ತುಮಕೂರಿನಲ್ಲಿ ಭೀಕರ ಕೊಲೆ: ಪತ್ನಿಯ ಕತ್ತು ಮತ್ತು ಮುಖಕ್ಕೆ 20ಕ್ಕೂ ಹೆಚ್ಚು ಬಾರಿ ಇರಿದು ಪತಿ ಪರಾರಿ
x

ತುಮಕೂರಿನಲ್ಲಿ ಭೀಕರ ಕೊಲೆ: ಪತ್ನಿಯ ಕತ್ತು ಮತ್ತು ಮುಖಕ್ಕೆ 20ಕ್ಕೂ ಹೆಚ್ಚು ಬಾರಿ ಇರಿದು ಪತಿ ಪರಾರಿ

ಎರಡು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು ಹಾಘೂ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.



ಜಿಲ್ಲೆಯ ಹೊರವಲಯದ ಅಂತರಸನಹಳ್ಳಿಯಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ಪತಿ-ಪತ್ನಿ ನಡುವಿನ ವೈಯಕ್ತಿಕ ಕಲಹ ವಿಕೋಪಕ್ಕೆ ತಿರುಗಿ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಜಗಳದ ವೇಳೆ ಪತಿ ತನ್ನ ಪತ್ನಿಯನ್ನು ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಕೊಲೆಯಾದ ಮಹಿಳೆಯನ್ನು ಗೀತಾ (20) ಎಂದು ಗುರುತಿಸಲಾಗಿದೆ.

ಎರಡು ವರ್ಷಗಳ ಹಿಂದೆ ನವೀನ್‌ನನ್ನು ವಿವಾಹವಾಗಿದ್ದ ಗೀತಾ, ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಮನೆಯಲ್ಲಿ ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಮನೆಯ ಮಾಲೀಕರು ಬಾಡಿಗೆ ಪಡೆಯಲು ಬಂದಾಗ, ಮನೆಯೊಳಗೆ ಗೀತಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.

ತಕ್ಷಣವೇ ಮನೆಯ ಮಾಲೀಕರು ತುಮಕೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ನವೀನ್ ತನ್ನ ಪತ್ನಿ ಗೀತಾಳನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತ ಗೀತಾಳ ಕುತ್ತಿಗೆ ಮತ್ತು ಮುಖಕ್ಕೆ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ, ಪೊಲೀಸರು ಆರೋಪಿ ನವೀನ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Next Story