
ಸಹಕಾರ ಇಲಾಖೆಯಿಂದ ಪ್ರಮಾಣಪತ್ರವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವೀಕರಿಸಿದರು.
ನ.19ಕ್ಕೆ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭ, ಫಲಾನುಭವಿಗಳಿಗೆ ಸಿಗಲಿದೆ 3ಲಕ್ಷ ರೂ. ಸಾಲ
ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅಧಿಕೃತ ಚಾಲನೆ ಸಿಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗೂ ಸಾಲ ನೀಡಲಾಗುವುದು. ಇದರಿಂದ ಮಹಿಳೆಯರಿಗೆ ಮತ್ತಷ್ಟು ಆರ್ಥಿಕ ಶಕ್ತಿ ತುಂಬಿದಂತಾಗುತ್ತದೆ. ಮಹಿಳೆಯರ ಸುರಕ್ಷತೆ ಹಾಗೂ ಆರ್ಥಿಕವಾಗಿ ಸ್ವಾವಲಂಬನೆ ಮಾಡುವುದೇ ಸರ್ಕಾರದ ಮುಖ್ಯ ಗುರಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಮಂಗಳವಾರ (ನ.11) ವಿಧಾನಸೌಧದಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ನೋಂದಾಯಿತ ಪ್ರಮಾಣ ಪತ್ರವನ್ನು ಪಡೆದು ಮಾತನಾಡಿದ ಅವರು, ನವೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅಧಿಕೃತ ಚಾಲನೆ ಸಿಗಲಿದೆ ಎಂದರು.
ಮಹಿಳೆಯರ ಖಾತೆಗೆ 52,416 ಕೋಟಿ ರೂ. ಜಮೆ
ಸುಮಾರು 1.24 ಕೋಟಿ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದು, ಇದುವರೆಗೂ 52,416 ಕೋಟಿ ರೂ. ಗೂ ಅಧಿಕ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಈ ಯೋಜನೆಯ ಹಣವನ್ನು ಮತ್ತೊಂದು ರೀತಿಯಲ್ಲಿ ತೊಡಗಿಸಿ ಆದಾಯ ಒದಗಿಸುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ. "ಖಾಸಗಿ ಫೈನಾನ್ಸ್, ನ್ಯಾಷನಲ್ ಬ್ಯಾಂಕ್‌ಗಳಲ್ಲಿ ದುಬಾರಿ ಬಡ್ಡಿಗೆ ಸಾಲ ಪಡೆದು ಮಹಿಳೆಯರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಗೃಹಲಕ್ಷ್ಮಿ ಹಣದಿಂದಲೇ ಬ್ಯಾಂಕ್ ಆರಂಭಿಸಿ ಮಹಿಳೆಯರಿಗೆ ಸಂಕಷ್ಟದಲ್ಲಿ ಸಾಲದ ಸೌಲಭ್ಯ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಗುರಿʼʼ ಎಂದು ತಿಳಿಸಿದರು.
ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕರಾದ ಲಕ್ಷ್ಮೀಪತಯ್ಯ ಸಂಘದ ನಿಯಮಿತ ನೋಂದಾಯಿತ ಪ್ರಮಾಣ ಪತ್ರವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಹಸ್ತಾಂತರಿಸಿದರು.

