ತಿತ್ತು. ಆದರೆ, ಹೊಸ 5% ಜಿಎಸ್‌ಟಿ ನಿಯಮದ ಪ್ರಕಾರ, ಹೋಟೆಲ್‌ಗಳಿಗೆ ಈ ITC ಸೌಲಭ್ಯ ಲಭ್ಯವಿಲ್ಲ. ಇದರರ್ಥ, ಹೋಟೆಲ್‌ಗಳು ತಮ್ಮ ಕಚ್ಚಾ ಸಾಮಗ್ರಿಗಳ ಮೇಲಿನ ತೆರಿಗೆಯನ್ನು ತಾವೇ ಭರಿಸಬೇಕಾಗುತ್ತದೆ. ಈ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು, ಅವರು ಊಟದ ಮೂಲ ಬೆಲೆಯನ್ನು ಹೆಚ್ಚಿಸುತ್ತಾರೆ. ಹೀಗಾಗಿ, ಜಿಎಸ್‌ಟಿ ಕಡಿಮೆಯಾದರೂ, ಗ್ರಾಹಕರಿಗೆ ಸಿಗಬೇಕಾದ ಸಂಪೂರ್ಣ ಲಾಭ ಸಿಗುವುದಿಲ್ಲ ಎಂದು ಪರಿಣತರು ಅಂದಾಜಿಸಿದ್ದಾರೆ.
ಎಷ್ಟು ಜನರಿಗೆ ಹೋಟೆಲ್ ಊಟವೇ ಪರಮಾನ್ನ?
ನಗರದ ಸುಮಾರು 25 ರಿಂದ 30 ಲಕ್ಷ ಜನರು ತಮ್ಮ ದೈನಂದಿನ ಊಟಕ್ಕಾಗಿ ಹೋಟೆಲ್‌ಗಳನ್ನೇ ನೆಚ್ಚಿಕೊಂಡಿದ್ದಾರೆ ಎಂದು ಅಂದಾಜಿಸಬಹುದು. ಈ ಬೃಹತ್ ಗ್ರಾಹಕ ವರ್ಗವು ಬೆಂಗಳೂರಿನ ಹೋಟೆಲ್ ಉದ್ಯಮದ ಬೆನ್ನೆಲುಬಾಗಿದೆ. ಬೆಂಗಳೂರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರವಾಗಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಮತ್ತು ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಅವಿವಾಹಿತ ಯುವಕ-ಯುವತಿಯರು ವಾಸಿಸುತ್ತಿದ್ದಾರೆ.
ಇವರಲ್ಲಿ ಬಹುತೇಕರು ಪಿಜಿ ಅಥವಾ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಅಡುಗೆ ಮಾಡಲು ಸಮಯ ಅಥವಾ ಸೌಲಭ್ಯಗಳ ಕೊರತೆಯಿಂದಾಗಿ ಹೋಟೆಲ್‌ಗಳು ಮತ್ತು ಸ್ವಿಗ್ಗಿ, ಜೊಮ್ಯಾಟೊದಂತಹ ಆನ್‌ಲೈನ್ ಫುಡ್ ಡೆಲಿವರಿ ಸೇವೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ.
ಬೆಂಗಳೂರಿನಲ್ಲಿ ಎಷ್ಟು ಹೋಟೆಲ್‌ಗಳಿವೆ?
ವಿವಿಧ ಅಂದಾಜುಗಳ ಪ್ರಕಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳನ್ನು ಒಟ್ಟಿಗೆ ಸೇರಿಸಿದಾಗ, ಸುಮಾರು 30,000ಕ್ಕೂ ಹೆಚ್ಚು ಹೋಟೆಲ್‌ಗಳಿವೆ ಎಂದು ಹೇಳಲಾಗುತ್ತದೆ. ಈ ಬೃಹತ್ ಸಂಖ್ಯೆಯಲ್ಲಿ ಸಣ್ಣ ಉಪಹಾರ ಗೃಹಗಳು, ಕ್ಷಿಪ್ರವಾಗಿ ಊಟ ನೀಡುವ ದರ್ಶಿನಿಗಳು, ಮಧ್ಯಮ ಗಾತ್ರದ ರೆಸ್ಟೋರೆಂಟ್‌ಗಳು, ಮತ್ತು ಐಷಾರಾಮಿ ಸ್ಟಾರ್ ಹೋಟೆಲ್‌ಗಳು ಸೇರಿವೆ. ಬೆಂಗಳೂರಿನ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ 'ದರ್ಶಿನಿ' ಮಾದರಿಯ ಹೋಟೆಲ್‌ಗಳೇ ಸಾವಿರಾರು ಸಂಖ್ಯೆಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ.
ಆಶ್ಚರ್ಯಕರ ಸಂಗತಿಯೆಂದರೆ, ನಗರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೋಟೆಲ್‌ಗಳಿದ್ದರೂ, ಅಧಿಕೃತವಾಗಿ ಉದ್ದಿಮೆ ಪರವಾನಗಿ (Trade License) ಪಡೆದು ಕಾರ್ಯನಿರ್ವಹಿಸುತ್ತಿರುವ ಹೋಟೆಲ್‌ಗಳ ಸಂಖ್ಯೆ ಅತ್ಯಂತ ಕಡಿಮೆ. 2024ರ ವರದಿಯೊಂದರ ಪ್ರಕಾರ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೇವಲ 316 ಹೋಟೆಲ್‌ಗಳು ಮಾತ್ರ ಅಧಿಕೃತ ಪರವಾನಗಿ ಹೊಂದಿವೆ. ಇದರರ್ಥ, ಬಹುಪಾಲು ಸಣ್ಣ, ಪುಟ್ಟ ಹೋಟೆಲ್‌ಗಳು ಅನೌಪಚಾರಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಬೆಂಗಳೂರಿನ ಜನರು ಹೆಚ್ಚುತಿನ್ನುವ ಆಹಾರ ಯಾವುದು?
ಬೆಂಗಳೂರಿನಲ್ಲಿ ಬೆಳಗಿನ ಉಪಹಾರಕ್ಕೆ ಬೆಂಗಳೂರಿನಲ್ಲಿ ಇಡ್ಲಿ-ವಡೆ ಮತ್ತು ಮಸಾಲೆ ದೋಸೆ ಅತ್ಯಂತ ಜನಪ್ರಿಯವಾಗಿವೆ. ನಗರದ ಯಾವುದೇ ದರ್ಶಿನಿ ಅಥವಾ ಉಪಹಾರ ಗೃಹಕ್ಕೆ ಹೋದರೂ ಇವು ಖಚಿತವಾಗಿ ಲಭ್ಯವಿರುತ್ತವೆ. ಇವುಗಳ ಜೊತೆಗೆ, ಖಾರಾ ಬಾತ್, ಕೇಸರಿ ಬಾತ್ (ಚೌ ಚೌ ಬಾತ್), ಪೊಂಗಲ್, ಪೂರಿ-ಸಾಗು ಮತ್ತು ಅಕ್ಕಿ ರೊಟ್ಟಿಯಂತಹ ಖಾದ್ಯಗಳು ಹೆಚ್ಚು ಮಾರಾಟವಾಗುತ್ತವೆ.
ಮಧ್ಯಾಹ್ನದ ಊಟಕ್ಕೆ, ಬಹುತೇಕರು ದಕ್ಷಿಣ ಭಾರತದ ಊಟ ಅಥವಾ ಅನ್ನ ಸಾಂಬಾರ್ ಅನ್ನು ಇಷ್ಟಪಡುತ್ತಾರೆ. ಇದರಲ್ಲಿ ಅನ್ನ, ಸಾಂಬಾರ್, ರಸಂ, ಪಲ್ಯ, ಮತ್ತು ಮೊಸರು ಇರುತ್ತದೆ. ಇದಲ್ಲದೆ, ಬಿಸಿ ಬೇಳೆ ಬಾತ್ ಬೆಂಗಳೂರಿನ ಜನರ ಅಚ್ಚುಮೆಚ್ಚಿನ ತಿಂಡಿ. ರಾತ್ರಿಯ ಊಟಕ್ಕೆ ಚಪಾತಿ, ರೈಸ್ ಬಾತ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳ ಪ್ರಭಾವದಿಂದಾಗಿ, ಬಿರಿಯಾನಿ ಮತ್ತು ವಿವಿಧ ಬಗೆಯ ನೂಡಲ್ಸ್‌ಗಳು ಕೂಡ ಅತ್ಯಂತ ಜನಪ್ರಿಯವಾಗಿವೆ.