ದಟ್ಟಣೆಯಲ್ಲಿ ವಿಶ್ವಕ್ಕೇ 2ನೇ ಸ್ಥಾನ ಪಡೆದ ಸಿಲಿಕಾನ್ ಸಿಟಿ: ವಾಹನ ಸವಾರರ ಪರದಾಟದ ಚಿತ್ರಣ ಬಿಚ್ಚಿಟ್ಟ ವರದಿ
x

ದಟ್ಟಣೆಯಲ್ಲಿ ವಿಶ್ವಕ್ಕೇ 2ನೇ ಸ್ಥಾನ ಪಡೆದ 'ಸಿಲಿಕಾನ್ ಸಿಟಿ': ವಾಹನ ಸವಾರರ ಪರದಾಟದ ಚಿತ್ರಣ ಬಿಚ್ಚಿಟ್ಟ ವರದಿ

ಮೆಕ್ಸಿಕೊ ನಗರವು ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರವಾಗಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ನಂತರದ ಸ್ಥಾನದಲ್ಲಿದ್ದು, 10 ಕಿ. ಮೀ ಸಂಚಾರಕ್ಕೆ ಅರ್ಥಗಂಟೆಗೂ ಅಧಿಕ ಸಮಯ ಬೇಕಾಗಿದೆ.


Click the Play button to hear this message in audio format

ಭಾರತದ ಐಟಿ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರು, ತನ್ನ ಸಂಚಾರ ದಟ್ಟಣೆಯ ಕುಖ್ಯಾತಿಯನ್ನು ಈ ಬಾರಿಯೂ ಮುಂದುವರೆಸಿದೆ. ನೆದರ್‌ಲ್ಯಾಂಡ್ ಮೂಲದ ಪ್ರತಿಷ್ಠಿತ 'ಟಾಮ್‌ಟಾಮ್' (TomTom) ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕದಲ್ಲಿ (Traffic Index), ಬೆಂಗಳೂರು ಜಾಗತಿಕವಾಗಿ ಎರಡನೇ ಅತಿ ಹೆಚ್ಚು ವಾಹನ ದಟ್ಟಣೆಯ ನಗರ ಎಂಬ ಹಣೆಪಟ್ಟಿಗೆ ಪಾತ್ರವಾಗಿದೆ.

ಮೆಕ್ಸಿಕೊ ನಗರವು ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರವಾಗಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ನಂತರದ ಸ್ಥಾನದಲ್ಲಿದೆ. ಈ ವರದಿಯು ನಗರದ ರಸ್ತೆಗಳಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ನರಕಯಾತನೆಯನ್ನು ಅಂಕಿಅಂಶಗಳ ಸಮೇತ ಎತ್ತಿ ತೋರಿಸಿದೆ.

10 ಕಿ.ಮೀ ಕ್ರಮಿಸಲು ಬೇಕು ಅರ್ಧ ಗಂಟೆಗೂ ಹೆಚ್ಚು ಸಮಯ!

ವರದಿಯ ಪ್ರಕಾರ, ಬೆಂಗಳೂರಿನ ವಾಹನ ಸವಾರರು ಕೇವಲ 10 ಕಿಲೋಮೀಟರ್ ದೂರವನ್ನು ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡುಗಳನ್ನು ವ್ಯಯಿಸಬೇಕಾಗಿದೆ. ಅಂದರೆ, ವಾಹನಗಳು ರಸ್ತೆಯಲ್ಲಿ ಚಲಿಸುವುದಕ್ಕಿಂತ ಹೆಚ್ಚು ಸಮಯ ಟ್ರಾಫಿಕ್‌ನಲ್ಲಿ ನಿಲ್ಲುವುದರಲ್ಲೇ ಕಳೆಯುತ್ತಿವೆ. ಪೀಕ್ ಅವರ್‌ಗಳಲ್ಲಿ (ದಟ್ಟಣೆ ಸಮಯದಲ್ಲಿ) ವಾಹನಗಳ ಸರಾಸರಿ ವೇಗ ಗಂಟೆಗೆ 13.9 ಕಿ.ಮೀ.ಗೆ ಕುಸಿದಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ಒಂದು ವರ್ಷದಲ್ಲಿ ಹೆಚ್ಚಿದ ದಟ್ಟಣೆ

2024ಕ್ಕೆ ಹೋಲಿಸಿದರೆ 2025ರಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಪ್ರಮಾಣ ಶೇ. 1.7 ರಷ್ಟು ಏರಿಕೆಯಾಗಿದೆ. ನಗರದ ಸರಾಸರಿ ದಟ್ಟಣೆ ಮಟ್ಟವು ಶೇ. 74.4 ರಷ್ಟಿದೆ. ಅಂದರೆ, ವಾಹನ ಸವಾರರು 15 ನಿಮಿಷಗಳಲ್ಲಿ ಸರಾಸರಿ ಕ್ರಮಿಸಲು ಸಾಧ್ಯವಾಗುತ್ತಿರುವುದು ಕೇವಲ 4.2 ಕಿ.ಮೀ. ದೂರವನ್ನು ಮಾತ್ರ.

ಮೇ 17: ಬೆಂಗಳೂರಿಗೆ ಅತ್ಯಂತ ಕೆಟ್ಟ ದಿನ

ವರದಿಯ ಸ್ವಾರಸ್ಯಕರ ಅಂಶವೆಂದರೆ, 2025ರ ಮೇ 17ರಂದು ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿ ಅತ್ಯಂತ ಹದಗೆಟ್ಟಿತ್ತು ಎಂದು ಗುರುತಿಸಲಾಗಿದೆ. ಅಂದು ದಟ್ಟಣೆಯ ಮಟ್ಟ ಶೇ. 101ರಷ್ಟಿತ್ತು. ಅಂದು ಸಂಜೆ 6 ಗಂಟೆಯ ಸುಮಾರಿಗೆ ದಟ್ಟಣೆ ಪ್ರಮಾಣ ಬರೋಬ್ಬರಿ ಶೇ. 183ಕ್ಕೆ ಏರಿತ್ತು. ಆ ಸಮಯದಲ್ಲಿ ಕೇವಲ 2.5 ಕಿ.ಮೀ. ದೂರ ಕ್ರಮಿಸಲು ವಾಹನ ಸವಾರರು 15 ನಿಮಿಷಗಳ ಕಾಲ ರಸ್ತೆಯಲ್ಲೇ ಕಾಲ ಕಳೆಯಬೇಕಾಯಿತು ಎಂದು ವರದಿ ಉಲ್ಲೇಖಿಸಿದೆ.

ಪಟ್ಟಿಯಲ್ಲಿ ಭಾರತದ ಇತರೆ ನಗರಗಳು

ಜಾಗತಿಕವಾಗಿ ಅತಿ ಹೆಚ್ಚು ಟ್ರಾಫಿಕ್ ಇರುವ ಅಗ್ರ 35 ನಗರಗಳ ಪಟ್ಟಿಯಲ್ಲಿ ಭಾರತದ ಆರು ನಗರಗಳು ಸ್ಥಾನ ಪಡೆದಿವೆ. ಬೆಂಗಳೂರಿನ ನಂತರ ಮಹಾರಾಷ್ಟ್ರದ ಪುಣೆ 5ನೇ ಸ್ಥಾನದಲ್ಲಿದ್ದು (ಶೇ. 71.1 ದಟ್ಟಣೆ), ಮುಂಬೈ 18ನೇ ಸ್ಥಾನ (ಶೇ. 63.2), ನವದೆಹಲಿ 23ನೇ ಸ್ಥಾನ (ಶೇ. 60.2), ಕೋಲ್ಕತ್ತಾ 29ನೇ ಸ್ಥಾನ (ಶೇ. 58.9), ಜೈಪುರ 30ನೇ ಸ್ಥಾನ (ಶೇ. 58.7) ಮತ್ತು ಚೆನ್ನೈ 32ನೇ ಸ್ಥಾನವನ್ನು (ಶೇ. 58.6) ಪಡೆದುಕೊಂಡಿವೆ.

ಟಾಮ್‌ಟಾಮ್ ಸಂಸ್ಥೆಯು ಪ್ರಮುಖ ಹೆದ್ದಾರಿಗಳು ಮತ್ತು ನಗರದ ರಸ್ತೆ ಜಾಲಗಳಲ್ಲಿ ಚಾಲಕರಿಂದ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ, ಪ್ರಯಾಣಕ್ಕೆ ತಗಲುವ ಸರಾಸರಿ ಸಮಯ ಮತ್ತು ದಟ್ಟಣೆ ಮಟ್ಟವನ್ನು ಮೌಲ್ಯಮಾಪನ ಮಾಡಿ ಈ ವರದಿ ಸಿದ್ಧಪಡಿಸಿದೆ.

Read More
Next Story