
ಕುಡಿದ ಮತ್ತಿನಲ್ಲಿ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಪುಂಡ; ಪ್ರಶ್ನಿಸಿದ್ದಕ್ಕೆ ಮಾಲೀಕನಿಗೇ ಅವಾಜ್!
ಅಪಘಾತದ ನಂತರ ಕಾರಿನಿಂದ ಇಳಿದ ಚಾಲಕ, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಬದಲು ಅಂಗಡಿ ಮಾಲೀಕರ ಮೇಲೆಯೇ ದರ್ಪ ತೋರಿದ್ದಾನೆ.
ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಕಾರು ಚಾಲನೆ ಮಾಡಿದ ಚಾಲಕನೊಬ್ಬ, ನಿಯಂತ್ರಣ ತಪ್ಪಿ ರಸ್ತೆ ಬದಿಯ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಘಟನೆ ನಗರದ ಬಿಇಎಲ್ ಲೇಔಟ್‌ನಲ್ಲಿ (BEL Layout) ನಡೆದಿದೆ.
ಶನಿವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಬಿಇಎಲ್ ಲೇಔಟ್‌ನಲ್ಲಿರುವ 'ಪಾವರಿ ಚಾಟ್ಸ್' (Pavari Chats) ಎಂಬ ಅಂಗಡಿಗೆ KA 03 NE 1782 ನೋಂದಣಿ ಸಂಖ್ಯೆಯ ಕಾರು ಏಕಾಏಕಿ ನುಗ್ಗಿದೆ. ರಾತ್ರಿ ಸಮಯವಾಗಿದ್ದರಿಂದ ಅಂಗಡಿಯ ಬಳಿ ಗ್ರಾಹಕರಿದ್ದರು, ಅದೃಷ್ಟವಶಾತ್ ಯಾರಿಗೂ ಗಂಭೀರ ಸ್ವರೂಪದ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ತಪ್ಪು ಮಾಡಿ ದರ್ಪ
ಅಪಘಾತದ ನಂತರ ಕಾರಿನಿಂದ ಇಳಿದ ಚಾಲಕ, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಬದಲು ಅಂಗಡಿ ಮಾಲೀಕರ ಮೇಲೆಯೇ ದರ್ಪ ತೋರಿದ್ದಾನೆ. ಪ್ರಶ್ನೆ ಮಾಡಲು ಹೋದವರಿಗೆ ಅವಾಜ್ ಹಾಕಿ ರಂಪಾಟ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡಿದ್ದಲ್ಲದೆ, ಸಾರ್ವಜನಿಕರಿಗೆ ತೊಂದರೆ ನೀಡಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

