ಗೃಹಲಕ್ಷ್ಮಿ ಯಶೋಗಾಥೆ | ಹಣ ಕೂಡಿಟ್ಟು ಬೋರ್‌ವೆಲ್‌ ಕೊರೆಸಿದ ಅತ್ತೆ-ಸೊಸೆ!
x

ಗೃಹಲಕ್ಷ್ಮಿ ಯಶೋಗಾಥೆ | ಹಣ ಕೂಡಿಟ್ಟು ಬೋರ್‌ವೆಲ್‌ ಕೊರೆಸಿದ ಅತ್ತೆ-ಸೊಸೆ!

ಅತ್ತೆ- ಸೊಸೆ ಸೇರಿ ತಮ್ಮ ಗೃಹಲಕ್ಷ್ಮಿ ಯೋಜನೆ ಹಣದಲ್ಲೇ ಕೊಳವೆಬಾವಿ ಕೊರೆಸಿ ಕೃಷಿಗೆ, ಆ ಮೂಲಕ ತಮ್ಮ ಸಂಸಾರದ ಆದಾಯಕ್ಕೆ ಭದ್ರ ಬುನಾದಿ ಹಾಕಿದ ಅಪರೂಪದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.


ರಾಜ್ಯ ಸರ್ಕಾರ ಪ್ರತಿ ಮನೆಯ ಯಜಮಾನತಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿದ್ದಾಗ, ಈ ಯೋಜನೆ ಅತ್ತೆ-ಸೊಸೆ ನಡುವೆ ಜಗಳ ತಂದಿಡಲಿದೆ ಎಂದು ಪ್ರತಿಪಕ್ಷ ನಾಯಕರು ಟೀಕಿಸಿದ್ದರು.

ಆದರೆ, ಇದೀಗ ಅತ್ತೆ- ಸೊಸೆ ಸೇರಿ ತಮ್ಮ ಗೃಹಲಕ್ಷ್ಮಿ ಯೋಜನೆ ಹಣದಲ್ಲೇ ಕೊಳವೆಬಾವಿ ಕೊರೆಸಿ ಕೃಷಿಗೆ, ಆ ಮೂಲಕ ತಮ್ಮ ಸಂಸಾರದ ಆದಾಯಕ್ಕೆ ಭದ್ರ ಬುನಾದಿ ಹಾಕಿದ ಅಪರೂಪದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಅತ್ತೆಯೊಬ್ಬರು ತನ್ನ ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟದ್ದು, ಅಜ್ಜಿಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಪತಿಯ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಗೃಹಲಕ್ಷ್ಮಿ ಹಣ ಬಳಸಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಹಳ್ಳಿಯ ಮಕ್ಕಳ ಅನುಕೂಲಕ್ಕಾಗಿ ಗ್ರಂಥಾಲಯದ ತೆರೆದಿದ್ದು,.. ರಾಜ್ಯದ ಮೂಲೆಮೂಲೆಯ ಹತ್ತು ಹಲವು ಯಶೋಗಾಥೆಗಳು ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಯಶಸ್ಸಿಗೆ ಉದಾಹರಣೆಗಳಾಗಿವೆ.

ಇದೀಗ ಆ ಸಾಲಿಗೆ ಹೊಸ ಸೇರ್ಪಡೆಯಾಗಿ ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದ ಮಾಬುಬಿ ಮತ್ತು ರೋಷನ್ ಬೇಗಂ ಅವರ ವಿವೇಚನೆಯ ಕಾರ್ಯ ಸೇರಿದೆ.

ಅತ್ತೆ ಮಾಬುಬಿ ಮತ್ತು ಸೊಸೆ ರೋಷನ್ ಬೇಗಂ ಅವರು ತಮ್ಮ ಗೃಹಲಕ್ಷಿ ಯೋಜನೆಯ ಹಣವನ್ನು ಕೂಡಿಟ್ಟು 44 ಸಾವಿರ ರೂಪಾಯಿಗಳನ್ನು ಹೊಂದಿಸಿ ಮನೆಯ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲು ನೀಡಿದ್ದಾರೆ. ಒಣಭೂಮಿಗೆ ನೀರು ಹಾಯಿಸಿ, ಬೆಳೆಗೆ ನೀರಿನ ಆಸರೆ ಕಲ್ಪಿಸುವ ಮೂಲಕ ಸಂಸಾರಕ್ಕೆ ಆರ್ಥಿಕ ಭದ್ರತೆ ನೀಡುವ ಈ ಮಹತ್ಕಾರ್ಯಕ್ಕೆ ಅತ್ತೆ – ಸೊಸೆ ಕೈಜೋಡಿಸಿದ್ದಾರೆ.

ಕೊಳವೆ ಬಾವಿ ತೆಗೆಸಲು ಒಟ್ಟು 60 ಸಾವಿರ ರೂಪಾಯಿ ವೆಚ್ಚವಾಗಿದ್ದು, ಆ ಪೈಕಿ ಅತ್ತೆ-ಸೊಸೆಯರ ಹಣ 44 ಸಾವಿರ ರೂಪಾಯಿ ಮತ್ತು ಕುಟುಂಬದಿಂದ ಉಳಿದ ಮೊತ್ತವನ್ನು ಭರಿಸಲಾಗಿದೆ. ಸರ್ಕಾರದ ಹಣದ ಸದುಪಯೋಗದ ಅತ್ತೆ – ಸೊಸೆಯರ ಈ ಒಳ್ಳೆತನದ ಕಾರಣವೋ ಎಂಬಂತೆ ಕೊಳವೆ ಬಾವಿಯಲ್ಲಿ ಉತ್ತಮ ನೀರು ಬಂದಿದ್ದು, ಕುಟುಂಬಕ್ಕೆ ಆಸರೆಯಾಗುವ ಭರವಸೆ ಮೂಡಿದೆ.

ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಕೊರೆಸಿದ ಕೊಳವೆಬಾವಿ ಬಳಿ ಅತ್ತೆ-ಸೊಸೆ ಜೋಡಿ

ಆ ಖುಷಿಯಲ್ಲೇ ವಿಡಿಯೋ ಮಾಡಿರುವ ಅತ್ತೆ ಮಾಬುಬಿ ಮತ್ತು ಸೊಸೆ ರೋಷನ್ ಬೇಗಂ, ಗೃಹಲಕ್ಷ್ಮಿ ಯೋಜನೆ ಮತ್ತು ಸರ್ಕಾರಕ್ಕೆ ಕೈಮುಗಿದು ಧನ್ಯವಾದ ಸಲ್ಲಿಸಿದ್ದಾರೆ.

ಬೋರ್ವೆಲ್ನಿಂದಾಗಿ ನಮ್ಮ ಒಣಭೂಮಿಗೆ ನೀರು ಬಂದಿದೆ. ಬದುಕಿಗೆ ಆಸರೆಯಾಗಲಿದೆ. ಇನ್ನು ನಿಶ್ಚಿಂತೆಯಿಂದ ಜೀವನ ನಡೆಸಬಹುದು. ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದಾಗಿ ಕುಟುಂಬಕ್ಕೆ ಅನುಕೂಲವಾಗಿದೆ. ನಮ್ಮ ಬದುಕಿಗೆ ಆಸರೆಯಾಗಿದೆ. ಅವರಿಗೆ ಧನ್ಯವಾದಗಳು ಎಂದೂ ಮಾಬುಬಿ ಹೇಳಿದ್ದಾರೆ.

ಆ ಮೂಲಕ ಮಹಿಳೆಯರ ಕೈಗೆ ಸರ್ಕಾರ ಹಣ ನೀಡಿದರೆ ಅದನ್ನು ಮೇಕಪ್ ಸಾಮಗ್ರಿಗಾಗಿ, ದುಂದುವೆಚ್ಚಕ್ಕಾಗಿ ಕರ್ಚು ಮಾಡುತ್ತಾರೆ. ಈ ಯೋಜನೆಯಿಂದ ಜನರ ತೆರಿಗೆ ಹಣ ವ್ಯಯವಾಗಲಿದೆ ಎಂಬ ಟೀಕೆಗಳಿಗೆ ಈ ಅತ್ತೆ-ಸೊಸೆ ಜೋಡಿಯ ಈ ಮಹತ್ಕಾರ್ಯ ಉತ್ತರ ಕೊಟ್ಟಿದೆ.

ಹಾಗೆ ನೋಡಿದರೆ, ಪಿಯುಸಿಯಲ್ಲಿ ರಾಜ್ಯಕ್ಕೇ ದ್ವಿತೀಯ ರ್ಯಾಂಕ್ ಬಂದ ವಿದ್ಯಾರ್ಥಿಯ ವಿದ್ಯಾಭ್ಯಾಸದಿಂದ ಹಿಡಿದು ಗ್ರಂಥಾಲಯ ತೆರೆಯುವವರೆಗೆ ಗೃಹಲಕ್ಷ್ಮಿ ಹಣವನ್ನು ಹೆಂಗಳೆಯರು ಕುಟುಂಬ, ಸಮಾಜಕ್ಕಾಗಿ ಸದುಪಯೋಗ ಮಾಡಿದ ನೂರಾರು ನಿದರ್ಶನಗಳು ಇವೆ. ಅಂತಹ ಸಾಲಿಗೆ ಇದೀಗ ಗಜೇಂದ್ರಗಢದ ಈ ಅತ್ತೆ-ಸೊಸೆಯ ಸತ್ಕಾರ್ಯ ಹೊಸದಾಗಿ ಸೇರಿದೆ.

ಡಿಸಿಎಂ ಡಿಕೆ ಶಿವಕುಮಾರ್‌ ಶ್ಲಾಘನೆ

ಗಜೇಂದ್ರಗಢದ ಅತ್ತೆ-ಸೊಸೆ ಜೋಡಿ ಸರ್ಕಾರ ನೀಡುವ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣವನ್ನು ತಮ್ಮ ಹೊಲದಲ್ಲಿ ಬೋರ್‌ವೆಲ್‌ ಕೊರೆಸಲು ಸದುಪಯೋಗಪಡಿಸಿಕೊಂಡಿರುವ ವಿಷಯಕ್ಕೆ ಹರ್ಷ ವ್ಯಕ್ತಪಡಿಸಿರುವ‌ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, "ವಿರೋಧ ಪಕ್ಷಗಳು ನಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ, ಸೊಸೆ ನಡುವೆ ಜಗಳ ಉಂಟಾಗುತ್ತದೆ ಎಂದು ಟೀಕೆ ಮಾಡಿದ್ದರು. ಆದರೆ ವಾಸ್ತವವೇ ಬೇರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಕೊಳವೆ ಬಾವಿ ಕೊರೆಸಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ನಮ್ಮ ದೃಢಸಂಕಲ್ಪ ಜನಪರವಾಗಿದ್ದು, ಗ್ಯಾರಂಟಿಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವ ಸಾರ್ಥಕತೆ ಇದೆ" ಎಂದು ಹೇಳಿದ್ದಾರೆ.


Read More
Next Story