Health Alert | ಹಸಿರು ಬಟಾಣಿಯಲ್ಲಿ ಅಪಾಯಕಾರಿ ಕೃತಕ ಬಣ್ಣ ಪತ್ತೆ; ನಿಷೇಧ ಸಾಧ್ಯತೆ
x

Health Alert | ಹಸಿರು ಬಟಾಣಿಯಲ್ಲಿ ಅಪಾಯಕಾರಿ ಕೃತಕ ಬಣ್ಣ ಪತ್ತೆ; ನಿಷೇಧ ಸಾಧ್ಯತೆ

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕರಿದ ಹಸಿರು ಬಟಾಣಿ ತಯಾರಿಸುವ ವಿಡಿಯೋ ತುಣುಕೊಂದು ಹರಿದಾಡಿತ್ತು. ತಯಾರಿ ವೇಳೆ ಬಣ್ಣ ಮಿಶ್ರಣ ಮಾಡುವುದು ಕಂಡು ಬಂದಿತ್ತು.


ಬೇಕೆರಿ, ಕಾಂಡಿಮೆಂಟ್​​ಗಳಲ್ಲಿ ಪ್ಯಾಕೆಟ್​​ಗಳ ರೂಪದಲ್ಲಿ ಸಿಗುವ ಕರಿದ ಹಸಿರು ಬಟಾಣಿಗಳಲ್ಲಿ (ಫ್ರೈಡ್‌ ಗ್ರೀನ್​​ಪೀಸ್‌)ಗೆ ಅಪಾಯಕಾರಿ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಸರ್ಕಾರದ ಪ್ರಯೋಗಾಲಯದಲ್ಲಿ ಸಾಬೀತಾಗಿದೆ.

ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಹಾಗೂ ಔಷಧ ಮಂಡಳಿ ನಡೆಸಿರುವ ಪರೀಕ್ಷೆಯಲ್ಲಿ ಟಾರ್ಟ್ರಜೈನ್ ಎಂಬ ನಿಷೇಧಿತ ಬಣ್ಣದ ಅಂಶ ಪತ್ತೆಯಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿಗೆ, ಔಷಧ ಮಂಡಳಿ ಲಿಖಿತ ವರದಿ ಕಳುಹಿಸಿದ್ದು, ಸ್ಯಾಂಪಲ್​ ಸಂಗ್ರಹ ಹಾಗೂ ಅದರ ಫಲಿತಾಂಶಗಳ ವಿವರಗಳನ್ನೂ ನೀಡಿದೆ.

ಎಷ್ಟು ಸ್ಯಾಂಪಲ್​ ಬಳಕೆ?

ಆಯುಕ್ತರು, ಜಿಲ್ಲಾ ಅಂಕಿತಾಧಿಕಾರಿಗಳಿಗೆ ತಲಾ 5 ಮಾದರಿಗಳನ್ನು ಸಂಗ್ರಹಿಸಲು ಸೂಚಿಸಿದ್ದರು. ಅದರಂತೆ ರಾಜ್ಯಾದ್ಯಂತ ಇದುವರೆಗೆ 114 ಕರಿದ ಹಸಿರು ಬಟಾಣಿಗಳ ಸ್ಯಾಂಪಲ್​​ಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ 96 ಮಾದರಿಗಳನ್ನು ವಿಶ್ಲೇಷಣೆ ಮಾಡಿದಾಗ 32 ಸ್ಯಾಂಪಲ್​ಗಳು ಮಾತ್ರ ಸುರಕ್ಷಿತ ಎಂಬುದು ಬಹಿರಂಗಗೊಂಡಿದ್ದು, ಉಳಿದ 64 ಮಾದರಿಗಳಲ್ಲಿ ನಿಷೇಧಿತ ಕೃತಕ ಬಣ್ಣ ಟಾರ್ಟ್ರಜೈನ್ ​ ಕಂಡು ಬಂದಿತ್ತು.

ಆಹಾರ ಸುರಕ್ಷತಾ ಮಂಡಳಿ ಉಳಿದ ಮಾದರಿಗಳನ್ನೂ ಪರೀಕ್ಷೆ ಮಾಡಿ ಅದರ ವರದಿಯನ್ನು ಮುಂದೆ ನೀಡುವುದಾಗಿ ಹೇಳಿದೆ.

ಏನಿದು ಟಾರ್ಟ್ರಜೈನ್

ಇದು ಒಂದು ಕೃತಕ ಆಹಾರ ಬಣ್ಣವಾಗಿದ್ದು. ಏಜೋ ಡೈ (Azo Dye) ವರ್ಗಕ್ಕೆ ಸೇರಿದೆ. ಇದು ನಿಂಬೆ ಹಳದಿ ಬಣ್ಣವನ್ನು ಹೊಂದಿದ್ದು ಬೇರೆ ಬಣ್ಣಗಳೊಂದಿಗೆ ಸೇರಿಸಿದಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ. ಟಾರ್ಟ್ರಜೈನ್ ಅನ್ನು ಆಹಾರ ಬಣ್ಣಕಾರಕವಾಗಿ ಕೆಲವೆಡೆ ಬಳಸಿದರೂ ಅದಕ್ಕೊಂದು ಮಿತಿ ಹೇರಲಾಗಿದೆ. ಆದರೆ ಅಂಗಡಿಗಳಲ್ಲಿ ಸಿಗುವ ಬಟಾಣೆಗಳಲ್ಲಿ ಮಿತಿಗಿಂತ ಹೆಚ್ಚು ಬಳಸಲಾಗಿದೆ. ಟಾರ್ಟ್ರಜೈನ್ ಅಸ್ತಮಾ, ತ್ವಚೆಯ ತುರಿಕೆ, ಮೈಗ್ರೇನ್​ ಮತ್ತಿತರ ಸಮಸ್ಯೆಗಳನ್ನು ತಂದೊಡ್ಡುತ್ತದೆ.ಇಡ್ಲಿ ತಯಾರಿಸುವಾಗ ಪಾಲಿಥೀನ್​ (ಪ್ಲಾಸ್ಟಿಕ್​) ಬಳಕೆ ಮಾಡುವುದನ್ನು ನಿಷೇಧ ಮಾಡಿ ಒಂದು ವಾರ ಕಳೆಯುವಷ್ಟರಲ್ಲಿ ಮತ್ತೊಂದು ಆಹಾರ ಕಲಬೆರಕೆ ಪ್ರಕರಣ ಬಯಲಿಗೆ ಬಂದಂತಾಗಿದೆ. ಅಂಗಡಿಗಳು, ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲೆಡೆ ಸಿಗುವ ಕರಿದ ಬಟಾಣಿ ತಿನ್ನುವಾಗ ಎಚ್ಚರಿಕೆ ವಹಿಸುವಂತೆ ಮಾಡಿದೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕರಿದ ಹಸಿರು ಬಟಾಣಿ ತಯಾರಿಸುವ ವಿಡಿಯೋ ತುಣುಕೊಂದು ಹರಿದಾಡಿತ್ತು. ತಯಾರಿ ವೇಳೆ ಬಣ್ಣ ಮಿಶ್ರಣ ಮಾಡುವುದು ಕಂಡು ಬಂದಿತ್ತು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರಕಾರ, ಕರಿದ ಹಸಿರು ಬಟಾಣಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಪರೀಕ್ಷೆ ನಡೆಸಿ ವರದಿ ನೀಡಿದೆ.

ಬಟಾಣಿ ಸಂಗ್ರಹ ಎಲ್ಲಿಂದ?

ಸಂತೆ, ಬೇಕರಿ ಮತ್ತು ಮದ್ಯದಂಗಡಿಗಳಲ್ಲಿ ಅತಿ ಹೆಚ್ಚು ಹಸಿರು ಬಟಾಣೆಗಳು ಮಾರಾಟವಾಗುತ್ತವೆ. ಹೀಗಾಗಿ ಕರಿದ ಖಾದ್ಯಗಳನ್ನು ಮಾರಾಟ ಮಾಡುವ ಮಳಿಗೆಗಳು, ಕಾಂಡಿಮೆಂಟ್‌ ಮತ್ತು ಚಿಲ್ಲರೆ ಅಂಗಡಿಗಳು, ರಸ್ತೆ ಬದಿ ಮತ್ತು ಬಸ್‌ ನಿಲ್ದಾಣದ ಅಂಗಡಿಗಳು ಸೇರಿದಂತೆ ಹಲವು ಕಡೆಯಿಂದ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ.

ನಿಷೇಧ ಖಚಿತ

ಪರೀಕ್ಷೆ ನಡೆಸಿರುವ 96 ಸ್ಯಾಂಪಲ್​ಗಳಲ್ಲಿ 64 ಮಾದರಿಗಳಲ್ಲಿ ನಿಷೇಧಿತ ಬಣ್ಣ ಕಂಡು ಬಂದಿರುವ ಕಾರಣ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಲಿದೆ. ಬಟಾಣಿ ಕರಿಯುವ ಪ್ರದೇಶಗಳಲ್ಲಿ ಬಣ್ಣಗಳ ನಿಷೇಧಕ್ಕೆ ಆದೇಶ ಹೊರಡಿಸಲಿದೆ. ಬಣ್ಣ ಮಿಶ್ರಿತ ಬಟಾಣಿಯನ್ನು ಮಾರಾಟ ಮಾಡುವವರ ಮೇಲೆಯೂ ಕ್ರಮ ಕೈಗೊಳ್ಳಲಿದೆ.

Read More
Next Story