ದಾವೋಸ್ ಹೂಡಿಕೆ ಒಪ್ಪಂದಗಳಿಗೆ ರಾಜ್ಯದಲ್ಲಿಯೇ ಸಹಿ; ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್-ಡಿಕೆಶಿ
x

ದಾವೋಸ್ ಹೂಡಿಕೆ ಒಪ್ಪಂದಗಳಿಗೆ ರಾಜ್ಯದಲ್ಲಿಯೇ ಸಹಿ; ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್-ಡಿಕೆಶಿ

ದಾವೋಸ್ ಕಾರ್ಯಕ್ರಮದಲ್ಲಿ ಡಾಟಾ ಸೆಂಟರ್, ಗ್ಲೋಬಲ್ ಕೇಪಬಲ್ ಸೆಂಟರ್, ಆಹಾರ ಮತ್ತು ಪಾನೀಯ, ಏವಿಯೇಷನ್, ನವೀಕೃತ ಇಂಧನ, ಇವಿ, ಎಲೆಕ್ಟ್ರಾನಿಕ್ಸ್, ಅಡ್ವಾನ್ಸ್ ಮ್ಯಾನ್ಯುಫ್ಯಾಕ್ಚರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ.


ಮುಂದಿನ 25 ವರ್ಷಗಳ ಪ್ರಗತಿಗೆ ಪೂರಕವಾಗಿ ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಭಾನುವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.

“ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡಲು ಹಲವು ಕಂಪೆನಿಗಳು ಮುಂದೆ ಬಂದಿವೆ. 25 ವರ್ಷಕ್ಕೆ ಅಗತ್ಯವಿರುವ ಸಂಚಾರಿ ಮಾರ್ಗದ ಯೋಜನೆ ರೂಪಿಸುವುದು ಅನಿವಾರ್ಯವಾಗಿದೆ. ಎಲ್ಲಾ ನಗರಗಳಲ್ಲಿ ವರ್ತುಲ ರಸ್ತೆಗಳಿಗೆ ಯೋಜನೆ ರೂಪಿಸಬೇಕು. ಈ ಬಗ್ಗೆ ನಗರಾಭಿವೃದ್ಧಿ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರು ಸಭೆ ನಡೆಸಿ, ನಗರ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ” ಎಂದು ತಿಳಿಸಿದರು.

“ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ 70 ರಷ್ಟು ಜನರು ನಗರ ಪ್ರದೇಶಕ್ಕೆ ವರ್ಗಾವಣೆಯಾಗುವ ಲೆಕ್ಕಾಚಾರವಿದೆ. ಹೀಗಾಗಿ ನಾವು ಸಮಯ ವ್ಯರ್ಥ ಮಾಡದೇ ಇಡೀ ರಾಜ್ಯದಲ್ಲಿ ಸಂಚಾರಿ ಗ್ರಿಡ್ ರೂಪಿಸಬೇಕು ಎಂದು ತೀರ್ಮಾನಿಸಿದ್ದೇವೆ. ಎಲ್ಲಿ ರಸ್ತೆ ಬರುತ್ತದೆ, ರಸ್ತೆ ಅಗಲೀಕರಣ ಎಷ್ಟಿರಬೇಕು ಎಂಬುದರ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಹೊಸ ತೀರ್ಮಾನ ಮಾಡಬೇಕಿದೆ.

45ಕ್ಕೂ ಹೆಚ್ಚು ಕಂಪನಿಗಳ ಜೊತೆ ಹೂಡಿಕೆ ಚರ್ಚೆ

“ದಾವೋಸ್ ಕಾರ್ಯಕ್ರಮದಲ್ಲಿ ಡಾಟಾ ಸೆಂಟರ್, ಗ್ಲೋಬಲ್ ಕೇಪಬಲ್ ಸೆಂಟರ್, ಆಹಾರ ಮತ್ತು ಪಾನೀಯ, ಏವಿಯೇಷನ್, ನವೀಕೃತ ಇಂಧನ, ಇವಿ, ಎಲೆಕ್ಟ್ರಾನಿಕ್ಸ್, ಅಡ್ವಾನ್ಸ್ ಮ್ಯಾನ್ಯುಫ್ಯಾಕ್ಚರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ಹೊರ ದೇಶಗಳಲ್ಲಿ ಉದ್ಯಮ ಮಾಡುತ್ತಿರುವ ಅನಿವಾಸಿಯರು ಕೂಡ ನಮ್ಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ” ಎಂದು ವಿವರಿಸಿದರು.

“ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ಅಲ್ಲಿ ಸಹಿ ಹಾಕುವುದು ಬೇಡ ಎಂದು ನಿರ್ಧರಿಸಿದ್ದೇವೆ. ಹೊರ ದೇಶಗಳ ಕಂಪನಿಗಳು ಇಲ್ಲಿಗೆ ಬಂದು, ಇಲ್ಲಿನ ವಾತಾವರಣ, ಯುವ ಪ್ರತಿಭೆ, ಇಲ್ಲಿನ ಸೌಲಭ್ಯ, ಇಂಧನ, ನೀರಿನ ಸೌಲಭ್ಯ ಗಮನಿಸಬೇಕು. ರಾಜ್ಯದ ಉದ್ಯಮಿಗಳು ಕೂಡ ಅಲ್ಲಿಗೆ ಬಂದು ತಮ್ಮ ಉದ್ಯಮ ವಿಸ್ತರಣೆಗೆ ತಮ್ಮ ಆಲೋಚನೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 11 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಇದರಲ್ಲಿ ಶೇ50 ರಷ್ಟು ಹೂಡಿಕೆ ಕಾರ್ಯಗತಗೊಳ್ಳುತ್ತಿದೆ. ಹೀಗಾಗಿ ದಾವೋಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ, ಇಲ್ಲೇ ಸಹಿ ಹಾಕಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

“ನಮ್ಮ ರಾಜ್ಯದಲ್ಲಿ ಆ್ಯಪಲ್ ಫೋನ್ ತಯಾರಿಸಲು ಫಾಕ್ಸ್ ಕಾನ್ ಕಂಪನಿಗೆ ಜಾಗ ನೀಡಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಚೀನಾ ಹೊರತುಪಡಿಸಿದರೆ, ಭಾರತದ ದಕ್ಷಿಣದ ರಾಜ್ಯಗಳಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣವಿದೆ ಎಂದು ಅನೇಕ ಉದ್ಯಮಿಗಳು ಭಾವಿಸಿದ್ದಾರೆ ” ಎಂದು ವಿವರಿಸಿದ್ದಾರೆ.

ಎಐ ಸಿಟಿಗೆ ಕೈ ಜೋಡಿಸಲು ಉದ್ಯಮಿಗಳು ಉತ್ಸುಕ

“ಬಿಡದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಐ ಸಿಟಿಗೆ ಅನೇಕ ಉದ್ಯಮಿಗಳು ಉತ್ಸುಕರಾಗಿದ್ದಾರೆ. ಈ ಯೋಜನೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿರಬಹುದು. ಅಂತವರಿಗೆ ಒಂದು ಮಾತು ಹೇಳುತ್ತೇನೆ. ರೈತರು ತಾವಾಗಿಯೇ ಜಮೀನು ಬಿಟ್ಟುಕೊಡುವಾಗ ಈ ಅಭಿವೃದ್ಧಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಯ ಭೂಸಂತ್ರಸ್ತ ರೈತರಿಗೆ ನಾವು ನೀಡಿರುವ ಪರಿಹಾರದ ಅವಕಾಶವನ್ನು ದೇಶದ ಇತರೆ ಯಾವುದೇ ಭಾಗದಲ್ಲಿ ನೀಡಲು ಸಾಧ್ಯವಾಗಿಲ್ಲ” ಎಂದು ಹೇಳಿದರು.

“ನನ್ನ ಚರ್ಚೆಯ ವೇಳೆ ವಾಹನ ನಿಲುಗಡೆ ವಿಚಾರವಾಗಿ ಕೆಲವು ಸಲಹೆ ನೀಡಿದ್ದಾರೆ. ಮಹಾರಾಷ್ಟ್ರ ಸಿಎಂ ಕೂಡ ಟನಲ್ ರಸ್ತೆ ಬಗ್ಗೆ ಅಲ್ಲಿ ಚರ್ಚೆ ಮಾಡಿದರು. ನಾನು ನನ್ನ ತಂಡವನ್ನು ಕರೆದುಕೊಂಡು ಹೋಗುತ್ತೇನೆ. ಟನಲ್ ವ್ಯವಸ್ಥೆ ವೆಚ್ಚ, ಟನಲ್ ಕೊರೆಯುವ ಯಂತ್ರಗಳು, ಕೊಳೆಗೇರಿ ಪ್ರದೇಶ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಒಂದೆರಡು ದಿನಗಳ ಪ್ರವಾಸ ಮಾಡಿ ಅವರ ಜೊತೆ ವಿಸ್ತೃತವಾಗಿ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.

ಕಾನೂನು ಪಾಲನೆ ಬಗ್ಗೆ ಜನರಲ್ಲಿ ಪ್ರಜ್ಞೆ ಅಗತ್ಯ

“ಇಡೀ ದಾವೋಸ್ ನಮ್ಮ ಸದಾಶಿವನಗರ, ಅರಮನೆ ಮೈದಾನದಷ್ಟು ವ್ಯಾಪ್ತಿಯಲ್ಲಿರಬಹುದು. ಅಷ್ಟು ಸಣ್ಣ ಪ್ರದೇಶದಲ್ಲಿ ಎಲ್ಲಾ ಪ್ರಮುಖ ನಾಯಕರು ರಸ್ತೆ ಮಾರ್ಗದಲ್ಲೇ ಸಂಚರಿಸಿದರು. ನಾನು ಜ್ಯೂರಿಚ್ ಕಡೆ 200 ಕಿ.ಮೀ ಪ್ರಯಾಣ ಮಾಡುವಾಗ ಸುಮಾರು 30-40 ಟನಲ್ ರಸ್ತೆಗಳಿವೆ. 60 ವರ್ಷಗಳ ಹಿಂದೆಯೇ ಟನಲ್ ನಿರ್ಮಿಸಿದ್ದಾರೆ. ಅಲ್ಲಿ ಶಿಸ್ತು, ಸಂಚಾರ ಪ್ರಜ್ಞೆ, ಕಾನೂನು ಪಾಲನೆ ಬಗ್ಗೆ ಗಮನಿಸಿದೆ. ಈ ಪ್ರವಾಸ ರಾಜ್ಯಕ್ಕೆ ಇದೊಂದು ಫಲಪ್ರದಾಯಕ ಕಾರ್ಯಕ್ರಮವಾಗಿತ್ತು. ನಮ್ಮಲ್ಲಿ ಬಂಡವಾಳ ಆಕರ್ಷಿಸಿ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಉತ್ತಮ ವೇದಿಕೆಯಾಗಿತ್ತು. ನಮ್ಮ ಜನರು ಕಾನೂನಿಗೆ ಗೌರವ ನೀಡುವ ಪ್ರಜ್ಞೆ ಮೂಡಿಸಬೇಕು. ಅಲ್ಲಿ ಯಾವುದೇ ವಾಹನ ಬೇರೆ ವಾಹನವನ್ನು ಓವರ್ ಟೇಕ್ ಮಾಡುತ್ತಿರಲಿಲ್ಲ. ಶಿಸ್ತಿನ ವಿಚಾರದಲ್ಲಿ ನಾವು ಅರಿವು ಮೂಡಿಸಬೇಕಿದೆ.” ಎಂದು ಅಭಿಪ್ರಾಯಪಟ್ಟರು.

ವಿಶ್ವದ ನಾಯಕರು, ಉದ್ಯಮಿಗಳ ಭೇಟಿ

“ನಾನು ಮೊದಲ ಬಾರಿಗೆ ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಎ ಸ್ಪಿರಿಟ್ ಆಫ್ ಡೈಲಾಗ್ಸ್ ಪರಿಕಲ್ಪನೆಯಡಿ‌ ಈ ವರ್ಷ 56ನೇ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಭಾರತದಿಂದ 10 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. 100 ಕ್ಕೂ ಹೆಚ್ಚು ಸಭೆಗಳು, ನೀತಿಗಳು ಚರ್ಚೆಯಾದವು. ನಮಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು” ಎಂದು ತಿಳಿಸಿದರು.

“ಭಾರತ ಮುಂದುವರಿಯುತ್ತಿರುವ ದೇಶ, ಇಲ್ಲಿನ ಯುವ ಪ್ರತಿಭೆಗಳ ಬಗ್ಗೆ ವಿಶ್ವಾಸ ಎದ್ದು ಕಾಣುತ್ತಿತ್ತು. ಭಾರತವನ್ನು ಬೆಂಗಳೂರಿನ ಮೂಲಕ ನೋಡುವುದನ್ನು ನಾನು ಗಮನಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ 450ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಿವೆ. 2047 ವೇಳೆಗೆ ಭಾರತದಲ್ಲಿನ ಜನ ನಗರ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಳಾಂತರವಾಗುತ್ತಾರೆ. ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಚರ್ಚೆ ಮಾಡಲಾಯಿತು” ಎಂದು ಮಾಹಿತಿ ನೀಡಿದರು.

“ವಿಶ್ವ ಬ್ಯಾಂಕಿನ ಮುಖ್ಯಸ್ಥ ಅಜಯ್ ಬಂಗಾ, ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರೂಟ್ ಅವರನ್ನು ಭೇಟಿ ಮಾಡಿದ್ದೆ. ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್, ಪ್ರಹ್ಲಾದ್ ಜೋಷಿ, ರಾಮ್ ಮೋಹನ್ ನಾಯ್ಡು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಿಜರ್ಲೆಂಡ್ ಭಾರತೀಯ ರಾಯಭಾರಿ ಮಾರ್ಡು ಕುಮಾರ್ ಅವರು ನಮ್ಮ ಕರ್ನಾಟಕ ಪೆವಿಲಿಯನ್ ಗೆ ಬಂದು ಚರ್ಚೆ ಮಾಡಿದರು. ಬೆಂಗಳೂರಿನಲ್ಲಿರುವ ಕೇಬಲ್ ವಿಚಾರವಾಗಿ ಅನೇಕ ಟೀಕೆಗಳು ವ್ಯಕ್ತವಾಗಿವೆ. ನಾವು ಭೂಗತ ವ್ಯವಸ್ಥೆ ಮಾಡಿದ್ದರೂ ಯಾರೂ ಅದನ್ನು ಬಳಸಿಕೊಳ್ಳುತ್ತಿಲ್ಲ” ಎಂದು ಹೇಳಿದರು.

ಕರ್ನಾಟಕಕ್ಕೆ ಎಷ್ಟು ಕಂಪನಿ ಬರಬಹುದು ಎಂದು ಕೇಳಿದಾಗ, “ನಮ್ಮ ಜೊತೆ 45 ಕಂಪನಿಗಳು ದ್ವಿಪಕ್ಷೀಯವಾಗಿ ಚರ್ಚೆ ಮಾಡಿದ್ದು, ನ್ಯಾನೋ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಎಐ ತ್ರಜ್ಞಾನದ ವಿಚಾರವಾಗಿ ಚರ್ಚೆ ಮಾಡಲಾಯಿತು. ನಮ್ಮ ಕರಾವಳಿ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದೆವು” ಎಂದು ತಿಳಿಸಿದರು.

"ಕೆಲವರು ರೇಸ್ ಕೋರ್ಸ್ ಜಾಗವನ್ನು ನಮಗೆ ನೀಡಿ ಎಂದು ಅನೇಕರು ನನಗೆ ಕೇಳಿದರು. ಆ ರೀತಿ ನೀಡಲು ಆಗುವುದಿಲ್ಲ. ಇದಕ್ಕಾಗಿ ಬೇರೆ ಜಾಗಗಳಿವೆ ಎಂದು ಹೇಳಿದೆ. ಮತ್ತೆ ಕೆಲವರು ಖಾಸಗಿ ಸಾರ್ವಜನಿಕ ಸಹಭಾಗಿತ್ವಕ್ಕೂ ಆಸಕ್ತಿ ತೋರಿದ್ದಾರೆ. ವಿಮಾನ ನಿಲ್ದಾಣದ 40 ಕಿ.ಮೀ ವ್ಯಾಪ್ತಿಯಲ್ಲಿ ನಮಗೆ ಜಾಗ ಬೇಕು ಎಂದು ಕೇಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ತಮ್ಮ ಸಂಸ್ಥೆ ಆರಂಭಿಸಲು ಬಹಳ ಉತ್ಸುಕರಾಗಿದ್ದಾರೆ” ಎಂದು ತಿಳಿಸಿದರು.

ಸ್ಪೀಡ್ ಆಫ್ ಡೂಯಿಂಗ್ ಬಿಸಿನೆಸ್ ಮಾಡುತ್ತೇವೆ

ಎಷ್ಟು ಕಂಪನಿಗಳು ರಾಜ್ಯಕ್ಕೆ ಬರಬಹುದು ಎಂದು ಕೇಳಿದಾಗ, “ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಲಾದ ಒಪ್ಪಂದದ ಪೈಕಿ ಶೇ 50 ರಷ್ಟು ಬಂಡವಾಳ ಹೂಡಿಕೆ ಕಾರ್ಯಗತಗೊಳ್ಳುತ್ತಿವೆ. ಅನೇಕ ಕಂಪನಿಗಳು ಈಸ್ ಆಫ್ ಡೂಯಿಂಗ್ ಬಿಸಿನೆಸ್, ಕಾಲಾವಧಿ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ. ನಮ್ಮ ಅರ್ಜಿ 28 ಕಡೆ ಹೋಗಬೇಕು, ಇದನ್ನು ತ್ವರಿತವಾಗಿ ಸಾಗಬೇಕು ಎಂದಿದ್ದಾರೆ. ಹೀಗಾಗಿ ನಾವು ಸ್ಪೀಡ್ ಆಫ್ ಡೂಯಿಂಗ್ ಬಿಸಿನೆಸ್ ಮಾಡುವುದಾಗಿ ಹೇಳಿದ್ದೇವೆ” ಎಂದರು.

ಟನಲ್ ರಸ್ತೆ ಕುರಿತು ಜೈಕಾ ಜೊತೆ ಚರ್ಚೆ

ದಾವೋಸ್ ಟನಲ್ ರಸ್ತೆ ನೋಡಿದ ಬಳಿಕ ಇಲ್ಲಿನ ಟನಲ್ ರಸ್ತೆಯಲ್ಲಿ ಏನಾದರೂ ಬದಲಾವಣೆ ಮಾಡಲಾಗುವುದೇ ಎಂದು ಕೇಳಿದಾಗ, “ನಮ್ಮ ಟನಲ್ ರಸ್ತೆ ಎಲ್ಲಾ ಕಡೆಗಳಿಗಿಂತ ಆಧುನಿಕವಾಗಿದೆ. ಮಹಾರಾಷ್ಟ್ರ ಸಿಎಂ ಅವರು ಹೇಳಿದಂತೆ ಎಲಾನ್ ಮಸ್ಕ್ ಅವರು ಹೊಸ ತಂತ್ರಜ್ಞಾನದಲ್ಲಿ ತ್ವರಿತವಾಗಿ ಟನಲ್ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅದರ ಗಾತ್ರ ಸಣ್ಣದಿದೆ. ಅದು ಮೆಟ್ರೋ ಸುರಂಗಕ್ಕೆ ಅನುಕೂಲವಾಗುತ್ತದೆ. ನಮ್ಮ ಮಾದರಿಯಲ್ಲೇ ಮಹಾರಾಷ್ಟ್ರದವರು ಜಪಾನಿನ ಜೈಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರಂತೆ. ನಾನು ಕೂಡ ಜಪಾನ್ ಪ್ರವಾಸ ಮಾಡಿ ನೋಡುತ್ತೇನೆ. ಬಿಡಿಎ ಅಧ್ಯಕ್ಷರು ಖಾಸಗಿ ಪ್ರವಾಸ ಮಾಡಿ ಸಲಹೆ ನೀಡಿದ್ದಾರೆ. ಜೈಕಾ ಸಂಸ್ಥೆ ಯವರು ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಸಹಾಯ ಮಾಡಿದ್ದು, ಎರಡನೇ ಟನಲ್ ರಸ್ತೆಗೆ ಸಹಾಯ ಮಾಡುವ ಬಗ್ಗೆ ಚರ್ಚೆ ಮಾಡಲಾಗುವುದು” ಎಂದರು.

ಭಾರತದ ಆರ್ಥಿಕತೆ ವಿಚಾರವಾಗಿ ನಿಮ್ಮ ಹೇಳಿಕೆ ರಾಹುಲ್ ಗಾಂಧಿ ಹೇಳಿಕೆಗೆ ವಿರುದ್ಧವಾಗಿತ್ತು ಎಂದು ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ನೀವು ಈ ವಿಚಾರದಲ್ಲಿ ರಾಜಕೀಯ ತರಬೇಡಿ. ಹೃದಯ ಶ್ರೀಮಂತಿಕೆಯಿಂದ ಆಲೋಚಿಸಿ. ಬೇರೆಯವರ ತಪ್ಪನ್ನು ಹುಡುಕುವುದು ಬೇಡ. ವಿದೇಶಕ್ಕೆ ಹೋಗಿ ನಾವು ಭಾರತಕ್ಕೆ ನೋವು ಮಾಡುವುದಿಲ್ಲ. ರಾಹುಲ್ ಗಾಂಧಿ ಅವರು ಕೂಡ ಈ ರೀತಿ ಮಾಡಿಲ್ಲ. ರಾಹುಲ್ ಗಾಂಧಿ ಅವರು ನಮ್ಮ ಆಂತರಿಕ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ" ಎಂದರು.

ಬಿಜೆಪಿ ನಾಯಕರ ಟೀಕೆಗೆ ಉತ್ತರಿಸುವುದಿಲ್ಲ

ಈ ಪ್ರವಾಸದ ಬಗ್ಗೆ ಬಿಜೆಪಿ ನಾಯಕರು ಟೀಕೆ ಕುರಿತು ಮಾತನಾಡಿ, “ನಾನು ಬಿಜೆಪಿ ನಾಯಕರ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ನಾನು ಭಾರತ ಹಾಗೂ ಕರ್ನಾಟಕ ರಾಜ್ಯಕ್ಕೆ ಮಾತ್ರ ಉತ್ತರ ನೀಡುತ್ತೇನೆ. ಭಾರತವನ್ನು ಬೆಂಗಳೂರು ಮೂಲಕ ನೋಡಲಾಗುತ್ತಿದೆ. ಕರ್ನಾಟಕ ಭಾರತಕ್ಕೆ ಹೆಮ್ಮೆ ತರುತ್ತಿದೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ, ವಿದೇಶದಲ್ಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರಿಂಗ್ ವೃತ್ತಿ ಪರರಿದ್ದಾರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಕರ್ನಾಟಕ 13,900 ವೈದ್ಯರನ್ನು ಪ್ರತಿ ವರ್ಷ ತಯಾರು ಮಾಡುತ್ತಿದ್ದಾರೆ. ದೇಶದ ಇತರೆ ಯಾವುದೇ ರಾಜ್ಯಕ್ಕೂ ಈ ರೀತಿ ಸಾಮರ್ಥ್ಯವಿಲ್ಲ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷ ವೈದ್ಯಕೀಯ ವೃತ್ತಿಪರರು ತಯಾರಾಗುತ್ತಿದ್ದಾರೆ” ಎಂದು ತಿಳಿಸಿದರು.

ಐಎಂಎಫ್ ನ ಗೀತಾ ಗೋಪಿನಾಥನ್ ಅವರು ಮಾಲಿನ್ಯ ವಿಚಾರವಾಗಿ ಭಾರತವನ್ನು ಪ್ರಶ್ನಿಸಿರುವ ಬಗ್ಗೆ ಕೇಳಿದಾಗ, “ಕರ್ನಾಟಕದ ವಾತಾವರಣ ದೇಶದಲ್ಲೇ ಅತ್ಯುತ್ತಮವಾಗಿದೆ” ಎಂದರು.

ಬೆಂಗಳೂರು ಸಂಚಾರ ದಟ್ಟಣೆ 2ನೇ ಸ್ಥಾನದಲ್ಲಿದೆ ಎಂಬ ‌ಪ್ರಶ್ನೆಗೆ ಉತ್ತರಿಸಿ, “ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2.50 ಲಕ್ಷ ಕೋಟಿ ಹಣವನ್ನು ಐದು ವರ್ಷಗಳಲ್ಲಿ ವೆಚ್ಚ ಮಾಡಲಾಗುತ್ತಿದೆ. ಅದಕ್ಕಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಟನಲ್ ರಸ್ತೆಗಳು, 123 ಕಿ.ಮೀ ಎಲಿವೇಟೆಡ್ ಕಾರಿಡಾರ್, 300 ಕಿ.ಮೀ ಉದ್ದದ ಬಫರ್ ರೋಡ್ ನಿರ್ಮಿಸಲಾಗುತ್ತಿದೆ. ಬಫರ್ ರಸ್ತೆ ಬಗ್ಗೆ ಘೋಷಣೆ ಮಾಡಿದಾಗ ಅನೇಕರು, ನಕ್ಕರು, ಟೀಕೆ ಮಾಡಿದರು. ನೀವು ಈಜಿಪುರದ ಬಳಿ ಕೆಲಸ ನಡೆಯುತ್ತಿದೆ" ಎಂದು ಹೇಳಿದರು.

Read More
Next Story