
ಕುಂಬಳಗೋಡಿನಲ್ಲಿ 'ಹಸಿರು ಹಬ್ಬ'; ತ್ಯಾಜ್ಯ ಮುಕ್ತ ಪರಿಸರಕ್ಕಾಗಿ ನಾಗರಿಕರ ವಿನೂತನ ಹೆಜ್ಜೆ
ಕಸ ವಿಲೇವಾರಿ, ವಿಂಡಗಣೆ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹಾಕಿ ಸುಮ್ಮನಾಗಬಾರದು. ಜನ ಸಮುದಾಯಗಳು ಕೂಡ ಜವಾಬ್ದಾರಿ ಹೊರಬೇಕು. ಮೂಲದಿಂದಲೇ ಕಸ ವಿಂಗಡಣೆ ಆಗುವಂತೆ ಮಾಡಬೇಕು ಎಂಬುದು ಸಂಘಟನೆಯ ಕಳಕಳಿ.
ಉದ್ಯಾನ ನಗರಿ ಬೆಂಗಳೂರಿಗೆ ಅಂಟಿರುವ ತ್ಯಾಜ್ಯದ ಹಣೆಪಟ್ಟಿ ಕಳಚುವತ್ತ “ಹಸಿರು ಹೆಜ್ಜೆ, ಸ್ವಚ್ಛ ಉಸಿರು” ಹೆಸರಿನ ನಾಗರಿಕರ ಒಕ್ಕೂಟ ವಿನೂತನ ಹೆಜ್ಜೆ ಇರಿಸಿದೆ.
ತ್ಯಾಜ್ಯ ಮುಕ್ತ ಪರಿಸರ ನಿರ್ಮಿಸುವ ಹಾಗೂ ವೈಜ್ಞಾನಿಕ ಕಸ ವಿಲೇವಾರಿಗೆ ಜಾಗೃತಿ ಮೂಡಿಸಲು ಕುಂಬಳಗೋಡಿನ ಅಂಚೆಪಾಳ್ಯದಲ್ಲಿ ಶನಿವಾರ ಹಸಿರು ಹಬ್ಬ ಆಚರಿಸಿದೆ.
ಅಪಾರ್ಟ್ಮೆಂಟ್ ನಿವಾಸಿಗಳೇ ಸೇರಿ ಕಟ್ಟಿರುವ ʼಹಸಿರು ಹೆಜ್ಜೆ, ಸ್ವಚ್ಛ ಉಸಿರುʼ ನಾಗರಿಕರ ಒಕ್ಕೂಟವು ಸ್ಥಳೀಯ ಗ್ರಾಮ ಪಂಚಾಯಿತಿ ಜತೆಗೂಡಿ ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ ವಿಚಾರವಾಗಿ ಜನರಲ್ಲಿ ಅರಿವು ಮೂಡಿಸಿದೆ.
'ಹಸಿರು ಹೆಜ್ಜೆ ಸ್ವಚ್ಛ ಉಸಿರು' ಒಕ್ಕೂಟದ ಮೊದಲ ಹೆಜ್ಜೆ
ಕುಂಬಳಗೋಡು ವ್ಯಾಪ್ತಿಯಲ್ಲಿ ಇತ್ತೀಚೆಗೆ ತ್ಯಾಜ್ಯದ ಸಮಸ್ಯೆ ವಿಪರೀತವಾಗಿದೆ. ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಸುರಿಯುವುದು, ಕಸಕ್ಕೆ ಬೆಂಕಿ ಹಚ್ಚುತ್ತಿರುವ ಕಾರಣ ಇಲ್ಲಿನ ಪರಿಸರ ತೀವ್ರ ಕಲುಷಿತವಾಗಿದೆ.
ತಮ್ಮ ಕಣ್ಣೆದುರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ ಇಲ್ಲಿನ ಗೋಪಾಲನ್ ಒಲಿಂಪಿಯಾ, ಗುಡ್ ಅರ್ಥ್ ಮಲ್ಹಾರ್ ಹಾಗೂ ಬ್ರಿಗೇಡ್ ಪನೋರಮಾ ಅಪಾರ್ಟ್ಮೆಂಟ್ ನಿವಾಸಿಗಳು ‘ಹಸಿರು ಹೆಜ್ಜೆ ಸ್ವಚ್ಛ ಉಸಿರುʼ ನಾಗರಿಕ ಒಕ್ಕೂಟದ ಮೂಲಕ ತ್ಯಾಜ್ಯದ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಅಂಚೆಪಾಳ್ಯ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ʼಹಸಿರು ಹಬ್ಬʼ ಕಾರ್ಯಕ್ರಮದಲ್ಲಿ ವಿನೂತನ ಪ್ರಯೋಗ ಕೈಗೊಂಡು ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿದೆ.
ಸಂಭ್ರಮದ ಮೂಲಕವೇ ಜನರಲ್ಲಿ ತ್ಯಾಜ್ಯ ವಿಂಗಡಣೆ, ಪ್ಲಾಸ್ಟಿಕ್ ಬಳಕೆಗೆ ಕಡಿತ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು. ಅಂಚೆಪಾಳ್ಯ ಸರ್ಕಾರಿ ಶಾಲೆ, ಕಂಬಿಪುರ ಉರ್ದುಶಾಲೆ, ಗೋಪಾಲನ್ ಶಾಲೆಯ ಮಕ್ಕಳ ಜಾಥಾದೊಂದಿಗೆ ಮೆರವಣಿಗೆ ನಡೆಸಿ ಹಸಿರು ಹಬ್ಬದತ್ತ ಮೊದಲ ಹೆಜ್ಜೆ ಇಡಲಾಯಿತು.
ಗಮನ ಸೆಳೆದ ಪ್ರಯೋಗ ʼಕಾಸು-ಕಸʼ
ಹಸಿರು ಹಬ್ಬದಲ್ಲಿ ಸುಮಾರು 15ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಇದರಲ್ಲಿ ʼಕಾಸು ಫಾರ್ ಕಸ (Kasu for Kasa)ʼ ಎಂಬ ವಿನೂತನ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
“ಅಪಾರ್ಟ್ಮೆಂಟ್ ನಿವಾಸಿಗಳು ಕೆಲ ಬೆಳೆಬಾಳುವ, ಪುನರ್ಬಳಸುವ ವಸ್ತುಗಳನ್ನು ಸಂಗ್ರಹಿಸಿದ್ದೆವು. ಸ್ವಚ್ಛ ಪ್ಲಾಸ್ಟಿಕ್ ತಂದುಕೊಟ್ಟವರ ಕೂಪನ್ ಆಧಾರದ ಮೇಲೆ ಅವರಿಗೆ ಪುನರ್ಬಳಕೆಯ ವಸ್ತುಗಳನ್ನು ನೀಡಿದೆವು. ಈ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು” ಎಂದು ಹಸಿರು ಹಬ್ಬದ ಆಯೋಜಕರಾದ ಅಕ್ಷತಾ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕಸ-ಕಾಸು ಮಳಿಗೆಯಲ್ಲಿ ಆಟಿಕೆಗಳು, ಅಡುಗೆ ವಸ್ತುಗಳು, ಮಹಿಳೆಯರ ಕಿವಿಯೋಲೆ, ಗೃಹಲಂಕಾರಿ ವಸ್ತುಗಳನ್ನು ಇಡಲಾಗಿತ್ತು. ಒಂದು ಪ್ಲಾಸ್ಟಿಕ್ ತಂದವರಿಗೆ ಐದು ರೂ. ಪಾಯಿಂಟ್ಸ್, ಪ್ಲಾಸ್ಟಿಕ್ ಕವರ್ಗೆ 2 ರೂ. ಪಾಯಿಂಟ್ಸ್ ನೀಡಲಾಯಿತು. 50 ರೂ ಹಾಗೂ 100 ರೂ. ಪಾಯಿಂಟ್ಸ್ ಹೊಂದಿದವರಿಗೆ ಪುನರ್ಬಳಕೆಯ ವಸ್ತುಗಳನ್ನು ನೀಡಲಾಯಿತು ಎಂದು ವಿವರಿಸಿದರು.
ನಮ್ಮ ಮಕ್ಕಳ ಭವಿಷ್ಯ ಹಾಗೂ ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮದು ಮೊದಲ ಹೆಜ್ಜೆ. ಡಿಸೆಂಬರ್ ತಿಂಗಳಲ್ಲಿ ಹಸಿರು ಹೆಜ್ಜೆ, ಸ್ವಚ್ಛ ಉಸಿರು ನಾಗರಿಕರ ಒಕ್ಕೂಟ ಆರಂಭಿಸಲು ನಿರ್ಧರಿಸಲಾಯಿತು. ಈಗ ವಿವಿಧ ಅಪಾರ್ಟ್ಮೆಂಟ್ ನಿವಾಸಿಗಳು, ಹೊರಗಿನವರು ಸೇರಿ 80 ಮಂದಿ ಸದಸ್ಯರಿದ್ದೇವೆ. ಪ್ರತಿ ತಿಂಗಳು ಪಂಚಾಯ್ತಿ ವಾರು ಹಸಿರು ಹಬ್ಬ ಆಚರಿಸಿ ತ್ಯಾಜ್ಯಮುಕ್ತ ಪರಿಸರ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಅಕ್ಷತಾ ಹೇಳಿದರು.
ಕಸ ವಿಲೇವಾರಿ, ವಿಂಡಗಣೆ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹಾಕಿ ಸುಮ್ಮನಾಗಬಾರದು. ಜನ ಸಮುದಾಯಗಳು ಕೂಡ ಜವಾಬ್ದಾರಿ ಹೊರಬೇಕು. ಮೂಲದಿಂದಲೇ ಕಸ ವಿಂಗಡಣೆ ಆಗುವಂತೆ ಮಾಡಬೇಕು. ನಮ್ಮ ಈ ಹಸಿರು ಹಬ್ಬಕ್ಕೆ ಕ್ರೈಸ್ಟ್ ಕಾಲೇಜಿನವರು ಕೂಡ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿ ಆಂದೋಲನ ಮಾದರಿಯಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಹಸಿರು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ವಸ್ತುಗಳ ರಿಪೇರಿ ಕಾರ್ಯಾಗಾರ, ಹಳೆಯ ವಸ್ತುಗಳ ಮಾರಾಟ, ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಾಮಾಜಿಕ ಜಾಗೃತಿಗೆ ವೇದಿಕೆಯಾದ ಹಸಿರು ಹಬ್ಬ
ಹಸಿರು ಹಬ್ಬ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸುಸ್ಥಿರ ಮುಟ್ಟಿನ ನಿರ್ವಹಣೆ ಬಗ್ಗೆಯೂ ಮಾಹಿತಿ ನೀಡಲಾಯಿತು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ರಂಜಿಸುವ ಜೊತೆಗೆ ಪರಿಸರ ರಕ್ಷಣೆಯ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರದಲ್ಲಿ ಒಕ್ಕೂಟದ ಸದಸ್ಯರಾದ ಶ್ರೀದೇವಿ ಗಟ್ಟು, ಮಾಧುರಿ, ಈಶ್ವರ್ ಇತರರು ಇದ್ದರು.

